ಬಾಡಿಗೆ ಕಟ್ಟದ್ದಕ್ಕೆ ಅಡುಗೆ ಮಾಡುವ ಪಾತ್ರೆಯಲ್ಲಿ ಮಾಲೀಕರು ಮೂತ್ರ ವಿಸರ್ಜನೆ ಮಾಡಿದ್ರು; ಖ್ಯಾತ ನಟನ ನೋವಿನ ಕಥೆ
ನೋವು, ಅವಮಾನ, ಅಪಮಾನ ಎದುರಿಸಿದವರು ಜೀವನದಲ್ಲಿ ಸಾಧಿಸಿ ತೋರಿಸಿರುವ ಸಾಕಷ್ಟು ಉದಾಹರಣೆಗಳಿವೆ. ಚಿತ್ರರಂಗದಲ್ಲಿ ಕೂಡ ಸ್ಟಾರ್ ನಟರು ನಿಜ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದವರೇ.. ಇವತ್ತು ಸ್ಟಾರ್‌ಗಳಾಗಿ ಮೆರೆಯುತ್ತಿರಬಹುದು, ಕೋಟಿ ಕೋಟಿ ಆಸ್ತಿ ಸಂಪಾದಿಸಿ ಐಷಾರಾಮಿ ಜೀವನ ಸಾಗಿಸುತ್ತಿರಬಹುದು. ಆದರೆ ಒಂದಾನೊಂದು ಕಾಲದಲ್ಲಿ ತುತ್ತು ಅನ್ನಕ್ಕೂ ಕಷ್ಟಪಟ್ಟವರಿದ್ದಾರೆ.
ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿ ರಾವ್ ಗಾಯಕ್‌ವಾಡ್ ಇವತ್ತು ಸೂಪರ್ ಸ್ಟಾರ್ ರಜನಿಕಾಂತ್ ಆಗಿ ನಮ್ಮ ಕಣ್ಣ ಮುಂದಿದ್ದಾರೆ. ಅದೇ ರೀತಿ ಬಡ ಕುಟುಂಬದಿಂದ ಬಂದವರು ಚಿತ್ರರಂಗದಲ್ಲಿ ಸಾಧನೆ ಮಾಡಿ ಸ್ಟಾರ್ ಪಟ್ಟಕ್ಕೇರಿದ್ದಾರೆ. ಖ್ಯಾತ ನಟರೊಬ್ಬರು ಚಿತ್ರರಂಗಕ್ಕೆ ಬರುವ ಮುನ್ನ ಬಾಡಿಗೆ ಮನೆಯಲ್ಲಿದ್ದರು. 3 ತಿಂಗಳು ಬಾಡಿಗೆ ಕಟ್ಟಲಿಲ್ಲ ಎನ್ನುವ ಕಾರಣಕ್ಕೆ ಮನೆ ಮಾಲಕಿ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ ಎಂದು ಸ್ವತಃ ವೇದಿಕೆಯಲ್ಲಿ ಆ ನಟ ಹೇಳಿಕೊಂಡಿದ್ದರು.

"25 ರೂ. ಬಾಡಿಗೆ ಕಟ್ಟಲಿಲ್ಲ ಎನ್ನುವ ಕಾರಣಕ್ಕೆ ಮನೆ ಖಾಲಿ ಮಾಡುವಂತೆ ಮನೆ ಓನರ್ ಕಿರುಕುಳ ಕೊಟ್ಟಿದ್ರು. ಆಗ ಅಡುಗೆ ಮಾಡಿಕೊಳ್ಳಲು ನನ್ನ ಬಳಿ ಎರಡ್ಮೂರು ಪಾತ್ರೆಗಳಿದ್ದವು. ಬಾಡಿಗೆ ಕಟ್ಟಿರಲಿಲ್ಲ. ಸಿನಿಮಾ ಅವಕಾಶಗಳನ್ನು ಹುಡುಕಿ ಬೆಳಗ್ಗೆ ಹೊರಗಡೆ ಹೋಗಿದ್ದೆ. ಸಂಜೆ ಮನೆಗೆ ಬಂದೆ. ಅಡುಗೆ ಮಾಡೋಣ ಎಂದು ಪಾತ್ರೆ ತೆಗೆದ್ರೆ, ಅದರಲ್ಲಿ ಕೆಟ್ಟ ವಾಸನೆ ಬರ್ತಿತ್ತು" ಎಂದು ಆ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದರು.
ಏನಿದು ವಾಸನೆ ಅಂತ ನೋಡಿದ್ರೆ, ಮೂತ್ರ ವಿಸರ್ಜನೆ ಮಾಡಿದ್ರು.. ಆಕೆ ಕಿಟಕಿಯಿಂದ ನೋಡ್ತಿದ್ಲು.. ಬಾಡಿಗೆ ಕಟ್ಟಲಿಲ್ಲ ಎಂದು ಮನೆ ಮಾಲಕಿ ಪಾತ್ರೆಯಲ್ಲಿ ಮೂತ್ರ ವಿರ್ಸಜನೆ ಮಾಡಿದ್ಲು.. ಹಂಗಾದ್ರು ಮನೆ ಖಾಲಿ ಮಾಡ್ತೀನಾ? ಅಂತ.. ಆದರೆ ಅದೇ ಪಾತ್ರೆ ತೊಳೆದು ಆ ದಿನ ಉಪವಾಸ ಇದ್ದೆ. ಮರುದಿನ ಅದೇ ಪಾತ್ರೆ ತೊಳೆದು ಅಡುಗೆ ಮಾಡಿ ತಿಂದೆ ಎಂದು ಹೇಳಿಕೊಂಡಿದ್ದರು. ಭಗವಂತನ ಆಶೀರ್ವಾದದಿಂದ ಇವತ್ತು ಈ ಮಟ್ಟಕ್ಕೆ ಬಂದಿದ್ದೀನಿ. ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಮರಳಿ ಕೊಡಬೇಕು ಎಂದು ಶಾಲೆ, ಕಾಲೇಜು ಸ್ಥಾಪಿಸಿದ್ದಾಗಿ ಹೇಳಿದ್ದರು. ಆ ನಟ ಯಾರು ಅಲ್ಲ. ತೆಲುಗಿನ ಹಿರಿಯ ನಟ ಮೋಹನ್ ಬಾಬು..
ತೆಲುಗು ಚಿತ್ರರಂಗದಲ್ಲಿ ಕಲೆಕ್ಷನ್ ಕಿಂಗ್ ಎಂದೇ ಖ್ಯಾತರಾದ ಮೋಹನ್ ಬಾಬು ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬಂದವರು. ಸಣ್ಣಪುಟ್ಟ ಪಾತ್ರಗಳು, ನೆಗೆಟಿವ್ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡು ಬಳಿಕ ಹೀರೊ ಆಗಿ ಸಕ್ಸಸ್ ಕಂಡರು. ಅವರ ಮೂವರು ಮಕ್ಕಳು ಕೂಡ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಅಂಬರೀಶ್ ಜೊತೆಗೆ ಆತ್ಮೀಯ ಒಡನಾಟ ಇತ್ತು. ರಜನಿಕಾಂತ್ ಜೊತೆ ಇವತ್ತಿಗೂ ಒಳ್ಳೆ ಸ್ನೇಹ ಹೊಂದಿದ್ದಾರೆ.
ತಿರುಪತಿ ಸಮೀಪದ ಮೊದುಗುಲಪಾಲೆಂ ಗ್ರಾಮದಲ್ಲಿ ಹುಟ್ಟಿ ಬೆಳೆದ ಮಂಚು ಭಕ್ತವತ್ಸಲಂ ನಾಯ್ಡು ಮುಂದೆ ಮೋಹನ್ ಬಾಬು ಎಂದೇ ಚಿತ್ರರಂಗದಲ್ಲಿ ಹೆಸರಾದರು. ಚಿತ್ರರಂಗಕ್ಕೆ ಬರುವ ಮುನ್ನ YMCA ಕಾಲೇಜಿನಲ್ಲಿ ಫಿಸಿಕಲ್ ಎಜುಕೇಷನ್ ಇನ್‌ಸ್ಟ್ರಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಬಳಿಕ ದಾಸರಿ ನಾರಾಯಣ ರಾವ್ ಪರಿಚಯದಿಂದ ಚಿತ್ರರಂಗಕ್ಕೆ ಬಂದಿದ್ದರು. 1975ರಲ್ಲಿ ಸಣ್ಣಪುಟ್ಟ ಪಾತ್ರಗಳ ಮೂಲಕ ತೆರೆಮೇಲೆ ಕಾಣಿಸಿಕೊಂಡಿದ್ದರು.
ತಮ್ಮ ವಿಭಿನ್ನ ಮ್ಯಾನರಿಸಂ, ಡೈಲಾಗ್ ಡೆಲಿವರಿಯಿಂದ ಮೋಹನ್ ಬಾಬು ಮೋಡಿ ಮಾಡಿದ್ದರು. ನೆಗೆಟಿವ್ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ನಟ ಎನಿಸಿಕೊಂಡಿದ್ದರು. ಆರಂಭದಲ್ಲಿ 'ಸ್ವರ್ಗಂ ನರಕಂ' ಎಂಬ ಚಿತ್ರದಲ್ಲಿ ಲೀಡ್ ರೋಲ್ ಸಿಕ್ಕಿತ್ತು. ಆದರೂ ಅಷ್ಟು ಸುಲಭವಾಗಿ ಗೆಲುವು ಸಿಗಲಿಲ್ಲ. ಹಾಗಾಗಿ ನೆಗೆಟಿವ್ ಪಾತ್ರಗಳಿಗೆ ಬಣ್ಣ ಹಚ್ಚುವಂತಾಯಿತು. ಮುಂದೆ ಹೀರೊ ಆಗಿ ಸಕ್ಸಕ್ ಕಂಡರು.


Click it and Unblock the Notifications











