ತೆಲುಗು ಸಿನಿಮಾ ವೀಕ್ಷಿಸಿ ಭೇಷ್ ಎಂದ ಗುಜರಾತ್ ಸಿಎಂ
ದಕ್ಷಿಣ ಭಾರತದ ಸಿನಿಮಾಗಳು ಉತ್ತರ ಭಾರತದಲ್ಲಿ ದೊಡ್ಡ ಮಟ್ಟಿಗಿನ ಪ್ರಭಾವ ಬೀರುತ್ತಿವೆ. ಕೇವಲ ಸ್ಟಾರ್ ನಟರ ಸಿನಿಮಾಗಳು ಮಾತ್ರವಲ್ಲ ಇತರೆ ಕಂಟೆಂಟ್ ಆಧರಿತ ದಕ್ಷಿಣ ಭಾರತ ಸಿನಿಮಾಗಳನ್ನೂ ಸಹ ಉತ್ತರದ ಮಂದಿ ಮೆಚ್ಚಿ ಕೊಂಡಾಡುತ್ತಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ತೆಲುಗು ಚಿತ್ರರಂಗದಿಂದ ಕೆಲವು ಒಳ್ಳೆಯ ಸಿನಿಮಾಗಳು ಬಂದಿವೆ. 'RRR' ಬಳಿಕ ಅಲ್ಲಿನ ಸ್ಟಾರ್ ನಟರು ಹಿಟ್ ನೀಡಲು ಸೋತಿದ್ದಾರಾದರು ಎರಡನೇ ದರ್ಜೆ ನಾಯಕ ನಟರು ಕೆಲವು ಉತ್ತಮ ಕತೆಯುಳ್ಳ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲಿ 'ಕಾರ್ತಿಕೇಯ 2' ಸಹ ಒಂದು.
ಪೌರಾಣಿಕ, ಅತಿಮಾನುಷ ಕತೆ ಹೊಂದಿರುವ 'ಕಾರ್ತಿಕೇಯ 2' ಸಿನಿಮಾ ಬಿಡುಗಡೆ ಆಗಿ ಎರಡು ವಾರಗಳಾಗಿದ್ದು, ಸಿನಿಮಾ ಕಲೆಕ್ಷನ್ ಉತ್ತಮವಾಗಿದೆ. ಪ್ಯಾನ್ ಇಂಡಿಯಾ ಇದಲ್ಲದಿದ್ದರೂ ಸಹ ಉತ್ತರ ಭಾರತದಲ್ಲಿಯೂ ಜನ ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸಿನಿಮಾ ವೀಕ್ಷಿಸಿ ಭೇಷ್ ಎಂದ ಗುಜರಾತ್ ಸಿಎಂ
ಇದೀಗ ಈ ಸಿನಿಮಾವನ್ನು ಗುಜರಾತ್ ರಾಜ್ಯದ ಸಿಎಂ ಭೂಪೇಂದ್ರಭಾಯಿ ಪಟೇಲ್ ವೀಕ್ಷಿಸಿದ್ದು, ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಶ್ರೀಕೃಷ್ಣನ ಸಂದೇಶವನ್ನು ಸುಂದರ ಕಥನವಾಗಿ ತೆರೆ ಮೇಲೆ ಕಟ್ಟಿಕೊಟ್ಟಿದ್ದಕ್ಕೆ ಚಿತ್ರತಂಡವನ್ನು ಸಿಎಂ ಅಭಿನಂದಿಸಿದ್ದಾರೆ. 'ಕಾರ್ತಿಕೇಯ 2' ಸಿನಿಮಾದ ಬಹುಭಾಗವನ್ನು ಗುಜರಾತ್‌ನಲ್ಲಿ ಚಿತ್ರೀಕರಿಸಿದ್ದು ಸಹ ಸಿಎಂ ಅಭಿನಂದನೆಗೆ ಕಾರಣಗಳಲ್ಲಿ ಒಂದಾಗಿದೆ. ಸಿನಿಮಾದ ನಾಯಕ ನಿಖಿಲ್ ಸಿದ್ಧಾರ್ಥ ಹಾಗೂ ನಿರ್ದೇಶಕ ಚಂದು ಮೊಂಡೇಟಿ ಅವರಗಳೊಟ್ಟಿಗೆ ಚಿತ್ರ ತೆಗೆಸಿಕೊಂಡಿದ್ದಾರೆ ಗುಜರಾತ್ ಸಿಎಂ.

ಸಿನಿಮಾ ಮೆಚ್ಚಿದ ಸ್ಟಾರ್ ನಟರು
ಗುಜರಾತ್ ಸಿಎಂ ಮಾತ್ರವೆ ಅಲ್ಲದೆ, 'ಕಾರ್ತಿಕೇಯ 2' ಸಿನಿಮಾವನ್ನು ತೆಲುಗಿನ ಕೆಲವು ಸ್ಟಾರ್ ನಟರು ನೋಡಿ ಮೆಚ್ಚಿಕೊಂಡಿದ್ದಾರೆ. ಚಿರಂಜೀವಿ, ರಾಮ್ ಚರಣ್ ತೇಜ ಸೇರಿದಂತೆ ಇನ್ನೂ ಕೆಲವರು ಈ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಮರ್ಶಕರು ಸಹ ಸಿನಿಮಾವನ್ನು ಮೆಚ್ಚಿ ಕೊಂಡಾಡಿದ್ದಾರೆ. ಅತಿಮಾನುಷ ಕತೆಯುಳ್ಳ ಸಿನಿಮಾ ಆದರೂ ಸಂಯಮದಿಂದ ವಾಸ್ತವತೆ, ವೈಜ್ಞಾನಿಕ ಚಿಂತನೆಗಳನ್ನು ಜೊತೆಯಾಗಿರಿಸಿಕೊಂಡೆ ಕತೆ ಹೇಳಿರುವ ರೀತಿಗೆ ಭೇಷ್ ಎಂದಿದ್ದಾರೆ.

ಕೆಲ ಒಳ್ಳೆಯ ಸಿನಿಮಾಗಳು ಬಂದಿವೆ
ಕಳೆದ ಕೆಲವು ವಾರಗಳಲ್ಲಿ ತೆಲುಗಿನಲ್ಲಿ ಒಳ್ಳೆಯ ಸಿನಿಮಾಗಳು ಬಂದಿವೆ. ವಿಶೇಷವೆಂದರೆ ಈ ಸಿನಿಮಾಗಳು ಸ್ಟಾರ್ ನಟರ ಸಿನಿಮಾಗಳಲ್ಲದೇ ಇರುವುದು. ದುಲ್ಕರ್ ಸಲ್ಮಾನ್, ರಶ್ಮಿಕಾ ಮಂದಣ್ಣ ನಟನೆಯ 'ಸೀತಾ ರಾಮಮ್' ಸಿನಿಮಾ ಹಿಟ್ ಆಗಿದೆ. ಅದರ ಹಿಂದೆ ಬಂದ 'ಬಿಂಬಿಸಾರ' ಸಿನಿಮಾಕ್ಕೂ ಮೆಚ್ಚುಗೆ ವ್ಯಕ್ತಪಡಿಸಲಾಗಿತ್ತು. ನಂತರ ಬಂದ 'ಕಾರ್ತಿಕೇಯ 2' ಸಹ ಹಿಟ್ ಆಯಿತು. ಆದರೆ ಈ ನಡುವೆ ಬಿಡುಗಡೆ ಆದ ಸ್ಟಾರ್ ನಟನ ಸಿನಿಮಾ 'ಲೈಗರ್' ಮಕಾಡೆ ಮಲಗಿದೆ.

100 ಕೋಟಿ ಕಲೆಕ್ಷನ್ ಮಾಡಿದ ಸಿನಿಮಾ
'ಕಾರ್ತಿಕೇಯ 2' ಸಿನಿಮಾವು ಇದೇ ಹೆಸರಿನಿಂದ ಬಂದ ಈ ಹಿಂದಿನ ಸಿನಿಮಾದ ಮುಂದುವರೆದ ಭಾಗ. ದೇವರು, ಅತಿಮಾನುಷ ಶಕ್ತಿಗಳ ಕತೆಯಿತ್ತು. ಆ ಸಿನಿಮಾದಲ್ಲಿ ನಿಖಿಲ್ ವೈದ್ಯಕೀಯ ವಿದ್ಯಾರ್ಥಿಯ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ಸ್ವಾತಿ ರೆಡ್ಡಿ ನಾಯಕಿಯಾಗಿದ್ದರು. ಕಾರ್ತಿಕೇಯ 2 ಸಿನಿಮಾದಲ್ಲಿ ಅನುಪಮಾ ಪರಮೇಶ್ವರನ್ ನಾಯಕಿಯಾಗಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್‌ನ ಜನಪ್ರಿಯ ನಟ ಅನುಪಮ್ ಖೇರ್ ಸಹ ಇದ್ದಾರೆ. ಎರಡೂ ಸಿನಿಮಾಗಳನ್ನು ಚಂದು ಮೊಂಡೇಟಿ ಅವರೇ ನಿರ್ದೇಶನ ಮಾಡಿದ್ದಾರೆ. ಕೇವಲ 20 ರಿಂದ 30 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಸಿನಿಮಾ ಈಗಾಗಲೇ 100 ಕೋಟಿ ಕಲೆಕ್ಷನ್ ಮಾಡಿದೆ.


Click it and Unblock the Notifications











