ನಾನು ಬಿಗ್‌ಬಾಸ್‌ಗೆ ಹೋಗ್ಬೇಕು ಅಂತ ಸತ್ತೋದ ನನ್ನಮ್ಮ ಬಯಸ್ತಿದ್ದಾಳೆ; ನಂಗೂ ಚಾನ್ಸ್ ಕೊಡಿ
ಪ್ರತಿ ವರ್ಷ ಬಿಗ್‌ಬಾಸ್ ಹೊಸ ಹೊಸ ಸೀಸನ್ ಬರುತ್ತದೆ. 15ರಿಂದ 16 ಜನ ವಿಭಿನ್ನ ವ್ಯಕ್ತಿತ್ವದವರನ್ನು ಒಂದು ಮನೆಯಲ್ಲಿ ಕೂಡಿ ಹಾಕಿ, ಸುತ್ತಾ ಕ್ಯಾಮರಾ ಇಟ್ಟು ಆಡಿಸುವ ಆಟ ಇದು. ಬಹುತೇಕ ಸೆಲೆಬ್ರೆಟಿಗಳೇ ಮನೆ ಒಳಗೆ ಹೋಗುತ್ತಾರೆ. ಆಗೊಮ್ಮೆ ಈಗೊಮ್ಮೆ ಸಾಮಾನ್ಯ ಜನರಿಗೂ ಅವಕಾಶ ಸಿಗುತ್ತದೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ಸ್ ಹಾಗೂ ವಿವಾದ ಸೃಷ್ಟಿಕೊಂಡವರು ದೊಡ್ಮನೆ ಒಳಗೆ ಹೋಗುವ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇನ್ನು ಬಿಗ್‌ಬಾಸ್ ಶೋಗೆ ಸ್ಪರ್ಧಿಗಳಾಗಿ ಹೋದವರು ನೇಮು ಫೇಮು ಸಂಪಾದಿಸಿರುವುದು ಇದೆ. ಆದರೆ ಅಷ್ಟು ಸುಲಭವಾಗಿ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಆಯೋಜಕರು ಯಾರನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳುವುದು ಕಷ್ಟ. ಮನೆಯೊಳಗೆ ಹೋಗುವವರಿಗೂ ಬೇರೆ ಯಾರೆಲ್ಲಾ ಬರ್ತಾರೆ ಎನ್ನುವುದು ಸ್ಪರ್ಧಿಗಳಿಗೂ ಗೊತ್ತಿರಲ್ಲ. ಅಷ್ಟರಮಟ್ಟಿಗೆ ಎಲ್ಲವೂ ಸೀಕ್ರೆಟ್ ಆಗಿರುತ್ತದೆ.

ತೆಲುಗಿನಲ್ಲಿ ಬಿಗ್‌ಬಾಸ್ ಸೀಸನ್ 9 ಕೆಲವೇ ದಿನಗಳಲ್ಲಿ ಶುರುವಾಗಲಿದೆ. ನಟ ನಾಗಾರ್ಜುನ ಮತ್ತೊಮ್ಮೆ ಶೋ ನಿರೂಪಣೆಗೆ ಮುಂದಾಗಿದ್ದಾರೆ. ಈಗಾಗಲೇ ಪ್ರೋಮೊ ಸಹ ವೈರಲ್ ಆಗಿದೆ. ಈ ಬಾರಿ ಮನೆಯೊಳಗೆ ಯಾರೆಲ್ಲಾ ಹೋಗುತ್ತಾರೆ ಎನ್ನುವ ಕುತೂಹಲ ಇದೆ. ಈಗಾಗಲೇ ದೊಡ್ಮನೆ ಪ್ರವೇಶಿಸುವ ಸ್ಪರ್ಧಿಗಳ ಪಟ್ಟಿ ಕೂಡ ಸಿದ್ಧವಾಗಿದೆ ಎನ್ನುವ ಊಹಾಪೋಹ ಶುರುವಾಗಿದೆ.
ಬಿಗ್‌ಬಾಸ್ ತೆಲುಗು ಸೀಸನ್ 7ರಲ್ಲಿ ರೈತರ ಮನೆ ಹುಡುಗ ಪಲ್ಲವಿ ಪ್ರಶಾಂತ್ ಗೆದ್ದು ಬೀಗಿದ್ದರು. ಸೀಸನ್-9ರಲ್ಲಿ ಕೂಡ ಸಾಮಾನ್ಯರಿಗೆ ಬಿಗ್‌ಬಾಸ್ ಮನೆ ಪ್ರವೇಶಿಸುವ ಅವಕಾಶ ಇದೆ ಎಂದು ಘೋಷಿಸಿದ್ದಾರೆ. ಹಾಗಾಗಿ ಸಾಕಷ್ಟು ಜನ ಆಕಾಂಕ್ಷಿಗಳು ದೊಡ್ಮನೆ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಚಿತ್ರವಿಚಿತ್ರ ವೀಡಿಯೋ ಮಾಡಿ ಅವಕಾಶ ಕೊಡುವಂತೆ ಕೇಳುತ್ತಿದ್ದಾರೆ.
ಸದ್ಯ ವ್ಯಕ್ತಿಯೊಬ್ಬ ಮಾಡಿರುವ ವೀಡಿಯೋ ಸಖತ್ ವೈರಲ್ ಆಗಿದೆ. ನಾನು ಬಿಗ್‌ಬಾಸ್ ಮನೆಗೆ ಹೋಗಬೇಕು ಎನ್ನುವುದು ನಮ್ಮ ತಾಯಿ ಬಯಕೆ ಎಂದು ಹೇಳಿದ್ದಾನೆ. ವೀಡಿಯೋ ಮಾಡಿ ಮಾತನಾಡಿರುವ ವ್ಯಕ್ತಿ "ನಮ್ಮ ತಾಯಿ ಸತ್ತು ಹೋಗಿದ್ದಾರೆ. ಆಕೆ ಸತ್ತು ಒಂದೂವರೆ ವರ್ಷ ಆಯ್ತು. ಯಾವತ್ತು ನನ್ನ ಕನಸ್ಸಿನಲ್ಲಿ ಬರಲಿಲ್ಲ. ಆದರೆ ರಾತ್ರಿ ಇದ್ದಕ್ಕಿದಂತೆ ಬಂದು ನೀನು ಬಿಗ್‌ಬಾಸ್‌ಗೆ ಹೋಗಬೇಕು ಮಗನೆ ಎಂದಳು. ಸರಿ ಬಿಡಮ್ಮ ಹೋಗ್ತೀನಿ, ಎಲ್ಲರನ್ನು ರಂಜಿಸಿ ಗೆಲ್ತೀನಿ ಅಂದೆ. ನನಗೆ ಜಗಳ ಆಡಲು ಬರಲ್ಲ ಅಮ್ಮ ಅಂದೆ, ಮಗನೆ ನೀನು ಮನೆಯಲ್ಲಿ ಆ ಅಡುಗೆ ಚೆನ್ನಾಗಿಲ್ಲ, ಇದು ಚೆನ್ನಾಗಿಲ್ಲ ಅಂತ ಜಗಳ ಆಡ್ತಿದ್ದೆ ಅಲ್ವಾ, ಹಂಗೆ ಅಲ್ಲಿ ಜಗಳು ಆಡು ಅಷ್ಟು ಅಂದ್ಲು, ಸರಿ ಅಂದೆ. ಈಗ ಬಿಗ್‌ಬಾಸ್ ಆಯೋಜಕರೇ ಈ ಬಗ್ಗೆ ನಿರ್ಧರಿಸಬೇಕು" ಎಂದು ಹೇಳಿದ್ದಾನೆ.
ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋಗೆ 5 ಸಾವಿರಕ್ಕೂ ಅಧಿಕ ಲೈಕ್ಸ್ ಹಾಗೂ 600ಕ್ಕೂ ಅಧಿಕ ಕಾಮೆಂಟ್ಸ್ ಬಂದಿದೆ. ಇದೇ ರೀತಿ ವೀಡಿಯೋ ಮಾಡಿ ಈತ ಸೋಶಿಯಲ್ ಮೀಡಿಯಾದಲ್ಲಿ ರಂಜಿಸುತ್ತಿರುತ್ತಾನೆ. ಇದೀಗ ಬಿಗ್‌ಬಾಸ್ ಮನೆಗೆ ಹೋಗುವ ಕೋರಿಕೆ ಮುಂದಿಟ್ಟು ಗಮನ ಸೆಳೆದಿದ್ದಾನೆ. ನೆಟ್ಟಿಗರು ಆತನ ವೀಡಿಯೋ ನೋಡಿ ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡದಲ್ಲಿ ಕೂಡ ಬಿಗ್‌ಬಾಸ್ ಸೀಸನ್ 12ಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಮತ್ತೊಮ್ಮೆ ಕಿಚ್ಚ ಸುದೀಪ್ ಕಾರ್ಯಕ್ರಮ ನಿರೂಪಣೆ ಮಾಡುವುದು ಖಚಿತವಾಗಿದೆ. ಕಳೆದ ಸೀಸನ್ ವೇಳೆ ಇನ್ನು ಮುಂದೆ ನಾನು ಶೋ ನಿರೂಪಣೆ ಮಾಡಲ್ಲ ಎಂದು ಸುದೀಪ್ ಘೋಷಿಸಿದ್ದರು. ಶೋ ಆಯೋಜಕರ ಜೊತೆಗಿನ ಭಿನ್ನಾಭಿಪ್ರಾಯಗಳಿಂದ ಈ ನಿರ್ಧಾರಕ್ಕೆ ಬಂದಿದ್ದರು. ಬಳಿಕ ರಾಜಿಯಾಗಿ ಸುದ್ದಿಗೋಷ್ಠಿ ನಡೆಸಿ ತಮ್ಮ ನಿರ್ಧಾರ ಪ್ರಕಟಿಸಿದ್ದರು. ಈ ಬಾರಿ ಕನ್ನಡ ಬಿಗ್‌ಬಾಸ್ ಮನೆಗೆ ಯಾರೆಲ್ಲಾ ಹೋಗುತ್ತಾರೆ? ಎನ್ನುವ ಕುತೂಹಲ ಮೂಡಿದೆ.


Click it and Unblock the Notifications











