'ಉಗ್ರಂ' ರೀಮೆಕ್ 'ಸಲಾರ್' ಅಂತ ಗೊತ್ತಿರ್ಲಿಲ್ಲ; ಯಾಕ್ ಹಿಂಗ್ ಮಾಡಿದ್ರಿ ಅಂತ ನೀಲ್ ಬಳಿ ಕೇಳಿದ್ದೆ
ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ದೀಪಾವಳಿ ಸಂಭ್ರಮದಲ್ಲಿ ತೆರೆಮೇಲೆ ರೋರಿಂಗ್ ಸ್ಟಾರ್ ಅಬ್ಬರಿಸಲಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು. ಸದ್ಯ ಚಿತ್ರದ ಪ್ರಮೋಷನ್‌ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಶ್ರೀಮುರಳಿಗೆ 'ಉಗ್ರಂ' ರೀತಿಯ ಹಿಟ್ ಕೊಟ್ಟಿದ್ದು ಪ್ರಶಾಂತ್ ನೀಲ್. ಮುಂದೆ 'KGF' ಸರಣಿ ಚಿತ್ರಗಳನ್ನು ಮಾಡಿ ಗೆದ್ದರು. ಬಳಿಕ ಪ್ರಭಾಸ್ ಹೀರೊ ಆಗಿ 'ಸಲಾರ್' ಚಿತ್ರ ತೆರೆಗೆ ತಂದಿದ್ದರು. ಒಂದರ್ಥದಲ್ಲಿ 'ಉಗ್ರಂ' ರೀಮೆಕ್ 'ಸಲಾರ್'. ಮುಗೋರ್‌ನಲ್ಲಿ ಹೇಳಿದ್ದ ಕಥೆಯನ್ನು ಖಾನ್‌ಸರ್ ಪ್ರಪಂಚದಲ್ಲಿ ಬಹಳ ದೊಡ್ಡಮಟ್ಟದಲ್ಲಿ ಹೇಳಿದ್ದಾರೆ. ಅದೇ ಕಥೆಯನ್ನು ಎರಡು ಭಾಗಗಳಾಗಿ ಹೇಳುವ ಪ್ರಯತ್ನ ನಡೀತಿದೆ.

'ಸಲಾರ್' ಮೊದಲ ಭಾಗ ಸೂಪರ್ ಹಿಟ್ ಆಗಿದೆ. 2ನೇ ಭಾಗದ ಚಿತ್ರೀಕರಣ ಆರಂಭವಾಗುತ್ತಿದೆ. 'ಉಗ್ರಂ' ರೀಮೆಕ್ 'ಸಲಾರ್' ಎನ್ನುವ ಮಾತುಗಳು ಬಹಳ ಹಿಂದೆಯೇ ಕೇಳಿಬಂದಿತ್ತು. ಆದರೆ ಚಿತ್ರತಂಡ ಅದನ್ನು ಆರಂಭದಲ್ಲಿ ರಿವೀಲ್ ಮಾಡಿರಲಿಲ್ಲ. ರವಿ ಬಸ್ರೂರು ಹೇಳಿಕೆಯಿಂದ ಅದು ಖಚಿತವಾಗಿತ್ತು. ಆದರೂ ಟ್ರೈಲರ್ ರಿಲೀಸ್‌ವರೆಗೂ ಕುತೂಹಲ ಮೂಡಿತ್ತು. ನನಗು ಆರಂಭದಲ್ಲಿ 'ಉಗ್ರಂ' ರೀಮೆಕ್ 'ಸಲಾರ್' ಎನ್ನುವುದು ಗೊತ್ತಿರಲಿಲ್ಲ ಎಂದು ಶ್ರೀಮುರಳಿ ಇದೀಗ ಹೇಳಿದ್ದಾರೆ.
'ಬಘೀರ' ಚಿತ್ರದ ಪ್ರಮೋಷನ್‌ಗಾಗಿ ತೆಲುಗು ಸಂದರ್ಶನಗಳಲ್ಲಿ ಶ್ರೀಮುರಳಿ ಭಾಗಿ ಆಗುತ್ತಿದ್ದಾರೆ. ಈ ವೇಳೆ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ. 'ಉಗ್ರಂ' ನನ್ನ ಜೀವನದ ಬಹಳ ಮಹತ್ವದ ಸಿನಿಮಾ. ಅಲ್ಲಿಯವರೆಗೂ ನನಗೆ ಲವರ್ ಬಾಯ್ ಪಾತ್ರಗಳು ಸಿಗುತ್ತಿತ್ತು. 'ಉಗ್ರಂ' ಬಳಿಕ ಆಕ್ಷನ್ ಇಮೇಜ್ ಬಂತು. ಅದಕ್ಕಾಗಿ ಪ್ರಶಾಂತ್ ನೀಲ್‌ಗೆ ನನ್ನ ಧನ್ಯವಾದ ಎಂದಿದ್ದಾರೆ.
"ನಿಜ ಹೇಳಬೇಕು ಅಂದ್ರೆ 'ಉಗ್ರಂ' ಸಮಯದಲ್ಲೇ ನೀಲ್ ಈ ಕಥೆಯನ್ನು ಬಹಳ ದೊಡ್ಡದಾಗಿ ಊಹಿಸಿಕೊಂಡಿದ್ದರು. ಆದರೆ ಆಗ ನನ್ನ ಚಿತ್ರಗಳು ಅಷ್ಟಾಗಿ ಸದ್ದು ಮಾಡುತ್ತಿರಲಿಲ್ಲ. ಮೊದಲ ಚಿತ್ರದ 'ಚಂದ್ರ ಚಕೋರಿ' ಎರಡು ವರ್ಷ ಓಡಿತ್ತು. 'ಕಂಠಿ' ಚಿತ್ರ ಕೂಡ ಹಿಟ್ ಆಗಿತ್ತು. ಬಳಿಕ ನನ್ನ ಸಿನಿಮಾಗಳು ದೊಡ್ಡದಾಗಿ ಸದ್ದು ಮಾಡಲಿಲ್ಲ. 'ಉಗ್ರಂ' ಗೇಮ್ ಚೇಂಜರ್ ಆಗಿತ್ತು" ಎಂದು ಶ್ರೀಮುರಳಿ ನೆನಪಿಸಿಕೊಂಡಿದ್ದಾರೆ.
'ಉಗ್ರಂ' ರೀಮೇಕ್ 'ಸಲಾರ್' ಎನ್ನುವುದು ನನಗೆ ಆರಂಭದಲ್ಲಿ ಗೊತ್ತಿರಲಿಲ್ಲ. ಗೊತ್ತಾದಾಗ ಅರೇ, ಯಾಕ್ ಹೀಗ್ ಮಾಡ್ಬಿಟ್ರಿ, ನನ್ನ ಸಿನ್ಮಾ ಎಂದು ಮಗುವಿನ ರೀತಿ ಈರ್ಷೆ ವ್ಯಕ್ತಪಡಿಸಿದ್ದೆ. ಬಳಿಕ ಇಲ್ಲ, ಅದೇ ಕಥೆಯನ್ನು ಬಹಳ ದೊಡ್ಡದಾಗಿ ಹೇಳುತ್ತಿದ್ದಾರೆ ಎಂದು ಜೀರ್ಣಿಸಿಕೊಂಡೆ. ಬಹಳ ದೊಡ್ಡ ಸಿನಿಮಾ ಎಂದು ಗೊತ್ತಾಯಿತು. ನಂತರ ಖುಷಿಯಾಯಿತು. 'ಉಗ್ರಂ' ಬಗ್ಗೆ ಹೇಳಿದಾಗ ಇದು ಆಗುತ್ತಾ ಎಂದುಕೊಂಡಿದ್ದೆ. ಇಲ್ಲ ನಾನು ಇದನ್ನು ಬಹಳ ದೊಡ್ಡದಾಗಿ, ವಿಭಿನ್ನ ಹೇಳ್ತೀನಿ ಎಂದಿದ್ದರು. ಅದು ನಿಜವಾಯಿತು" ಎಂದು ಶ್ರೀಮುರಳಿ ವಿವರಿಸಿದ್ದಾರೆ.
10 ವರ್ಷಗಳ ಹಿಂದೆ ಪ್ರಶಾಂತ್ ನೀಲ್ 'ಉಗ್ರಂ' ಚಿತ್ರವನ್ನು ನಿರ್ಮಿಸಿ ನಟಿಸಿದ್ದರು. ತಮ್ಮ ಮನೆಯನ್ನು ಮಾರಿ ನೀಲ್ ಸಿನಿಮಾ ಕಟ್ಟಿಕೊಟ್ಟಿದ್ದರು. ನಾಲ್ಕೈದು ವರ್ಷ ಚಿತ್ರಕ್ಕಾಗಿ ವ್ಯಯಿಸಿದ್ದರು. ಶ್ರೀಮುರಳಿ ಕೂಡ ನಿರ್ದೇಶಕರಿಗೆ ಶರಣಾಗಿಬಿಟ್ಟಿದ್ದರು. ಸಂಕಷ್ಟದ ನಡುವೆಯೇ ಸಿನಿಮಾ ಬಿಡುಗಡೆ ಆಗಿ ಗೆದ್ದಿತ್ತು. ತಕ್ಕ ಮಟ್ಟಿಗೆ ಗೆಲುವು ಕಂಡಿತ್ತು.
'ಉಗ್ರಂ' ಸಿನಿಮಾ ಬಹಳ ಬೇಗ ಪೈರಸಿ ಆಗಿಬಿಟ್ಟಿತ್ತು. ನನ್ನ ಇಷ್ಟದ ಕಥೆ 'ಉಗ್ರಂ' ಚಿತ್ರವನ್ನು ತುಂಬಿದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ನೋಡಬೇಕು ಎನ್ನುವ ಆಸೆಯಿತ್ತು. ಆದರೆ ಮೊಬೈಲ್, ಲ್ಯಾಪ್‌ಟಾಪ್‌ನಲ್ಲಿ ನೋಡಿದವರೇ ಹೆಚ್ಚು. ಈ ಕಥೆಯನ್ನು ದೊಡ್ಡ ಪರದೆಯಲ್ಲೇ ಎಲ್ಲರಿಗೂ ತೋರಿಸಬೇಕು ಎನ್ನುವ ಕಾರಣಕ್ಕೆ 'ಸಲಾರ್' ಸಿನಿಮಾ ಮಾಡಿದ್ದಾಗಿ ಸ್ವತಃ ಪ್ರಶಾಂತ್ ನೀಲ್ ಹೇಳಿಕೊಂಡಿದ್ದರು.


Click it and Unblock the Notifications











