'ವಿರಾಟ ಪರ್ವಂ' ಮೊದಲ ದಿನ ಗಳಿಸಿದ್ದೆಷ್ಟು? ಮೋಡಿ ಮಾಡಿದರೆ ಸಾಯಿ ಪಲ್ಲವಿ?
ನಟಿ ಸಾಯಿ ಪಲ್ಲವಿ, ರಾಣಾ ದಗ್ಗುಬಾಟಿ ನಟಿಸಿರುವ 'ವಿರಾಟ ಪರ್ವಂ' ಸಿನಿಮಾ ಬಿಡುಗಡೆ ಆಗುವ ಮುನ್ನ ಹಲವು ಕಾರಣಗಳಿಗೆ ಸುದ್ದಿಯಾಗಿತ್ತು. ಅದರಲ್ಲೂ ಸಾಯಿ ಪಲ್ಲವಿ ನೀಡಿದ ಹೇಳಿಕೆ ದೊಡ್ಡದಾಗಿ ಸದ್ದಾಗಿತ್ತು.
ಇದೀಗ ಸಿನಿಮಾ ಜೂನ್ 18ರಂದು ಬಿಡುಗಡೆ ಆಗಿದ್ದು, ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಿದೆಯೇ ಎಂದು ಸಿನಿ ಪ್ರೇಮಿಗಳು ಕುತೂಹಲದಿಂದಿದ್ದಾರೆ.
'ವಿರಾಟ ಪರ್ವಂ' ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ಡಿ ಸುರೇಶ್ ಬಾಬು ನಿರ್ಮಾಣ ಮಾಡಿದ್ದು, ಕೋವಿಡ್ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಸಿನಿಮಾ ಮೂರು ವರ್ಷ ತಡವಾಗಿ ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆ ಆದ ಮೊದಲ ದಿನ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿಲ್ಲವಾದರೂ ತೀರ ಕಳಪೆ ಗಳಿಕೆಯನ್ನೇನು ಮಾಡಿಲ್ಲ.

ಮೊದಲ ದಿನ ಗಳಿಸಿದ್ದೆಷ್ಟು?
ಈ ಸಿನಿಮಾ ಪ್ಯಾನ್ ಇಂಡಿಯಾ ಆಗಿರದೆ ಕೇವಲ ತೆಲುಗು ಭಾಷೆಯಲ್ಲಿ ಮಾತ್ರವೇ ಆಂಧ್ರ, ತೆಲಂಗಾಣ, ಕರ್ನಾಟಕ, ತಮಿಳುನಾಡಿನ ಕೆಲವು ಕಡೆಗಳಲ್ಲಿ, ಮುಂಬೈನ ಕೆಲವು ಚಿತ್ರಮಂದಿರಗಳಲ್ಲಿ ಹಾಗೂ ವಿದೇಶದ ಕೆಲವು ಮುಖ್ಯ ನಗರಗಳಲ್ಲಿ ಮಾತ್ರವೇ ಬಿಡುಗಡೆ ಆಗಿದೆ. ಹಾಗಿದ್ದರೂ ಸಹ ಮೊದಲ ದಿನ ಸುಮಾರು 2.25 ಕೋಟಿ ಗಳಿಕೆಯನ್ನು ಸಿನಿಮಾ ಮಾಡಿದೆ ಎನ್ನಲಾಗುತ್ತಿದೆ.

14 ಕೋಟಿಗೆ ಮಾರಾಟವಾಗಿದೆ ಬಿಡುಗಡೆ ಹಕ್ಕು
'ವಿರಾಟ ಪರ್ವಂ' ಸಿನಿಮಾಕ್ಕೆ ಮೊದಲ ದಿನ ಬಹಳ ಒಳ್ಳೆಯ ಕಲೆಕ್ಷನ್ ಆಗಿಲ್ಲವಾದರೂ ಮೊದಲ ದಿನ ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ಹೊರಬಿದ್ದಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಿನಿಮಾ ಗಳಿಕೆಯನ್ನು ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿ ಚಿತ್ರತಂಡ ಇದೆ. ಸಿನಿಮಾದ ಬಿಡುಗಡೆ ಹಕ್ಕು 14 ಕೋಟಿಗೆ ಮಾರಾಟವಾಗಿದ್ದು, ಬ್ರೇಕ್ ಇವನ್‌ಗೆ ಇನ್ನೂ 12 ಕೋಟಿಯನ್ನು ಸಿನಿಮಾ ಗಳಿಸಬೇಕಿದೆ.

ಲಾಭದಲ್ಲಿದ್ದಾರೆ ಸಿನಿಮಾದ ನಿರ್ಮಾಪಕ
ಆದರೆ ಸಿನಿಮಾದ ನಿರ್ಮಾಪಕ ಈಗಾಗಲೇ ಲಾಭದಲ್ಲಿದ್ದಾರೆ. ಸಿನಿಮಾವನ್ನು 14 ಕೋಟಿಗೆ ವಿತರಕರಿಗೆ ಮಾರಾಟ ಮಾಡಿರುವ ನಿರ್ಮಾಪಕ, ಬಹಳ ಒಳ್ಳೆಯ ಬೆಲೆಗೆ ಸಿನಿಮಾವನ್ನು ಒಟಿಟಿಗೆ ಸಹ ಮಾರಾಟ ಮಾಡಿದ್ದಾರೆ. ವಿದೇಶಿ ಒಟಿಟಿ 'ನೆಟ್‌ಫ್ಲಿಕ್ಸ್' ಭಾರಿ ಒಳ್ಳೆಯ ಮೊತ್ತಕ್ಕೆ 'ವಿರಾಟ ಪರ್ವಂ' ಸಿನಿಮಾವನ್ನು ಖರೀದಿಸಿದೆ ಎನ್ನಲಾಗುತ್ತಿದೆ.

ವೇಣು ಉದ್ದುಗುಲ ನಿರ್ದೇಶನದ ಸಿನಿಮಾ
'ವಿರಾಟ ಪರ್ವಂ' ಸಿನಿಮಾ ನಕ್ಸಲ್ ಹಾಗೂ ಪ್ರೇಮಕತೆ ಉಳ್ಳ ಸಿನಿಮಾ ಆಗಿದೆ. ಸಿನಿಮಾದಲ್ಲಿ ಸಾಯಿ ಪಲ್ಲವಿ ವೆನ್ನೆಲ ಹೆಸರಿನ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ್ದಾರೆ. ನಟ ರಾಣಾ ದಗ್ಗುಬಾಟಿ ನಕ್ಸಲ್ ನಾಯಕ ರವನ್ನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಪ್ರಿಯಾಮಣಿ, ನಂದಿತಾ ದಾಸ್, ಜರೀನಾ ವಹಾಬ್ ಇನ್ನಿತರರು ನಟಿಸಿದ್ದಾರೆ. ಸಿನಿಮಾವನ್ನು ನಿರ್ದೇಶನ ಮಾಡಿರುವುದು ವೇಣು ಉದ್ದುಗುಲ.


Click it and Unblock the Notifications











