'ಸಲಾರ್' ಪ್ರಭಾಸ್ ಬೈಕ್ ಗೆಲ್ಲುವ ಸುವರ್ಣಾವಕಾಶ; ಅಭಿಮಾನಿಗಳು ಮಾಡಬೇಕಿರುವುದು ಇಷ್ಟೇ!
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಸದ್ಯ ಸಿನಿಮಾ ಸೀಕ್ವೆಲ್ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ. ಶೀಘ್ರದಲ್ಲೇ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಇದರ ಬೆನ್ನಲ್ಲೇ ಚಿತ್ರತಂಡ ಅಭಿಮಾನಿಗಳಿಗೆ ಭರ್ಜರಿ ಆಫರ್ ನೀಡುತ್ತಿದೆ.
'ಸಲಾರ್' ಚಿತ್ರದ ಮೊದಲಾರ್ಧದಲ್ಲಿ ನಾಯಕ ದೇವ(ಪ್ರಭಾಸ್) ಬರ್ಮಾ ಗಡಿಯ ಕಲ್ಲಿದ್ದಲು ಗಣಿಯಲ್ಲಿ ಮೆಕಾನಿಕ್ ಕೆಲಸ ಮಾಡುತ್ತಿರುತ್ತಾರೆ. ಅ ಸಮಯದಲ್ಲಿ ಆತ ಒಂದು ಬೈಕ್ ಏರಿ ಓಡಾಡುತ್ತಿರುತ್ತಾರೆ. ಆ ಸ್ಟೈಲಿಶ್ ಬೈಕ್ ಚಿತ್ರದಲ್ಲಿ ಹೈಲೆಟ್ ಆಗಿತ್ತು. ಸದ್ಯ ಆ ಬೈಕ್ ಅನ್ನು ಒಬ್ಬ ಲಕ್ಕಿ ಅಭಿಮಾನಿಗೆ ನೀಡಲು ಚಿತ್ರತಂಡ ಮುಂದಾಗಿದೆ. ಈ ಬಗ್ಗೆ ಖುದ್ದು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಎಕ್ಸ್ ಅಕೌಂಟ್‌ನಲ್ಲಿ ಮಾಹಿತಿ ನೀಡಿದೆ.

ಅಂದಹಾಗೆ 'ಸಲಾರ್' ಚಿತ್ರದಲ್ಲಿ ಪ್ರಭಾಸ್ ಬಳಸಿದ ಬೈಕ್ ಪಡೆಯಲು ಏನು ಮಾಡಬೇಕು ಗೊತ್ತಾ? ಆ ಬಗ್ಗೆ ಹೊಂಬಾಳೆ ಸಂಸ್ಥೆ ಮಾಹಿತಿ ನೀಡಿದೆ. "ಸಲಾರ್ ಚಿತ್ರದಲ್ಲಿ ಪ್ರಭಾಸ್ ಸವಾರಿ ಮಾಡಿದ ಅದೇ ಐಕಾನಿಕ್ ಬೈಕ್ ಗೆಲ್ಲುವ ವಿಶೇಷ ಅವಕಾಶ. ನೀವು ಮಾಡಬೇಕಾಗಿರುವುದು ಸಲಾರ್ ಚಲನಚಿತ್ರವನ್ನು ಏಪ್ರಿಲ್ 21 ರಂದು ಸಂಜೆ 5:30 ರಿಂದ 8 ರವರೆಗೆ ಸ್ಟಾರ್ ಮಾ ಚಾನೆಲ್‌ನಲ್ಲಿ ವೀಕ್ಷಿಸಿ. ಸಿನಿಮಾ ಪ್ರಸಾರದ ವೇಳೆ ಸ್ಕ್ರೀನ್ ಎಡಭಾಗದಲ್ಲಿ ಬೈಕ್ ಚಿತ್ರ ಎಷ್ಟು ಬಾರಿ ಬರುತ್ತದೆ ಎನ್ನುವುದನ್ನು ಎಣಿಸಿ ಹೇಳಬೇಕು".
"SMS ಲೈನ್ಸ್ ಓಪನ್ ಆದಾಗ SALAAR ಎಂದು ಟೈಪ್ ಮಾಡಿ ಸ್ಕ್ರೀನ್ ಮೇಲೆ ಬೈಕ್ ಗೋಚರಿಸಿದ ಸಂಖ್ಯೆ ಟೈಪ್ ಮಾಡಿ 9222211199 ಸಂಖ್ಯೆಗೆ SMS ಕಳುಹಿಸಿ. ಏಪ್ರಿಲ್ 21ರಂದು ರಾತ್ರಿ 8 ಗಂಟೆಗೆ ಷರತ್ತುಗಳು ಅನ್ವಯ ಎಂಧ ಎಂದು SMS ಲೈನ್ಸ್ ಓಪನ್ ಆಗುತ್ತದೆ" ಎಂದು ಮಾಹಿತಿ ನೀಡಿದೆ. ಸದ್ಯ ಈ ಸುದ್ದಿ ಪ್ರಭಾಸ್ ಅಭಿಮಾನಿಗಳ ಗಮನ ಸೆಳೆದಿದೆ. ಸಿನಿಮಾ ನೋಡಲೇಬೇಕು, ಬೈಕ್ ಗೆಲ್ಲಲೇಬೇಕು ಎಂದು ನಿರ್ಧರಿಸಿದ್ದಾರೆ.
ಕನ್ನಡದ 'ಉಗ್ರಂ' ಕಥೆಯನ್ನೇ ಕೊಂಚ ಬದಲಿಸಿ ಬಹಳ ದೊಡ್ಡದಾಗಿ 'ಸಲಾರ್' ಚಿತ್ರದಲ್ಲಿ ಹೇಳಲಾಗುತ್ತಿದೆ. ಬಹಳ ಅದ್ಧೂರಿಯಾಗಿ ನಿರ್ಮಾಣವಾಗಿದ್ದ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿತ್ತು. 700 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಡಿಸೆಂಬರ್ 22ಕ್ಕೆ ಶಾರುಖ್ ಖಾನ್ 'ಡಂಕಿ' ಎದುರು 'ಸಲಾರ್' ಅಬ್ಬರ ಶುರುವಾಗಿತ್ತು.
'ಉಗ್ರಂ' ಸಿನಿಮಾ ನೋಡಿದವರಿಗೆ 'ಸಲಾರ್' ಅಷ್ಟಾಗಿ ಇಷ್ಟವಾಗಿರಲಿಲ್ಲ. ಆದರೆ ಪ್ರಭಾಸ್ ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಸತತ 3 ಸಿನಿಮಾಗಳ ಸೋಲಿನ ಬಳಿಕ ಯಂಗ್ ರೆಬಲ್ ಸ್ಟಾರ್ 'ಸಲಾರ್' ಆಗಿ ಗೆದ್ದರು. ಸದ್ಯ ಚಿತ್ರದ ಸೀಕ್ವೆಲ್ 'ಸಲಾರ್' ಶೌರ್ಯಾಂಗ ಪರ್ವ ತೆರೆಗೆ ಬರಬೇಕಿದೆ. ಆದರೆ ಸದ್ಯಕ್ಕೆ ಸಿನಿಮಾ ಶುರುವಾಗುವಂತೆ ಕಾಣುತ್ತಿಲ್ಲ. ಕೆಲವರ ಪ್ರಕಾರ ಇನ್ನೆರಡು ತಿಂಗಳಲ್ಲಿ ಚಿತ್ರೀಕರಣ ಎನ್ನಲಾಗ್ತಿದೆ.
ಸದ್ಯ ಪ್ರಭಾಸ್ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಕಲ್ಕಿ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. 'ದಿ ರಾಜಾ ಸಾಬ್' ಚಿತ್ರೀಕರಣ ನಡೆಯುತ್ತಿದೆ. ಸ್ಪಿರಿಟ್ ಎನ್ನುವ ಮತ್ತೊಂದು ಚಿತ್ರಕ್ಕೆ ಪ್ರಭಾಸ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಸೀತಾರಾಮಂ' ನಿರ್ದೇಶಕ ಹನು ರಾಘವಪುಡಿ ಕಾಂಬಿನೇಷನ್‌ನಲ್ಲೂ ಸಿನಿಮಾ ಶುರುವಾಗಲಿದೆ.


Click it and Unblock the Notifications











