'ಪುಷ್ಪ': ರಶ್ಮಿಕಾ-ಅಲ್ಲು ರೊಮ್ಯಾಂಟಿಕ್ ದೃಶ್ಯಕ್ಕೆ ಕಡಿತ
ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ' ಸಿನಿಮಾ ಈಗಾಗಲೇ ಹಿಟ್ ಎನಿಸಿಕೊಂಡಿದೆ. ಆದರೆ ಸಿನಿಮಾ ಬಗ್ಗೆ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ರೀತಿಯ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿವೆ.
ಸಿನಿಮಾ ಬಗ್ಗೆ ಬರುತ್ತಿರುವ ನೆಗೆಟಿವ್ ಕಮೆಂಟ್‌ಗಳಲ್ಲಿ ಸಿನಿಮಾ ಉದ್ದವಾಯಿತೆಂದು, ಎರಡನೇ ಅರ್ಧದಲ್ಲಿ ಕೆಲವು ದೃಶ್ಯಗಳನ್ನು ಅನವಶ್ಯಕ ಎಳೆಯಲಾಗಿದೆ, ಹೀರೋಯಿನ್ ಹಾಗೂ ಸಮಂತಾ ಅವರನ್ನು ಉದ್ದೇಶಪೂರ್ವಕವಾಗಿ ಅತಿ ಗ್ಲಾಮರಸ್ ಆಗಿ ಪ್ರೆಸೆಂಟ್ ಮಾಡಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ.
ಇದೀಗ 'ಪುಷ್ಪ' ಚಿತ್ರತಂಡ ಸಿನಿಮಾದ ಉದ್ದ ಕಡಿಮೆ ಮಾಡಲು ಹಾಗೂ ಕೌಟುಂಬಿಕ ಪ್ರೇಕ್ಷಕರಿಗೆ ಇಷ್ಟವಾಗದ ಸಿನಿಮಾದ ಒಂದು ದೃಶ್ಯವನ್ನು ಕತ್ತರಿಸಲು ನಿರ್ಣಯಿಸಿದೆ. ಅಲ್ಲು ಅರ್ಜುನ್ ಸೂಚನೆ ಮೇರೆಗೆ ಸಿನಿಮಾದ ಆ ದೃಶ್ಯವನ್ನು ತೆಗೆಯಲಾಗಿದೆ ಎನ್ನಲಾಗುತ್ತಿದೆ.

'ಪುಷ್ಪ' ಸಿನಿಮಾದ ಒಂದು ದೃಶ್ಯದಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಮಾರುತಿ ಒಮಿನಿ ಕಾರಿನಲ್ಲಿ ಕುಳಿತಿರುತ್ತಾರೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣರ ಹೆಗಲ ಮೇಲೆ ಕೈ ಹಾಕಿರುತ್ತಾನೆ. ಹೆಗಲ ಮೇಲೆ ಕೈ ಹಾಕಿರುವುದಕ್ಕೆ ಅವರಿಬ್ಬರ ನಡುವೆ ಸಂಭಾಷಣೆ ಬೇರೆಯದ್ದೇ ಮಾದರಿಯದಾಗಿರುತ್ತದೆ, ಬೇರೆ ವಿಷಯವನ್ನೇ ಸೂಚಿಸುತ್ತಿರುತ್ತದೆ. ಫ್ಯಾಮಿಲಿ ಪ್ರೇಕ್ಷಕರಿಗೆ ಈ ದೃಶ್ಯ ತುಸು ಇರುಸು ಮುರುಸು ಮೂಡಿಸುವ ಸಾಧ್ಯತೆ ಇದೆ. ಹಾಗಾಗಿ ಈ ದೃಶ್ಯವನ್ನು ತೆಗೆಯುವಂತೆ ಅಲ್ಲು ಅರ್ಜುನ್ ಸೂಚಿಸಿದ್ದಾರೆ.
ಈ ದೃಶ್ಯ ತೆಗೆಯುವ ಮೂಲಕ ಫ್ಯಾಮಿಲಿ ಪ್ರೇಕ್ಷಕರಿಗೆ ಇರುಸು ಮುರುಸಾಗುವುದು ತಡೆಯುವ ಜೊತೆಗೆ, ಸಿನಿಮಾದ ಉದ್ದವನ್ನು ಸಹ ಕಡಿಮೆ ಮಾಡಬಹುದು ಎಂಬ ಲೆಕ್ಕಾಚಾರ ಚಿತ್ರತಂಡದ್ದು. ಸಿನಿಮಾವು ಮೂರು ಗಂಟೆಗೆ ಹತ್ತಿರವಾಗಿದ್ದು, ಸಿನಿಮಾದ ಅತಿಯಾದ ಉದ್ದದ ಬಗ್ಗೆ ಹಲವು ವಿಮರ್ಶಕರು ಬೇಸರ ವ್ಯಕ್ತಪಡಿಸಿದ್ದಾರೆ.
'ಪುಷ್ಪ' ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಟ ಸುನಿಲ್, ಡಾಲಿ ಧನಂಜಯ್, ಫಹಾದ್ ಫಾಸಿಲ್ ಇನ್ನು ಕೆಲವರು ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಮೈತ್ರಿ ಮೂವೀಸ್ ನಿರ್ಮಾಣ ಮಾಡಿದ್ದು, ಸಿನಿಮಾವು ಮೊದಲ ದಿನ ದೇಶದಾದ್ಯಂತ ಒಳ್ಳೆಯ ಕಲೆಕ್ಷನ್ ಗಳಿಸಿದೆ.


Click it and Unblock the Notifications











