ಈ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಮದ್ಯಪಾನ ಮಾಡಿ ನಟಿಸಿದ್ದೆ ಎಂದ ನಟ ನಾನಿ!
ನಟ ನಾನಿ ಕಷ್ಟಪಟ್ಟು ಬ್ಯಾಕ್ ಗ್ರೌಂಡ್ ಬೆಂಬಲವಿಲ್ಲದೇ ಸ್ಟಾರ್ ನಟನಾಗಿ ಬೆಳೆದು ನಿಂತಿರುವಂತಹ ಪ್ರತಿಭೆ. ಪದವಿ ವ್ಯಾಸಂಗ ಮಾಡಿದ್ದ ನಾನಿ ಮಣಿರತ್ನಂ ಅವರಿಂದ ಸ್ಪೂರ್ತಿ ಪಡೆದುಕೊಂಡು ಸಿನಿಮಾ ಕಡೆ ಒಲವನ್ನು ಬೆಳೆಸಿಕೊಂಡು ನಿರ್ದೇಶಕನಾಗಬೇಕೆಂದು ಕನಸನ್ನು ಕಂಡಿದ್ದರು. ಬಳಿಕ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ನಾನಿ ಆರ್‌ಜೆಯಾಗಿಯೂ ಕೆಲಸ ಮಾಡಿದರು. ಹೀಗೆ ಹಲವು ಕೆಲಸಗಳನ್ನು ಮಾಡಿಕೊಂಡು ಬಂದ ನಂತರ ನಾನಿ ನಟನಾದರು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ನ್ಯಾಚುರಲ್ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡರು.
ಹೀಗೆ ಕ್ಲಾಪ್ ಡೈರೆಕ್ಟರ್ ಆಗಿ ಇಂಡಸ್ಟ್ರಿಗೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದ ನಾನಿ ಈಗ ಸ್ಟಾರ್ ಆಗಿ ತಮ್ಮ ತೆಲುಗು ಚಿತ್ರಗಳ ಮೂಲಕವೇ ಭಾರತದಾದ್ಯಂತ ಖ್ಯಾತಿಯನ್ನು ಗಳಿಸಿದಂತಹ ನಟ. ಪ್ಯಾನ್ ಇಂಡಿಯಾ ಯುಗ ಆರಂಭವಾದ ಮೇಲೆ ನಾನಿಯೂ ಸಹ ಇದೀಗ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಹಿಟ್ ದ ಸೆಕೆಂಡ್ ಕೇಸ್‌ನಲ್ಲಿ ನಟಿಸಿದ್ದ ನಾನಿ ಈಗ ದಸರಾ ಸಿನಿಮಾದಲ್ಲಿ ನಟಿಸಿ ತಮ್ಮ ರಗಡ್ ಲುಕ್‌ನಿಂದ ನಿರೀಕ್ಷೆ ಹುಟ್ಟುಹಾಕಿದ್ದಾರೆ.

ಚಿತ್ರಕ್ಕೆ ಶ್ರೀಕಾಂತ್ ಒಡೆಲಾ ನಿರ್ದೇಶನವಿದ್ದು, ನಾಯಕಿಯಾಗಿ ಕೀರ್ತಿ ಸುರೇಶ್ ನಟಿಸಿದ್ದಾರೆ. ಚಿತ್ರ ಇದೇ ಮಾರ್ಚ್ 30ರಂದು ಬಿಡುಗಡೆಯಾಗಲಿದೆ. ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರ ಬಿಡುಗಡೆ ದಿನ ಸಮೀಪಿಸುತ್ತಿರುವ ಕಾರಣ ನಾನಿ ಪ್ಯಾನ್ ಇಂಡಿಯಾ ಮಟ್ಟದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಹೀಗೆ ಪ್ರಚಾರಕ್ಕಾಗಿ ನಡೆಸಿದ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ನಾನಿ ದಸರಾ ಚಿತ್ರೀಕರಣದ ಘಟನೆಗಳ ಬಗ್ಗೆ ಮೆಲುಕು ಹಾಕಿದ್ದಾರೆ. "ಚಿತ್ರದಲ್ಲಿನ ಕೆಲ ದೃಶ್ಯಗಳಲ್ಲಿ ಮದ್ಯಪಾನ ಮಾಡುವ ದೃಶ್ಯಗಳಿವೆ. ಆ ದೃಶ್ಯದಲ್ಲಿ ಮದ್ಯಪಾನ ಮಾಡಿದ ಬಳಿಕ ನನ್ನ ಕಣ್ಣುಗಳು ಕೆಂಪಾಗಬೇಕಿತ್ತು. ನಾವು ಆಲ್ಕೋಹಾಲ್ ಅಂಶವಿಲ್ಲದ ಡ್ರಿಂಕ್ ಬಳಸಿದರೂ ಸಹ ನಿರೀಕ್ಷಿಸಿದ ಫಲಿತಾಂಶ ಬರಲಿಲ್ಲ. ಹೀಗಾಗಿ ನಾನು ನಿಜವಾಗಿಯೂ ಮದ್ಯಪಾನ ಮಾಡಿ ನಟಿಸಿದೆ" ಎಂದು ಹೇಳಿಕೆ ನೀಡಿದ್ದಾರೆ.

ಅಲ್ಲದೇ ಚಿತ್ರದಲ್ಲಿ ತನ್ನ ಪಾತ್ರದ ಗುಣ ಪ್ರಾಣಿಗಳ ರೀತಿ ಇರಲಿದ್ದು, ಕೆಲವೊಮ್ಮೆ ಸಿಕ್ಕಾಪಟ್ಟೆ ಮೃಗದ ರೀತಿ ವರ್ತಿಸಲಿದ್ದು, ಕೆಲವೊಮ್ಮೆ ಮುಗ್ದನಾಗಿ ಕಾಣಿಸಿಕೊಳ್ಳಲಿದ್ದೇನೆ ಎಂದು ತಿಳಿಸಿದರು. ಇನ್ನು ಚಿತ್ರದ ಟ್ರೈಲರ್ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಕನ್ನಡದಲ್ಲಿ ಕೂಡ ಟ್ರೈಲರ್ ಬಿಡುಗಡೆಗೊಂಡಿದ್ದು, ಉತ್ತರ ಕರ್ನಾಟಕದ ಸಂಭಾಷಣೆ ನೋಡುಗರಿಗೆ ಕಿಕ್ ಕೊಡ್ತಿದೆ. ಚಿತ್ರ ತಿಂಗಳಾಂತ್ಯಕ್ಕೆ ತೆರೆಗೆ ಬರಲಿದ್ದು, ಯಾವ ಮಟ್ಟಕ್ಕೆ ಸದ್ದು ಮಾಡಲಿದೆ ಕಾದು ನೋಡಬೇಕಿದೆ.


Click it and Unblock the Notifications











