ಪಬ್ ಮೇಲೆ ದಾಳಿ, ಡ್ರಗ್ಸ್ ವಶ, ಸ್ಟಾರ್ ನಟಿ, ಬಿಗ್‌ಬಾಸ್ ವಿನ್ನರ್ ವಶಕ್ಕೆ!
ಹೈದರಾಬಾದ್‌ನ ಮಿಂಕ್ ಪಬ್ ಮೇಲೆ ಭಾನುವಾರ, ಪೊಲೀಸರು ದಾಳಿ ನಡೆಸಿದ್ದು ದುಬಾರಿ ಮಾದಕ ವಸ್ತು ಕೊಕೆನ್ ಅನ್ನು ವಶಪಡಿಸಿಕೊಂಡಿದ್ದಾರೆ. ಪಬ್‌ನಲ್ಲಿ 148 ಮಂದಿ ವಶಕ್ಕೆ ಪಡೆದಿದ್ದು, ಸ್ಟಾರ್ ನಟಿಯೊಬ್ಬಾಕೆ ಹಾಗೂ ಮಾಜಿ ಬಿಗ್‌ಬಾಸ್ ವಿನ್ನರ್ ಸೇರಿದಂತೆ ಹಲವು ಸ್ಟಾರ್ ನಟರ ಸಂಬಂಧಿಗಳು, ರಾಜಕಾರಣಿಗಳ ಸಂಬಂಧಿಗಳನ್ನೂ ಸಹ ವಶಕ್ಕೆ ಪಡೆಯಲಾಗಿದೆ.
ಅವಧಿ ಮೀರಿ ಕಾರ್ಯ ನಿರ್ವಹಿಸುತ್ತಿದ್ದ ಕಾರಣಕ್ಕೆ ಪೊಲೀಸರು ಪಬ್ ಮೇಲೆ ರೇಡ್ ಮಾಡಿದ್ದರು, ಆದರೆ ತಪಾಸಣೆ ವೇಳೆ ಪಬ್‌ನಲ್ಲಿ ಎಂಟು ಪ್ಯಾಕೆಟ್ ಕೊಕೇನ್ ಪೊಲೀಸರಿಗೆ ದೊರೆತಿದೆ.
ರೇಡ್ ವೇಳೆ, ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕ ಕೋನಿಡೇಲ ಸಹ ಪಬ್‌ನಲ್ಲಿಯೇ ಇದ್ದು ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿಹಾರಿಕಾ ಕೋನಿಡೇಲ ನಟಿಯಾಗಿದ್ದು, ಕಳೆದ ವರ್ಷಾಂತ್ಯದಲ್ಲಿ ಅವರ ವಿವಾಹವಾಗಿತ್ತು. ಅದ್ಧೂರಿಯಾಗಿ ನಡೆದ ವಿವಾಹದಲ್ಲಿ ಮೆಗಾಸ್ಟಾರ್ ಕುಟುಂಬ ಸೇರಿದಂತೆ ತೆಲುಗು ಚಿತ್ರರಂಗದ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು.

ನಿಹಾರಿಕಾ ಮಾತ್ರವೇ ಅಲ್ಲದೆ ತೆಲುಗು ಬಿಗ್‌ಬಾಸ್ 3 ವಿನ್ನರ್ ರಾಹುಲ್ ಸಿಪ್ಲಿಗಂಜ್ ಅವರನ್ನೂ ಸಹ ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಹುಲ್ ಬಿಗ್‌ಬಾಸ್ ವಿನ್ನರ್ ಮಾತ್ರವೇ ಅಲ್ಲದೆ ತೆಲುಗು ಚಿತ್ರರಂಗದ ಜನಪ್ರಿಯ ಗಾಯಕರಲ್ಲಿ ಒಬ್ಬರಾಗಿದ್ದಾರೆ.
ಪೊಲೀಸರು ರೇಡ್ ಮಾಡಿರುವ 'ಪಬ್ಬಿಂಗ್ ಹಾಗೂ ಮಿಂಕ್ ಪಬ್' ಐಶಾರಾಮಿ ಪಬ್ ಆಗಿದ್ದು, ವಿವಿಐಪಿ ಜನಗಳಿಗಾಗಿ ಮಾತ್ರವೇ ಇರುವ ಪಬ್ ಆಗಿದೆ. ಪಬ್ ತನ್ನದೇ ಆದ ಅಪ್ಲಿಕೇಶನ್ ಹೊಂದಿದ್ದು, ಅಪ್ಲಿಕೇಶನ್‌ನಲ್ಲಿ ಸಿಗುವ ಕೋಡ್ ಮೂಲಕವಷ್ಟೆ ಆ ಪಬ್‌ಗೆ ಪ್ರವೇಶ ಪಡೆಯಬಹುದಾಗಿರುತ್ತದೆ.

ಇನ್ನು ತಮ್ಮ ಪುತ್ರಿ ನಿಹಾರಿಕಾರನ್ನು ಪೊಲೀಸರು ವಶಪಡಿಸಿಕೊಂಡಿರುವ ವಿಚಾರವಾಗಿ ಮಾತನಾಡಿರುವ ನಟ ನಾಗಬಾಬು, ಮಗಳನ್ನು ಪೊಲೀಸರು ವಶಪಡಿಸಿಕೊಂಡಿರುವ ಸುದ್ದಿಯನ್ನು ಖಾತ್ರಿಪಡಿಸಿದ್ದಾರೆ. ಆದರೆ ಆಕೆಯ 'ಕ್ಲೀನ್' ಆಗಿದ್ದಾಳೆ ಎಂದು ಪೊಲೀಸರೇ ಮಾಹಿತಿ ನೀಡಿರುವುದಾಗಿ ಹೇಳಿದ್ದಾರೆ. ನಿಹಾರಿಕ ಯಾವುದೇ ಮಾದಕ ವಸ್ತು ಹೊಂದಿರುವುದಾಗಲಿ, ಅಥವಾ ಸೇವನೆ ಆಗಲಿ ಮಾಡಿಲ್ಲವೆಂದು ನಾಗಬಾಬು ಹೇಳಿದ್ದಾರೆ.
ಪೊಲೀಸರು ವಶಕ್ಕೆ ಪಡಿಸಿಕೊಂಡಿರುವ 150 ಮಂದಿಯಲ್ಲಿ ನಟ-ನಟಿಯರೊಟ್ಟಿಗೆ ಸಂಬಂಧವುಳ್ಳ ಅನೇಕರಿದ್ದಾರೆ. ರಾಜಕಾರಣಿಗಳು, ಆಂಧ್ರದ ದೊಡ್ಡ ದೊಡ್ಡ ಉದ್ಯಮಿಗಳ ಮಕ್ಕಳು ಸಹ ಇದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪಬ್ ಮಾಲೀಕರ ಮೇಲೆ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ.


Click it and Unblock the Notifications











