Sankranthi 2024: ಟಾಲಿವುಡ್, ಕಾಲಿವುಡ್ 'ಸಂಕ್ರಾಂತಿ' ಫೈಟ್ ಜೋರು.. ದೂರವೇ ಉಳಿದ ಸ್ಯಾಂಡಲ್‌ವುಡ್!
ಹೊರ ಹುರುಪಿನೊಂದಿಗೆ ಹೊಸ ವರ್ಷ ಶುರುವಾಗಿದೆ. ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಇನ್ನು ಹಬ್ಬ ಅಂದ್ರೆ ಚಿತ್ರರಂಗದಲ್ಲೂ ಸಂಭ್ರಮ ಜೋರಾಗಿರುತ್ತದೆ. ದೊಡ್ಡ ದೊಡ್ಡ ಸಿನಿಮಾಗಳನ್ನು ಹಬ್ಬದ ಸಂಭ್ರಮದಲ್ಲಿ ತೆರೆಗೆ ತರುವ ಪ್ರಯತ್ನ ನಡೆಯುತ್ತದೆ. ಈ ವರ್ಷ ಸುಗ್ಗಿ ಹಬ್ಬಕ್ಕೆ ತೆಲುಗು, ತಮಿಳಿನ ಬಹುನಿರೀಕ್ಷಿತ ಸಿನಿಮಾಗಳು ತೆರೆಗಪ್ಪಳಿಸುತ್ತಿವೆ.
ಕರ್ನಾಟಕ, ತಮಿಳುನಾಡು, ಆಂಧ್ರ ಹಾಗೂ ತೆಲಂಗಾಣದಲ್ಲಿ ಸಂಕ್ರಾಂತಿ ಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ 3 ದಿನಗಳ ಕಾಲ ಹಬ್ಬದ ಸಂಭ್ರಮ ಮನೆ ಮಾಡುತ್ತದೆ. ಹಾಗಾಗಿ ಹಬ್ಬದ ಸಡಗರದಲ್ಲಿ ಸಿನಿಮಾ ಬಿಡುಗಡೆಯಾದರೆ ಬಾಕ್ಸಾಫೀಸ್‌ನಲ್ಲಿ ಒಳ್ಳೆ ಕಲೆಕ್ಷನ್ ಆಗುತ್ತದೆ ಎನ್ನುವ ಲೆಕ್ಕಾಚಾರವಿದೆ. ಅದೇ ಕಾರಣಕ್ಕೆ ಪ್ರತಿವರ್ಷ ಸ್ಟಾರ್ ನಟರು ಸುಗ್ಗಿ ಸಂಭ್ರಮದಲ್ಲಿ ಬಾಕ್ಸಾಫೀಸ್ ಕದನಕ್ಕೆ ಇಳಿಯುತ್ತಾರೆ.

ಈ ಬಾರಿ ಟಾಲಿವುಡ್‌ನಲ್ಲಿ ಮಹೇಶ್ ಬಾಬು, ರವಿತೇಜಾ, ನಾಗಾರ್ಜುನ, ವೆಂಕಟೇಶ್ ಹಾಗೂ ಕಾಲಿವುಡ್‌ನಲ್ಲಿ ರಜನಿಕಾಂತ್, ಧನುಷ್, ಶಿವಕಾರ್ತಿಕೇಯನ್ ಸಂಕ್ರಾಂತಿ ಸಮರಕ್ಕೆ ಸನ್ನದ್ಧರಾಗಿದ್ದಾರೆ. ಆದರೆ ಕನ್ನಡದ ಯಾವುದೇ ದೊಡ್ಡ ಸಿನಿಮಾ ಈ ಬಾರಿ ಸುಗ್ಗಿ ಹಬ್ಬಕ್ಕೆ ಬಿಡುಗಡೆಯಾಗುತ್ತಿಲ್ಲ.
ಗುಂಟೂರು ಖಾರಂ
ಮಹೇಶ್ ಬಾಬು ಹಾಗೂ ಶ್ರೀಲೀಲಾ ನಟನೆಯ 'ಗುಂಟೂರು ಖಾರಂ' ಸಿನಿಮಾ ಜನವರಿ 12ಕ್ಕೆ ರಿಲೀಸ್ ಆಗಲಿದೆ. ತ್ರಿವಿಕ್ರಮ್ ಶ್ರೀನಿವಾಸ್ ಈ ಆಕ್ಷನ್ ಎಂಟರ್‌ಟೈನರ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಕಳೆದ ವರ್ಷವೇ ಬರಬೇಕಿದ್ದ ಸಿನಿಮಾ ಕಾರಣಾಂತರಗಳಿಂದ ತಡವಾಗಿತ್ತು. ಚಿತ್ರಕ್ಕೆ ಮೊದಲು ಪೂಜಾ ಹೆಗ್ಡೆ ನಾಯಕಿಯಾಗಿ ಆಯ್ಕೆ ಆಗಿದ್ದರು. ಬಳಿಕ ಚಿತ್ರದಿಂದ ಹೊರ ಬಂದಿದ್ದರು.

ನಾ ಸಾಮಿ ರಂಗಾ
ಟಾಲಿವುಡ್ ಕಿಂಗ್ ನಾಗಾರ್ಜುನ ಹಾಗೂ ಕನ್ನಡ ನಟಿ ಆಶಿಕಾ ರಂಗನಾಥ್ ನಟನೆಯ 'ನಾ ಸಾಮಿ ರಂಗ' ಸಿನಿಮಾ ಜನವರಿ 14ಕ್ಕೆ ತೆರೆಗೆ ಬರ್ತಿದೆ. ವಿಜಯ್ ಬಿನ್ನಿ ಈ ಹಳ್ಳಿ ಸೊಡಗಿನ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ನರೇಶ್, ರಾಜ್ ತರುಣ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೊಂದು ಪೀರಿಯಡ್ ಆಕ್ಷನ್ ಸಿನಿಮಾ ಎನ್ನಲಾಗ್ತಿದೆ.
ಸೈಂಧವ್
ತೆಲುಗಿನ ಮತ್ತೊಬ್ಬ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಕೂಡ ಈ ಬಾರಿ ಸಂಕ್ರಾಂತಿ ರೇಸ್‌ನಲ್ಲಿದ್ದಾರೆ. ವೆಂಕಿ ನಟನೆಯ 'ಸೈಂಧವ್' ಸಿನಿಮಾ ಜನವರಿ 13ಕ್ಕೆ ತೆರೆಗಪ್ಪಳಿಸುತ್ತಿದೆ. ಶೈಲೇಶ್ ಕೊಲೆನು ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿರುವ ವೆಂಕಟೇಶ್ ಈ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಈಗಲ್
ಜನವರಿ 13ಕ್ಕೆ ರವಿತೇಜಾ ನಟನೆಯ 'ಈಗಲ್' ಸಿನಿಮಾ ಕೂಡ ತೆರೆಗೆ ಬರ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಅನುಪಮಾ ಪರಮೇಶ್ವರನ್, ಕಾವ್ಯಾ ತಾಪರ್ ಚಿತ್ರ ಮುಖ್ಯಭೂಮಿಕೆಯಲ್ಲಿದ್ದಾರೆ. ಕಾರ್ತಿಕ್ ಘಟ್ಟಮನೇನಿ ನಿರ್ದೇಶನದ 'ಈಗಲ್' ಚಿತ್ರವನ್ನು ವಿಶ್ವ ಪ್ರಸಾದ್, ವಿವೇಕ್ ಕುಚಿಬೊಟ್ಲ ನಿರ್ಮಿಸಿದ್ದಾರೆ.
ಹನುಮಾನ್
ತೆಲುಗಿನ ಬಹುನಿರೀಕ್ಷಿತ ಸೂಪರ್ ಹೀರೊ ಸಿನಿಮಾ 'ಹನುಮಾನ್' ಕೂಡ ಸಂಕ್ರಾಂತಿಗೆ ಬಿಡುಗಡೆಯಾಗುತ್ತಿದೆ. ತೇಜ್ ಸಜ್ಜಾ ನಟನೆಯ ಈ ಚಿತ್ರ ಜನವರಿ 12ಕ್ಕೆ ರಿಲೀಸ್ ಆಗಲಿದೆ. ಪ್ರಶಾಂತ್ ವರ್ಮಾ ಚಿತ್ರವನ್ನು ನಿರ್ದೇಶನ ಮಾಡಿದ್ದು ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ಬಹಳ ಅದ್ಧೂರಿಯಾಗಿ ಸಿನಿಮಾ ತೆರೆಗೆ ತರಲಾಗಿದೆ.
ಕ್ಯಾಪ್ಟನ್ ಮಿಲ್ಲರ್
ಧನುಷ್ ಹಾಗೂ ಶಿವರಾಜ್‌ಕುಮಾರ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ಪ್ರೇಕ್ಷಕರ ಮುಂದೆ ಬರ್ತಿದೆ. ಈ ಚಿತ್ರ ತೆಲುಗು, ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಲಿದ್ದು ಸಹಜವಾಗಿಯೇ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡುವ ಸಾಧ್ಯತೆಯಿದೆ. 'ಜೈಲರ್' ಚಿತ್ರದ ಸಣ್ಣ ಪಾತ್ರದ ಮೂಲಕ ಕಾಲಿವುಡ್ ಪ್ರವೇಶಿಸಿದ್ದ ಶಿವಣ್ಣ ಈ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಲಾಲ್ ಸಲಾಂ
ಐಶ್ವರ್ಯ ರಜನಿಕಾಂತ್ ನಿರ್ದೇಶನದ 'ಲಾಲ್ ಸಲಾಂ' ಚಿತ್ರವನ್ನು ಸಂಕ್ರಾಂತಿಗೆ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿದೆ. ವಿಕ್ರಾಂತಿ, ವಿಷ್ಣು ವಿಶಾಲ್ ಲೀಡ್ ರೋಲ್‌ಗಳಲ್ಲಿ ನಟಿಸಿರುವ ಈ ಚಿತ್ರದ ಮುಖ್ಯ ಪಾತ್ರದಲ್ಲಿ ರಜನಿಕಾಂತ್ ಬಣ್ಣ ಹಚ್ಚಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ.
ಮೇರಿ ಕ್ರಿಸ್‌ಮಸ್
ಕತ್ರೀನಾ ಕೈಫ್ ಹಾಗೂ ವಿಜಯ್ ಸೇತುಪತಿ ನಟನೆಯ ರೊಮ್ಯಾಂಟಿಕ್ ಥ್ರಿಲ್ಲರ್ 'ಮೇರಿ ಕ್ರಿಸ್‌ಮಸ್' ಸಿನಿಮಾ ಕೂಡ ಸಂಕ್ರಾಂತಿ ಪೈಪೋಟಿಗೆ ಇಳೀತಿದೆ. ಹಿಂದಿ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಿದೆ. ಶ್ರೀರಾಮ್ ರಾಘವನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಇನ್ನುಳಿದಂತೆ ಶಿವಕಾರ್ತಿಕೇಯನ್ ನಟನೆಯ 'ಅಯಲಾನ್' ಹಾಗೂ 'ಅರಮಣೈ-4' ಸಿನಿಮಾಗಳು ಸಂಕ್ರಾಂತಿಗೆ ತೆರೆಕಾಣುತ್ತಿವೆ. ಹಬ್ಬದ ಸಂಭ್ರಮದಲ್ಲಿ ಪ್ರೇಕ್ಷಕರು ಹೆಚ್ಚು ಸಿನಿಮಾ ನೋಡಲು ಇಷ್ಟಪಡುತ್ತಾರೆ. ಹಾಗಾಗಿ ಎಲ್ಲಾ ಸಿನಿಮಾಗಳು ಚೆನ್ನಾಗಿದ್ದರೆ ಎಲ್ಲವನ್ನು ನೋಡುತ್ತಾರೆ ಎನ್ನುವುದು ಕೆಲವರ ವಾದ. ಹಾಗಾಗಿ ಬಾಕ್ಸಾಫೀಸ್ ಕ್ಲ್ಯಾಶ್‌ಗೆ ಹೆದರದೇ ಸಿನಿಮಾಗಳನ್ನು ರಿಲೀಸ್ ಮಾಡಲಾಗುತ್ತಿದೆ. ಕನ್ನಡದ ಯಾವುದೇ ಸಿನಿಮಾ ಸಂಕ್ರಾಂತಿ ಬಿಡುಗಡೆಗೆ ಸಿದ್ಧವಾಗಿಲ್ಲ. ಹಾಗಾಗಿ ಕರ್ನಾಟಕದಲ್ಲೂ ತೆಲುಗು, ತಮಿಳು ಸಿನಿಮಾಗಳೇ ಸಂಕ್ರಾಂತಿಗೆ ಸದ್ದು ಮಾಡಲಿವೆ.


Click it and Unblock the Notifications











