ಬೆಂಗಳೂರಿನಲ್ಲಿ 'ಹರಿಹರ ವೀರಮಲ್ಲು' ಪ್ರೀಮಿಯರ್ ಶೋ ಬುಕ್ಕಿಂಗ್ ಶುರು; ಟಿಕೆಟ್ ದರ ಡಬಲ್
ಈ ವಾರ ಪವನ್ ಕಲ್ಯಾಣ್ ನಟನೆಯ 'ಹರಿಹರ ವೀರಮಲ್ಲು' ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರ್ತಿದೆ. ಗುರುವಾರ(ಜುಲೈ 24) ಸಿನಿಮಾ ಬಿಡುಗಡೆ ಆಗಲಿದ್ದು ಅದಕ್ಕಿಂತ ಒಂದು ದಿನ ಮುನ್ನ ಪೇಯ್ಡ್ ಪ್ರೀಮಿಯರ್ ಶೋಗಳು ಏರ್ಪಡಿಸಲಾಗುತ್ತಿದೆ. ಬೆಂಗಳೂರಿನ ಕೆಲ ಆಯ್ದ ಚಿತ್ರಮಂದಿರಗಳಲ್ಲಿ ಬುಧವಾರ ರಾತ್ರಿಯೇ ಸಿನಿಮಾ ವೀಕ್ಷಿಸಬಹುದು.
ಕರ್ನಾಟಕ ಸರ್ಕಾರ ಸಿನಿಮಾ ಟಿಕೆಟ್ ದರವನ್ನು 200 ರೂಪಾಯಿಗೆ ನಿಗದಿಪಡಿಸಲು ಮುಂದಾಗಿದ್ದಾರೆ. ಮುಂದಿನ ತಿಂಗಳು ಈ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ. ಆದರೆ ಅದಕ್ಕೂ ಮುನ್ನ ಈ ವಾರ ಬಿಡುಗಡೆ ಆಗುತ್ತಿರುವ 'ಹರಿಹರ ವೀರಮಲ್ಲು' ಚಿತ್ರದ ಟಿಕೆಟ್ ದರ ಹೆಚ್ಚಿಸಿಕೊಳ್ಳುವ ಅವಕಾಶ ಸಿಗುತ್ತಿದೆ. ಹಾಗಾಗಿ ಪ್ರೀಮಿಯರ್ ಶೋಗಳ ಟಿಕೆಟ್ ದರ ಡಬಲ್ ಆಗಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು ಟಿಕೆಟ್ ದರದ ಬಗ್ಗೆ ಮಾಹಿತಿ ಸಿಗುತ್ತಿದೆ.

ಬಹಳ ದಿನಗಳ ಬಳಿಕ ಪವನ್ ಕಲ್ಯಾಣ್ ನಟನೆಯ ಸಿನಿಮಾ ತೆರೆಗೆ ಬರ್ತಿದೆ. ಬಹಳ ಅದ್ಧೂರಿಯಾಗಿ ಈ ಐತಿಹಾಸಿಕ ಕಥಾಹಂದರದ ಸಿನಿಮಾ ನಿರ್ಮಾಣವಾಗಿದೆ. ಕೋಹಿನೂರ್ ಮಣಿಯ ಸುತ್ತಾ ಕಥೆ ಸಾಗುತ್ತದೆ. ಚಿತ್ರದಲ್ಲಿ ಪವನ್ ಕಲ್ಯಾಣ್ ವೀರಯೋಧ ವೀರಮಲ್ಲು ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಔರಂಗಜೇಬ್ ಕಾಲದ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.
ಔರಂಗಜೇಬ್ ಪಾತ್ರದಲ್ಲಿ ಬಾಬಿ ಡಿಯೋಲ್ ನಟಿಸಿದ್ದಾರೆ. ನಿಧಿ ಅಗರ್‌ವಾಲ್, ನಗ್ರೀಸ್ ಫಕ್ರಿ, ನೋರಾ ಫತೇಹಿ, ಸತ್ಯರಾಜ್ ಸೇರಿದಂತೆ ದೊಡ್ಡ ತಾರಾಗಣ 'ಹರಿಹರ ವೀರಮಲ್ಲು' ಚಿತ್ರದಲ್ಲಿದೆ. ಬಹಳ ಹಿಂದೆ ಶುರುವಾಗಿದ್ದ ಸಿನಿಮಾ ಕಾರಣಾಂತರಗಳಿಂದ ತೆರೆಗೆ ಬರುವುದು ತಡವಾಗುತ್ತಿದೆ. ಪವನ್ ಆಂಧ್ರದ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಬಿಡುಗಡೆ ಆಗುತ್ತಿರುವ ಮೊದಲ ಸಿನಿಮಾ ಇದಾಗಿದೆ.

ಕ್ರಿಶ್ ಹಾಗೂ ಜ್ಯೋತಿ ಕೃಷ್ಣ ಈ ಕಾಸ್ಟ್ಯೂಮ್ ಡ್ರಾಮಾ ಸಿನಿಮಾ ನಿರ್ದೇಶನ ಮಾಡಿದ್ದಾರೆ. ದಯಾಕರ್ ರಾವ್ ಹಾಗೂ ಎ.ಎಂ ರತ್ನಂ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಿದ್ದಾರೆ. ಎಂ. ಎಂ ಕೀರವಾಣಿ ಸಂಗೀತ ಚಿತ್ರಕ್ಕಿದೆ. ಮೊಘಲರ ಕಾಲಘಟ್ಟದಲ್ಲಿ ನಡೆಯುವ ಕತೆ ಇದಾಗಿದೆ. ಭಾರೀ ಯುದ್ಧದ ಸನ್ನವೇಶಗಳ ಜೊತೆಗೆ ಬಹಳ ರೋಚಕವಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.
ಬೆಂಗಳೂರಿನ ವೈಭವ್ ಸಿನಿಮಾಸ್, ವೈನಿಧಿ ಹಾಗೂ ವೈಷ್ಣವಿ ಚಿತ್ರಮಂದಿರಗಳಲ್ಲಿ ಬುಧವಾರ ರಾತ್ರಿ 9.30ಕ್ಕೆ 'ಹರಿಹರ ವೀರಮಲ್ಲು' ಪೇಯ್ಡ್ ಪ್ರೀಮಿಯರ್ ಶೋಗಳು ನಿಗದಿಯಾಗಿದೆ. ಟಿಕೆಟ್ ದರ 400 ರಿಂದ 500ವರೆಗೆ ಏರಿಕೆಯಾಗಿದೆ. ಕೆಲವೇ ನಿಮಿಷಗಳ ಹಿಂದೆ ಟಿಕೆಟ್ ಬುಕ್ಕಿಂಗ್ ಆರಂಭವಾಯಿತು. ನಿಧಾನವಾಗಿ ಅಭಿಮಾನಿಗಳು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಬುಕ್ಕಿಂಗ್‌ಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ.
ಸದ್ಯ ಪವನ್ ಕಲ್ಯಾಣ್ ರಾಜಕೀಯರಂಗದಲ್ಲಿ ಬ್ಯುಸಿಯಾಗಿದ್ದಾರೆ. ಅರ್ಧಕ್ಕೆ ನಿಂತಿರುವ ಒಂದೆರಡು ಸಿನಿಮಾಗಳನ್ನು ಮುಗಿಸಿ ಬಳಿಕ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಅಭಿಮಾನಿಗಳು ಅವರ ಕೊನೆಯ ಸಿನಿಮಾಗಳನ್ನು ದೊಡ್ಡದಾಗಿ ಸೆಲೆಬ್ರೇಟ್ ಮಾಡಲು ಮನಸ್ಸು ಮಾಡಿದ್ದಾರೆ. ಈಗಾಗಲೇ 'ಹರಿಹರ ವೀರಮಲ್ಲು' ಟ್ರೈಲರ್ ಹಾಗೂ ಸಾಂಗ್ಸ್ ಹಿಟ್ ಆಗಿ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಭಾರೀ ಮೊತ್ತಕ್ಕೆ ಕರ್ನಾಟಕ ವಿತರಣೆ ಹಕ್ಕನ್ನು ಬಿ. ಕೆ ಗಂಗಾಧರ್ ಕೊಂಡುಕೊಂಡಿದ್ದಾರೆ.
ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ 'ಹರಿಹರ ವೀರಮಲ್ಲು' ಚಿತ್ರದ ಪ್ರೀ ರಿಲೀಸ್ ಈವೆಂಟ್‌ಗೆ ಕರ್ನಾಟಕದ ಸಚಿವ ಈಶ್ವರ್ ಖಂಡ್ರೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕರ್ನಾಟಕದಲ್ಲಿ ಕೂಡ ಪವನ್ ಕಲ್ಯಾಣ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ ಎಂದು ಹಾಡಿ ಹೊಗಳಿದ್ದರು.


Click it and Unblock the Notifications











