ಸದ್ದಿಲ್ಲದೇ ತೆಲುಗಿನ ಮತ್ತೊಂದು ಭಾರೀ ಸಿನಿಮಾ ಚಿತ್ರೀಕರಣ ಆರಂಭಿಸಿದ ಹೊಂಬಾಳೆ ಫಿಲ್ಮ್ಸ್!
ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೇ ಅತಿದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್. ಕನ್ನಡ ಅಷ್ಟೇ ಅಲ್ಲ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಂಸ್ಥೆ ಸಿನಿಮಾ ನಿರ್ಮಾಣ ಮಾಡುತ್ತಿದೆ. ಶೀಘ್ರದಲ್ಲೇ ಬಾಲಿವುಡ್ ಚಿತ್ರಕ್ಕೂ ಪ್ಲ್ಯಾನ್ ನಡೀತಿದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ 'ಬಘೀರ' ಸಿನಿಮಾ ಮುಂದಿನ ವಾರ ತೆರೆಗೆ ಬರಲಿದೆ. ಶ್ರೀಮುರಳಿ ನಟನೆಯ ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ. ಡಾ. ಸೂರಿ ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಸಿನಿಮಾ ತೆರೆಗೆ ಬರಲಿದೆ. ಇನ್ನು ಹೊಂಬಾಳೆ ಸಂಸ್ಥೆ ಮತ್ತಷ್ಟು ದೊಡ್ಡ ಚಿತ್ರಗಳನ್ನು ಕೈಗೆತ್ತಿಕೊಂಡಿದೆ.

'ಕಾಂತಾರ-1' ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಹುಟ್ಟೂರಿನಲ್ಲಿ ಭಾರೀ ಸೆಟ್ ನಿರ್ಮಿಸಿ ರಿಷಬ್ ಶೆಟ್ಟಿ ಚಿತ್ರವನ್ನು ಕಟ್ಟಿಕೊಡುತ್ತಿದ್ದಾರೆ. ಮುಂದಿನ ವರ್ಷ ಆಗಸ್ಟ್ ವೇಳೆಗೆ 'ಕಾಂತಾರ' ಪ್ರೀಕ್ವೆಲ್ ತೆರೆಗೆ ಬರಲಿದೆ. ಇನ್ನು ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಲಿರುವ 'ರಿಚರ್ಡ್ ಆಂಟನಿ' ಚಿತ್ರವನ್ನು ವಿಜಯ್ ಕಿರಗಂದೂರ್ ನಿರ್ಮಿಸಲಿದ್ದಾರೆ. 'KGF'-3 ಕೂಡ ಮುಂದಿನ ದಿನಗಳಲ್ಲಿ ತಯಾರಾಗಲಿದೆ.
ತಮಿಳು ಹಾಗೂ ಮಲಯಾಳಂನಲ್ಲಿ ಹೊಂಬಾಳೆ ಸಂಸ್ಥೆ ನಿರ್ಮಿಸಿದ ಎರಡು ಚಿತ್ರಗಳು ದೊಡ್ಡದಾಗಿ ಗೆಲ್ಲಲಿಲ್ಲ. ಫಹಾದ್ ಫಾಸಿಲ್ ನಟನೆಯ ಮಲಯಾಳಂನ 'ಧೂಮಂ' ಹಾಗೂ ಕೀರ್ತಿ ಸುರೇಶ್ ಮಿಂಚಿದ್ದ ತಮಿಳಿನ 'ರಘುತಾತ' ಚಿತ್ರಗಳು ನಿರಾಸೆ ಮೂಡಿಸಿದ್ದವು. ತೆಲುಗಿನಲ್ಲಿ ಪ್ರಭಾಸ್ ನಟಿಸಿದ 'ಸಲಾರ್' ಚಿತ್ರ ಮಾತ್ರ ಸಖತ್ ಸದ್ದು ಮಾಡಿತ್ತು. ಕನ್ನಡದ 'ಉಗ್ರಂ' ಕಥೆಯನ್ನೇ ಪ್ರಶಾಂತ್ ನೀಲ್ ಬಹಳ ದೊಡ್ಡದಾಗಿ ಈ ಚಿತ್ರದಲ್ಲಿ ಹೇಳಿದ್ದರು. ಅದೇ ಕಥೆಯನ್ನು ಎರಡು ಭಾಗಗಳಾಗಿ ತೆರೆಗೆ ತರುತ್ತಿದ್ದಾರೆ.
ಕಳೆದ ವರ್ಷ ಕೊನೆಗೆ ಬಂದಿದ್ದ 'ಸಲಾರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸದ್ದಿಲ್ಲದೇ ಸಿನಿಮಾ ಸೀಕ್ವೆಲ್ ಚಿತ್ರೀಕರಣ ಆರಂಭವಾಗಿದೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಪ್ರಭಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಸಲಾರ್' ಫೋಟೊ ಶೇರ್ ಮಾಡಿ ಹೊಂಬಾಳೆ ಸಂಸ್ಥೆ ಶುಭ ಕೋರಿದೆ. ಆದರೆ ಸಿನಿಮಾ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. 'ಸಲಾರ್-2' ಚಿತ್ರದ 20 ದಿನಗಳ ಶೆಡ್ಯೂಲ್‌ನಲ್ಲಿ ಪ್ರಭಾಸ್ ಭಾಗವಹಿಸುತ್ತಿದ್ದಾರೆ ಎಂದು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.
'ಉಗ್ರಂ' ಚಿತ್ರದಲ್ಲಿದ್ದ ಅಗಸ್ತ್ಯ ಹಾಗೂ ಬಾಲ ಕಥೆಯನ್ನು 'ಸಲಾರ್' ಚಿತ್ರದಲ್ಲಿ ಪ್ರಶಾಂತ್ ನೀಲ್ ದೊಡ್ಡದಾಗಿ ಹೇಳುತ್ತಿದ್ದಾರೆ. ಇಲ್ಲಿನ ಮುಗೋರ್ ಅಲ್ಲಿ ಖಾನ್‌ಸರ್ ಆಗಿದೆ. ಸಲಾರ್ ಸ್ನೇಹಿತ ವರದರಾಜ್ ಮನ್ನಾರ್ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಅಬ್ಬರಿಸಿದ್ದರು. 'ಉಗ್ರಂ' ಚಿತ್ರದಲ್ಲಿ ಇಂಟರ್‌ವಲ್‌ವರೆಗಿನ ಕಥೆಯನ್ನು 'ಸಲಾರ್'-1 ಚಿತ್ರದಲ್ಲಿ ಹೇಳಲಾಗಿದೆ. ಇದೀಗ ಸೆಕೆಂಡ್ ಪಾರ್ಟ್ ಕಥೆಯನ್ನು ಸೀಕ್ವೆಲ್‌ನಲ್ಲಿ ಕಟ್ಟಿಕೊಡಲಿದ್ದಾರೆ.
ಪ್ರಭಾಸ್ ಎರಡು ಬೇರೆ ಸಿನಿಮಾಗಳಲ್ಲಿ ನಟಿಸಿ ಬಳಿಕ 'ಸಲಾರ್' ಸೀಕ್ವೆಲ್‌ನಲ್ಲಿ ಕಾಣಿಸಿಕೊಳ್ಳಲು ಬಯಸಿದ್ದರು. ಅದರಂತೆ ಈಗಾಗಲೇ 'ಕಲ್ಕಿ 2898AD' ಸಿನಿಮಾ ರಿಲೀಸ್ ಆಗಿ ಗೆದ್ದಿದೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ 'ದಿ ರಾಜಾಸಾಬ್' ಸಿನಿಮಾ ತೆರೆಗೆ ಬರಲಿದೆ. ಆ ಬಳಿಕ 'ಸಲಾರ್-2' ಶೌರ್ಯಾಂಗ ಪರ್ವ ತೆರೆಗೆ ತರುವ ಲೆಕ್ಕಾಚಾರ ನಡೀತಿದೆ.
ಇನ್ನು 'ಸಲಾರ್' ಬಗ್ಗೆ ತರಣ್ ಆದರ್ಶ್ ಮತ್ತೊಂದು ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ. ಓಟಿಟಿಯಲ್ಲಿ ಇವತ್ತಿಗೂ ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ ಎಂದು ಹೇಳಿದ್ದಾರೆ. ಚಿತ್ರ ಓಟಿಟಿಗೆ ಬಂದು 250 ದಿನಗಳಾಗಿದ್ದರೂ ಜನ ಮುಗಿಬಿದ್ದು ಪದೇ ಪದೇ ನೋಡುತ್ತಿದ್ದಾರೆ. ಇಷ್ಟು ದಿನಗಳ ಬಳಿಕ ಕೂಡ ಟ್ರೆಂಡಿಂಗ್‌ನಲ್ಲಿದೆ. ಇದು ನಿಜಕ್ಕೂ ಸೀಕ್ವೆಲ್‌ಗೆ ಪ್ಲಸ್ ಆಗುತ್ತದೆ ಎಂದು ಹೇಳಿದ್ದಾರೆ.
ಸದ್ಯ ಜ್ಯೂನಿಯರ್ ಆರ್ಟಿಸ್ಟ್‌ಗಳ ಜೊತೆ ಹೈದರಾಬಾದ್‌ನಲ್ಲಿ 'ಸಲಾರ್-2' ಚಿತ್ರೀಕರಣ ಶುರುವಾಗಿದೆ ಎನ್ನಲಾಗ್ತಿದೆ. ಇನ್ನೆರಡು ದಿನಗಳಲ್ಲಿ ಪ್ರಭಾಸ್ ಸಹ ಭಾಗಿ ಆಗುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಇದರ ನಡುವೆ ಇತ್ತೀಚೆಗೆ ಶುರುವಾದ ಜ್ಯೂ. ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಸಿನಿಮಾ ಕಥೆ ಏನಾಯ್ತು? ಎಂದು ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ.


Click it and Unblock the Notifications











