ಅಯ್ಯೋ.. ಮಹೇಶ್ ಬಾಬು 'ಗುಂಟೂರು ಖಾರಂ' ವಿಷ್ಣುವರ್ಧನ್ ನಟಿಸಿದ ಆ ಸಿನಿಮಾ ಕಾಪಿನಾ?
ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಸಿನಿಮಾ ಈ ವಾರ ವಿಶ್ವದಾದ್ಯಂತ ತೆರೆಗಪ್ಪಳಿಸುತ್ತಿದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಮಿಂಚಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಧೂಳೆಬ್ಬಿಸಿದೆ.
'ಗುಂಟೂರು ಖಾರಂ' ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಕರ್ನಾಟಕದಲ್ಲೂ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಕಮರ್ಷಿಯಲ್ ಎಲಿಮೆಂಟ್ಸ್ ಜೊತೆಗೆ ಒಂದು ಎಮೋಷನಲ್ ಕಥೆಯನ್ನು ಚಿತ್ರದಲ್ಲಿ ಹೇಳಿರುವಂತೆ ಕಾಣುತ್ತಿದೆ. ಇನ್ನು ಮಹೇಶ್ ಬಾಬು ಮಾಸ್ ಲುಕ್ ನೋಡಿ ಅಭಿಮಾನಿಗಳಂತೂ ಥ್ರಿಲ್ಲಾಗಿದ್ದಾರೆ. ಚಿಕ್ಕಂದಿನಲ್ಲೇ ತಾಯಿಯಿಂದ ದೂರಾಗಿ ಬೆಳೆದ ನಾಯಕ ಬಳಿಕ ಸತ್ಯ ತಿಳಿದು ತಾಯಿಗೆ ಹತ್ತಿರ ಆಗುತ್ತಾನಾ? ಇಲ್ವಾ? ಎನ್ನುವ ಕಥೆಯನ್ನು ಚಿತ್ರದಲ್ಲಿ ಹೇಳಿರುವಂತೆ ಕಾಣುತ್ತಿದೆ.

ಈ ಹಿಂದೆ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ 'ಅತಡು' ಹಾಗೂ 'ಖಲೇಜಾ' ಸಿನಿಮಾಗಳು ಬಂದು ಸೂಪರ್ ಹಿಟ್ ಆಗಿತ್ತು. ಹಾಗಾಗಿ ಇವರಿಬ್ಬರ ಹ್ಯಾಟ್ರಿಕ್ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. 'ಅಲಾ ವೈಕುಂಠಪುರಂಲೊ' ಬಳಿಕ ತ್ರಿವಿಕ್ರಮ್ ಈ ಸಿನಿಮಾ ಕೈಗೆತ್ತಿಕೊಂಡಿದ್ದರು. ಕಾರಣಾಂತರಗಳಿಂದ ಸಿನಿಮಾ ರಿಲೀಸ್ ತಡವಾಗುತ್ತಾ ಬರ್ತಿದೆ.
ಇದೀಗ 'ಗುಂಟೂರು ಖಾರಂ' ಸಿನಿಮಾ ಕಥೆ ಬಗ್ಗೆ ಟಾಲಿವುಡ್‌ನಲ್ಲಿ ಬಿಸಿಬಿಸಿ ಚರ್ಚೆ ನಡೀತಿದೆ. ಇದು ಮಲಯಾಳಂ ಸಿನಿಮಾ ರೀಮೆಕ್ ಎನ್ನುವ ಗುಸುಗುಸು ಶುರುವಾಗಿದೆ. ಅದೇ ಮಲಯಾಳಂ ಚಿತ್ರವನ್ನು ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ರೀಮೆಕ್ ಮಾಡಿದ್ದರು. ಹಾಗಾಗಿ 'ಗುಂಟೂರು ಖಾರಂ' ಸಿನಿಮಾಗೂ ದಾದಾ ಸಿನಿಮಾಗೂ ಲಿಂಕ್ ಇದೆ ಎನ್ನಬಹುದು.
ಇತ್ತೀಚೆಗೆ ಬಿಡುಗಡೆಯಾದ 'ಗುಂಟೂರು ಖಾರಂ' ಸಿನಿಮಾ ಟ್ರೈಲರ್ ನೋಡಿದವರು ಚಿತ್ರದ ಕಥೆಯನ್ನು ಊಹಿಸಿಕೊಳ್ಳುತ್ತಿದ್ದಾರೆ. ಈ ಕಥೆಗೂ ಮಲಯಾಳಂನಲ್ಲಿ ಮಮ್ಮುಟ್ಟಿ ನಟಿಸಿದ 'ರಾಜಮಾಣಿಕ್ಯಂ' ಚಿತ್ರದ ಕತೆಗೂ ಮೆಲ್ನೋಟಕ್ಕೆ ಸಾಮ್ಯತೆ ಇದೆ. ಹಾಗಾಗಿ ಆ ಚಿತ್ರದ ರೀಮೇಕ್ ಅಥವಾ ಪ್ರೇರಣೆಯಿಂದ 'ಗುಂಟೂರು ಖಾರಂ' ಸಿನಿಮಾ ಮಾಡಿದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಂದಹಾಗೆ 2005ರಲ್ಲಿ ಮಲಯಾಳಂನಲ್ಲಿ ಹಿಟ್ ಆಗಿದ್ದ 'ರಾಜಮಾಣಿಕ್ಯಂ' ಚಿತ್ರವನ್ನು 4 ವರ್ಷಗಳ ಬಳಿಕ 'ಬಳ್ಳಾರಿ ನಾಗ' ಹೆಸರಿನಲ್ಲಿ ವಿಷ್ಣುವರ್ಧನ್ ರೀಮೆಕ್ ಮಾಡಿದ್ದರು. ದಿನೇಶ್ ಬಾಬು ಚಿತ್ರವನ್ನು ಕನ್ನಡದಲ್ಲಿ ಕಟ್ಟಿಕೊಟ್ಟಿದ್ದರು. ಆದರೆ ಸಿನಿಮಾ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಕೆ. ಮಂಜು ಸಿನಿಮಾ ನಿರ್ಮಾಣ ಮಾಡಿದ್ದರು. ನಾಗಮಾಣಿಕ್ಯ ಎನ್ನುವ ಪಾತ್ರದಲ್ಲಿ ದಾದಾ ಮಿಂಚಿದ್ದರು.
'ರಾಜಮಾಣಿಕ್ಯಂ' ಸಿನಿಮಾ ಅಷ್ಟೇ ಅಲ್ಲ, ತೆಲುಗಿನ ಒಂದು ಕಾದಂಬರಿ ಕಥೆ ಕೂಡ ಇದೇ ರೀತಿ ಇದೆ. ಆ ಕಾದಂಬರಿಯಿಂದ ಪ್ರೇರಣೆಗೊಂಡು ತ್ರಿವಿಕ್ರಮ್ 'ಗುಂಟೂರು ಖಾರಂ' ಮಾಡಿದ್ದಾರಾ? ಎನ್ನುವ ಚರ್ಚೆಯೂ ಮುನ್ನಲೆಗೆ ಬಂದಿದೆ. 'ಕೀರ್ತಿ ಕಿರೀಟಲು' ಹೆಸರಿನ ಈ ಕಾದಂಬರಿಯನ್ನು ಯದ್ದನಪುಡಿ ಸುಲೋಚನಾರಾಣಿ ಎಂಬುವವರು ಬರೆದಿದ್ದಾರೆ. ಒಟ್ಟಾರೆ 'ಗುಂಟೂರು ಖಾರಂ' ಸಿನಿಮಾ ಕಥೆಯ ಬಗ್ಗೆ ಈಗ ಬಿಸಿಬಿಸಿ ಚರ್ಚೆ ನಡೀತಿದೆ.
ಹಾರಿಕಾ & ಹಾಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ರಾಧಾಕೃಷ್ಣ 'ಗುಂಟೂರು ಖಾರಂ' ಚಿತ್ರ ನಿರ್ಮಿಸಿದ್ದಾರೆ. ಎಸ್. ತಮನ್ ಸಂಗೀತ ಚಿತ್ರಕ್ಕಿದೆ. ಮನೋಜ್ ಪರಮಹಂಸ ಹಾಗೂ ಪಿ. ಎಸ್ ವಿನೋದ್ ಛಾಯಾಗ್ರಹಣ ಚಿತ್ರಕ್ಕಿದೆ. ಮಹೇಶ್ ಬಾಬುಗೆ ಮೀನಾಕ್ಷಿ ಚೌಧರಿ ಮತ್ತೊಬ್ಬ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಮಹೇಶ್ ಬಾಬು ತಾಯಿ ಪಾತ್ರದಲ್ಲಿ ರಮ್ಯಾಕೃಷ್ಣ ನಟಿಸಿದ್ದಾರೆ. ಜಗಪತಿ ಬಾಬು, ಜಯರಾಂ, ಪ್ರಕಾಶ್ ರಾಜ್, ರಾವ್ ರಮೇಶ್, ಈಶ್ವರಿ ರಾವ್, ಮುರಳಿ ಶರ್ಮಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.


Click it and Unblock the Notifications











