ತೆಲುಗು ಕಡೆ ಮುಖ ಮಾಡಿದ ಹೃತಿಕ್ ಅಗ್ನಿಪಥ್
ಬಾಲಿವುಡ್ ಚಿತ್ರಗಳು ಒಂದೊಂದಾಗಿ ತೆಲುಗಿಗೆ ರೀಮೇಕ್ ಆಗುತ್ತಿವೆ. ಸಲ್ಮಾನ್ ಖಾನ್ ದಬಾಂಗ್ ನಂತರ ಇದೀಗ ಹೃತಿಕ್ ರೋಶನ್ ಅವರ ಅಗ್ನಿಪಥ್ ಕೂಡ ತೆಲುಗಿಗೆ ರೀಮೇಕ್ ಆಗಲಿದೆ ಎಂಬ ಬಲವಾದ ಸುದ್ದಿ ಹಬ್ಬಿದೆ. ಹೃತಿಕ್ ರೋಶನ್, ಪ್ರಿಯಾಂಕಾ ಚೋಪ್ರಾ ತಾರಾಗಣದ ಈ ಚಿತ್ರ ಬಾಲಿವುಡ್ ನಲ್ಲಿ ಯಶಸ್ವಿ ಎನಿಸಿತ್ತು.
ಸುದ್ದಿ ಮೂಲಗಳ ಪ್ರಕಾರ, ಬಾಲಿವುಡ್ ನ ಹೃತಿಕ್ ಅಗ್ನಿಪಥ್ ತೆಲುಗಿಗೆ ಸದ್ಯದಲ್ಲೇ ರೀಮೇಕ್ ಆಗುವ ಸಾಧ್ಯತೆ ದಟ್ಟವಾಗಿದೆ. ಕರಣ್ ಮಲ್ಹೋತ್ರಾ ನಿರ್ದೇಶನ ಹಾಗೂ ಕರಣ್ ಜೋಹರ್ ನಿರ್ಮಾಣದ ಇತ್ತೀಚಿಗೆ ಬಂದ ಹೃತಿಕ್-ಪ್ರಿಯಾಂಕ ಜೋಡಿಯ ಈ ಚಿತ್ರ, 1990 ರಲ್ಲಿ ಬಂದ ಅಮಿತಾಬ್ ಬಚ್ಚನ್ ನಟನೆಯ ರೀಮೇಕ್ ಆಗಿತ್ತು.
ಈ ಚಿತ್ರವೀಗ ತೆಲುಗಿನಲ್ಲಿ ರೀಮೇಕ್ ಆಗಲು ಭಾರೀ ಸಿದ್ಧತೆ ನಡೆಸುತ್ತಿದ್ದ ಸದ್ಯಕ್ಕೆ ಚಿತ್ರಕ್ಕೆ ಅಗತ್ಯವಿರುವ ಬಜೆಟ್ ಬಗ್ಗೆ ಮಾತುಕತೆ ನಡೆದಿದೆ. ಭಾರೀ ಬಜೆಟ್ ಅಗತ್ಯವಿರುವ ಈ ಚಿತ್ರವನ್ನು ಅದ್ದೂರಿಯಾಗಿ ತೆರೆಗೆ ತರಲು ತೆಲುಗು ಚಿತ್ರರಂಗ ನಿರ್ಧರಿಸಿದೆ. ಅಷ್ಟೇ ಅಲ್ಲ, ಈ ಚಿತ್ರಕ್ಕೆ ತೆಲುಗಿನ ಖ್ಯಾತ ಸ್ಟಾರ್ ನಟ-ನಟಿಯರೇ ಅಭಿನಯಿಸಲಿದ್ದಾರೆ.
ಹೃತಿಕ್ ರೋಶನ್ ಸಾಕಷ್ಟು ಕಷ್ಟಪಟ್ಟು ಅಭಿನಯಿಸಿ ಈ ಚಿತ್ರವನ್ನು ಯಶಸ್ವಿಗೊಳಿಸಿದ್ದಾರೆ. ಕಾರಣ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಟಿಸಿ ಬಹುಜನಪ್ರಿಯವಾಗಿದ್ದ ಈ ಚಿತ್ರಕ್ಕೆ ಮತ್ತೆ ನ್ಯಾಯ ಒದಗಿಸುವ ಸವಾಲು ಹೃತಿಕ್ ಮೇಲಿತ್ತು. ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಗೆದ್ದಿದ್ದಾರೆ ಹೃತಿಕ್.
ಪ್ರಿಯಾಂಕ ಚೋಪ್ರಾ, ಸಂಜಯ್ ದತ್ ಹಾಗೂ ರಿಷಿಕಪೂರ್ ಕೂಡ ಈ ಹೊಸ ಅಗ್ನಿಪಥ್ ಚಿತ್ರದಲ್ಲಿ ನಟಿಸಿದ್ದಾರೆ. ಅವರೆಲ್ಲರ ಅಭಿನಯಕ್ಕೆ ಭಾರೀ ಸವಾಲು ಎದುರಾಗಿತ್ತು. ಈ ಮೊದಲೊಮ್ಮೆ ಯಶಸ್ವಿಯಾದ ಚಿತ್ರ ಮತ್ತೆ ತೆರೆಗೆ ಬಂದಾಗ ಸೋತರೆ ಕಲಾವಿದರು ಭಾರೀ ಮುಜುಗರ ಅನುಭವಿಸಬೇಕಾಗುತ್ತದೆ. ಆದರೆ ಅಗ್ನಿಪಥ್ ವಿಷಯದಲ್ಲಿ ಹಾಗಾಗಿಲ್ಲ.
ಸೇಡಿನ ಕಥೆ ಹೊಂದಿರುವ ಈ ಅಗ್ನಿಪಥ್, 1990 ರಲ್ಲಿ ಬಾಲಿವುಡ್ ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆದಿತ್ತು. ಅಮಿತಾಬ್ ಬಚ್ಚನ್ ಈ ಚಿತ್ರದ ಪಾತ್ರದ ಮೂಲಕ ಮತ್ತಷ್ಟು ಖ್ಯಾತಿ ಗಳಿಸಿದ್ದರು. ಇತ್ತೀಚಿಗೆ ಬಂದ ಹೃತಿಕ್ ಅಗ್ನಿಪಥ್ ಕೂಡ ಬಾಕ್ಸ್ ಆಫೀಸಿನಲ್ಲಿ ಸಾಕಷ್ಟು ಯಶಸ್ವಿಯಾಗಿದೆ. ಈಗ ಚಿತ್ರ ತೆಲುಗಿನತ್ತ ಪ್ರಯಾಣ ಬೆಳೆಸಿದೆ. ಮುಂದೇನಾಗುತ್ತೋ...! (ಏಜೆನ್ಸೀಸ್)


Click it and Unblock the Notifications











