ತಮನ್‌ಗೆ ₹2 ಕೋಟಿ ಗಿಫ್ಟ್ ಕೊಟ್ಟ ಬಾಲಯ್ಯ ಚಿತ್ರವೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು?
ತೆಲುಗು ನಟ ಬಾಲಕೃಷ್ಣ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಕ್ಷನ್ ಹೀರೊ ಆಗಿ ಅಬ್ಬರಿಸುತ್ತಾ ಬರ್ತಿದ್ದಾರೆ. ಚಿರಂಜೀವಿ, ವೆಂಕಟೇಶ್, ನಾಗಾರ್ಜುನ ತಲೆಮಾರಿನ ನಟ ಬಾಲಯ್ಯ. ತನ್ನ ವಿಭಿನ್ನ ಮ್ಯಾನರಿಸಂ, ಡೈಲಾಗ್ ಡೆಲಿವರಿಯಿಂದ ಜನಪ್ರಿಯರಾಗಿದ್ದಾರೆ.
ನಟನಾಗಿ ಮಾತ್ರವಲ್ಲದೇ ರಾಜಕಾರಣಿ ಆಗಿಯೂ ನಂದಮೂರಿ ಬಾಲಕೃಷ್ಣ ಗುರ್ತಿಸಿಕೊಂಡಿದ್ದಾರೆ. ಆಂಧ್ರದ ಹಿಂದೂಪುರ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಸಿನಿಮಾ ಜೊತೆ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರವೊಂದಕ್ಕೆ ಬಾಲಯ್ಯ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಇತ್ತೀಚೆಗೆ ಸಂಗೀತ ನಿರ್ದೇಶಕ ಎಸ್. ತಮನ್‌ಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದರು.

ಸಂಕ್ರಾಂತಿ ಸಂಭ್ರಮದಲ್ಲಿ ಬಾಲಯ್ಯ ನಟಿಸಿದ 'ಡಾಕು ಮಹಾರಾಜ್' ಸಿನಿಮಾ ತೆರೆಕಂಡು ಗೆದ್ದಿತ್ತು. ಚಿತ್ರದಲ್ಲಿ ಎಸ್. ತಮನ್ ಸಂಗೀತ ಸಂಯೋಜನೆ ಮಾಡಿದ್ದರು. ಸಿನಿಮಾ ತಕ್ಕ ಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಅದರಲ್ಲಿ ಎಸ್. ತಮನ್ ಮ್ಯೂಸಿಕ್ ಪಾಲು ಇದೆ. ಅದೇ ಕಾರಣಕ್ಕೆ ಬಾಲಕೃಷ್ಣ 2 ಕೋಟಿ ರೂ. ಬೆಲೆ ಪೋರ್ಷೆ ಕಾರ್ ಉಡುಗೊರೆಯಾಗಿ ನೀಡಿದ್ದಾರೆ.
ಅಂದಹಾಗೆ ಬಾಲಯ್ಯ ನಟಿಸಿದ 4 ಚಿತ್ರಗಳಿಗೆ ತಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೊದಲಿಗೆ 'ಡಿಕ್ಟೇಟರ್' ಚಿತ್ರಕ್ಕೆ ಇವರಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು. ಬಳಿಕ 'ಅಖಂಡ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆ ಸಿನಿಮಾ ಸಕ್ಸಸ್‌ನಲ್ಲಿ ಸಂಗೀತದ ಪಾಲು ಇದೆ. ಬಳಿಕ 'ವೀರಸಿಂಹ ರೆಡ್ಡಿ' ಹಾಗೂ 'ಡಾಕು ಮಹಾರಾಜ್' ಚಿತ್ರಗಳಿಗೆ ತಮನ್ ಟ್ಯೂನ್ ಹಾಕಿದ್ದಾರೆ.
'ಅಖಂಡ'- 2 ಚಿತ್ರಕ್ಕೂ ತಮನ್ ಕೆಲಸ ಮಾಡಲಿದ್ದಾರೆ. ಬಾಲಯ್ಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರಲ್ಲಿ ಸದಾ ಮುಂದು ಎಂದು ಅಭಿಮಾನಿಗಳು ಮೆಚ್ಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸಿನಿಮಾ ಸಕ್ಸಸ್ ಸಂಭ್ರಮದಲ್ಲಿ ನಿರ್ಮಾಪಕರು ಕಲಾವಿದರು, ತಂತ್ರಜ್ಞರಿಗೆ ಉಡುಗೊರೆ ನೀಡುವ ಟ್ರೆಂಡ್ ಹೆಚ್ಚಾಗಿದೆ. ಆದರೆ ಚಿತ್ರದ ನಟ ಈ ರೀತಿ ಸಂಗೀತ ನಿರ್ದೇಶಕನಿಗೆ 2 ಕೋಟಿ ರೂ. ಬೆಲೆಯ ಗಿಫ್ಟ್ ಕೊಟ್ಟಿರುವುದು ಅಚ್ಚರಿ ಮೂಡಿಸಿದೆ.

ತಮನ್ ನನ್ನ ಸಹೋದರ ಸಮಾನ. ಇನ್ನು ಮುಂದೆ ಕೂಡ ನಮ್ಮ ಕಾಂಬಿನೇಷನ್ ಮುಂದುವರೆಯುತ್ತದೆ. ಇನ್ನು ಮುಂದೆ ಆತ ನಂದಮೂರಿ ತಮನ್ ಎಂದು ಬಾಲಯ್ಯ ಕೊಂಡಾಡಿದ್ದರು. ಅಂದಹಾಗೆ 2 ಕೋಟಿ ರೂ. ಕಾರ್ ಗಿಫ್ಟ್ ಕೊಟ್ಟ ಬಾಲಕೃಷ್ಣ ಚಿತ್ರವೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು ಎಂದು ಅಭಿಮಾನಿಗಳು ಹುಬ್ಬೇರಿಸಿದ್ದಾರೆ.
'ಡಾಕು ಮಹಾರಾಜ್' ಚಿತ್ರಕ್ಕೆ ಬಾಲಯ್ಯ 28 ಕೋಟಿ ರೂ. ಸಂಭಾವನೆ ಪಡೆದಿದ್ದರು ಎಂದು ಟಾಲಿವುಡ್‌ನಲ್ಲಿ ಗುಲ್ಲಾಗಿದೆ. 'ಅಖಂಡ'-2 ಚಿತ್ರಕ್ಕೆ 7 ಕೋಟಿ ರೂ. ಹೆಚ್ಚಿಸಿ 35 ಕೋಟಿ ರೂ. ಜೇಬಿಗೆ ಇಳಿಸುತ್ತಿದ್ದಾರೆ ಎನ್ನಲಾಗ್ತಿದೆ. ಅದೇ ಹಣದಲ್ಲಿ ಸಂಗೀತ ನಿರ್ದೇಶಕನಿಗೆ ಕಾರ್ ಗಿಫ್ಟ್ ಕೊಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
ಸದ್ಯ ತಮನ್ ಸಿಸಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಕೂಡ ಮಿಂಚುತ್ತಿದ್ದಾರೆ. ತೆಲುಗು ವಾರಿಯರ್ಸ್ ತಂಡದ ಪರ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಕನ್ನಡದಲ್ಲಿ ಕೂಡ ಕೆಲ ಚಿತ್ರಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಕನ್ನಡದ 'ಚಕ್ರವ್ಯೂಹ', 'ಜೂಮ್', 'ಜಾಗ್ವಾರ್', 'ಆರೆಂಜ್', 'ಯುವರತ್ನ' ಚಿತ್ರಗಳಿಗೆ ಟ್ಯೂನ್ ಹಾಕಿದ್ದರು.


Click it and Unblock the Notifications











