ಮಹೇಶ್ ಬಾಬು 'ಗುಂಟೂರು ಕಾರಂ' ಅಬ್ಬರಕ್ಕೆ ಹಳೇ ರೆಕಾರ್ಡ್‌ಗಳೆಲ್ಲಾ ಉಡೀಸ್!
ಮೊನ್ನೆ ( ಮೇ 31 ) ತೆಲುಗಿನ ಮೇರು ನಟರಲ್ಲಿ ಓರ್ವರಾದ ದಿವಂಗತ ಸೂಪರ್ ಸ್ಟಾರ್ ಕೃಷ್ಣ ಅವರ ಜನ್ಮದಿನದ ಪ್ರಯುಕ್ತ ಮೋಸಗಾಳ್ಳಕಿ ಮೋಸಗಾಡು ಎಂಬ ಸೂಪರ್ ಹಿಟ್ ಚಿತ್ರ ಮರು ಬಿಡುಗಡೆಗೊಂಡಿತ್ತು. ಈ ಚಿತ್ರದ ವಿಶೇಷ ಪ್ರದರ್ಶನದ ವೇಳೆ ಕೃಷ್ಣ ಅವರ ಪುತ್ರ ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ ಮುಂದಿನ ಚಿತ್ರ ಗುಂಟೂರು ಕಾರಂ ಚಿತ್ರದ ಗ್ಲಿಂಪ್ಸ್ ಅನ್ನು ಬಿಡುಗಡೆ ಮಾಡಲಾಯಿತು.
ಹೌದು, ಕಳೆದ ವರ್ಷ ಸರ್ಕಾರು ವಾರಿ ಪಾಟ ಚಿತ್ರದ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದ ಮಹೇಶ್ ಬಾಬು ಮುಂದಿನ ಸಿನಿಮಾವನ್ನು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜತೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಮೊದಲಿಗೆ ಶೀರ್ಷಿಕೆ ಅಂತಿಮವಾಗದ ಕಾರಣ SSMB 28 ಎಂಬ ತಾತ್ಕಾಲಿಕ ಹೆಸರಿನಿಂದ ಕರೆಯಲಾಗುತ್ತಿತ್ತು.

ಈ ಚಿತ್ರದ ಶೀರ್ಷಿಕೆ ಘೋಷಣೆ ಸಹ ಮೊನ್ನೆ ಕೃಷ್ಣ ಜನ್ಮದಿನದ ಪ್ರಯುಕ್ತವೇ ನಡೆಯಿತು. 1.04 ನಿಮಿಷದ ಗ್ಲಿಂಪ್ಸ್ ಅನ್ನು ಬಿಡುಗಡೆ ಮಾಡಿದ ಚಿತ್ರತಂಡ ಚಿತ್ರಕ್ಕೆ ಗುಂಟೂರು ಕಾರಂ ಎಂಬ ಶೀರ್ಷಿಕೆ ಇಟ್ಟಿರುವುದನ್ನು ಈ ಗ್ಲಿಂಪ್ಸ್ ಮೂಲಕ ತಿಳಿಸಿತು.
ಇನ್ನು ಕಳೆದ ನಾಲ್ಕೈದು ಸಿನಿಮಾಗಳಲ್ಲಿ ಅದೇ ಸಂದೇಶ ನೀಡುವ ಸ್ಕ್ರಿಪ್ಟ್‌ಗಳನ್ನು ಆಯ್ಕೆ ಮಾಡಿಕೊಂಡು ಒಂದೇ ರೀತಿಯ ಫೀಲ್ ಕೊಡುವ ಸಿನಿಮಾಗಳನ್ನು ನೀಡಿದ್ದ ಮಹೇಶ್ ಬಾಬು ಈ ಬಾರಿ ಸಂದೇಶವನ್ನು ಬದಿಗಿಟ್ಟು ಪಕ್ಕಾ ಮಾಸ್ ಅವತಾರದಲ್ಲಿ ಬೆಳ್ಳಿತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದೇನೆ ಎಂಬುದನ್ನು ಈ ಗ್ಲಿಂಪ್ಸ್ ಮೂಲಕ ತಿಳಿಸಿದ್ದಾರೆ.
ಈ ಪುಟ್ಟ ಟೀಸರ್‌ನಲ್ಲಿ ಬೀಡಿ ಸೇದುತ್ತಾ ವಿಲನ್‌ಗಳಿಗೆ ಗೂಸಾ ಕೊಟ್ಟ ಮಹೇಶ್ ಬಾಬು ಅವರನ್ನು ಕಂಡ ಅಭಿಮಾನಿಗಳೂ ಸಹ ಹಳೆಯ ಮಹೇಶ್ ಬಾಬುವನ್ನು ನೋಡಬೇಕು ಎಂಬ ತಮ್ಮ ಬಹುದಿನಗಳ ಕನಸು ಈಗ ನನಸಾಗಲಿದೆ ಎಂದು ಸಂತಸದಿಂದ ಕಾಮೆಂಟ್ ಮಾಡಿದ್ದಾರೆ.
ಈ ಮಟ್ಟಕ್ಕೆ ಕಿಕ್ ಏರಿಸಿರುವ ಗುಂಟೂರು ಕಾರಂ ಗ್ಲಿಂಪ್ಸ್ ವೀಕ್ಷಣೆಯ ವಿಚಾರದಲ್ಲಿಯೂ ಸಹ ಸಖತ್ ಕಿಕ್ಕೇರಿಸಿದೆ. ಬಿಡುಗಡೆಯಾದ ಮೊದಲ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡ ತೆಲುಗು ಗ್ಲಿಂಪ್ಸ್ ಎಂಬ ದಾಖಲೆಯನ್ನು ಗುಂಟೂರು ಕಾರಂ ಬರೆದಿದೆ.
ಚಿತ್ರಕ್ಕೆ ಬಂಡವಾಳ ಹೂಡಿರುವ ಹಾರಿಕಾ & ಹಾಸಿನಿ ಕ್ರಿಯೇಷನ್ಸ್ ಚಿತ್ರ ನಿರ್ಮಾಣ ಸಂಸ್ಥೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಕುರಿತು ಟ್ವೀಟ್ ಮಾಡಿದ್ದು, 24 ಗಂಟೆಗಳಲ್ಲಿ 25 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡು ಇಂಡಸ್ಟ್ರಿಯಲ್ಲಿದ್ದ ಎಲ್ಲಾ ದಾಖಲೆಗಳನ್ನು ಮುರಿದು ನಂಬರ್ ಒನ್ ಆಗಿದೆ ಎಂದು ಬರೆದುಕೊಂಡಿದೆ.
ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ತೆಲುಗು ಚಿತ್ರದ ಗ್ಲಿಂಪ್ಸ್ ಪಟ್ಟಿ ಈ ಕೆಳಕಂಡಂತಿದೆ..
* ಗುಂಟೂರು ಕಾರಂ - 25 ಮಿಲಿಯನ್
* ಪುಷ್ಪ ದ ರೂಲ್ - 20.4 ಮಿಲಿಯನ್
* ಲೈಗರ್ - 15.9 ಮಿಲಿಯನ್
* ಉಸ್ತಾದ್ ಭಗತ್ ಸಿಂಗ್ - 15.7 ಮಿಲಿಯನ್
ಲೈಕ್ಸ್ ವಿಚಾರದಲ್ಲಿ ಗುಂಟೂರು ಕಾರಂಗೆ ಹಿನ್ನಡೆ..
ಇನ್ನು ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡ ಗ್ಲಿಂಪ್ಸ್ ಎಂಬ ದಾಖಲೆಯನ್ನು ಬರೆದಿರುವ ಗುಂಟೂರು ಕಾರಂ ಲೈಕ್ಸ್ ವಿಚಾರದಲ್ಲಿ ಎಡವಿದೆ.
ಮೊದಲ 24 ಗಂಟೆಗಳಲ್ಲಿ ಅತಿಹೆಚ್ಚು ಲೈಕ್ಸ್ ಪಡೆದ ಗ್ಲಿಂಪ್ಸ್‌ಗಳ ಪಟ್ಟಿ ಈ ಕೆಳಕಂಡಂತಿದೆ..
1. ಭೀಮ್ಲಾ ನಾಯಕ್ - 728000 ಲೈಕ್ಸ್
2. ಆರ್ ಆರ್ ಆರ್ - 622000 ಲೈಕ್ಸ್
3. ಪುಷ್ಪ ದ ರೂಲ್ - 605000 ಲೈಕ್ಸ್
4. ಉಸ್ತಾದ್ ಭಗತ್ ಸಿಂಗ್ - 488000 ಲೈಕ್ಸ್
5. ಲೈಗರ್ - 400000 ಲೈಕ್ಸ್
6. ರಾಧೆ ಶ್ಯಾಮ್ - 394000 ಲೈಕ್ಸ್
7. ಬ್ಲಿಟ್ಸ್ ಆಫ್ ಡೇನಿಯಲ್ ಶೇಖರ್ - 360000 ಲೈಕ್ಸ್
8. ಗುಂಟೂರು ಕಾರಂ - 348000 ಲೈಕ್ಸ್


Click it and Unblock the Notifications











