Happy birthday Nagarjuna: ಎವರ್‌ಗ್ರೀನ್ ನಟ ಅಕ್ಕಿನೇನಿ ನಾಗಾರ್ಜುನ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು
ತೆಲುಗು ಚಿತ್ರರಂಗದ ಎವರ್‌ಗ್ರೀನ್ ನಟ, ಕಿಂಗ್ ಅಕ್ಕಿನೇನಿ ನಾಗಾರ್ಜುನ ರಾವ್ ಮಂಗಳವಾರ (ಆಗಸ್ಟ್ 29) ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಟನಾಗಿ ಮಾತ್ರವಲ್ಲದೆ ಸಿನಿಮಾ ನಿರ್ಮಾಪಕ, ಟಿವಿ ಶೋಗಳನ್ನು ಹೋಸ್ಟ್ ಮಾಡುವ ಮೂಲಕ ನಿರೂಪಕ ಮತ್ತು ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
1959 ರ 29 ಆಗಸ್ಟ್ ರಂದು ಚೆನ್ನೈನಲ್ಲಿ ಜನಿಸಿದರು. ಅವರ ತಂದೆ ಪ್ರಸಿದ್ಧ ನಟ ನಾಗೇಶ್ವರ ರಾವ್. ನಟ ನಾಗಾರ್ಜುನ ತೆಲುಗು ಚಿತ್ರರಂಗದ ಜೊತೆಗೆ ಕೆಲವು ಹಿಂದಿ ಮತ್ತು ತಮಿಳು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾರಂಗದ ಇವರ ಸಾಧನೆಗೆ ಒಂಬತ್ತು ಆಂಧ್ರಪ್ರದೇಶ ರಾಜ್ಯ ನಂದಿ ಪ್ರಶಸ್ತಿಗಳು, ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ನಾಗರ್ಜುನ ಅವರ ಸೂಪರ್ ಹಿಟ್ ಚಿತ್ರ ನಿನ್ನೇ ಪೆಳ್ಳಾಡ್ತಾ (1996) ಗಾಗಿ ತೆಲುಗಿನ ಅತ್ಯುತ್ತಮ ಚಲನಚಿತ್ರ ಮತ್ತು ಅನ್ನಮಯ್ಯ (1997) ಗಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದಾರೆ. 1989 ರಲ್ಲಿ, ಅವರು ಮಣಿರತ್ನಂ ನಿರ್ದೇಶನದ ಗೀತಾಂಜಲಿ ಚಿತ್ರದಲ್ಲಿ ನಟಿಸಿದ್ದರು. ಇದು ಅತ್ಯುತ್ತಮ ಜನಪ್ರಿಯ ಚಲನಚಿತ್ರ ಎಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
1989 ರ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ವಾಣಿಜ್ಯಿಕವಾಗಿ ಯಶಸ್ವಿಯಾದ ಆಕ್ಷನ್ ಚಿತ್ರ 'ಶಿವ'ದಲ್ಲಿ ಅದ್ಭುತ ನಟನೆ ಮಾಡಿದ್ದರು. ನಾಗಾರ್ಜುನ ಅವರು 1990 ರಲ್ಲಿ ಶಿವ ಚಿತ್ರದ ಹಿಂದಿ ರಿಮೇಕ್‌ನೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

ಜೀವನ ಚರಿತ್ರೆ ಮತ್ತು ಅಕ್ಕಿನೇನಿ ನಾಗಾರ್ಜುನ
ಬಯೋಪಿಕ್‌ಗಳಲ್ಲಿ ಹೆಚ್ಚು ಹೆಸರುವಾಸಿಯಾದ ಅಕ್ಕಿನೇನಿ ನಾಗಾರ್ಜುನ ಅವರು, ಅನ್ನಮಯ್ಯ (1997) ನಲ್ಲಿ 15 ನೇ ಶತಮಾನದ ಸಂತ, ಹಾಡುಗಾರ ಅನ್ನಮಾಚಾರ್ಯ ಆಗಿ ಕಾಣಿಸಿಕೊಂಡಿದ್ದರು. ಅಗ್ನಿ ವರ್ಷ (2002) ನಲ್ಲಿ ಯವಕ್ರಿ (ಸಂತ ಭಾರದ್ವಾಜ ಅವರ ಮಗನಾಗಿ ಕಾಣಿಸಿಕೊಂಡಿದ್ದರು. LOC: ಕಾರ್ಗಿಲ್ (2003) ನಲ್ಲಿ ಮೇಜರ್ ಪದ್ಮಪಾಣಿ ಆಚಾರ್ಯ ಪಾತ್ರವನ್ನು ನಿರ್ವಹಿಸಿದರು. 17ನೇ ಶತಮಾನದ ಸಂತ ಶ್ರೀರಾಮದಾಸು ಪಾತ್ರವನ್ನು ನಿರ್ವಹಿಸಿದ್ದಾರೆ.
ಕಂಚೆರ್ಲ ಗೋಪಣ್ಣ (2006), ಶ್ರೀ ರಾಮದಾಸು (2006), ಹೋರಾಟಗಾರ ಸುದ್ದಾಲ ಹನುಮಂತಡು ಅವರ ಕತೆ ಆಧರಿಸಿದ ರಾಜನ್ನ, ಜಗದ್ಗುರು ಆದಿಶಂಕರರಲ್ಲಿ (2013) ಮತ್ತು ಓಂ ನಮೋ ವೆಂಕಟೇಶಾಯ (2017) ದಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ಮತ್ತು ನಾಗಾರ್ಜುನ
1990 ರಲ್ಲಿ ಶಿವ ಚಿತ್ರದ ಹಿಂದಿ ರಿಮೇಕ್‌ನೊಂದಿಗೆ ನಾಗಾರ್ಜುನ ಅವರು ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇನ್ನು, ಕಳೆದ ವರ್ಷ ಅಯನ್ ಮುಖರ್ಜಿ ಅವರ ಬ್ರಹ್ಮಾಸ್ತ್ರ ಭಾಗ ಒಂದರಲ್ಲಿ ನಾಗಾರ್ಜುನ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಭ್ ಬಚ್ಚನ್ ನಟಿಸಿದ್ದಾರೆ.
2013 ರಲ್ಲಿ, ದೆಹಲಿ ಚಲನಚಿತ್ರೋತ್ಸವದ 100 ವರ್ಷಗಳ ಭಾರತೀಯ ಸಿನಿಮಾ ಆಚರಣೆಯಲ್ಲಿ ದಕ್ಷಿಣ ಭಾರತೀಯ ಚಿತ್ರರಂಗವನ್ನು ನಾಗಾರ್ಜುನ ಪ್ರತಿನಿಧಿಸಿದ್ದರು.
ಪ್ರಸಿದ್ಧ ನಟ ನಾಗೇಶ್ವರ ರಾವ್ ಮಗ
ನಟ ನಾಗಾರ್ಜುನ ಅವರ ತಂದೆ ಪ್ರಸಿದ್ಧ ನಟ ನಾಗೇಶ್ವರ ರಾವ್. ಅವರ ಕುಟುಂಬ ಚೆನ್ನೈನಿಂದ ಹೈದರಾಬಾದ್‌ಗೆ ವಲಸೆ ಬಂದಿತ್ತು. ಶಾಲಾ ಶಿಕ್ಷಣವನ್ನು ಹೈದರಾಬಾದ್ ಪಬ್ಲಿಕ್ ಸ್ಕೂಲ್ ಮತ್ತು ಪ್ರೌಢ ಶಿಕ್ಷಣವನ್ನು ಹೈದರಾಬಾದ್‌ನ ಲಿಟ್ಲ್ ಫ್ಲವರ್ ಜೂನಿಯರ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದರು.
ನಾಗಾರ್ಜುನ ಅವರಿಗೆ ಇಬ್ಬರು ಹೆಂಡತಿಯರು. ಮೊದಲು ಲಕ್ಷ್ಮಿ ದಗ್ಗುಬಾಟಿ, ನಂತರ ಅಮಲಾ ಅಕ್ಕಿನೇನಿ ಅವರನ್ನು ವಿವಾಹವಾದರು. ನಾಗಾರ್ಜುನ ಅವರಿಗೆ ನಾಗ ಚೈತನ್ಯ ಮತ್ತು ಅಖಿಲ್ ಅಕ್ಕಿನೇನಿ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಪುತ್ರರಿಬ್ಬರೂ ಚಿತ್ರರಂಗದಲ್ಲಿ ನಟರಾಗಿ ಮಿಂಚುತ್ತಿದ್ದಾರೆ.


Click it and Unblock the Notifications











