8 ವರ್ಷಗಳ ನಂತರ ಮತ್ತೆ ನಟನೆಗೆ ವಾಪಸ್ಸಾಗಲಿದ್ದಾರೆ ನಟಿ ಜೆನಿಲಿಯಾ
ದಶಕದ ಹಿಂದೆ ತೆಲುಗು ಹಿಂದೆ ದಕ್ಷಿಣ ಭಾರತದ ಬಹು ಜನಪ್ರಿಯ ಹಾಗೂ ಬೇಡಿಕೆಯ ನಟಿಯಾಗಿದ್ದ ಜೆನಿಲಯಾ ಡಿ ಸೋಜಾ ಮದುವೆಯಾದ ನಂತರ ಸಿನಿಮಾದಿಂದ ದೂರ ಉಳಿದಿದ್ದರು. ಆದರೆ ಈಗ ಮರಳಿ ಬೆಳ್ಳಿತೆರೆಯ ಮೇಲೆ ಮಿಂಚಲಿದ್ದಾರೆ.
Recommended Video
2012 ರಲ್ಲಿ 'ನಾ ಇಷ್ಟಂ' ಸಿನಿಮಾದಲ್ಲಿ ರಾಣಾ ದಗ್ಗುಬಾಟಿ ಜೊತೆ ನಟಿಸಿದ್ದ ಜೆನಿಲಿಯಾ ಆ ನಂತರ ಇನ್ನಾವುದೇ ತೆಲುಗು ಸಿನಿಮಾದಲ್ಲಿ ನಟಿಸಲಿಲ್ಲ. ಹಿಂದಿಯ ಮೂರು ಸಿನಿಮಾಗಳಲ್ಲಿ ನಟಿಸಿದರಾದರೂ ಅದು ಅತಿಥಿ ಪಾತ್ರವಷ್ಟೆ ಆಗಿತ್ತು, ಪೂರ್ಣ ಪ್ರಮಾಣದ ಪಾತ್ರ ಮಾಡಿರಲಿಲ್ಲ.
ಆದರೆ ಈಗ ಜೆನಿಲಿಯಾ ಅವರು ಮತ್ತೆ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದು, ಒಂದೊಮ್ಮೆ ಮಿಂಚಿದ್ದ ತೆಲುಗು ಸಿನಿ ರಂಗದ ಮೂಲಕವೇ ಸಿನಿಮಾ ವೃತ್ತಿಯ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಲಿದ್ದಾರೆ. ಯಾವುದಾ ಸಿನಿಮಾ? ಯಾವ ನಾಯಕನಿಗೆ ಜೆನಿಲಿಯಾ ಜೋಡಿಯಾಗಲಿದ್ದಾರೆ? ಕುತೂಹಲದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಓಕೆ ಎಂದಿದ್ದಾರೆ ಜೆನಿಲಿಯಾ
ಚಿರಂಜೀವಿ ಅಭಿನಯಿಸಲಿರುವ ರೀಮೇಕ್ ಸಿನಿಮಾದಲ್ಲಿ ಪಾತ್ರ ಮಾಡುವಂತೆ ಚಿತ್ರತಂಡ ಜೆನಿಲಿಯಾ ಅವರನ್ನು ಕೇಳಿಕೊಂಡಿದೆ. ಅದಕ್ಕೆ ಜೆನಿಲಿಯಾ ಓಕೆ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಈ ಸಿನಿಮಾದಲ್ಲಿ ಚಿರಂಜೀವಿ ಅವರಿಗೆ ನಾಯಕಿಯಾಗಿ ಜೆನಿಲಿಯಾ ಇರುವುದಿಲ್ಲ.

ಲುಸಿಫರ್ ಸಿನಿಮಾದಲ್ಲಿ ನಾಯಕಿ ಪಾತ್ರ ಇಲ್ಲ
ಮಲಯಾಳಂ ನ 'ಲುಸೀಫರ್' ಸಿನಿಮಾದ ರೀಮೇಕ್ ನಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಲುಸಿಫರ್ ಸಿನಿಮಾದಲ್ಲಿ ಮೋಹನ್‌ಲಾಲ್ ನಟಿಸಿದ್ದರು. ಈ ಸಿನಿಮಾದಲ್ಲಿ ನಾಯಕಿ ಪಾತ್ರವೇ ಇರಲಿಲ್ಲ. ಹಾಗಾಗಿ ತೆಲುಗಿನಲ್ಲಿಯೂ ಸಹ ಚಿರಂಜೀವಿ ಪಾತ್ರಕ್ಕೆ ನಾಯಕಿ ಪಾತ್ರ ಇರುವುದಿಲ್ಲ. ಆದರೆ ಜೆನಿಲಿಯಾ ಸಿನಿಮಾದ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ.

ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಜೆನಿಲಿಯಾ
ಲುಸಿಫರ್ ಸಿನಿಮಾದ ರಿಮೇಕ್‌ನಲ್ಲಿ ಚಿರಂಜೀವಿ ನಿರ್ವಹಿಸಲಿರುವ ಪಾತ್ರದ ಮಲತಂದೆಯ ಮಗಳ ಪಾತ್ರದಲ್ಲಿ ಜೆನಿಲಿಯಾ ನಟಿಸಲಿದ್ದಾರೆ. ಈ ಪಾತ್ರ ಸಿನಿಮಾದ ಪ್ರಮುಖ ಪಾತ್ರವಾಗಿದ್ದು, ಮಲೆಯಾಳಂ ನಲ್ಲಿ ಈ ಪಾತ್ರವನ್ನು ಮಂಜು ವಾರಿಯರ್ ನಿರ್ವಹಿಸಿದ್ದರು.

ವಿವಾಹವಾದ ನಂತರ ಸಿನಿಮಾದಿಂದ ದೂರ
ಜೆನಿಲಿಯಾ ಮತ್ತು ಬಾಲಿವುಡ್ ನ ಖ್ಯಾತ ನಟ ರಿತೇಶ್ ದೇಶ್‌ಮುಖ್ ಫೆಬ್ರವರಿ 03, 2012 ಕ್ಕೆ ವಿವಾಹವಾದರು. ಅದೇ ವರ್ಷವೇ ಅವರು ಕೊನೆಯದಾಗಿ ಸಿನಿಮಾದಲ್ಲಿ ಪಾತ್ರ ನಿರ್ವಹಿಸಿದ್ದರು, ಆ ನಂತರ ಈವರೆಗೆ ಕೇವಲ ಮೂರು ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಒಂದು ಮರಾಠಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಲುಸೀಫರ್ ರೀಮೇಕ್ ಗೆ ಸಾಹೋ ನಿರ್ದೇಶಕ
ಲುಸೀಫರ್ ರೀಮೇಕ್ ಅನ್ನು ಸಾಹೊ ಸಿನಿಮಾದ ನಿರ್ದೇಶಕ ಸುಜೀತ್ ನಿರ್ದೇಶಿಸುತ್ತಿದ್ದಾರೆ. ಚಿರಂಜೀವಿ ಪ್ರಸ್ತುತ ಆಚಾರ್ಯ ಸಿನಿಮಾದಲ್ಲಿ ನಟಿಸುತ್ತಿದ್ದು, ಲಾಕ್‌ಡೌನ್‌ನಿಂದಾಗಿ ಚಿತ್ರೀಕರಣ ಸ್ತಬ್ಧವಾಗಿದೆ. ಈ ಸಿನಿಮಾ ಮುಗಿದ ಬಳಿಕವೇ ಲುಸೀಫರ್ ರೀಮೇಕ್ ಚಿತ್ರೀಕರಣ ಪ್ರಾರಂಭವಾಗಲಿದೆ.


Click it and Unblock the Notifications











