ಅದೇ ಬೇಕು,ಇದೇ ಬೇಕು, ಏನು ಕೇಳಲ್ಲ. ಅವಕಾಶ ಸಿಕ್ಕರೆ ಸಾಕು ನಾನು ಎಲ್ಲದಕ್ಕೂ ರೆಡಿಯೆಂದ ಮಲಯಾಳಿ ಮಲ್ಲು..!
ಬದುಕೇ ಹಾಗೆ... ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ಇದಕ್ಕೆ 'ಶ್ರೀ ಲಕ್ಷ್ಮೀ ಸತೀಶ್' ಅತ್ಯುತ್ತಮ ಉದಾಹರಣೆ.
ಹೌದು. ಅದೆಲ್ಲೋ ಕೇರಳದ ಕಾಡು ಮೇಡಿನಲ್ಲಿ, ತನ್ನಷ್ಟಕ್ಕೆ ತಾನು ಕ್ಯಾಮರಾಗಳಿಗೆ ಫೋಸ್ ಕೊಡುತ್ತಾ ಹಾಯಾಗಿದ್ದ ' ಶ್ರೀ ಲಕ್ಷ್ಮೀ ಸತೀಶ್' ನಸೀಬು ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಬದಲಾಗಿತ್ತು. 'ರಾಮ್ ಗೋಪಾಲ್ ವರ್ಮಾ' ಕಣ್ಣು ಈಕೆಯ ಮೇಲೆ ಬಿದ್ದು, ನಾಯಕಿಯಾಗುವ ಸುವರ್ಣ ಅವಕಾಶವೂ ಒಲಿದು ಬಂತು.

ಆ ನಂತರ ಕೇವಲ ಹೆಸ್ರಷ್ಟೇ ಅಲ್ಲ ರೂಪ ಕೂಡ ಬದಲಿಸಿಕೊಂಡ 'ಶ್ರೀ ಲಕ್ಷ್ಮೀ ಸತೀಶ್' ಅಲಿಯಾಸ್ 'ಆರಾಧ್ಯ ದೇವಿ', ಆ ನಂತರ ತಮ್ಮ ಸೌಂದರ್ಯದಿಂದ ಎಲ್ಲರ ಕಣ್ಮನ ಸೆಳೆಯತೊಡಗಿದರು. ತಮ್ಮ ಮೈಮಾಟದಿಂದ ಪಡ್ಡೆ ಹೈಕ್ಳಿಗೆ ಹುಚ್ಚು ಹಿಡಿಸಿದರು.
ಸದ್ಯ ರಾಮ್ ಗೋಪಾಲ್ ವರ್ಮಾ ತೋಟದಲ್ಲಿ ಅರಳಿದ ಈ ಹೂವನ್ನು ಅನೇಕರು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ವರ್ಮಾ ಕೂಡ ಆಗಾಗ ತಮ್ಮ ಈ ಹೊಸ 'ಅನ್ವೇಷಣೆ'ಯ ನವನವೀನ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆರಾಧ್ಯ ದೇವಿಗೆಂದೇ ಮಾಡಲಾದ ತಮ್ಮ ಸ್ಯಾರಿ ಚಿತ್ರದ ತುಣುಕುಗಳನ್ನು ಹಂಚಿಕೊಳ್ಳುವ ಮೂಲಕ ಸಿನಿರಸಿಕರನ್ನು ಕೆಣಕುತ್ತಿದ್ದಾರೆ.

ಹೀಗಿರುವಾಗ ಅದೇನಾಯ್ತೋ ಏನೋ, ಮೊನ್ನೆ ಆರಾಧ್ಯ ದೇವಿ ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಇಷ್ಟ ಪಡುವವರಿಗೆ ಕಹಿ ಸುದ್ದಿಯನ್ನು ನೀಡಿದ್ದರು. ನಾನು ಇನ್ಮುಂದೆ ಯಾವುದೇ ಕಾರಣಕ್ಕೂ ನನ್ನ ಅಂಗಾಗ ಪ್ರದರ್ಶನವನ್ನು ಮಾಡುವುದಿಲ್ಲ ಎಂದು ಶಪಥ ಮಾಡಿದರು. ಅಭಿನಯಕ್ಕೆ ಪ್ರಾಮುಖ್ಯತೆ ಇರುವ ಪಾತ್ರವನ್ನು ಮಾತ್ರ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಈಗ ಕೇವಲ ಒಂದೇ ವಾರದಲ್ಲಿ ಆರಾಧ್ಯ ದೇವಿ ತಮ್ಮ ಮನಸನ್ನು ಬದಲಿಸಿದ್ದಾರೆ. ಅವಕಾಶ ಸಿಕ್ಕರೆ ನಾನು ಯಾವ ಪಾತ್ರಕ್ಕಾದರೂ ರೆಡಿಯೆಂದಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಆರಾಧ್ಯ ದೇವಿ, ಗ್ಲಾಮರ್ ಪಾತ್ರಗಳನ್ನು ನಾನು ಮಾಡುವುದಿಲ್ಲ ಎಂದು ಈ ಹಿಂದೆ ಹೇಳಿದ್ದೆ, ಆದರೆ ನಾನು ನನ್ನ ಇಪ್ಪತ್ತೇರಡನೇ ವಯಸ್ಸಿನಲ್ಲಿ ತೆಗೆದುಕೊಂಡ ಈ ನಿರ್ಧಾರ ಸರಿ-ತಪ್ಪು ಎಂದು ಜಡ್ಜ್ ಮಾಡಲು ಹೋಗುವುದಿಲ್ಲ ಯಾಕೆಂದರೆ ಜೀವನದ ಅನುಭವ ಹೆಚ್ಚಾದಂತೆ ಸಮಯ ಬದಲಾದಂತೆ ನಾವು ನೋಡುವ ದೃಷ್ಟಿಕೋನ ಕೂಡ ಬದಲಾಗುತ್ತೆ ಎಂದಿರುವ ಆರಾಧ್ಯ ನಾನು ಈ ಹಿಂದೆ ನೀಡಿದ್ದ ಹೇಳಿಕೆಯ ಬಗ್ಗೆ ನನಗೆ ಯಾವುದೇ ಪಶ್ಚಾತಾಪ ಇಲ್ಲ ಎಂದು ಹೇಳಿದ್ದಾರೆ. ನನ್ನಲ್ಲಿದ್ದ ಭಾವನೆಗಳಿಗೆ ಆಗ ನಾನು ಕೈಗನ್ನಡಿ ಹಿಡಿದಿದ್ದೆ ಅಷ್ಟೇ ಆದರೆ ಈಗ ಜನರನ್ನು ಮತ್ತು ಪಾತ್ರಗಳನ್ನು ನಾನು ನೋಡುವ ರೀತಿ ಬದಲಾಗಿದೆ ಎಂದು ಹೇಳಿದ್ದಾರೆ. ಮುಂದುವರೆದು ಗ್ಲಾಮರ್ ಅಥವಾ ಡಿ ಗ್ಲಾಮರ್, ಅವಕಾಶ ಸಿಕ್ಕರೆ ಪಾತ್ರ ಯಾವುದೇ ಇರಲಿ ಆ ಪಾತ್ರವನ್ನು ನಾನು ನಿರ್ವಹಿಸುತ್ತೇನೆ ಎಂದು ಕೂಡ ಆರಾಧ್ಯ ದೇವಿ ಹೇಳಿದ್ದಾರೆ.

ಅಂದ್ಹಾಗೇ ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಆರಾಧ್ಯ ದೇವಿ ಅಭಿನಯಿಸಿರುವ ಸ್ಯಾರಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಚಿತ್ರದ ಟೀಸರ್ ಮತ್ತು ಹಾಡು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದು ಸುತ್ತು ಸದ್ದು ಮಾಡಿವೆ. ಆದರೆ ಅದ್ಯಾಕೋ ಚಿತ್ರವನ್ನು ಬಿಡುಗಡೆ ಮಾಡುವ ಮನಸನ್ನು ರಾಮ್ ಗೋಪಾಲ್ ವರ್ಮಾ ಮಾಡುತ್ತಿಲ್ಲ. ಉಳಿದಂತೆ ಈ ಚಿತ್ರ ಹೊರತು ಪಡಿಸಿದರೆ ಆರಾಧ್ಯ ಕೈಯಲ್ಲಿ ಬೇರೆ ಚಿತ್ರ ಇಲ್ಲ. ಹೀಗಾಗಿಯೇ ಅವಕಾಶಗಳ ನಿರೀಕ್ಷೆಯಲ್ಲಿರುವ ಆರಾಧ್ಯ ಸಾಮಾಜಿಕ ಜಾಲತಾಣದ ಮೂಲಕ ನಾನು ಯಾವ ಪಾತ್ರವಾದರು ಮಾಡಲು ಸಿದ್ಧ ಎಂದು ಹೇಳಿದ್ದಾರೆ. ಅವಕಾಶ ಸಿಗುತ್ತೆ ಎನ್ನುವ ಭರವಸೆಯಲ್ಲಿದ್ದಾರೆ.


Click it and Unblock the Notifications











