ಡ್ಯಾನ್ಸರ್ ಎಂದ ನಿರೂಪಕಿಗೆ ವೇದಿಕೆ ಮೇಲೆಯೇ ಪಾಠ ಮಾಡಿದ ಶ್ರೀಲೀಲಾ..!
ಕನ್ನಡ ಚಿತ್ರರಂಗದಿಂದ ಕಾಣೆಯಾಗಿ ಟಾಲಿವುಡ್ ನಲ್ಲಿ ಠಿಕಾಣಿ ಹೂಡಿದವರಲ್ಲಿ ಶ್ರೀಲೀಲಾ ಕೂಡಾ ಒಬ್ಬರು ಮತ್ತು ಪ್ರಮುಖರು. ರಶ್ಮಿಕಾ ಮಂದಣ್ಣ ನಂತರ ಒಂದಾದ ಮೇಲೊಂದರಂತೆ ತೆಲುಗು ಚಿತ್ರಗಳಲ್ಲಿ ಅಭಿನಯಿಸಿ ಕೀರ್ತಿ ಪತಾಕೆ ಹಾರಿಸಿದ ಹೆಗ್ಗಳಿಕೆ ಕೂಡ ಇವರದ್ದೇ.
ಧಮಾಕಾ.. ಭಗವಂತ್ ಕೇಸರಿ.. ಆದಿಕೇಶವ.. ಎಕ್ಸ್ಟ್ರಾ ಆರ್ಡಿನರಿ ಮ್ಯಾನ್.. ಸ್ಕಂದ.. ಗುಂಟೂರು ಖಾರಂ.. ಅಬ್ಬಬ್ಬಾ.. ಒಂದಾ, ಎರಡಾ. ಕೇವಲ ಒಂದು-ಒಂದೂವರೆ ವರ್ಷದಲ್ಲಿ ಅರ್ಧ ಡಜನ್ ತೆಲುಗು ಸಿನಿಮಾ ಮಾಡಿದವರು ಇವರು.

ಇಂಥಾ ಶ್ರೀಲೀಲಾ ಈಗ ಬಾಲಿವುಡ್‌ಗೆ ಕೂಡ ಹೋಗಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆ ಸಿನಿಮಾ ಮಾಡ್ತಿದ್ದಾರೆ. ಇಷ್ಟೇ ಅಲ್ಲ ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ ಅಭಿನಯದ ಚೊಚ್ಚಲ ಚಿತ್ರಕ್ಕೂ ಕೂಡ ಶ್ರೀಲೀಲಾ ನಾಯಕಿ.
ಆದರೂ ಕೂಡ ಕೆಲವರು ಶ್ರೀಲೀಲಾ ಅವರನ್ನು ನಾಯಕಿ ಎಂದು ಒಪ್ಪಿಕೊಳ್ಳಲು ತಯಾರಿಲ್ಲ. ಶ್ರೀಲೀಲಾ ಅಭಿನಯದ ಕುರಿತು ಮಾತನಾಡುತ್ತಿಲ್ಲ. ಬದಲಿಗೆ ಶ್ರೀಲೀಲಾಗೆ ಬೆಸ್ಟ್ ಡ್ಯಾನ್ಸರ್ ಎಂಬ ಹಣೆ ಪಟ್ಟಿಯನ್ನು ಕಟ್ಟಿದ್ದಾರೆ. ಶ್ರೀಲೀಲಾ ಆಕ್ಟರ್ ಅಲ್ಲ ಬದಲಿಗೆ ಡ್ಯಾನ್ಸರ್ ಎಂದುಕೊಂಡಿದ್ದಾರೆ. ಕೆಲವರ ಈ ಮನಸ್ಥಿತಿಯಿಂದ ಶ್ರೀಲೀಲಾಗೆ ಈಗ ಕಿರಿಕಿರಿಯಾಗುತ್ತಿದೆ. ಇದಕ್ಕೆ ಮೊನ್ನೆ ನಡೆದ ಸಮಾರಂಭವೇ ಸಾಕ್ಷಿ.
ಹೌದು, ಅಸಲಿಗೆ ಶ್ರೀಲೀಲಾ ಬಾಲಿವುಡ್‌ನಲ್ಲಿ ಬಿಡಾರ ಹೂಡುವ ಮುನ್ನ ತೆಲುಗಿನಲ್ಲಿ ರಾಬಿನ್ ಹುಡ್ ಎಂಬ ಚಿತ್ರವನ್ನು ಮಾಡಿದ್ದರು. ಜಯಂ ನಿತಿನ್ ಈ ಚಿತ್ರದ ನಾಯಕ. ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಿದ್ದ ನಿರೂಪಕಿ ಶ್ರೀಲೀಲಾ ಅಂದರೆ ಹಾಡು, ಹಾಡು ಅಂದರೆ ಡ್ಯಾನ್ಸ್, ಡ್ಯಾನ್ಸ್ ಅಂದರೆ ಶ್ರೀಲೀಲಾ ಎಂದು ಹೊಗಳಿದ್ದಾರೆ.
ಆದರೆ ಈ ಹೊಗಳಿಕೆ ಶ್ರೀಲೀಲಾಗೆ ಇಷ್ಟವಾಗಲಿಲ್ಲ. ಹೀಗಾಗಿಯೇ ಮಾತನಾಡುವ ಸರದಿ ಬಂದಾಗ ಉತ್ತರ ನೀಡಿದ ಶ್ರೀಲೀಲಾ ರಾಬಿನ್ ಹುಡ್ ಚಿತ್ರ ಬಿಡುಗಡೆಯಾದ ನಂತರ ಶ್ರೀಲೀಲಾ ಅಂದರೆ ಡೈಲಾಗ್, ಡೈಲಾಗ್ ಅಂದರೆ ಅಭಿನಯ, ಅಭಿನಯ ಅಂದರೆ ಶ್ರೀಲೀಲಾ ಎನ್ನುವಂತೆ ನಾನು ನಟಿಸಿದ್ದೇನೆ ಎಂದು ಹೇಳಿದ್ದಾರೆ. ನನ್ನ ಬಗ್ಗೆ ನಿಮ್ಮಲ್ಲಿರುವ ಅಭಿಪ್ರಾಯ ಈ ಚಿತ್ರದ ನಂತರ ಬದಲಾಗಲಿದೆ ಎಂದು ಹೇಳಿದ್ದಾರೆ.
ಶ್ರೀಲೀಲಾ ಅವರ ಈ ಹೇಳಿಕೆಯಿಂದ ಇವರ ಅನೇಕ ಅಭಿಮಾನಿಗಳು ಈಗ ರಾಬಿನ್ ಹುಡ್ ಚಿತ್ರವನ್ನು ನೋಡಲು ಇನ್ನಷ್ಟು ಕಾತುರರಾಗಿದ್ದಾರೆ. ಧಮಾಕಾ, ಗುಂಟೂರು ಖಾರಂ, ಪುಷ್ಪ 2 ಸೇರಿ ಹಲವು ಚಿತ್ರಗಳಲ್ಲಿ ತಮ್ಮ ಅತ್ಯದ್ಭುತ ಡ್ಯಾನ್ಸ್ ಮೂಲಕ ಮೋಡಿ ಮಾಡಿದ ಶ್ರೀಲೀಲಾ ಅವರ ಅಭಿನಯವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಈ ಮಾರ್ಚ್ 28ಕ್ಕೆ ಈ ಚಿತ್ರ ತೆರೆಗೆ ಬರಲಿದೆ. ಚಿತ್ರ ಗೆಲ್ಲುವ ವಿಶ್ವಾಸ ನಿತಿನ್ ಮತ್ತು ಶ್ರೀಲೀಲಾ ಇಬ್ಬರಿಗೂ ಇದೆ.
ಅಂದ್ಹಾಗೇ ಈ ಚಿತ್ರದಲ್ಲಿ ಮೊದಲು ರಶ್ಮಿಕಾ ಮಂದಣ್ಣ ಅಭಿನಯಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಇನ್ನುಳಿದಂತೆ ಸದ್ಯ ಶ್ರೀಲೀಲಾ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಕಾರ್ತಿಕ್ ಆರ್ಯನ್ ಮತ್ತು ಇವರ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ. ಕಾರ್ತಿಕ್ ಆರ್ಯನ್ ಮನೆಯಲ್ಲಿ ಶ್ರೀಲೀಲಾ ಅವರ ದರ್ಶನ ಕೂಡ ಅಭಿಮಾನಿಗಳಿಗೆ ಆಗಿದೆ. ಹರಿದಾಡುತ್ತಿರುವ ಈ ಸುದ್ದಿಯ ಬಗ್ಗೆ ಶ್ರೀಲೀಲಾ ಅಥವಾ ಕಾರ್ತಿಕ್ ಆರ್ಯನ್ ಪ್ರತಿಕ್ರಿಯೆಯನ್ನು ನೀಡಿಲ್ಲ ಸುದ್ದಿಯನ್ನು ತಳ್ಳಿಯೂ ಹಾಕಿಲ್ಲ.


Click it and Unblock the Notifications











