Sankranthi 2025: ಸುಗ್ಗಿ ಸಂಭ್ರಮದಲ್ಲಿ ತೆರೆಗೆ ಬರ್ತಿರೋ ತೆಲುಗು, ತಮಿಳು ಚಿತ್ರಗಳ ಲಿಸ್ಟ್
ಹಬ್ಬಗಳ ಸಂಭ್ರಮದಲ್ಲಿ ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡುವುದು ಹೊಸದೇನು ಅಲ್ಲ. ಅದರಲ್ಲೂ ಸಂಕ್ರಾಂತಿ, ದಸರಾ, ದೀಪಾವಳಿ, ಕ್ರಿಸ್‌ಮಸ್ ಹಬ್ಬಗಳ ವೇಳೆ ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರುತ್ತವೆ. ವರ್ಷದ ಹಿಂದೆಯೇ ಹಬ್ಬದ ವೀಕೆಂಡ್‌ನಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಣೆ ಮಾಡುತ್ತಾರೆ.
ಸುಗ್ಗಿ ಸಂಭ್ರಮದಲ್ಲಿ ಪ್ರತಿವರ್ಷ ತೆಲುಗು, ತಮಿಳಿನ ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರುತ್ತದೆ. ಕೆಲವೊಮ್ಮೆ ಕನ್ನಡ ಸಿನಿಮಾಗಳು ಈ ಲಿಸ್ಟ್ ಸೇರುತ್ತವೆ. ಮುಂದಿನ ವರ್ಷ ಸಂಕ್ರಾತಿ ಹಬ್ಬಕ್ಕೆ ಬಿಡುಗಡೆ ಆಗುವ ತೆಲುಗು ಸಿನಿಮಾಗಳ ಲಿಸ್ಟ್ ಸಿಕ್ಕಿದೆ. 'ಗೇಮ್ ಚೇಂಜರ್' ಜೊತೆಗೆ ತಮಿಳಿನ 'ಗುಡ್‌ಬ್ಯಾಡ್ ಅಗ್ಲಿ' ಕೂಡ ಲಿಸ್ಟ್‌ನಲ್ಲಿದೆ.

1. ಗೇಮ್ ಚೇಂಜರ್
ಶಂಕರ್ ನಿರ್ದೇಶನದಲ್ಲಿ ರಾಮ್‌ಚರಣ್ ನಟನೆಯ 'ಗೇಮ್ ಚೇಂಜರ್' ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಿದೆ. ದಿಲ್ ರಾಜು ನಿರ್ಮಾಣದ ಬಹುಕೋಟಿ ವೆಚ್ಚದ ಚಿತ್ರ ಜನವರಿ 10ಕ್ಕೆ ತೆರೆಗೆ ಬರಲಿದೆ. ಚಿತ್ರದಲ್ಲಿ ಚರಣ್ ಜೊತೆಗೆ ಕಿಯಾರಾ ಅದ್ವಾನಿ ನಾಯಕಿಯಾಗಿ ಮಿಂಚಿದ್ದಾರೆ. 'ಇಂಡಿಯನ್- 2' ಚಿತ್ರ ಹೀನಾಯವಾಗಿ ಸೋತಿತ್ತು. ಹಾಗಾಗಿ ಶಂಕರ್ ಈ ಬಾರಿ ಗೆದ್ದೇ ಗೆಲ್ಲುವ ಲೆಕ್ಕಾಚಾರದಲ್ಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟೀಸರ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು.
2. ಸಂಕ್ರಾಂತಿಕಿ ವಸ್ತುನ್ನಾಂ
ಅನಿಲ್ ರಾವಿಪುಡಿ ನಿರ್ದೇಶನದಲ್ಲಿ ವಿಕ್ಟರಿ ವೆಂಕಟೇಶ್ ನಟನೆಯ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಕೂಡ ಸುಗ್ಗಿ ಸಂಭ್ರಮದಲ್ಲಿ ತೆರೆಗೆ ಬರಲಿದೆ. ಮೀನಾಕ್ಷಿ ಚೌಧರಿ ಹಾಗೂ ಐಶ್ವರ್ಯಾ ರಾಜೇಶ್ ತಾರಾಗಣದಲ್ಲಿದ್ದಾರೆ. ಜನವರಿ 14ಕ್ಕೆ ಈ ಸಿನಿಮಾ ಬಿಡುಗಡೆ ಆಗುವುದು ಖಚಿತವಾಗಿದೆ.
3. ಡಾಕು ಮಹಾರಾಜ್
'ಡಾಕು ಮಹಾರಾಜ್' ಕೂಡ ಹಬ್ಬದ ವೀಕೆಂಡ್ ಮೇಲೆ ಕಣ್ಣಿಟ್ಟಿದ್ದಾನೆ. ಬಾಬಿ ಕೊಲ್ಲಿ ನಿರ್ದೇಶನದ ಈ ಚಿತ್ರದಲ್ಲಿ ಬಾಲಕೃಷ್ಣ ನಟಿಸಿದ್ದಾರೆ. ಟೀಸರ್‌ನಿಂದಲೇ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಬಹಳ ಹಿಂದೆ ಶುರುವಾಗಿದ್ದ ಚಿತ್ರಕ್ಕೆ ಇತ್ತೀಚೆಗೆ ಟೈಟಲ್ ಫಿಕ್ಸ್ ಆಗಿತ್ತು. ಜನವರಿ 12ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.

4. ಗುಡ್‌ಬ್ಯಾಡ್ ಅಗ್ಲಿ
ತಮಿಳಿನಲ್ಲಿ ಥಲಾ ಅಜಿತ್ ನಟನೆಯ 'ಗುಡ್‌ಬ್ಯಾಡ್ ಅಗ್ಲಿ' ಸಿನಿಮಾ ಕೂಡ ಸಂಕ್ರಾಂತಿ ರೇಸ್‌ನಲ್ಲಿದೆ. ಸಿನಿಮಾ ತೆಲುಗಿಗೂ ಡಬ್ ಆಗಿ ರಿಲೀಸ್ ಆಗುವುದರಿಂದ ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡುವ ಸುಳಿವು ಸಿಕ್ಕಿದೆ.
5. ಮಜಾಕಾ
ಸಂದೀಪ್ ಕಿಶನ್ ನಟನೆಯ 'ಮಜಾಕಾ' ಸಿನಿಮಾ ಕೂಡ ಜನವರಿ 14ಕ್ಕೆ ಬಿಡುಗಡೆ ಆಗುತ್ತದೆ. ದೊಡ್ಡ ಸಿನಿಮಾಗಳು ಒಟ್ಟೊಟ್ಟಿಗೆ ಬಂದರೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡುತ್ತದೆ ಎನ್ನುವುದು ಒಂದು ಲೆಕ್ಕಾಚಾರ. ಹಬ್ಬದ ಸಂಭ್ರಮದಲ್ಲಿ ಒಂದಲ್ಲ ಎರಡು ಸಿನಿಮಾ ಬಂದರೂ ನೋಡುತ್ತಾರೆ ಎನ್ನುವುದು ಮತ್ತೊಂದು ಲೆಕ್ಕಾಚಾರ.
ಇನ್ನು ತಮಿಳಿನಲ್ಲಿ ಅರುಣ್ ವಿಜಯ್ ನಟನೆಯ 'ವಾನಗನ್' ಸಿನಿಮಾ ಸಹ ಸುಗ್ಗಿ ಸಂಭ್ರಮದಲ್ಲಿ ತೆರೆಗೆ ಬರುವುದು ಖಚಿತವಾಗಿದೆ. ಚಿಯಾನ್ ವಿಕ್ರಂ ನಟನೆಯ 'ವೀರ ಧೀರ ಸೂರನ್' ಸಿನಿಮಾ ಕೂಡ ಲಿಸ್ಟ್‌ನಲ್ಲಿದೆ ಎನ್ನಲಾಗ್ತಿದೆ. ಹಾಗಾಗಿ ಈ ಬಾರಿ ಸುಗ್ಗಿ ಸಂಭ್ರಮದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ಜೋರಾಗಿಯೇ ಇರುತ್ತದೆ. ಕನ್ನಡದ ಯಾವುದೇ ಸಿನಿಮಾ ಸಂಕ್ರಾಂತಿಗೆ ತೆರೆಗೆ ಬರುವ ಸುಳಿವು ಸಿಗುತ್ತಿಲ್ಲ.
ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಸುಗ್ಗಿ ಸಂಭ್ರಮದಲ್ಲಿ ಈ ಸಿನಿಮಾ ತೆರೆಗೆ ಬಂದರೆ ಚೆನ್ನಾಗಿರುತ್ತದೆ ಎನ್ನುವುದು ಅಭಿಮಾನಿಗಳ ಆಸೆ. ಅದರೆ ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ ಎನ್ನುವ ಬಗ್ಗೆ ಸ್ವತಃ ಸುದೀಪ್ ಅವರಿಗೂ ಗೊತ್ತಿಲ್ಲ ಎನ್ನುವಂತಾಗಿದೆ.


Click it and Unblock the Notifications