"ತೆಲುಗು ಹುಡುಗಿ ಶ್ರೀಲೀಲಾ ದೊಡ್ಡ ನಟಿಯಾಗಿದ್ದು ಖುಷಿ ಆಗ್ತಿದೆ" ಎಂದ ಮಹೇಶ್ ಬಾಬು
ಮಹೇಶ್ ಬಾಬು ಹಾಗೂ ಶ್ರೀಲೀಲಾ ಜೋಡಿಯ 'ಗುಂಟೂರು ಖಾರಂ' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಮಧ್ಯರಾತ್ರಿಯಿಂದಲೇ ಸಿನಿಮಾ ಕೆಲವೆಡೆ ತೆರೆಗಪ್ಪಳಿಸುತ್ತಿದೆ. ಕರ್ನಾಟಕದಲ್ಲೂ ಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ 4 ಗಂಟೆಗೆ ಮೊದಲ ಪ್ರದರ್ಶನ ಆರಂಭವಾಗಲಿದೆ.
ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದ ಪೋಸ್ಟರ್, ಟೀಸರ್, ಸಾಂಗ್ಸ್, ಟ್ರೈಲರ್ ಗಮನ ಸೆಳೆದಿದೆ. ಚಿತ್ರದಲ್ಲಿ ಮೊದಲಿಗೆ ಪೂಜಾ ಹೆಗ್ಡೆ ನಾಯಕಿಯಾಗಿ ಆಯ್ಕೆ ಆಗಿದ್ದರು. 2ನೇ ನಾಯಕಿಯಾಗಿ ಶ್ರೀಲೀಲಾಗೆ ಅವಕಾಶ ಸಿಕ್ಕಿತ್ತು. ಆದರೆ ಪೂಜಾ ಹೆಗ್ಡೆ ಕಾರಣಾಂತರಗಳಿಂದ ಸಿನಿಮಾದಿಂದ ಹೊರ ಬಂದಿದ್ದರು. ಬಳಿಕ ಆ ಅವಕಾಶ ಶ್ರೀಲೀಲಾ ಪಾಲಾಗಿತ್ತು.

ಮೀನಾಕ್ಷಿ ಚೌಧರಿ ಎರಡನೇ ನಾಯಕಿಯಾಗಿ ಶ್ರೀಲೀಲಾ ಜಾಗವನ್ನು ತುಂಬುವಂತಾಯಿತು. ಚಿತ್ರದಲ್ಲಿ ಇವರಿಬ್ಬರ ಕೆಮೆಸ್ಟ್ರಿ ಹೇಗಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. 'ಪೆಳ್ಳಿ ಸಂದD' ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದ ಶ್ರೀಲೀಲಾ ಭಾರೀ ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ. ಬಾಲಕೃಷ್ಣ, ಪವನ್ ಕಲ್ಯಾಣ್, ರವಿತೇಜ ರೀತಿಯ ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ.
ಅಮೇರಿಕಾದಲ್ಲಿ ಹುಟ್ಟಿದ ಶ್ರೀಲೀಲಾ ಬೆಂಗಳೂರಿನಲ್ಲಿ ಓದಿ ಬೆಳೆದರು. 'ಕಿಸ್' ಸಿನಿಮಾ ಮೂಲಕ ಕನ್ನಡದಲ್ಲೇ ಮೊದಲ ನಟಿಸಿದರು. ಆಕೆಯ ತಾಯಿ ಸ್ವರ್ಣಲತಾ ಆಂಧ್ರ ಮೂಲದವರು. ಹಾಗಾಗಿ ಶ್ರೀಲೀಲಾ ಚೆನ್ನಾಗಿ ತೆಲುಗು ಕೂಡ ಮಾತನಾಡುತ್ತಾರೆ. ಇತ್ತೀಚೆಗೆ 'ಗುಂಟೂರು ಖಾರಂ' ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೀತು. ವೇದಿಕೆಯಲ್ಲಿ ಮಾತನಾಡುತ್ತಾ ಶ್ರೀಲೀಲಾ ಡ್ಯಾನ್ಸ್ ಬಗ್ಗೆ ಮಹೇಶ್ ಬಾಬು ಹಾಡಿ ಕೊಂಡಾಡಿದ್ದಾರೆ.

"ಬಹಳ ದಿನಗಳ ನಂತರ ತೆಲುಗು ಹುಡುಗಿಯೊಬ್ಬಳು ದೊಡ್ಡ ಹೀರೋಯಿನ್ ಆಗುತ್ತಿರುವುದು ಬಹಳ ಖುಷಿ ಇದೆ. ನಾನು ನಟಿಸಿದ ನಟಿಯರಲ್ಲಿ ಶ್ರೀಲೀಲಾ ಬಹಳ ಡಿಡಿಕೇಟೆಡ್ ಹಾಗೂ ಹಾರ್ಡ್ ವರ್ಕಿಂಗ್ ನಟಿ. ಆಕೆಗೆ ಶಾಟ್ ಇದ್ರು ಇಲ್ಲದಿದ್ದರೂ ಸೆಟ್‌ನಲ್ಲಿ ಇರ್ತಾರೆ. ಕ್ಯಾರಾವ್ಯಾನ್‌ಗೆ ಹೋಗಲ್ಲ. ನಮ್ಮ ತಂಡಕ್ಕೆ ಈ ಬಗ್ಗೆ ಬಹಳ ಖುಷಿ ಇದೆ. ಇನ್ನು ಹುಡುಗಿ ಜೊತೆ ಡ್ಯಾನ್ಸ್ ಮಾಡೋದು ಅಬ್ಬಬ್ಬಾ ಕಷ್ಟ. ಅದೇನು ಡ್ಯಾನ್ಸ್ ಮಾಡ್ತಾರೆ ಅಂದ್ರೆ ಹೀರೊಗಳೆಲ್ಲಾ ಸುಸ್ತಾಗಿಬಿಡ್ತಾರೆ. ನಿಮಗೆ ಶುಭವಾಗಲಿ" ಎಂದಿದ್ದಾರೆ.
ಬೆಂಗಳೂರಿನಲ್ಲಿ ಹುಟ್ಟಿಬೆಳೆದ ಶ್ರೀಲೀಲಾರನ್ನು ಮಹೇಶ್ ಬಾಬು ತೆಲುಗು ಹುಡುಗಿ ಎಂದಿದ್ದು ಕೆಲವರಿಗೆ ಅಚ್ಚರಿ ಮೂಡಿಸಿದೆ. ಇನ್ನು ಈ ಹಿಂದೆ ಕೂಡ ಶ್ರೀಲೀಲಾ ಡ್ಯಾನ್ಸ್ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆ ಆಗಿತ್ತು. 'ಧಮಾಕ' ಚಿತ್ರದಲ್ಲಿ ರವಿತೇಜ ಜೊತೆ ಬಿಂದಾಸ್ ಹೆಜ್ಜೆ ಹಾಕಿ ಶ್ರೀಲೀಲಾ ಕಮಾಲ್ ಮಾಡಿದ್ದರು. ಮುಂದೆ ಪವನ್ ಕಲ್ಯಾಣ್ ಜೊತೆಗೂ ಶ್ರೀಲೀಲಾ ನಟಿಸುತ್ತಿದ್ದಾರೆ.
ಶ್ರೀಲೀಲಾ ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ದೊಡ್ಡ ಬ್ರೇಕ್ ಮಾತ್ರ ಆಕೆಗೆ ಸಿಗಲಿಲ್ಲ. 'ಗುಂಟೂರು ಖಾರಂ' ಚಿತ್ರವಾದರೂ ಒಳ್ಳೆ ಸಕ್ಸಸ್ ತಂದುಕೊಡುತ್ತದೆ ಎನ್ನುವ ನಿರೀಕ್ಷೆಯಿದೆ. ಸೂಪರ್ ಹಿಟ್ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ತ್ರಿವಿಕ್ರಮ್- ಮಹೇಶ್ ಜೋಡಿಯ 'ಅತಡು' ಹಾಗೂ 'ಖಲೇಜಾ' ಹಿಂದಿನ 2 ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ.
ಚಿಕ್ಕಂದಿನಲ್ಲೇ 'ಭರತನಾಟ್ಯಂ' ಕಲಿಯಲು ಶ್ರೀಲೀಲಾ ಆರಂಭಿಸಿದರು. ಇನ್ನು ಡಾಕ್ಟರ್ ಆಗುವ ಆಸೆಯಿಂದ ಓದುತ್ತಿದ್ದಾರೆ. ಅದರ ನಡುವೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 2019ರಲ್ಲಿ ಬಂದ ಕನ್ನಡದ 'ಕಿಸ್' ಆಕೆಯ ಚೊಚ್ಚಲ ಸಿನಿಮಾ. ಬಳಿಕ 'ಭರಾಟೆ' ಚಿತ್ರದಲ್ಲಿ ಮಿಂಚಿದರು. ಆ ಬಳಿಕ ತೆಲುಗು ಚಿತ್ರರಂಗ ಪ್ರವೇಶಿಸಿದರು. ಇತ್ತೀಚೆಗೆ ಆಕೆ ಯಾವುದೇ ಕನ್ನಡ ಸಿನಿಮಾ ಒಪ್ಪಿಕೊಂಡಿಲ್ಲ.


Click it and Unblock the Notifications










