"ಶ್ರೀಲೀಲಾ ಸ್ವೀಟು, ನೀನು ನನ್ನ ಹಾರ್ಟು": ತೆಲುಗು ಬಾಬುಗಳ ಹಂಗಾಮ
ಮಹೇಶ್ ಬಾಬು ಹಾಗೂ ಶ್ರೀಲೀಲಾ ನಟನೆಯ 'ಗುಂಟೂರು ಖಾರಂ' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ತಿದೆ. ಆದರೂ ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಮಹೇಶ್ ಬಾಬು ಹ್ಯಾಟ್ರಿಕ್ ಕಾಂಬಿನೇಷನ್ ಸಿನಿಮಾ ಮ್ಯಾಜಿಕ್ ಮಾಡುವಲ್ಲಿ ವಿಫಲವಾಗಿದೆ. ಮಹೇಶ್ ಬಾಬು ಅಭಿಮಾನಿಗಳಿಗೆ ಸಿನಿಮಾ ನಿರಾಸೆ ತಂದಿರುವುದು ಸುಳ್ಳಲ್ಲ.
ಕಳೆದ ವರ್ಷ ಶ್ರೀಲೀಲಾ ನಟಿಸಿದ 3 ಸಿನಿಮಾಗಳು ಸೋತಿದ್ದವು. ಆದರೆ ಈ ವರ್ಷದ ಆರಂಭದಲ್ಲೇ 'ಗುಂಟೂರು ಖಾರಂ' ಸಿನಿಮಾ ಮೂಲಕ ಒಳ್ಳೆ ಸಕ್ಸಸ್ ಸಿಕ್ಕಂತಾಗಿದೆ. ಮಹೇಶ್ ಬಾಬು ಜೋಡಿಯಾಗಿ ಶ್ರೀಲೀಲಾ ಕಮಾಲ್ ಮಾಡಿದ್ದಾರೆ. ಚಿತ್ರಕ್ಕೆ ಎರಡನೇ ನಾಯಕಿಯಾಗಿ ಆಯ್ಕೆ ಆಗಿದ್ದ ಬೆಂಗಳೂರು ಬೆಡಗಿಗೆ ಅದೃಷ್ಟ ಖುಲಾಯಿಸಿ ಮೊದಲ ಹೀರೊ ಆಗುವ ಅವಕಾಶ ದಕ್ಕಿತ್ತು. ಬಹಳ ಅದ್ಧೂರಿಯಾಗಿ ನಿರ್ಮಾಣವಾಗಿರುವ ಸಿನಿಮಾ ಬಾಕ್ಸಾಫೀಸ್ ಭವಿಷ್ಯ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

ತೆಲುಗು ಚಿತ್ರರಂಗದಲ್ಲಿ ಶ್ರೀಲೀಲಾ ಕ್ರೇಜ್ ಜೋರಾಗಿದೆ. ನಟಿಸಿದ ಯಾವುದೇ ಸಿನಿಮಾ ಹಿಟ್ ಆಗದಿದ್ದರೂ ಮಹೇಶ್ ಬಾಬು, ಬಾಲಕೃಷ್ಣ, ಪವನ್ ಕಲ್ಯಾಣ್‌ರಂತಹ ಸೂಪರ್ ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಸ್ಟಾರ್ ನಟರೇ ಆಕೆಯನ್ನು ನಾಯಕಿಯಾಗಿ ಆಯ್ಕೆ ಮಾಡುವಂತೆ ಬೇಡಿಕೆ ಇಡುವ ಮಟ್ಟಿಗೆ ಶ್ರೀ ಹವಾ ನಡೀತಿದೆ. ಇನ್ನು ಆಂಧ್ರ, ತೆಲಂಗಾಣದಲ್ಲಿ ಶ್ರೀಲೀಲಾಗೆ ವೀರಾಭಿಮಾನಿಗಳು ಇದ್ದಾರೆ. ತಮ್ಮ ಕ್ಯೂಟ್ ಲುಕ್ಸ್‌ನಿಂದ 'ಕಿಸ್' ಬೆಡಗಿ ತೆಲುಗು ಬಾಬುಗಳ ದಿಲ್ ಕದ್ದಿದ್ದಾರೆ.
ಶ್ರೀಲೀಲಾಗೆ ಈಗ ತೆಲುಗು ರಾಜ್ಯಗಳಲ್ಲಿ ಅಭಿಮಾನಿಗಳು ಮಾತ್ರವಲ್ಲ ವೀರಾಭಿಮಾನಿಗಳಿದ್ದಾರೆ. 'ಗುಂಟೂರು ಖಾರಂ' ಸಿನಿಮಾ ರಿಲೀಸ್ ವೇಳೆ ಆಕೆಗಾಗಿ ವೀರಾಭಿಮಾನಿಗಳು ಹಾಕಿರುವ ಬ್ಯಾನರ್‌ವೊಂದು ಸಖತ್ ವೈರಲ್ ಆಗುತ್ತಿದೆ.
"ಗುಂಟೂರು ಖಾರಂ ಘಾಟು.. ಚಿತ್ರಕ್ಕೆ ನಾಯಕಿ ಶ್ರೀಲೀಲಾ ಸ್ವೀಟು.. ಅದಕ್ಕೆ ನೀನು ನನ್ನ ಹಾರ್ಟು ಎಂದು ಬರದಿರುವ ದೊಡ್ಡ ಬ್ಯಾನರ್‌ವೊಂದನ್ನು ಶ್ರೀಲೀಲಾ ಅಭಿಮಾನಿಗಳು ಹಾಕಿದ್ದಾರೆ. ಕೆಳಗಡೆ ಶ್ರೀಲೀಲಾ ಡೈ ಹಾರ್ಡ್ ಫ್ಯಾನ್ಸ್ ಎಂದು ಬರೆಯಲಾಗಿದೆ. ಬ್ಯಾನರ್‌ನಲ್ಲಿ ಶ್ರೀಲೀಲಾ ದೊಡ್ಡ ದೊಡ್ಡ ಫೋಟೊ ಜೊತೆಗೆ ಅಭಿಮಾನಿಗಳು ತಮ್ಮ ವೈಯಕ್ತಿಕ ಫೋಟೊಗಳನ್ನು ಕೂಡ ಹಾಕಿಸಿದ್ದಾರೆ. ಅಷ್ಟೇ ಆಗಿದ್ದರೆ ಪರವಾಗಿಲ್ಲ, ಮೂಲೆಯಲ್ಲಿ ಸಣ್ಣದಾಗಿ ಮಹೇಶ್ ಬಾಬು ಫೋಟೊ ಇದೆ. ಇದನ್ನು ನೋಡಿ ಸೂಪರ್ ಸ್ಟಾರ್ ಫ್ಯಾನ್ಸ್ ಬೇಸರಗೊಂಡಿದ್ದಾರೆ. ಸದ್ಯ ಈ ಬ್ಯಾನರ್ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಶ್ರೀಲೀಲಾ ನಟನೆಯ 'ಗುಂಟೂರು ಖಾರಂ' ಚಿತ್ರಕ್ಕೆ ಶುಭ ಕೋರಿ ಅಭಿಮಾನಿಗಳು ಬ್ಯಾನರ್ ಕಟ್ಟಿದ್ದಾರೆ. ಚಿತ್ರದಲ್ಲಿ ಅಮ್ಮು ಪಾತ್ರದಲ್ಲಿ ಶ್ರೀಲೀಲಾ ಲಂಗಾ ದಾವಣಿ ಹಾಗೂ ಸೀರೆಯಲ್ಲಿ ಕಂಗೊಳಿಸಿದ್ದಾರೆ. ನಟನೆಗೆ ಅಷ್ಟಾಗಿ ಅವಕಾಶ ಸಿಗದಿದ್ದರೂ ಹಾಡುಗಳಲ್ಲಿ ಬಿಂದಾಸ್ ಆಗಿ ಹೆಜ್ಜೆ ಹಾಕಿ ರಂಗೇರಿಸಿದ್ದಾರೆ. ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಆಕೆಯ ಡ್ಯಾನ್ಸ್ ಬಗ್ಗೆ ನಟ ಮಹೇಶ್ ಬಾಬು ಕೂಡ ಹಾಡಿ ಹೊಗಳಿದ್ದರು.
ಕಳೆದ ವರ್ಷ ಏಳೆಂಟು ಸಿನಿಮಾಗಳು ಶ್ರೀಲೀಲಾ ಕೈಯಲ್ಲಿತ್ತು. ಆದರೆ ಈಗ ಖಾಲಿ ಆಗಿದೆ. ವಿಜಯ್ ದೇವರಕೊಂಡ ಜೊತೆ ಮಾತ್ರ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪವನ್ ಕಲ್ಯಾಣ್ ಜೊತೆ 'ಉಸ್ತಾದ್ ಭಗತ್‌ಸಿಂಗ್' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಚಿತ್ರೀಕರಣ ನಿಂತು ಹೋಗಿದೆ. ಪವನ್ ಪಾಲಿಟಿಕ್ಸ್ ಕಡೆ ಹೆಚ್ಚು ಗಮನ ಹರಿಸಿರುವುದರಿಂದ ಸದ್ಯಕ್ಕೆ ಸಿನಿಮಾ ಚಿತ್ರೀಕರಣ ಮತ್ತೆ ಶುರುವಾಗುವುದು ಕಷ್ಟ ಎನ್ನಲಾಗ್ತಿದೆ.
ಟಾಲಿವುಡ್ ಕಡೆ ಮುಖ ಮಾಡಿದ ಬಳಿಕ ಶ್ರೀಲೀಲಾ ಕನ್ನಡದಲ್ಲಿ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ. ಮತ್ತೆ ಯಾವಾಗ ಕನ್ನಡ ಚಿತ್ರರಂಗಕ್ಕೆ ವಾಪಸ್ ಆಗುತ್ತಾರೆ ಎನ್ನುವುದು ಕೂಡ ಗೊತ್ತಿಲ್ಲ.


Click it and Unblock the Notifications











