ಚಿರಂಜೀವಿಗೆ ಕ್ಯಾನ್ಸರ್? ಟ್ವೀಟ್ ಮಾಡಿ ಸ್ವತಃ ಸ್ಪಷ್ಟನೆ ನೀಡಿದ ಮೆಗಾಸ್ಟಾರ್!
ತೆಲುಗಿನ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗಷ್ಟೆ ಸ್ಟಾರ್ ಕ್ಯಾನ್ಸರ್ ಸೆಂಟರ್ ಉದ್ಘಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಸೆಂಟರ್ ಅನ್ನು ಉದ್ಘಾಟಿಸಿ ಮಾತಾನಾಡಿದ ಚಿರಂಜೀವಿ ಅವರ ಭಾಷಣ ಕೇಳಿದ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು.
ಇನ್ನು ಈ ಕಾರ್ಯಕ್ರಮದಲ್ಲಿ ಚಿರಂಜೀವಿ ತಮಗೆ ಊತವೊಂದು ಕಾಣಿಸಿಕೊಂಡಿತ್ತು ಹಾಗೂ ಅದನ್ನು ತಾವು ತೆರವುಗೊಳಿಸಿದ ಕಾರಣ ಕ್ಯಾನ್ಸರ್ ಸಂಭವಿಸಲಿಲ್ಲ ಎಂದು ಹೇಳಿಕೆ ನೀಡಿ ಕ್ಯಾನ್ಸರ್ ಸಂಬಂಧಿತ ಅಂಶಗಳೇನಾದರೂ ಕಂಡು ಬಂದರೆ ತಪ್ಪದೇ ಚಿಕಿತ್ಸೆ ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡರು.

ಹೀಗೆ ಚಿರಂಜೀವಿ ಹೇಳಿದ ಮಾತುಗಳನ್ನು ಕೇಳಿದ ಅನೇಕರು ಆತಂಕಕ್ಕೊಳಗಾದರು. ಚಿರಂಜೀವಿ ಅವರಿಗೆ ಏನಾಗಿತ್ತು ಎಂದು ಬೇಸರಕ್ಕೊಳಗಾದರು. ಇದೇ ಸಮಯಕ್ಕೆ ತೆಲುಗು ಮಾಧ್ಯಮಗಳಲ್ಲಿ ಬಂದ ಹಲವು ಸುದ್ದಿಗಳು ಈ ಆತಂಕವನ್ನು ಹೆಚ್ಚಿಸಿದವು.
ಚಿರಂಜೀವಿ ಅವರಿಗೆ ಕ್ಯಾನ್ಸರ್ ಊತ ಉಂಟಾಗಿತ್ತು ಹಾಗೂ ಅವರು ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆದು ಸರಿಪಡಿಸಿಕೊಂಡರು ಎಂದೆಲ್ಲಾ ಸುದ್ದಿಗಳನ್ನು ಪ್ರಕಟಿಸಿದವು. ಈ ಸುದ್ದಿಗಳನ್ನು ಓದಿದ ಮೇಲಂತೂ ಚಿರಂಜೀವಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಕ್ಯಾನ್ಸರ್ ಇದೆ ಎಂದೆಲ್ಲಾ ಆತಂಕ ವ್ಯಕ್ತಪಡಿಸಿದರು
ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುವ ಮೂಲಕ ಚಿರಂಜೀವಿ ಅವರನ್ನು ಪ್ರಶ್ನಿಸಿದರು. ಹೀಗೆ ಈ ಕುರಿತಾದ ಸುದ್ದಿಗಳು ಹೆಚ್ಚಾಗಿ ಹರಿದಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಚಿರಂಜೀವಿ ಟ್ವೀಟ್ ಮಾಡುವ ಮೂಲಕ ಈ ಎಲ್ಲಾ ಸುದ್ದಿಗಳಿಗೆ ಉತ್ತರ ನೀಡಿದ್ದಾರೆ.
"ಸ್ವಲ್ಪ ಸಮಯದ ಹಿಂದೆ ನಾನು ಕ್ಯಾನ್ಸರ್ ಕೇಂದ್ರವನ್ನು ಉದ್ಘಾಟಿಸುವಾಗ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆಯ ಬಗ್ಗೆ ಮಾತನಾಡಿದ್ದೆ. ನಿಯಮಿತವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರೆ ಕ್ಯಾನ್ಸರ್ ಬರದಂತೆ ತಡೆಯಬಹುದು ಎಂದು ಹೇಳಿದ್ದೆ. ನಾನು ಅಲರ್ಟ್ ಆಗಿದ್ದೆ ಮತ್ತು ಕೊಲೊನ್ ಸ್ಕೋಪ್ ಪರೀಕ್ಷೆಯನ್ನು ತೆಗೆದುಕೊಂಡೆ. ಕ್ಯಾನ್ಸರ್ ರಹಿತ ಊತವನ್ನು ಪತ್ತೆ ಹಚ್ಚಿ ತೆಗೆಯಲಾಗಿದೆ ಎಂದು ಹೇಳಿದ್ದೆ. 'ಮೊದಲು ಪರೀಕ್ಷೆ ಮಾಡದೇ ಇದ್ದಿದ್ದರೆ ಕ್ಯಾನ್ಸರ್ ಆಗಿಬಿಡುತ್ತಿತ್ತು' ಎಂದು ಮಾತ್ರ ಹೇಳಿದ್ದೆ. ಅದಕ್ಕೇ ಎಲ್ಲರೂ ಮುಂಜಾಗ್ರತೆ ವಹಿಸಿ ವೈದ್ಯಕೀಯ ಪರೀಕ್ಷೆ/ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು' ಅಂತ ಮಾತ್ರ ಹೇಳಿದ್ದೆ." ಎಂದು ಬರೆದುಕೊಂಡಿದ್ದಾರೆ.
ಮುಂದುವರೆದು "ಆದರೆ ಕೆಲವು ಮಾಧ್ಯಮ ಸಂಸ್ಥೆಗಳು ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ 'ನನಗೆ ಕ್ಯಾನ್ಸರ್ ಬಂದಿದೆ' ಮತ್ತು 'ಚಿಕಿತ್ಸೆಯಿಂದ ನಾನು ಬದುಕುಳಿದೆ' ಎಂದು ಸುದ್ದಿ ಪ್ರಕಟಿಸಿದವು. ಇದರಿಂದ ಅನಗತ್ಯ ಗೊಂದಲ ಉಂಟಾಗಿದೆ. ಅನೇಕ ಹಿತೈಷಿಗಳು ನನ್ನ ಆರೋಗ್ಯದ ಬಗ್ಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಅವರೆಲ್ಲರಿಗೂ ಈ ಸ್ಪಷ್ಟನೆ. ಅಂತಹ ಪತ್ರಕರ್ತರಿಗೂ ಒಂದು ಮನವಿ. ವಿಷಯ ಅರ್ಥವಾಗದೆ ಅಸಂಬದ್ಧವಾಗಿ ಬರೆಯಬೇಡಿ. ಈ ಕಾರಣದಿಂದಾಗಿ, ಅನೇಕ ಜನರು ಭಯಭೀತರಾಗಿದ್ದಾರೆ ಮತ್ತು ನೋವಿಗೊಳಗಾಗಿದ್ದಾರೆ" ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ತಮಗೆ ಕ್ಯಾನ್ಸರಸ್ ಅಲ್ಲದ ಊತ ಬಂದಿತ್ತು, ಅದನ್ನು ತೆಗೆಸಿದೆ, ಅದನ್ನು ಹಾಗೆಯೇ ಬಿಟ್ಟಿದ್ದರೆ ಅದು ಕ್ಯಾನ್ಸರ್‌ಗೆ ತಿರುಗುತ್ತಿತ್ತು ಎಂದು ಮಾತ್ರ ಹೇಳಿದ್ದೆ, ಅದು ಕ್ಯಾನ್ಸರ್ ಅಲ್ಲ ಎಂದು ತಿಳಿಸಿದ್ದಾರೆ.


Click it and Unblock the Notifications











