ಪಶು ವೈದ್ಯೆ ಅತ್ಯಾಚಾರ, ಹತ್ಯೆ ಪ್ರಕರಣ: ಮರಣದಂಡನೆ ವಿಧಿಸಿ ಎಂದ ಮಹೇಶ್ ಬಾಬು
ಹೈದರಾಬಾದ್ ಮೂಲದ ಪಶು ವೈದ್ಯೆ ಮೇಲೆ ಅತ್ಯಾಚಾರವೆಸಗಿ, ಬೆಂಕಿಯಿಂದ ಸುಟ್ಟು, ಹತ್ಯೆಗೈದ ದುರ್ಘಟನೆ ಇಡೀ ದೇಶವನ್ನೇ ದಿಗ್ಭ್ರಮೆಗೊಳಿಸಿದೆ. ಈ ಹೀನ ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಭಾರತದ ಮೂಲೆ ಮೂಲೆಯಲ್ಲೂ ಆಕ್ರೋಶ ವ್ಯಕ್ತವಾಗಿದೆ.
ಕಾಮುಕರಿಗೆ ಮರಣದಂಡನೆ ಆಗುವವರೆಗೂ ಅತ್ಯಾಚಾರ ಪ್ರಕರಣಗಳು ನಿಲ್ಲುವುದಿಲ್ಲ ಎಂಬ ಕೂಗು ಎಲ್ಲೆಲ್ಲೂ ಕೇಳಿಬರುತ್ತಿದೆ. ಇದೀಗ ಟಾಲಿವುಡ್ ನಟ ಮಹೇಶ್ ಬಾಬು ಕೂಡ ಇದನ್ನೇ ಹೇಳಿದ್ದಾರೆ.
ಎಲ್ಲರನ್ನೂ ಬೆಚ್ಚಿಬೀಳಿಸಿರುವ ಪಶು ವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣದ ಕುರಿತು ನಟ ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ. ''ದಿನಗಳು ಕಳೆದರೂ, ತಿಂಗಳುಗಳು ಉರುಳಿದರೂ, ವರ್ಷಗಳು ಕಳೆದರೂ.. ಯಾವುದೂ ಬದಲಾಗಿಲ್ಲ. ಸಮಾಜವಾಗಿ ನಾವೆಲ್ಲರೂ ಸೋತಿದ್ದೇವೆ. ನಮಗೆ ಕಟ್ಟುನಿಟ್ಟಿನ, ಕಠಿಣ ಕಾನೂನು ಬೇಕಾಗಿದೆ. ಇಂತಹ ಹೇಯ ಕೃತ್ಯಗಳಿಗೆ ಮರಣದಂಡನೆ ಅಂತಹ ಶಿಕ್ಷೆ ನೀಡಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಾನು ಮನವಿ ಮಾಡುತ್ತಿದ್ದೇನೆ'' ಎಂದು ಟ್ವೀಟಿಸಿದ್ದಾರೆ ಮಹೇಶ್ ಬಾಬು.

''ಹುಡುಗಿಯ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಸಂತಾಪ ಅರ್ಪಿಸುತ್ತೇನೆ. ಅವರ ನೋವನ್ನು ಯಾರಿಂದಲೂ ಮಾರ್ಪಡಿಸಲು ಸಾಧ್ಯವಿಲ್ಲ. ನಮ್ಮ ದೇಶದ ಎಲ್ಲಾ ಮಹಿಳೆಯರಿಗೆ ಮತ್ತು ಪುಟ್ಟ ಹುಡುಗಿಯರಿಗೆ ನ್ಯಾಯ ಕೊಡಿಸಲು ಒಂದಾಗೋಣ. ಭಾರತವನ್ನ ಸುರಕ್ಷಿತವಾಗಿಡೋಣ'' ಎಂದಿದ್ದಾರೆ ಮಹೇಶ್ ಬಾಬು.
ಮಹೇಶ್ ಬಾಬು ಮಾತ್ರ ಅಲ್ಲ.. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಎಂದು ನಟ ಜಗ್ಗೇಶ್, ಅಕ್ಷಯ್ ಕುಮಾರ್, ಚಿರಂಜೀವಿ ಸೇರಿದಂತೆ ಹಲವು ನಟ-ನಟಿಯರು ಕೂಡ ಒತ್ತಾಯಿಸಿದ್ದಾರೆ.


Click it and Unblock the Notifications











