'ಲಕ್ಕಿ ಭಾಸ್ಕರ್' ಸಿನಿಮಾ ನೋಡಿ ಹಾಸ್ಟೆಲ್‌ನಿಂದ ನಾಲ್ವರು ಶಾಲಾ ವಿದ್ಯಾರ್ಥಿಗಳು ಎಸ್ಕೇಪ್!
ದುಲ್ಕರ್ ಸಲ್ಮಾನ್ ನಟನೆಯ 'ಲಕ್ಕಿ ಭಾಸ್ಕರ್' ಸಿನಿಮಾ ಸಖತ್ ಸದ್ದು ಮಾಡ್ತಿದೆ. ದೀಪಾವಳಿ ಸಂಭ್ರಮದಲ್ಲಿ ತೆರೆಗೆ ಬಂದಿದ್ದ ಸಿನಿಮಾ 100 ಕೋಟಿ ರೂ. ಗಳಿಕೆ ಕಂಡಿತ್ತು. 15 ದಿನಗಳ ಹಿಂದೆ ಓಟಿಟಿಗೆ ಬಂದಿರುವ ಸಿನಿಮಾ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್ ಆಗುತ್ತಿದ್ದು ಸಿನಿರಸಿಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ಕೆಟ್ಟ ಸಂದೇಶ ಇರುವ ಒಳ್ಳೆ ಸಿನಿಮಾ 'ಲಕ್ಕಿ ಭಾಸ್ಕರ್' ಎಂದು ಸಾಕಷ್ಟು ಜನ ಹೇಳುತ್ತಿದ್ದಾರೆ. ಹೌದು, ಒಂದು ಸಿನಿಮಾ ಆಗಿ ಇದು ಅದ್ಭುತ ಪ್ರಯತ್ನ. ದುಲ್ಕರ್ ನಟನೆ ಬಗ್ಗೆ ದೂಸ್ರಾ ಮಾತಿಲ್ಲ. ಒಂದು ಕ್ಷಣ ಕೂಡ ಕಣ್ಣು ಮಿಟುಕಿಸದಂತೆ ಸಿನಿಮಾ ನೋಡಿಸಿಕೊಳ್ಳುತ್ತದೆ. ಆದರೆ ಇದೇ ಚಿತ್ರದಿಂದ ಪ್ರೇರಣೆಗೊಂಡು ಆಂಧ್ರದ ಐವರು ಶಾಲಾ ಮಕ್ಕಳು ಹಾಸ್ಟೆಲ್‌ನಿಂದ ಓಡಿ ಹೋಗಿರುವುದಾಗಿ ವರದಿಯಾಗಿದೆ. ಚಿತ್ರದಲ್ಲಿ ನಾಯಕ ಹಣ ಸಂಪಾದನೆ ಮಾಡಿದಂತೆ ನಾವು ಹಣ ಗಳಿಸಿ ಬರ್ತೀವಿ ಎಂದು ಅವರು ಸ್ನೇಹಿತರ ಬಳಿ ಹೇಳಿದ್ದಾರೆ ಹೇಳಲಾಗುತ್ತಿದೆ.

ಆಂಧ್ರದ ವಿಶಾಖಪಟ್ಟಣದ ಮಹಾರಾಣಿ ಪೇಟೆಯಲ್ಲಿರುವ ಹಾಸ್ಟೆಲ್‌ನಿಂದ ವಿದ್ಯಾರ್ಥಿಗಳು ಪರಾರಿಯಾಗಿದ್ದಾರೆ. ಅಲ್ಲಿನ ಸೆಂಟ್ ಆಂಟೊನೀಸ್ ಹೈಸ್ಕೂಲ್‌ನಲ್ಲಿ ನಾಲ್ವರು ವಿದ್ಯಾರ್ಥಿಗಳು ಓದುತ್ತಿದ್ದರು. ಕಿರಣ್, ಕಾರ್ತಿಕ್, ಚರಣ್ ತೇಜಾ ಹಾಗೂ ರಘು ಎಂಬ 9ನೇ ತರಗತಿಯ ನಾಲ್ಕು ವಿದ್ಯಾರ್ಥಿಗಳು ಹಾಸ್ಟೆಲ್ ಗೇಟ್ ದಾಟಿ ಹೋಗುತ್ತಿರುವ ಸಿಸಿಟಿವಿ ಫುಟೇಜ್ ವೈರಲ್ ಆಗುತ್ತಿದೆ. ವಿದ್ಯಾರ್ಥಿಗಳ ಪೋಷಕರು ನೀಡಿದ ದೂರಿನ ಅನ್ವಯ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮೊನ್ನೆ ರಾತ್ರಿ ಸ್ನೇಹಿತರ ಜೊತೆ ಹಾಸ್ಟೆಲ್‌ನಲ್ಲಿ ನಾಲ್ಕು ಜನ ವಿದ್ಯಾರ್ಥಿಗಳು 'ಲಕ್ಕಿ ಭಾಸ್ಕರ್' ಸಿನಿಮಾ ವೀಕ್ಷಿಸಿದ್ದಾರೆ. ಅದರಲ್ಲಿ ಮಧ್ಯಮ ವರ್ಗದ ಕುಟುಂಬದ ಭಾಸ್ಕರ್ ಹೇಗೆ ವಾಮಮಾರ್ಗದಲ್ಲಿ ಹಣ ಸಂಪಾದಿಸುತ್ತಾನೆ, ಕಾರು, ಬಂಗಲೆ ಎಲ್ಲಾ ಕೊಂಡುಕೊಳ್ಳುತ್ತಾನೆ, ಅದೇ ರೀತಿ ನಾವು ಹಣ ಗಳಿಸಿ ಬರುತ್ತೇವೆ ಎಂದು ಸ್ನೇಹಿತರ ಬಳಿ ಹೇಳಿದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ.
ವೆಂಕಿ ಅಟ್ಲೂರಿ ನಿರ್ದೇಶನದ 'ಲಕ್ಕಿ ಭಾಸ್ಕರ್' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಅದರಲ್ಲೂ ಮಧ್ಯಮ ವರ್ಗದ ಕುಟುಂಬದ ಜನ ಹೆಚ್ಚು ಕನೆಕ್ಟ್ ಆಗುತ್ತಿದ್ದಾರೆ. ತಮ್ಮ ನಡುವಿನ ವ್ಯಕ್ತಿಯೇ ಆ ಕಷ್ಟಗಳನ್ನು ಎದುರಿಸುತ್ತಿದ್ದಾನೆ, ಅವನು ತನ್ನ ಚಾಲಾಕಿತನದಿಂದ ಹಣ ಸಂಪಾದಿಸುತ್ತಾನೆ. ಆದರೆ ಆತ ಸಿಕ್ಕಿಬೀಳಬಾರದು ಎಂದು ವೀಕ್ಷಕರು ಬಯಸುವಂತೆ ಸಿನಿಮಾ ನೋಡುಗರನ್ನು ಆವರಿಸಿಕೊಳ್ತಿದೆ. ಕೊನೆಗೆ ಆತ ತಪ್ಪಿಸಿಕೊಂಡು ವಿದೇಶಕ್ಕೆ ಹೋಗಿ ಸೆಟ್ಲ್ ಆಗುವುದನ್ನು ನೋಡಿ ನಿಟ್ಟುಸಿರು ಬಿಡುತ್ತಿದ್ದಾರೆ.
ಬ್ಯಾಂಕ್ ಉದ್ಯೋಗಿ ಆಗಿರುವ ಭಾಸ್ಕರ್ ತನ್ನ ಕುಟುಂಬದ ಸಮಸ್ಯೆ ಬಗೆ ಹರಿಸಿಕೊಳ್ಳಲು ತಪ್ಪು ಹಾದಿ ಹಿಡಿಯುತ್ತಾನೆ. 90ರ ದಶಕದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿದ್ದ ಲೋಪದೋಷಗಳನ್ನು ಬಳಸಿಕೊಂಡು ಹಣ ಸಂಪಾದನೆ ಮಾಡಲು ಶುರು ಮಾಡುತ್ತಾನೆ. ಆ ಹಣವನ್ನು ಹೂಡಿಕೆ ಮಾಡಿ ಮತ್ತಷ್ಟು ಶ್ರೀಮಂತನಾಗುತ್ತಾನೆ. ಒಂದು ಹಂತಕ್ಕೆ ತಾನು ಮಾಡಿದ್ದು ತಪ್ಪು ಎಂದು ತಿಳಿದು ಅದನ್ನು ಅಲ್ಲಿಗೆ ನಿಲ್ಲಿಸಿ, ಸಂಪಾದಿಸಿ 100 ಕೋಟಿ ರೂ. ಹಣದ ತೆಗೆದುಕೊಂಡು ಫ್ಯಾಮಿಲಿ ಸಮೇತ ವಿದೇಶಕ್ಕೆ ಹೋಗುತ್ತಾನೆ.
ಭಾಸ್ಕರ್ ಹಣ ಸಂಪಾದಿಸಿದ್ದು ಮೋಸದ ಮಾರ್ಗದಲ್ಲಿ. ಹಾಗಿದ್ದ ಮೇಲೆ ಆತ ಕೊನೆಗೆ ಶಿಕ್ಷೆ ಅನುಭವಿಸಬೇಕಿತ್ತು. ಗಳಿಸಿದ ಹಣ ಸರ್ಕಾರಕ್ಕೆ ಸೇರಬೇಕಿತ್ತು. ಆದರೆ ಅದನ್ನು ತೆಗೆದುಕೊಂಡು ತಪ್ಪಿಸಿಕೊಂಡು ವಿದೇಶಕ್ಕೆ ಹೋಗುವುದು ಸರಿಯಲ್ಲ, ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ. ಇದರಿಂದ ಕೆಟ್ಟ ಸಂದೇಶ ರವಾನೆ ಆಗುತ್ತದೆ. ಮೋಸ ಮಾಡಿ ಹಣ ಮಾಡಿ ತಪ್ಪಿಸಿಕೊಳ್ಳಬಹುದು ಎನ್ನುವ ತಪ್ಪು ಸಂದೇಶ ದಾಟಿಸುತ್ತದೆ ಎಂದು ಹೇಳುತ್ತಲೇ ಇದ್ದಾರೆ.


Click it and Unblock the Notifications











