'ಧುರಂಧರ್'ನ ರೆಹಮಾನ್ ಡಕಾಯತ್ ಆಗಬೇಕಿತ್ತಾ ನಾಗಾರ್ಜುನ ? ಪಾತ್ರ ರಿಜೆಕ್ಟ್ ಮಾಡಿದ್ದೇಕೆ ? ಸತ್ಯ ಇಲ್ಲಿದೆ
ಬಣ್ಣದ ಲೋಕ ಅಂದರೆ ಅದು ಸತ್ಯ-ಮಿಥ್ಯದ ಸಂಘರ್ಷ. ಇಲ್ಲಿ ದಿನಕ್ಕೊಂದು ಸುದ್ದಿಯ ಉಗಮವಾಗುತ್ತೆ. ಆ ಪೈಕಿ ಕೆಲವು ಸತ್ಯ ಆದರೆ ಇನ್ನೂ ಕೆಲವು ಕೇವಲ ಅಂತೆ-ಕಂತೆಗಷ್ಟೇ ಸೀಮಿತವಾಗುತ್ತವೆ. ಆದರೂ ಕೂಡ ಈ ಸುದ್ದಿಗಳೇ ಚಿತ್ರರಂಗದ ಜೀವಾಳ. ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುವುದಲ್ಲದೇ ಈ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೀಡಾಗುತ್ತವೆ. ಇಂತಹದ್ದೇ ಒಂದು ಸುದ್ದಿಯ ಕುರಿತು ನಾಗಾರ್ಜುನ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು, ಅಸಲಿಗೆ ಚಿತ್ರರಂಗದಲ್ಲಿ ಒಮ್ಮೊಮ್ಮೆ ಯಾರೋ ಮಾಡಬೇಕಿದ್ದ ಪಾತ್ರ ಇನ್ಯಾರದ್ದೋ ಪಾಲಾಗುತ್ತೆ. ಕೆಲ ಸಲ ಆ ಪಾತ್ರ ಮಾಡುವ ಮನಸು ಇದ್ದರೂ ಕೂಡ ಅಲ್ಲಿ ದಿನಾಂಕಗಳ ಹೊಂದಾಣಿಕೆಯಾಗಲ್ಲ. ಇನ್ನೂ ಕೆಲ ಒಮ್ಮೆ ಡೇಟ್‌ಗಳಿದ್ದರೂ ಕೂಡ ಸಂಭಾವನೆ ಮುಖ್ಯವಾಗುತ್ತೆ. ಮತ್ತೂ ಕೆಲ ಒಮ್ಮೆ ಎಲ್ಲವೂ ಕೂಡಿ ಬಂದರೂ ಕೂಡ ಈಗೋ ಮಧ್ಯೆ ಬರುತ್ತೆ.

ಉದಾಹರಣೆಗೆ ''ಬಾಹುಬಲಿ''ಯಲ್ಲಿ ರಮ್ಯಾ ಕೃಷ್ಣ ನಿರ್ವಹಿಸಿದ್ದ ಪಾತ್ರವನ್ನು ಮೊದಲು ಶ್ರೀದೇವಿ ಮಾಡಬೇಕಿತ್ತು. ''ಜಂಜೀರ್'' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಬದಲು ಧರ್ಮೇಂದ್ರ ಅಬ್ಬರಿಸಬೇಕಿತ್ತು. ''ಮುನ್ನಾಭಾಯಿ ಎಂಬಿಬಿಎಸ್'' ಪಾತ್ರವನ್ನು ಶಾರುಖ್ ಖಾನ್ ಮಾಡಬೇಕಿತ್ತು.
ಹೀಗೆ ಹುಡುಕುತ್ತಾ ಹೋದರೆ ಹತ್ತು ಹಲವು ಉದಾಹರಣೆಗಳು ಸಿಗುತ್ವೆ. ಈ ಸಾಲಿನಲ್ಲಿ ''ಧುರಂಧರ್'' ಸಿನಿಮಾ ಕೂಡ ಇದೆ, ಅಕ್ಷಯ್ ಖನ್ನಾ ಮಾಡಬೇಕಿದ್ದ ಪಾತ್ರವನ್ನು ನಾಗಾರ್ಜುನ ಮಾಡಬೇಕಿತ್ತು ಎಂದು ಇತ್ತೀಚೆಗೆ ಕೆಲವರು ಸೋಶಿಯಲ್ ಮೀಡಿಯಾ ಪ್ರವೀಣರು ಹುಯಿಲೆಬ್ಬಿಸಿದ್ದರು. ಇದಕ್ಕೆ ಈಗ ನಾಗಾರ್ಜುನ ಖುದ್ದು ಉತ್ತರ ನೀಡಿದ್ದಾರೆ.
ಈ ಕುರಿತು ''ಬಾಲಿವುಡ್ ಹಂಗಾಮಾ''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಾಗಾರ್ಜುನ, ''ಧುರಂಧರ್'' ಚಿತ್ರದಲ್ಲಿನ ರೆಹಮಾನ್ ಡಕಾಯತ್ ಪಾತ್ರಕ್ಕೆ ನನ್ನನ್ನು ಯಾರು ಸಂಪರ್ಕ ಮಾಡಿಲ್ಲ ಎಂದು ಹೇಳಿದ್ದಾರೆ. ಕಂಡಿತವಾಗಿಯೂ ನನಗೆ ಆ ಪಾತ್ರದ ಆಫರ್ ಬಂದಿರಲಿಲ್ಲ ಎಂದು ಹೇಳಿರುವ ನಾಗಾರ್ಜುನ, ಹರಿದಾಡುತ್ತಿರುವ ಈ ಸುದ್ದಿ ನಿಜಾ ಆಗಬಾರದಿತ್ತಾ ಎಂದಿದ್ದಾರೆ. ಆ ಪಾತ್ರ ನನ್ನನ್ನೇ ಹುಡುಕಿಕೊಂಡು ಬರಬೇಕಿತ್ತು, ಆ ಪಾತ್ರವನ್ನು ನಾನು ಮಾಡಬೇಕಿತ್ತು ಎಂದು ನನಗೆ ಈಗೀಗ ತುಂಬಾನೇ ಅನ್ನಿಸುತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ''ಧುರಂಧರ್'' ಮತ್ತು ಅಕ್ಷಯ್ ಖನ್ನಾ ಅವರ ಪಾತ್ರವನ್ನು ಬಾಯ್ತುಂಬ ಹೊಗಳಿದ್ದಾರೆ. ರೆಹಮಾನ್ ಡಕಾಯತ್ ಪಾತ್ರ ನನಗೆ ಸಿಗಬಾರದಿತ್ತಾ ಎನ್ನುವ ಮೂಲಕ ತಮ್ಮ ಮನದಾಳದ ಆಸೆಯನ್ನು ಕೂಡ ಹೊರ ಹಾಕಿದ್ದಾರೆ.
ಮುಂದುವರೆದು ''ಧುರಂಧರ್'' ಒಂದು ಅದ್ಭುತವಾದ ಚಿತ್ರ ಎಂದು ಹೇಳಿರುವ ನಾಗಾರ್ಜುನ, ಆದಿತ್ಯ ಧರ್ ಅವರ ನಿರ್ದೇಶನ ನಿಜಕ್ಕೂ ಮೆಚ್ಚುವಂತಹದ್ದು ಎಂದು ಹೇಳಿದ್ದಾರೆ. ಅವರ ಹಿಂದಿನ ಚಿತ್ರ ''ಉರಿ''ಯನ್ನು ಕೂಡ ನಾನು ತುಂಬಾ ಇಷ್ಟಪಟ್ಟಿದ್ದೆ ಎಂದು ಹೇಳಿರುವ ನಾಗಾರ್ಜುನ ಚಿತ್ರದಲ್ಲಿ ಎಲ್ಲರೂ ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದು ಹೇಳಿದ್ದಾರೆ. ಅದರಲ್ಲಿಯೂ ಅಕ್ಷಯ್ ಖನ್ನಾ ಅವರ ಅಭಿನಯವಂತೂ ಅತ್ಯಮೋಘವಾಗಿದೆ ಎಂದು ಹೇಳಿದ್ದಾರೆ.

ಎಲ್ಲರಂತೆ ಮುಂದಿನ ಭಾಗಕ್ಕೆ ಅಂದರೆ ''ಧುರಂಧರ್ 2'' ಚಿತ್ರಕ್ಕೆ ನಾನು ಕೂಡ ಕಾತುರದಿಂದ ಕಾಯುತ್ತಿದ್ದೇನೆ ಎಂದು ಹೇಳಿರುವ ನಾಗಾರ್ಜುನ, ''ಧುರಂಧರ್ 2'' ಕೂಡ ಮೊದಲ ಭಾಗದಂತೆಯೇ ಯಶಸ್ವಿಯಾಗಲಿ, ಬ್ಲಾಕಬಸ್ಟರ್ ಆಗಲಿ ಎನ್ನುವುದೇ ನನ್ನ ಹಾರೈಕೆ ಮತ್ತು ಆಶಯ ಎಂದು ಕೂಡ ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ತಮ್ಮ 100ನೇ ಚಿತ್ರದ ಕುರಿತು ಕೂಡ ಮಾತನಾಡಿರುವ ನಾಗಾರ್ಜುನ, ನಾನು ಈಗ ಯಾವುದಕ್ಕೂ ಆತುರ ಪಡುತ್ತಿಲ್ಲ, ಪ್ರತಿಯೊಂದು ಚಿತ್ರ ಮತ್ತು ಪಾತ್ರ ವಿಶೇಷವಾಗಿರಬೇಕು ಎನ್ನುವುದು ನನ್ನ ಆಸೆ ಎಂದು ಹೇಳಿದ್ದಾರೆ. ''ಧುರಂಧರ್'' ಚಿತ್ರಕ್ಕೆ ಸಿಕ್ಕ ಗೆಲುವಿನಿಂದ ಪ್ರೇಕ್ಷಕರು ಅಂತರರಾಷ್ಟ್ರೀಯ ಗುಣಮಟ್ಟದ ಕಥೆಗಳನ್ನು ಬಯಸುತ್ತಿದ್ದಾರೆ ಎನ್ನುವುದು ನನಗೆ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.


Click it and Unblock the Notifications











