ಐಬೊಮ್ಮ ಪೈರಸಿ ವೆಬ್‌ಸೈಟ್ ಅಡ್ಮಿನ್ ಬಂಧನ; ಟಾಲಿವುಡ್ ಗಣ್ಯರು ಸಂತಸ
ಚಿತ್ರರಂಗಕ್ಕೆ ಪೈರಸಿ ಕಂಟಕವಾಗಿರುವುದು ಗೊತ್ತೇಯಿದೆ. ಆದರೆ ಇದನ್ನು ಬುಡಸಮೇತ ಕಿತ್ತು ಹಾಕಲು ಸಾಧ್ಯವಾಗುತ್ತಿಲ್ಲ. ಪೈರಸಿ ಲಿಂಕ್ ಡಿಲೀಟ್ ಮಾಡಿದ್ರು, ಮತ್ತಷ್ಟು ಹೊಸ ಹೊಸ ಲಿಂಕ್‌ಗಳಲ್ಲಿ ಸಿನಿಮಾಗಳು ಲೀಕ್ ಆಗುತ್ತದೆ. ಸದ್ಯ ಐಬೊಬ್ಬ(Ibomma) ಹಾಗೂ ಬಪ್ಪಂ ಪೈರಸಿ ವೆಬ್‌ಸೈಟ್‌ಗಳ ಮಾಸ್ಟರ್ ಮೈಂಡ್ ರವಿ ಎಂಬಾತನ ಬಂಧನವಾಗಿದೆ.
ಹೈದರಾಬಾದ್ ಸೈಬರ್ ಪೊಲೀಸರು ಐಬೊಮ್ಮ ವೆಬ್‌ಸೈಟ್ ಮ್ಯಾನೇಜರ್ ಇಮ್ಮಡಿ ರವಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಆತನ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿವೆ. ಆತನ ಬಳಿ ಸಿಕ್ಕ ಹಾರ್ಡ್ ಡಿಸ್ಕ್‌ನಲ್ಲಿ 21 ಸಾವಿರ ಸಿನಿಮಾಗಳು, 50 ಲಕ್ಷ ಜನರ ಡೇಟಾ ಇದೆ. ಬರೋಬ್ಬರಿ 20 ಕೋಟಿ ರೂ. ಸಂಪಾದಿಸಿದ್ದು 3 ಕೋಟಿ ರೂ. ಹಣ ವಶಪಡಿಸಿಕೊಂಡಿರುವುದಾಗಿ ಹೈದರಾಬಾದ್ ಸಿಪಿ ಸಜ್ಜನರ್ ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಸೋಮವಾರ(ನವೆಂಬರ್ 17) ಸಿನಿಮಾ ತಾರೆಯರಾದ ನಟ ಚಿರಂಜೀವಿ, ನಟ ನಾಗಾರ್ಜುನ, ನಿರ್ದೇಶಕ ರಾಜಮೌಳಿ ಹಾಗೂ ನಿರ್ಮಾಪಕ ದಿಲ್ ರಾಜು ಜೊತೆ ಸಿಪಿ ಸಜ್ಜನರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಇಮ್ಮಡಿ ರವಿ ಬಂಧನದ ಬಗ್ಗೆ ಚಿರು, ರಾಜಮೌಳಿ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ. ಪೊಲೀಸರ ಕಾರ್ಯಾಚರಣೆಗೆ ಧನ್ಯವಾದ ತಿಳಿಸಿದ್ದಾರೆ. ಇದು ಚಿತ್ರರಂಗಕ್ಕೆ ಪೂರಕ ಎಂದಿದ್ದಾರೆ.
ಚಿರಂಜೀವಿ ಮಾತನಾಡಿ "ಪೈರಸಿ ಭೂತದಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು ಬಹಳ ದಿನಗಳಿಂದ ಅಂದುಕೊಳ್ಳುತ್ತಿದ್ದೆವು. ಚಿತ್ರರಂಗದ ಮೇಲೆ ನೇರವಾಗಿ ಪರೋಕ್ಷವಾಗಿ ಸಾಕಷ್ಟು ಜನ ಅವಲಂಬಿತರಾಗಿದ್ದಾರೆ. ಇಷ್ಟು ಜನರ ಕಷ್ಟವನ್ನು ಆಗಂತುಕನೊಬ್ಬ ಬಂದು ದೋಚುತ್ತಿದ್ದರೆ, ಸವಾಲು ಹಾಕುತ್ತಿದ್ದರೆ ಹೇಗೆ? ಇಂತಹ ಸಮಯದಲ್ಲಿ ಪೊಲೀಸರು ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸ್ ಇಲಾಖೆಗೆ ಧನ್ಯವಾದ" ಎಂದಿದ್ದಾರೆ.

ಐಬೊಮ್ಮ ವೆಬ್‌ಸೈಟ್ ಅಡ್ಮಿನ್ ಆಗಿದ್ದ ರವಿ ಸಾಧ್ಯವಾದರೆ ನನ್ನನ್ನು ಹಿಡಿಯಿರಿ ಎಂದು ಪೊಲೀಸರಿಗೆ ಸವಾಲು ಹಾಕುತ್ತಿದ್ದ. ಆತನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ರಾಜಮೌಳಿ ಮಾತನಾಡಿ "ಕಮರ್ಷಿಯಲ್ ಸಿನಿಮಾ ರೀತಿ ಸವಾಲು ಹಾಕಿದವನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಅಂದರೆ ಎಚ್ಚರ ಇರಲಿ. ಯಾವುದು ಕೂಡ ಉಚಿತವಾಗಿ ಸಿಗಲ್ಲ. ಸಿನಿಮಾ ಫ್ರೀಯಾಗಿ ನೋಡಿದ್ರೆ ಏನಾಗುತ್ತದೆ ಎನ್ನಬಹುದು. ಆದರೆ ಕೋಟಿ ಕೋಟಿ ಖರ್ಚು ಮಾಡಿ ಇದನ್ನೆಲ್ಲಾ ಹೇಗೆ ಮಾಡ್ತಾರೆ. ನೀವೇ ನಿಮ್ಮ ಡೇಟಾವನ್ನು ಇಂತಹವರಿಗೆ ಕೊಡುತ್ತಿದ್ದೀರಾ. ಅದನ್ನು ಕ್ರಿಮಿನಲ್‌ಗಳಿಗೆ ಮಾರಾಟ ಮಾಡುತ್ತಾರೆ. ಅದರಿಂದ ಸಮಸ್ಯೆ ಕಟ್ಟಿಟ್ಟಬುತ್ತಿ. ಎಚ್ಚರ ಎಚ್ಚರ" ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ನಾಗಾರ್ಜುನ ಮಾತನಾಡಿ "ನಮ್ಮ ವೈಯಕ್ತಿಕ ಡೇಟಾಗಳನ್ನು ಇಂತಹ ವೆಬ್‌ಸೈಟ್‌ಗಳಿಗೆ ಕೊಟ್ಟು ತಪ್ಪು ಮಾಡುತ್ತಿದ್ದೇವೆ. ಇತ್ತೀಚೆಗೆ ನಮ್ಮ ಮನೆ ಸದಸ್ಯರೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದರು. ಎರಡು ದಿನ ಡಿಜಿಟಲ್ ಅರೆಸ್ಟ್ ಆಗಿಬಿಟ್ಟಿದ್ರು. ಉಚಿತವಾಗಿ ಸಿಕ್ತು ಅಂತ ಯಾವ್ದೋ ವೆಬ್‌ಸೈಟ್ ಬಳಸುತ್ತೇವೆ. ಅದರಿಂದ ನಿಮ್ಮ ಡೇಟಾ ಬಳಸಿ ಬೇರೆ ಬೇರೆ ಕೃತ್ಯಗಳಿಗೆ ಬಳಸಬಹುದು. ಹಾಗಾಗಿ ಎಚ್ಚರಿಕೆಯಿಂದ ಇರಿ. ಡಿಜಿಟಲ್ ಕದೀಮರನ್ನು ಹಿಡಿಯುವುದು ಕೂಡ ಕಷ್ಟ" ಎಂದು ಸಲಹೆ ನೀಡಿದ್ದಾರೆ.
ಆರೋಪಿ ರವಿ ಬಹಳ ಚಾಲಾಕಿ ಆಗಿದ್ದು ಒಂದು ವೆಬ್‌ಸೈಟ್ ನಿರ್ಬಂಧಿಸಿದರೆ ತಕ್ಷಣ ಮತ್ತೊಂದು ವೆಬ್‌ಸೈಟ್ ಕ್ರಿಯೇಟ್ ಮಾಡುತ್ತಿದ್ದ. ತನ್ನ ದುಷ್ಕೃತ್ಯಕ್ಕಾಗಿ 65 ಮಿರರ್ ವೆಬ್‌ಸೈಟ್‌ಗಳನ್ನು ನಿರ್ವಹಿಸುತ್ತಿದ್ದ ಎಂದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣ ಮೂಲದವನಾದ ರವಿ ಭಾರತೀಯ ಪೌರತ್ವ ತ್ಯಜಿಸಿ ಕೆರಿಬಿಯನ್‌ನಲ್ಲಿರುವ ಸೇಂಟ್ ಕಿಟ್ಸ್ ಮತ್ತು ನೆವಿಸ್ ದೇಶದ ಪೌರತ್ವ ಪಡೆದಿರುವುದು ತನಿಖೆ ವೇಳೆ ಗೊತ್ತಾಗಿದೆ. ವಿದೇಶದಿಂದ ಐಬೊಮ್ಮ ವೆಬ್‌ಸೈಟ್ ನಿರ್ವಹಿಸುತ್ತಿದ್ದ ಎನ್ನಲಾಗ್ತಿದೆ.


Click it and Unblock the Notifications











