'ಪುಷ್ಪ 2' ಎದುರು 'ರಘುತಾತ' ಛೂ ಬಿಡ್ತಾ ಹೊಂಬಾಳೆ ಫಿಲ್ಮ್ಸ್? ಸೇಡಾ..? ಸವಾಲಾ?
'ಕೆಜಿಎಫ್', 'ಕಾಂತಾರ', 'ಸಲಾರ್' ಅಂತಹ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿತ್ತು. 'ಮಹಾನಟಿ' ಖ್ಯಾತಿಯ ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ರಘು ತಾತಾ' ಸಿನಿಮಾವನ್ನು ನಿರ್ಮಾಣ ಮಾಡಿದೆ. ಆ ಸಿನಿಮಾದ ರಿಲೀಸ್ ಡೇಟ್ ಅನ್ನು ಕೊನೆಗೂ ಅನೌನ್ಸ್ ಮಾಡಿದೆ.
ಸುಮನ್ ಕುಮಾರ್ ನಿರ್ದೇಶಿಸಿರುವ 'ರಘು ತಾತ' ಸಿನಿಮಾ 2024, ಸ್ವಾತಂತ್ರ್ಯ ದಿನಾಚರಣೆಗೆ ಬಿಡುಗಡೆ ಮಾಡುವುದಕ್ಕೆ ಹೊಂಬಾಳೆ ಫಿಲ್ಮ್ಸ್ ನಿರ್ಧರಿಸಿದೆ. ಆದರೆ, ಈ ಸಂದರ್ಭದಲ್ಲಿಯೇ 'ರಘು ತಾತ' ಸಿನಿಮಾವನ್ನು ಯಾಕೆ ರಿಲೀಸ್ ಮಾಡುತ್ತಿದ್ದಾರೆ? ಅನ್ನೋ ಪ್ರಶ್ನೆ ಸಿನಿಮಾ ಮಂದಿಯಲ್ಲಿ ಮೂಡಿದೆ.

ಯಾಕೆ ಈ ಪ್ರಶ್ನೆ ಅಂದರೆ, ಈ ವರ್ಷದ ಬಹು ನಿರೀಕ್ಷಿತ ಸಿನಿಮಾ 'ಪುಷ್ಪ 2' ಕೂಡ ಈ ಸಮಯದಲ್ಲೇ ರಿಲೀಸ್ ಆಗುತ್ತಿದೆ. ಈಗಾಗಲೇ ಪುಷ್ಪ ಅವತಾರದಲ್ಲಿ ಅಲ್ಲು ಅರ್ಜುನ್ ಅನ್ನು ನೋಡುವುದಕ್ಕೆ ಅವರ ಫ್ಯಾನ್ಸ್ ಅಷ್ಟೇ ಅಲ್ಲ. ಇಡೀ ಭಾರತವೇ ಎದುರು ನೋಡುತ್ತಿದೆ. ಈ ಮಧ್ಯೆ ಹೊಂಬಾಳೆ ಫಿಲ್ಮ್ಸ್ 'ರಘು ತಾತ' ಸಿನಿಮಾವನ್ನು ರಿಲೀಸ್ ಮಾಡಿ ಕೈ ಸುಟ್ಟುಕೊಳ್ಳುತ್ತಾ? ಅನ್ನೋ ಅನುಮಾನ.
ಆದರೆ, ಹೊಂಬಾಳೆ ಫಿಲ್ಮ್ಸ್ ಲೆಕ್ಕಾಚಾರವೇ ಬೇರೆ ಅನ್ನೋದು ಈಗಾಗಲೇ ಗೊತ್ತಾಗಿದೆ. ಯಾಕಂದ್ರೆ, ಹೊಂಬಾಳೆ ನಿರ್ಮಿಸಿದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್' ಅನ್ನು ಶಾರುಖ್ ಖಾನ್ 'ಝೀರೊ' ಎದುರು ಬಿಡುಗಡೆ ಮಾಡಿದ್ದರು. ಆಗಲೂ ಗೆದ್ದಿದ್ದರು. ಹಾಗೇ 'ಸಲಾರ್' ಸಿನಿಮಾವನ್ನು ಶಾರುಖ್ ಖಾನ್ 'ಡಂಕಿ' ಎದುರು ರಿಲೀಸ್ ಮಾಡಿ ಯಶಸ್ಸು ಗಳಿಸಿದ್ದರು.
ಈಗ 'ಪುಷ್ಪ 2' ಎದುರು 'ರಘು ತಾತ' ರಿಲೀಸ್ ಮಾಡುತ್ತಿರೋದು ಸ್ವಲ್ಪ ರಿಸ್ಕಿ ಅಂತ ಅನಿಸಿದ್ದರೂ, ಹೊಂಬಾಳೆ ಲೆಕ್ಕಾಚಾರ ಬೇರೆ ಏನೋ ಇದೆ. ಅದನ್ನು ಡಿಕೋಡ್ ಮಾಡುವುದರಲ್ಲಿ ಸಿನಿಮಾ ಮಂದಿ ಬ್ಯುಸಿಯಾಗಿದ್ದಾರೆ. ಮೋಸ್ಟ್ ಎಕ್ಸ್‌ಪೆಕ್ಟೆಡ್ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ 2' ಎದುರು 'ರಘು ತಾತ' ಬಾಕ್ಸಾಫೀಸ್‌ನಲ್ಲಿ ಎಷ್ಟು ಸದ್ದು ಮಾಡುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ.
ಇನ್ನೊಂದು ಕಡೆ 'ಪುಷ್ಪ 2' ಎದುರು 'ರಘು ತಾತ' ಸಿನಿಮಾವನ್ನು ಬೇಕಂತಲೇ ರಿಲೀಸ್ ಮಾಡುತ್ತಿದ್ದಾರೆ ಅನ್ನೋ ವದಂತಿ ಕೂಡ ಇದೆ. ಅಲ್ಲು ಅರ್ಜುನ್ ತಂಡ 'ಪುಷ್ಪ' ರಿಲೀಸ್ ಮಾಡುವ ಸಂದರ್ಭದಲ್ಲಿ 'ಕೆಜಿಎಫ್' ಸೀರಿಸ್ ಅನ್ನು ಪರೋಕ್ಷವಾಗಿ ತೆಗಳಿದ್ದರು. ತಮ್ಮ ಸಿನಿಮಾ ಮುಂದೆ 'ಕೆಜಿಎಫ್' ಏನೂ ಅನ್ನೋ ರೀತಿಯಲ್ಲಿ ಅಲ್ಲು ಅರ್ಜುನ್ ಆಪ್ತರು ಹೇಳಿಕೆಗಳನ್ನು ಕೊಡುತ್ತಿದ್ದರು.
ಆ ವೇಳೆ ಹೊಂಬಾಳೆ ಫಿಲ್ಮ್ಸ್ ಏನೂ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ 'ಪುಷ್ಪ 2' ಎದುರು ಅಪ್ಪಟ ತಮಿಳು ಸಿನಿಮಾ 'ರಘು ತಾತ' ರಿಲೀಸ್ ಮಾಡಿ ಸೇಡು ತೀರಿಸಿಕೊಳ್ಳುತ್ತಿದೆಯೇ ಎಂಬ ಅನುಮಾನ ಹಲವರದ್ದು. ಆದರೆ, 'ರಘು ತಾತಾ' 80ರ ದಶಕದಲ್ಲಿ ಕಯಲ್ವಿಳಿ ಅನ್ನೋ ಯುವತಿ ಹಿಂದಿಯನ್ನು ಕಲಿಯಲು ಪರದಾಡುವ ಕತೆಯಾಗಿದೆ.
ಹಾಗೇ ಇದು ಅಪ್ಪಟ ತಮಿಳು ಸಿನಿಮಾ ಆಗಿದ್ದರಿಂದ ತಮಿಳುನಾಡಿನಲ್ಲಿ 'ಪುಷ್ಪ 2'ಗಿಂತ ಹೆಚ್ಚು ಕಲೆಕ್ಷನ್ ಆಗಬಹುದು. ಇನ್ನು ತೆಲುಗು ರಾಜ್ಯಗಳಲ್ಲಿ 'ಪುಷ್ಪ 2' ಎದುರು 'ರಘು ತಾತ' ಬಾಕ್ಸಾಫೀಸ್‌ನಲ್ಲಿ ಹಿನ್ನೆಡೆ ಅನುಭವಿಸಿದರೂ, ಕಂಟೆಟ್ ವಿಚಾರದಲ್ಲಿ ಮೆಚ್ಚುಗೆ ಗಳಿಸಬಹುದು ಎಂಬ ಲೆಕ್ಕಾಚಾರವಿರಬಹುದು. ಒಟ್ನಲ್ಲಿ 'ಪುಷ್ಪ 2' ಎದುರು 'ರಘು ತಾತ' ಬಾಕ್ಸಾಫೀಸ್‌ನಲ್ಲಿ ಕಾದಾಡುವುದಂತೂ ಸತ್ಯ.


Click it and Unblock the Notifications











