"ಇದು ಸರಿಯಲ್ಲ".. ತೆಲಂಗಾಣ ಸರ್ಕಾರದ ನಡೆಗೆ ರಶ್ಮಿಕಾ ಮಂದಣ್ಣ ಆಕ್ಷೇಪ
ಹೈದರಾಬಾದ್‌ನಲ್ಲಿ ಮತ್ತೊಮ್ಮೆ ಭೂ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಗಚಿಬೌಲಿಯಲ್ಲಿರುವ ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿ ವ್ಯಾಪ್ತಿಯಲ್ಲಿರುವ 400 ಎಕರೆ ಜಾಗವನ್ನು ಅಭಿವೃದ್ಧಿ ಪಡಿಸಿ ನಗರದ ಬ್ರಾಂಡ್ ಇಮೇಜ್ ಮತ್ತಷ್ಟು ಹೆಚ್ಚಿಸಲು ತೆಲಂಗಾಣ ಸರ್ಕಾರ ಮುಂದಾಗಿದೆ. ಆದರೆ ಇದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದೆ. ರಿಯಲ್ ಎಸ್ಟೇಟ್‌ಗಾಗಿ ಮರಗಳನ್ನು ಕಡಿದು ವನ್ಯಜೀವಿಗಳನ್ನು ಬಲಿ ಕೊಡಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.
ಅಭಿವೃದ್ಧಿ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿದು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಇಲ್ಲದಂತೆ ಮಾಡುವ ಪ್ರಯತ್ನ ನಡೀತಿದೆ ಎಂದು ಪರಿಸರವಾದಿಗಳು ಹಾಗೂ ಪ್ರಾಣಿ ಪ್ರಿಯರು ಟೀಕಿಸುತ್ತಿದ್ದಾರೆ. ಸದ್ಯ ಈ ವಿವಾದದ ಬಗ್ಗೆ ಸಿನಿಮಾ ತಾರೆಯರು ಕೂಡ ದನಿ ಎತ್ತಿದ್ದಾರೆ. ಪವನ್ ಕಲ್ಯಾನ್ ಮಾಜಿ ಪತ್ನಿ, ನಟಿ ರೇಣು ದೇಸಾಯಿ, ನಟಿ, ನಿರೂಪಕಿ ರಶ್ಮಿ, ನಟಿ ಸಮಂತಾ ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿ ವಿದ್ಯಾರ್ಥಿಗಳು ಕೂಡ ಪ್ರತಿಭಟನೆ ನಡೆಸಿ ಸರ್ಕಾರದ ನಡೆಯನ್ನು ವಿರೋಧಿಸುತ್ತಿದ್ದಾರೆ. ಪ್ರತಿಭಟನಕಾರರನ್ನು ಪೊಲೀಸರು ಬಂಧಿಸುವ ಕೆಲಸ ಕೂಡ ನಡೀತಿದೆ. ಸದ್ಯದ ಮಟ್ಟಿಗೆ ಮರಗಳನ್ನು ಕಡಿಯದಂತೆ ತೆಲಂಗಾಣ ಹೈಕೋರ್ಟ್ ಈಗಾಗಲೇ ಅಲ್ಲಿನ ಸರ್ಕಾರಕ್ಕೆ ಸೂಚನೆ ನೀಡಿದೆ. ಸದ್ಯ ಈ ಭೂವಿವಾದದ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಈಗಷ್ಟೇ ಈ ವಿಚಾರ ತಿಳಿಯಿತು. ನನ್ನ ಹೃದಯ ನುಚ್ಚು ನೂರಾಯಿತು. ಕ್ಷಮಿಸಿ, ಆದರೆ ಇದು ಸರಿಯಲ್ಲ" ಎಂದು ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಸಾಕಷ್ಟು ಜನ ರಶ್ಮಿಕಾ ಪೋಸ್ಟ್ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸೆಲೆಬ್ರೆಟಿಗಳು ಕೂಡ ಈ ಬಗ್ಗೆ ದನಿ ಎತ್ತುತ್ತಿರುವುದನ್ನು ಅಭಿಮಾನಿಗಳು ಬೆಂಬಲಿಸುತ್ತಿದ್ದಾರೆ.

ನಟಿ ರೇಣು ದೇಸಾಯಿ ವೀಡಿಯೋ ಮಾಡಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬಳಿ ಮನವಿ ಮಾಡಿದ್ದಾರೆ. "ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಲ್ಲಿ ನನ್ನ ಮನವಿ. 2 ದಿನಗಳ ಹಿಂದೆ ನನಗೆ HCU ವಿವಾದದ ಬಗ್ಗೆ ತಿಳಿಯಿತು. ಅದಕ್ಕಾಗಿಯೇ ನಾನು ಈ ವೀಡಿಯೊ ಮಾಡುತ್ತಿದ್ದೇನೆ. ಸರ್.. ನಾನು ಒಬ್ಬ ತಾಯಿಯಾಗಿ ನಿಮ್ಮನ್ನು ವಿನಂತಿಸುತ್ತಿದ್ದೇನೆ. ನನಗೆ ಈಗ 44 ವರ್ಷ ವಯಸ್ಸು. ಇವತ್ತೋ ನಾಳೆನೋ ನಾನು ಹೋಗುತ್ತೇನೆ. ಆದರೆ ನನ್ನ ಮಕ್ಕಳ ಭವಿಷ್ಯ, ನಮ್ಮ ಎಲ್ಲಾ ಮಕ್ಕಳು ನಮಗೆ ಮುಖ್ಯ. ನಮಗೆ ಆಮ್ಲಜನಕ ಬೇಕು. ನೀರು ಬೇಕು. ಅಭಿವೃದ್ಧಿ ಕೂಡ ಮುಖ್ಯ. ಅದರಲ್ಲಿ ಸಂದೇಹವಿಲ್ಲ. ನಮಗೆ ಐಟಿ ಪಾರ್ಕ್, ಬಹುಮಹಡಿ ಕಟ್ಟಡಗಳು, ಎಲ್ಲವೂ ಬೇಕು. ಆದರೆ ಈ 400 ಎಕರೆ ಜಾ ಬಿಟ್ಟುಬಿಡಿ" ಎಂದು ಮನವಿ ಮಾಡಿದ್ದಾರೆ.
ತೆಲಂಗಾಣ ರಾಜ್ಯದ ಪ್ರಜೆಯಾಗಿ, ನಿಮ್ ಬಳಿ ಮನವಿ ಮಾಡುತ್ತಿದ್ದೇನೆ. ದಯವಿಟ್ಟು ಇದನ್ನು ಬಿಟ್ಟುಬಿಡಿ. ಸಾಕಷ್ಟು ಖಾಲಿ ಜಾಗಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಿ. ನಿಮಗೆ ಹೇಳುವಷ್ಟು ದೊಡ್ಡ ಸ್ಥಾನದಲ್ಲಿ ನಾನಿಲ್ಲ. ನಿಮ್ಮ ಮುಂದೆ ತುಂಬಾ ಚಿಕ್ಕವನು. ನಿಮಗೆ ಬಹಳ ಅನುಭವ ಇದೆ. ದಯವಿಟ್ಟು ಯೋಚಿಸಿ. ನಾನು ಅಭಿವೃದ್ಧಿಯ ವಿರೋಧಿಯಲ್ಲ. ನಗರ ಅಭಿವೃದ್ಧಿ ಆಗಿರುವುದಕ್ಕೆ ನಾವು ಈಗ ಇಲ್ಲಿದ್ದೀವಿ. ಆದರೆ ಆ 400 ಎಕರೆಗಳನ್ನು ಜಾಗ ಬಿಟ್ಟುಬಿಡಿ" ಎಂದು ರೇಣು ದೇಸಾಯಿ ಕೇಳಿಕೊಂಡಿದ್ದಾರೆ.
'ಕಲ್ಕಿ 2898AD' ಚಿತ್ರದ ನಿರ್ದೇಶಕ ನಾಗ್ ಅಶ್ವಿನ್, 'ಪೆಳ್ಳಿ ಚೂಪುಲು' ಸಿನಿಮಾ ನಿರ್ದೇಶಕ ತರುಣ್ ಭಾಸ್ಕರ್, 'ವಿರಾಟ ಪರ್ವಂ' ಸಿನಿಮಾ ನಿರ್ದೇಶಕ ವೇಣು ಉಡುಗುಲ, ನಟಿ ಈಶಾ ರೆಬ್ಬಾ, ಪ್ರಿಯದರ್ಶಿ ಸೇರಿದಂತೆ ಹಲವರು ಈ ಭೂವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.


Click it and Unblock the Notifications











