ಸಲಾರ್ ಚಿತ್ರದಲ್ಲಿ ನಟಿಸುತ್ತಿದ್ದೇನೆ; ಈಗಿನ ನಟರು ಕೈಮುಗಿದು ನನ್ನನ್ನು ದೂರ ಇಟ್ಟುಬಿಡ್ತಾರೆ ಎಂದ ದೇವರಾಜ್!

ದೇವರಾಜ್ ದಕ್ಷಿಣ ಭಾರತ ಚಿತ್ರರಂಗ ಕಂಡ ಓರ್ವ ಅದ್ಭುತ ಕಲಾವಿದ. 1986ರಲ್ಲಿ ಬಿಡುಗಡೆಗೊಂಡ 27 ಮಾವಳ್ಳಿ ಸರ್ಕಲ್ ಎಂಬ ಕನ್ನಡ ಚಿತ್ರದ ಮೂಲಕ ನಟನೆ ಆರಂಭಿಸಿದ ದೇವರಾಜ್ ಬಳಿಕ ಅನೇಕ ಕನ್ನಡ ಚಿತ್ರಗಳಲ್ಲಿ ನಾಯಕ ನಟನಾಗಿ ಮಿಂಚಿ ಬೇಡಿಕೆಯ ನಟ ಎನಿಸಿಕೊಂಡರು. ಬಳಿಕ ತೆಲುಗು ಹಾಗೂ ತಮಿಳು ಚಿತ್ರರಂಗಗಳಿಗೂ ಎಂಟ್ರಿ ಕೊಟ್ಟು ಅಲ್ಲಿನ ಸ್ಟಾರ್ ನಟರ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ ದೇವರಾಜ್ ಅಲ್ಲಿನ ಸಿನಿ ರಸಿಕರಿಗೂ ಸಹ ಪರಿಚಿತರು.
ಹೀಗೆ ಸೌತ್‌ನಲ್ಲಿ ಆಗಿನ ಕಾಲಕ್ಕೆ ಹೆಸರು ಮಾಡಿದ ದೇವರಾಜ್ ವಯಸ್ಸಾದ ಬಳಿಕ ಲೀಡ್ ರೋಲ್ ಮಾಡುವುದರಿಂದ ಹಿಂದೆ ಸರಿದು ಪೋಷಕ ಪಾತ್ರಗಳಲ್ಲಿ ಬಣ್ಣ ಹಚ್ಚಲು ಶುರು ಮಾಡಿದರು. ಲೀಡ್ ಪಾತ್ರಗಳಲ್ಲಿಯೇ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದ ದೇವರಾಜ್ ಪೋಷಕ ನಟನಾಗಿಯೂ ಗೆಲುವು ಕಂಡರು.
ಹೀಗೆ ಆಗಿನಿಂದ ಇಂದಿನವರೆಗೂ ದೇವರಾಜ್ ಅದೇ ಕ್ರೇಜ್ ಹಾಗೂ ಬೇಡಿಕೆಯನ್ನು ಹೊಂದಿದ್ದು, ತೆಲುಗಿನಲ್ಲಿ 2018ರಲ್ಲಿ ಬಿಡುಗಡೆಗೊಂಡಿದ್ದ ಮಹೇಶ್ ಬಾಬು ನಟನೆಯ ಸೂಪರ್ ಹಿಟ್ ಭರತ್ ಅನೆ ನೇನು ಚಿತ್ರದಲ್ಲಿ ಅಂತಿಮವಾಗಿ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಬಳಿಕ ಯಾವುದೇ ತೆಲುಗು ಸಿನಿಮಾದಲ್ಲಿಯೂ ಕಾಣಿಸಿಕೊಳ್ಳದಿದ್ದ ದೇವರಾಜ್ ಇದೀಗ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಸಲಾರ್‌ನಲ್ಲಿ ನಟಿಸುತ್ತಿದ್ದೇನೆ ಎಂಬ ಎಕ್ಸ್‌ಕ್ಲೂಸಿವ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಹೌದು, ಸುಮನ್ ಟಿವಿ ತೆಲುಗು ಎಂಬ ಯಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ದೇವರಾಜ್ ಸಲಾರ್ ಚಿತ್ರದಲ್ಲಿ ನಟಿಸುತ್ತಿರುವ ಮಾಹಿತಿಯನ್ನು ಬಿಟ್ಟುಕೊಟ್ಟಿದ್ದಾರೆ. ಮೊದಲಿಗೆ ಕನ್ನಡ ಚಿತ್ರರಂಗದ ಏಳಿಗೆಯ ಕುರಿತು ಹೆಮ್ಮೆಯ ಮಾತುಗಳನ್ನಾಡಿದ ದೇವರಾಜ್ ಹಲವರು ಕನ್ನಡ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗುವ ಯಶಸ್ವಿ ಕೆಲಸ ಮಾಡಿದ್ದಾರೆ. ಈ ಏಳಿಗೆಯನ್ನು ಉಳಿಸಿಕೊಂಡು ಹೋಗಬೇಕಾದದ್ದು ಎಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ ಎಂದರು. ಅಲ್ಲದೇ ಈ ಯಶಸ್ಸಿಗೆ ಕಾರಣರಾದವರಿಗೆ ಧನ್ಯವಾದ ತಿಳಿಸಿದರು.
ವಿಶೇಷವಾಗಿ ಕಾಂತಾರ ಸಿನಿಮಾವನ್ನು ಹೊಗಳಿದ ನಿರೂಪಕ ನಿಮ್ಮನ್ನು ಕಾಂತಾರ ರೀತಿಯ ಸಿನಿಮಾದಲ್ಲಿ ನೋಡಲು ತೆಲುಗು ಸಿನಿ ರಸಿಕರು ಇಷ್ಟಪಡುತ್ತಾರೆ, ಮತ್ತೆ ತೆಲುಗು ಚಿತ್ರದಲ್ಲಿ ನಟಿಸೋದು ಯಾವಾಗ ಎಂದು ಪ್ರಶ್ನೆ ಹಾಕಿದರು. ಇದಕ್ಕೆ ಉತ್ತರಿಸಿದ ದೇವರಾಜ್ "ಒಂದು ಮಾಡ್ತಾ ಇದ್ದೀನಿ. ಸಲಾರ್ ಚಿತ್ರದಲ್ಲಿ ನಟಿಸುತ್ತಾ ಇದ್ದೇನೆ" ಎಂದು ನಗುತ್ತಾ ಹೇಳಿಕೊಂಡರು. ಬಳಿಕ ನಿರೂಪಕ ಹೇಗಿದೆ ಸಲಾರ್, ಪ್ರಭಾಸ್ ಪಾತ್ರ ಹೇಗಿದೆ ಎಂದು ಪ್ರಶ್ನೆ ಕೇಳಿದರು.
ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೇವರಾಜ್ "ಅದರ ಬಗ್ಗೆ ಹೇಳುವ ಹಕ್ಕು ನನಗಿಲ್ಲ. ಆದರೆ ಮೊದಲ ಭಾಗದಲ್ಲಿ ನನ್ನ ಪಾತ್ರ ಹೆಚ್ಚೇನೂ ಇರುವುದಿಲ್ಲ, ಎರಡನೇ ಭಾಗದಲ್ಲಿ ಹೆಚ್ಚು ಇರಲಿದೆ. ಜಗಪತಿ ಬಾಬು ಅವರು, ಪ್ರಭಾಸ್ ಅವರು ಹಾಗೂ ಪೃಥ್ವಿರಾಜ್ ಸುಕುಮಾರನ್ ಅವರ ಜತೆ ನಟಿಸಿದ್ದೇನೆ" ಎಂದು ಹೇಳಿಕೆ ನೀಡಿದರು.
ಈಗಿನ ತೆಲುಗು ನಟರಾದ ಪ್ರಭಾಸ್, ಅಲ್ಲು ಅರ್ಜುನ್, ಮಹೇಶ್ ಬಾಬು, ಜೂನಿಯರ್ ಎನ್‌ಟಿಆರ್ ಯಾರೇ ಆಗಿರಬಹುದು, ತೆಲುಗು ಚಿತ್ರಗಳಲ್ಲಿನ ನಿಮ್ಮ ನಟನೆ ನೋಡಿ ಬೆಳೆದವರೇ. ಹೀಗಿರುವಾಗ ಪ್ರಭಾಸ್ ಅವರು ನಿಮ್ಮನ್ನು ನೋಡಿದ ಕೂಡಲೇ ಏನು ಮಾತನಾಡಿದರು ನಿಮ್ಮನ್ನು ನೋಡಿದ ಕೂಡಲೇ ಎಂದು ಪ್ರಶ್ನೆಯನ್ನು ಕೇಳಿದರು. ಇದಕ್ಕುತ್ತರಿಸಿದ ದೇವರಾಜ್ "ತುಂಬಾ ಜನ ಈ ಪ್ರಶ್ನೆಯನ್ನು ಕೇಳುತ್ತಾರೆ. ಆಗಿನ ನಟರು ಹೇಗಿದ್ರು, ಈಗಿನ ನಟರು ಹೇಗಿದ್ದಾರೆ, ಏನು ವ್ಯತ್ಯಾಸ ಎಂದು ಪ್ರಶ್ನೆಯನ್ನು ಕೇಳುತ್ತಲೇ ಇರುತ್ತಾರೆ. ಆಗಿನ ನಟರ ವಯಸ್ಸು ಹಾಗೂ ನನ್ನ ವಯಸ್ಸು ಸಮಾನವಾಗಿದ್ದ ಕಾರಣ ಸ್ನೇಹ ಹೆಚ್ಚಿತ್ತು, ಸುಲಭವಾಗಿ ಮಾತನಾಡಬಹುದಿತ್ತು. ಆದರೆ ಈಗಿನ ನಟರಿಗಿಂತ ನಮ್ಮ ವಯಸ್ಸು ಹೆಚ್ಚು. ಹೀಗಾಗಿ ಈಗಿನವರು ನಮಸ್ಕಾರ ಎಂದು ನಮ್ಮನ್ನು ದೂರ ಇಟ್ಟುಬಿಡ್ತಾರೆ. ನಮಸ್ಕಾರ ಸರ್, ಚೆನ್ನಾಗಿದ್ದೀರ ಸರ್.. ಅಷ್ಟೇ" ಎಂದು ನಗುತ್ತಾ ಹೇಳಿದರು.
ಮಾತು ಮುಂದುವರಿಸಿದ ದೇವರಾಜ್ "ಅವರಿಗೂ ಇರುತ್ತೆ ಅಲ್ವ. ನಮ್ಮ ವಯಸ್ಸು ಹೆಚ್ಚು. ಸೀನಿಯರ್‌ಗಳಿಗೆ ಮರ್ಯಾದೆ ಕೊಡಬೇಕು, ಅವರ ಅನುಭವಕ್ಕೆ ಮರ್ಯಾದೆ ಕೊಡಬೇಕು ಅಂತ. ಹಾಗಾಗಿ ಊಟ ಆಯಿತಾ ಸರ್, ಯಾವಾಗ ಬಂದ್ರಿ ಸರ್ ಅಂತ ಕಡಿಮೆ ಮಾತನಾಡ್ತಾರೆ. ಪ್ರಭಾಸ್ ಜತೆ ಕೆಲಸ ಮಾಡುವುದು ಕಂಫರ್ಟ್, ಚೆನ್ನಾಗಿ ನಡೆದುಕೊಳ್ತಾರೆ" ಎಂದು ಹೇಳಿಕೊಂಡರು.


Click it and Unblock the Notifications











