ಕೊಪ್ಪಳದ ಗಂಗಾವತಿಯಲ್ಲಿ ಹುಟ್ಟಿ ಬೆಳೆದ ಈ ಖ್ಯಾತ ನಟ ಯಾರು ಗೊತ್ತಾಯ್ತಾ?
ಕರ್ನಾಟಕದ ಪ್ರತಿಭೆಗಳು ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಕೂಡ ಕನ್ನಡಿಗರು ಸಾಧನೆ ಮಾಡುತ್ತಿದ್ದಾರೆ. ರಜನಿಕಾಂತ್, ಅನುಷ್ಕಾ ಶೆಟ್ಟಿ ಸೇರಿದಂತೆ ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು ಪರಭಾಷಾ ಚಿತ್ರರಂಗದಲ್ಲಿ ಸ್ಟಾರ್ ಪಟ್ಟಕ್ಕೇರಿದ್ದಾರೆ. ಈ ಪೋಸ್ಟರ್ ಗಮನಿಸಿ. ದಟ್ಟ ಗಡ್ಡ, ಗಿರಿಜಾ ಮೀಸೆ ಬಿಟ್ಟು ಬ್ರಿಟೀಷ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಕೂಡ ಕರ್ನಾಟಕ ಮೂಲದವರು.
ಕೊಪ್ಪಳದ ಗಂಗಾವತಿಯಲ್ಲಿ ಹುಟ್ಟಿ ಬೆಳೆದವರು. ಧಾರಾವಾಡದ ಕರ್ನಾಟಕ ಯೂನಿವರ್ಸಿಟಿಯಲ್ಲಿ ಪದವಿ ಪಡೆದು ಬಳಿಕ ಚೆನ್ನೈಗೆ ತೆರಳಿ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. ಆರಂಭದ ದಿನಗಳಲ್ಲೇ ಕನ್ನಡದ ಒಂದು ಚಿತ್ರದಲ್ಲಿ ನಟಿಸಿದ್ದರು. ತೆಲುಗು ಚಿತ್ರರಂಗದಲ್ಲಿ ಪೋಷಕ ಪಾತ್ರಗಳ ಮೂಲಕ ಗುರ್ತಿಸಿಕೊಂಡು ಬಳಿಕ ಹೀರೊ ಆಗಿದ್ದರು. ಹಲವು ಸಿನಿಮಾಗಳಲ್ಲಿ ಲೀಡ್ ರೋಲ್‌ಗಳಲ್ಲಿ ಮಿಂಚಿ ಈಗ ಮತ್ತೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ 'ದಿ ವಿಲನ್' ಹಾಗೂ 'ಜೇಮ್ಸ್' ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ.

ಇಷ್ಟೆಲ್ಲಾ ಹೇಳಿದ ಮೇಲೆ ಈ ನಟ ಯಾರು ಎನ್ನುವುದು ನಿಮಗೆ ಗೊತ್ತಾಗಿರಬಹುದು. ಹೌದು ಇವರು ತೆಲುಗು ನಟ ಶ್ರೀಕಾಂತ್. ಸದ್ಯ 'ಸಂಬರಲ ಯೇತಿಗಟ್ಟು' ಎಂಬ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಬ್ರಿಟೀಷ್ ಅಧಿಕಾರಿ ಪಾತ್ರದಲ್ಲಿ ಶ್ರೀಕಾಂತ್ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.
ರೋಹಿತ್ ಕೆಪಿ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಸಾಯಿದುರ್ಗಾ ತೇಜ್ ಹೀರೊ ನಟಿಸುತ್ತಿದ್ದಾರೆ. ಐಶ್ವರ್ಯ ಲಕ್ಷ್ಮಿ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಪ್ರೈಂ ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಸಾಯಿಕುಮಾರ್, ಜಗಪತಿ ಬಾಬು, ಅನನ್ಯಾ ನಾಗೆಲ್ಲ ಚಿತ್ರದ ತಾರಾಗಣದಲ್ಲಿದ್ದಾರೆ.

"ಪ್ರತಿ ಗಾಯದ ಗುರುತನ್ನು ಪದಕದಂತೆ ಧರಿಸಿರುವ ಸೈನಿಕ" ಎಂದು ಕ್ಯಾಪ್ಷನ್ ಕೊಟ್ಟು 'ಬ್ರಿಟೀಷು' ಎಂದು ಚಿತ್ರದಲ್ಲಿ ಶ್ರೀಕಾಂತ್ ಪಾತ್ರವನ್ನು ಪರಿಚಯಿಸಲಾಗಿದೆ. ವೆಟ್ರಿವೇಲ್ ಪಳನಿಸಾಮಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ 'ಸಂಬರಲ ಯೇತಿಗಟ್ಟು' ಚಿತ್ರಕ್ಕಿದೆ.
ಶ್ರೀಕಾಂತ್ ಅವರ ತಂದೆ ಮೇಕಾ ಪರಮೇಶ್ವರ ರಾವ್ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಮೇಕಾವರಿಪಾಲಂನಿಂದ ಗಂಗಾವತಿಗೆ ವಲಸೆ ಬಂದವರು. ಶ್ರೀಮಂತ ಭೂಮಾಲೀಕರಾಗಿದ್ದರು. 1990ರಲ್ಲಿ ಹೈದರಾಬಾದ್‌ನಲ್ಲಿದ್ದ ಮಧು ಫಿಲ್ಮ್ ಅಂಡ್ ಟಿವಿ ಇನ್ಸಿಟ್ಯೂಟ್ ಎಂಬ ಆಕ್ಟಿಂಗ್ ಸ್ಕೂಲ್‌ಗೆ ಶ್ರೀಕಾಂತ್ ಸೇರಿದ್ದರು. ಒಂದು ವರ್ಷ ನಟನೆಯ ಪಟ್ಟುಗಳನ್ನು ಕಲಿತಿದ್ದರು. ಬಳಿಕ ಸಣ್ಣಪುಟ್ಟ ಪಾತ್ರ ಮೂಲಕ ಸಿನಿಮಾಗಳಲ್ಲಿ ಅವಕಾಶ ಗಟ್ಟಿಸಿಕೊಂಡಿದ್ದರು. 'ಒನ್‌ಬೈ ಟು' ಶ್ರೀಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ ಮೊದಲ ಸಿನಿಮಾ.
ಮುಂದೆ 100ಕ್ಕೂ ಅಧಿಕ ಸಿನಿಮಾಗಳಲ್ಲಿ ಶ್ರೀಕಾಂತ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡುವ ಅವರು ಅವಕಾಶ ಸಿಕ್ಕಾಗ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ. 1995ರಲ್ಲಿ ಬಂದಿದ್ದ 'ತಾಜ್‌ಮಹಲ್' ಹೀರೊ ಆಗಿ ಶ್ರೀಕಾಂತ್ ಮೊದಲು ನಟಿಸಿದ ಸಿನಿಮಾ.
ಕೆ. ವಿಶ್ವನಾಥ್, ಕೃಷ್ಣವಂಶಿ, ಎಸ್. ವಿ ಕೃಷ್ಣರೆಡ್ಡಿ ಸೇರಿ ಸ್ಟಾರ್ ನಿರ್ದೇಶಕರ ಸಿನಿಮಾಗಳಲ್ಲಿ ಶ್ರೀಕಾಂತ್ ನಟಿಸಿದ್ದಾರೆ. ಹಲವು ಹಿಟ್ ಸಿನಿಮಾಗಳಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ. ಚಿರಂಜೀವಿ, ನಾಗಾರ್ಜುನ, ವೆಂಕಟೇಶ್ ಸೇರಿ ತೆಲುಗು ಸ್ಟಾರ್ ನಟರ ಜೊತೆಗೆಲ್ಲಾ ತೆರೆ ಹಂಚಿಕೊಂಡಿದ್ದಾರೆ. 1997ರಲ್ಲಿ ನಟಿ ಊಹ ಜೊತೆ ಶ್ರೀಕಾಂತ್ ಮದುವೆ ನಡೆದಿತ್ತು. ದಂಪತಿಗೆ ಮೂವರು ಮಕ್ಕಳು. ಮಗ ರೋಷನ್ ಕೂಡ ತಂದೆ ಹಾದಿಯಲ್ಲಿ ಚಿತ್ರರಂಗ ಪ್ರವೇಶಿಸಿದ್ದಾನೆ. ಒಂದೆರಡು ಚಿತ್ರದಲ್ಲಿ ನಟಿಸಿದ್ರು ಇನ್ನು ಬ್ರೇಕ್ ಸಿಕ್ಕಿಲ್ಲ.


Click it and Unblock the Notifications











