ನನ್ನ ಮಗಳಿಂದ ಬೇರೆಯವರ ಪ್ರಾಣಕ್ಕೆ ಅಪಾಯ ಇದೆ, ಖ್ಯಾತ ನಟಿಯ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ ತಂದೆ
ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯ ಕೂಡ ಮುಖ್ಯ. ಆದರೆ.. ದೈಹಿಕ ಆರೋಗ್ಯದ ಕುರಿತು ಇನ್ನಿಲ್ಲದಷ್ಟು ಕಾಳಜಿ ವಹಿಸುವ ನಾವು ಮಾನಸಿಕ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದಿಲ್ಲ. ಮಹತ್ವ ನೀಡುವುದಿಲ್ಲ. ಕೆಲವರು ತಮ್ಮ ಮಾನಸಿಕ ಆರೋಗ್ಯದ ಕುರಿತು ತಮ್ಮ ಖಿನ್ನತೆಯ ಕುರಿತು ಮಾತನಾಡಲು ಕೂಡ ಹಿಂಜರಿಯುತ್ತಾರೆ. ಇದೆಲ್ಲದರ ಪರಿಣಾಮ ಎಂಬಂತೆ ವಿಶ್ವದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕಾಯಿಲೆಗಳಲ್ಲಿ ಮಾನಸಿಕ ಖಿನ್ನತೆಗೆ ಮೊದಲ ಸ್ಥಾನ ಇದೆ.
ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತಿ 20 ಜನರಲ್ಲಿ ಒಬ್ಬರಿಗೆ ಈ ಕಾಯಿಲೆ ಇದೆ. ಸಾವು, ಸೋಲು, ನಿರಾಶೆ, ಕಷ್ಟ, ನಷ್ಟಗಳಿಂದ ಅನೇಕರು ಖಿನ್ನತೆಗೊಳಗಾಗುತ್ತಾರೆ.

ಹೀಗೆ ಖಿನ್ನತೆಗೊಳಗಾದವರು ಕೆಲ ಒಮ್ಮೆ ಖಿನ್ನತೆಯಿಂದ ಪಾರಾಗುತ್ತಾರೆ. ಕೆಲ ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ.ಆದರೆ ಇನ್ನೂ ಕೆಲವೊಮ್ಮೆ ಈ ಖಿನ್ನತೆಯಿಂದ ಹೊರ ಬರಲು ಸಾಧ್ಯವಾಗದೇ ಒದ್ದಾಡುತ್ತಾರೆ. ''ಕಲ್ಪಿಕಾ ಗಣೇಶ್'' ಕೂಡ ಸದ್ಯ ಇದೇ ರೀತಿಯ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಹೀಗೆಂದು ಖುದ್ದು ಅವರ ತಂದೆಯೇ ಹೇಳಿದ್ದಾರೆ.
ಹೌದು, ''ಕಲ್ಪಿಕಾ ಗಣೇಶ್''.. ತೆಲುಗು ಚಿತ್ರರಂಗದ ನಾಯಕಿ.''ಪ್ರಣಯಂ'' ಚಿತ್ರದ ಮೂಲಕ ವೃತ್ತಿ ಬದುಕು ಶುರು ಮಾಡಿದ ಕಲ್ಪಿಕಾ ''ನಮೋ ವೆಂಕಟೇಶ''.. ''ಜುಲಾಯಿ''.. ''ಹಿಟ್- ದಿ ಫಸ್ಟ್ ಕೇಸ್''.. ಅಂತಹ ದೊಡ್ಡ ದೊಡ್ಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇಷ್ಟೇ ಅಲ್ಲ 2023ರಲ್ಲಿ ಬಿಡುಗಡೆಯಾದ ''8ಎಎಂ ಮೆಟ್ರೋ''ದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಬಾಲಿವುಡ್‌ನಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದಾರೆ.
ಇಂಥಾ ಕಲ್ಪಿಕಾ ಕಳೆದ ಕೆಲ ದಿನಗಳ ಹಿಂದೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಹೈದರಾಬಾದ್ ನ ''ಪಬ್''ನಲ್ಲಿ ಗಲಾಟೆ ಮಾಡಿದ್ದರು. ಪ್ಲೇಟ್ ಎಸೆದು ಬಿಲ್ ಪಾವತಿಸದೇ ''ಗಚ್ಚಿಬೌಲಿ''ಯಲ್ಲಿರುವ ''ಪ್ರಿಸಂ ಪಬ್''ನಲ್ಲಿ ರಂಪ ಮಾಡಿದ್ದರು.
ಈ ಪ್ರಕರಣ ತಣ್ಣಗಾಗುವಷ್ಟರಲ್ಲಿಯೇ ಮೊನ್ನೆ ಮತ್ತೆ ಕಲ್ಪಿಕಾ ಖ್ಯಾತೆ ತೆಗೆದಿದ್ದರು. ''ಬ್ರೌನ್ ಟೌನ್'' ರೆಸಾರ್ಟ್‌ನಲ್ಲಿ ನಡುರಾತ್ರಿ 3ಕ್ಕೆ ಮ್ಯಾನೇಜರ್ ಮುಖಕ್ಕೆ ಮೆನು ಕಾರ್ಡ್ ಮತ್ತು ರೂಮ್‌ನ ಕೀಗಳನ್ನು ಬಿಸಾಕಿ ಗಲಾಟೆ ಮಾಡಿದ್ದರು. ಈ ಜಗಳ ಹತ್ ಹತ್ರ 40 ನಿಮಿಷಗಳವರೆಗೆ ನಡೆದಿತ್ತು.
ಇನ್ನೂ ಇದೆಲ್ಲದರ ನಡುವೆ ''ಕೀರ್ತನಾ'' ಎಂಬ ಯುವತಿ ಕಲ್ಪಿಕಾ ವಿರುದ್ಧ ''ಸೈಬರಾಬಾದ್ ಪೊಲೀಸ''ರಿಗೆ ದೂರು ನೀಡಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಭಾಷೆಗಳಿಂದ ನನ್ನ ನಿಂದಿಸುತ್ತಿದ್ದಾರೆ ಎಂದು ಹೇಳಿದ್ದರು. ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು.
ಹೀಗೆ ಒಂದಾದ ಮೇಲೊಂದರಂತೆ ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಸುದ್ದಿಯಾಗುತ್ತಾ ಬಂದ ಕಲ್ಪಿಕಾ ವಿರುದ್ಧ ಅವರ ತಂದೆಯೇ ಈಗ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ನನ್ನ ಮಗಳಿಂದ ಬೇರೆಯವರ ಪ್ರಾಣಕ್ಕೆ ಕುತ್ತು ಬರಬಹುದು, ನನ್ನ ಮಗಳ ಪ್ರಾಣ ಕೂಡ ಹೋಗಬಹುದು ಎಂದು ಹೇಳಿದ್ದಾರೆ.
ಈ ಕುರಿತು ದೂರಿನಲ್ಲಿ ಉಲ್ಲೇಖಿಸಿರುವ ಕಲ್ಪಿಕಾ ಗಣೇಶ್ ಅವರ ತಂದೆ ''ನನ್ನ ಮಗಳು ಮಾನಸಿಕ ಖಿನ್ನತೆಗೊಳಗಾಗಿದ್ದಾಳೆ. ಈಗಾಗಲೇ ಎರಡು ಬಾರಿ ಆತ್ಮಹತ್ಯೆಯ ಪ್ರಯತ್ನವನ್ನು ಮಾಡಿದ್ದಾಳೆ. ಈ ಹಿನ್ನೆಲೆ ಆಕೆಯನ್ನು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ.. ಅಲ್ಲಿ ಉಳಿಯುವ ಬದಲು ಆಕೆ ಮನೆಗೆ ಓಡಿ ಬಂದಿದ್ದು, ವೈದ್ಯರು ನೀಡಿರುವ ಔಷಧಿಗಳನ್ನು ಕಳೆದ ಎರಡು ವರ್ಷಗಳಿಂದ ಅವಳು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾಳೆ. ಮನೆಯಲ್ಲಿ ಎಲ್ಲರ ಜೊತೆ ಜಗಳವಾಡುತ್ತಾಳೆ. ಈಗ ಹೊರಗಡೆ ಕೂಡ ಜಗಳ ಮಾಡಿಕೊಳ್ಳುತ್ತಿದ್ದಾಳೆ. ನನ್ನ ಮಗಳ ಪ್ರಾಣಕ್ಕೂ ಮತ್ತು ಬೇರೆಯವರ ಪ್ರಾಣಕ್ಕೂ ನನ್ನ ಮಗಳಿಂದ ಅಪಾಯ ಇರುವ ಹಿನ್ನೆಲೆ ಆಕೆಯನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿ '' ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ.
ಸದ್ಯ ''ಗಚಿಬೌಲಿ'' ಪೊಲೀಸರು ತಂದೆಯ ಈ ಮಾತುಗಳಿಗೆ ಪೂರಕವಾಗಿ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಅಧಿಕೃತವಾದ ಹೇಳಿಕೆಯನ್ನು ನೀಡಬೇಕಿದೆ. ಇದೆಲ್ಲದರ ನಡುವೆ ಕಲ್ಪಿಕಾ ಗಣೇಶ್ ಈ ಬಾರಿ ತೆಲುಗು ಬಿಗ್ ಬಾಸ್‌ನಲ್ಲಿ ಭಾಗವಹಿಸುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿ ಬರುತ್ತಿದೆ.


Click it and Unblock the Notifications











