ಸೂಪರ್ ಸ್ಟಾರ್ ಮಹೇಶ್ ಬಾಬು ಚಿತ್ರಕ್ಕೆ ಶಾಕ್ ಕೊಟ್ಟ 'ಹನುಮಾನ್'!
ಸಂಕ್ರಾಂತಿ ಸಂಭ್ರಮದಲ್ಲಿ ಈ ವರ್ಷ ತೆಲುಗಿನ ದೊಡ್ಡ ದೊಡ್ಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ', ವಿಕ್ಟರಿ ವೆಂಕಟೇಶ್ 'ಸೈಂಧವ್' ಹಾಗೂ ನಾಗಾರ್ಜುನ ಅಭಿನಯದ 'ನಾ ಸಾಮಿ ರಂಗ' ಜೊತೆಗೆ ಹೊಸಬರ ಸಿನಿಮಾಗಳು ಬಾಕ್ಸಾಫೀಸ್ ದೋಚುವ ಲೆಕ್ಕಾಚಾರದಲ್ಲಿವೆ.
ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ ಮಹೇಶ್ ಬಾಬು ಹಾಗೂ ಶ್ರೀಲೀಲಾ ನಟನೆಯ 'ಗುಂಟೂರು ಖಾರಂ' ಬಹಳ ಹೈಪ್ ಕ್ರಿಯೇಟ್ ಮಾಡಿದೆ. 'ಸರ್ಕಾರುವಾರಿ ಪಾಟ' ಹಿಟ್ ಬಳಿಕ ಮಹೇಶ್ ಬಾಬು ನಟನೆಯ ಈ ಸಿನಿಮಾ ತೆರೆಗೆ ಬರ್ತಿದೆ. ಕಳೆದ ವರ್ಷವೇ ಬರಬೇಕಿದ್ದ ಸಿನಿಮಾ ಕಾರಣಾಂತರಗಳಿಂದ ತಡವಾಗಿತ್ತು. ಸುಗ್ಗಿ ಸಂಭ್ರಮದಲ್ಲಿ ಜನವರಿ 12ಕ್ಕೆ ಸಿನಿಮಾ ತೆರೆಗೆ ಅಪ್ಪಳಿಸಿದೆ. ಮಾಸ್ ಟೈಟಲ್‌ಗೆ ತಕ್ಕಂತೆ ಪಕ್ಕಾ ಮಾಸ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಇದು.

ಇನ್ನು ಮಹೇಶ್ ಬಾಬು, ವೆಂಕಟೇಶ್, ನಾಗಾರ್ಜುನ ರೀತಿಯ ಸೂಪರ್ ಸ್ಟಾರ್‌ಗಳ ಜೊತೆಗೆ ಯುವನಟ ತೇಜಾ ಸಜ್ಜಾ ನಟನೆಯ 'ಹನುಮಾನ್' ಸಿನಿಮಾ ಕೂಡ ಸಂಕ್ರಾಂತಿ ರೇಸ್‌ನಲ್ಲಿದೆ. ಪ್ರಶಾಂತ್ ವರ್ಮಾ ನಿರ್ದೇಶನದ ಈ ಸೂಪರ್ ಹೀರೊ ಚಿತ್ರ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಅದೊಂದು ವಿಚಾರದಲ್ಲಿ ಇದೀಗ 'ಹನುಮಾನ್' ಸಿನಿಮಾ ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಚಿತ್ರವನ್ನು ಮೀರಿಸಿ ಶಾಕ್ ಕೊಟ್ಟಿದೆ.
ಬುಕ್ ಮೈ ಶೋನಲ್ಲಿ ಸಂಕ್ರಾಂತಿ ತೆಲುಗು ಸಿನಿಮಾಗಳಲ್ಲಿ 'ಹನುಮಾನ್' ಚಿತ್ರಕ್ಕೆ 180.2K ಇಂಟ್ರೆಸ್ಟ್ ತೋರಿಸುತ್ತಿದ್ದಾರೆ. ಇನ್ನು 'ಗುಂಟೂರು ಖಾರಂ' ಚಿತ್ರಕ್ಕೆ 179.9K ಲೈಕ್ಸ್ ಪಡೆದು ಎರಡನೇ ಸ್ಥಾನದಲ್ಲಿದೆ. ಇನ್ನುಳಿದಂತೆ 'ಸೈಂಧವ', 'ನಾ ಸಾಮಿ ರಂಗ' ಸಿನಿಮಾಗಳು ನಂತರದ ಸ್ಥಾನದಲ್ಲಿದೆ. ಇದನ್ನು ನೋಡಿದ ನೆಟ್ಟಿಗರು ಯಾವುದು ದೊಡ್ಡ ಸಿನಿಮಾ? ಈಗ ಹೇಳ್ರಪ್ಪಾ? ಎನ್ನುತ್ತಿದ್ದಾರೆ.

'ಹನುಮಾನ್' ಚಿತ್ರದ ಅದ್ಧೂರಿ ಪ್ರೀ ರಿಲೀಸ್ ಈವೆಂಟ್ ಮಾಡಲು ಸಿದ್ಧತೆ ನಡೀತಿದೆ. ಮೆಗಾಸ್ಟಾರ್ ಚಿರಂಜೀವಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಲಿದ್ದಾರೆ. ನಿರಂಜನ್ ರೆಡ್ಡಿ ಹಾಗೂ ಕಂದಗಟ್ಲ ಚಿತ್ರವನ್ನು ನಿರ್ಮಿಸಿದ್ದಾರೆ. ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್‌ಕುಮಾರ್, ವಿನಯ್ ರೈ ಚಿತ್ರದ ತಾರಾಗಣದಲ್ಲಿದ್ದಾರೆ. ಹನುಮಂತ ಭಕ್ತಿ ಶಕ್ತಿಯ ಕಥೆ ಚಿತ್ರದಲ್ಲಿದೆ.
ಮಹೇಶ್ ಬಾಬು ಜೊತೆ 'ಗುಂಟೂರು ಖಾರಂ' ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಬೇಕಿತ್ತು. ಕೆಲ ದಿನಗಳ ಚಿತ್ರೀಕರಣದ ಬಳಿಕ ಆಕೆ ಚಿತ್ರತಂಡ ಹೊರ ನಡೆದಿದ್ದರು. ಹಾಗಾಗಿ 2ನೇ ನಾಯಕಿಯಾಗಿ ಆಯ್ಕೆ ಆಗಿದ್ದ ಶ್ರೀಲೀಲಾಗೆ ಮೊದಲ ನಾಯಕಿಯಾಗುವ ಅವಕಾಶ ಸಿಕ್ಕಿತ್ತು. ಮೀನಾಕ್ಷಿ ಚೌಧರಿ ಎರಡನೇ 2ನೇ ನಾಯಕಿಯಾಗಿ ತಂಡ ಸೇರಿಕೊಂಡಿದ್ದರು. ಚಿತ್ರಕ್ಕೆ ಎಸ್. ತಮನ್ ಸಂಗೀತವಿದೆ.
ರವಿತೇಜಾ ನಟನೆಯ 'ಈಗಲ್' ಸಿನಿಮಾ ಕೂಡ ಸಂಕ್ರಾಂತಿಗೆ ರಿಲೀಸ್ ಆಗಬೇಕಿತ್ತು. ಆದರೆ ಬಾಕ್ಸಾಫೀಸ್ ಕ್ಲ್ಯಾಶ್ ಬೇಡ ಎಂದು ಕೊನೆ ಗಳಿಗೆಯಲ್ಲಿ ಚಿತ್ರತಂಡ ರಿಲೀಸ್ ಡೇಟ್ ಮುಂದೂಡಿದೆ. ಸಂಕ್ರಾಂತಿಗೆ ಬಿಡುಗಡೆಯಾಗುತ್ತಿರುವ ತೆಲುಗಿನ 4 ಸಿನಿಮಾಗಳಲ್ಲಿ ಕನ್ನಡ ನಟಿಯರೇ ನಾಯಕಿಯಾಗಿ ಮಿಂಚಿದ್ದಾರೆ.
'ಗುಂಟೂರು ಖಾರಂ' ಚಿತ್ರದಲ್ಲಿ ಶ್ರೀಲೀಲಾ, 'ಸೈಂಧವ್' ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, 'ನಾ ಸಾಮಿರಂಗ' ಚಿತ್ರದಲ್ಲಿ ಆಶಿಕಾ ರಂಗನಾಥ್ ಹಾಗೂ ಅದೇ ರೀತಿ 'ಹನುಮಾನ್' ಚಿತ್ರದಲ್ಲಿ ಅಮೃತಾ ಅಯ್ಯರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಂಕ್ರಾಂತಿಗೆ ಕನ್ನಡ ನಟಿಯರು ತೆಲುಗು ಚಿತ್ರರಂಗದಿಂದ ಪೈಪೋಟಿಗೆ ಇಳಿದಿದ್ದಾರೆ. ಇನ್ನು ತಮಿಳಿನಲ್ಲಿ 'ಲಾಲ್ ಸಲಾಂ', ಕ್ಯಾಪ್ಟನ್ ಮಿಲ್ಲರ್ ಹಾಗೂ 'ಅಯಲಾನ್' ಸಿನಿಮಾಗಳು ಸುಗ್ಗಿ ಸಂಭ್ರಮ ಹೆಚ್ಚಿಸಲು ಬರ್ತಿವೆ. ಆದರೆ ಕನ್ನಡದ ಯಾವುದೇ ಸಿನಿಮಾ ರಿಲೀಸ್ ಆಗುತ್ತಿಲ್ಲ.


Click it and Unblock the Notifications











