ಚಿತ್ರರಂಗಕ್ಕೆ ಸಮಂತಾ ಗುಡ್ ಬೈ.? ದಿಢೀರ್ ಅಂತ ನಾಗಾರ್ಜುನ ಸೊಸೆ ಹೀಗಂದಿದ್ಯಾಕೆ.?
ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಬಹು ಬೇಡಿಕೆ ಹೊಂದಿರುವ ನಟಿ ಸಮಂತಾ. 'ಯೇ ಮಾಯ ಚೇಸಾವೆ' ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಟಿ ಸಮಂತಾ 'ಬೃಂದಾವನಂ', 'ದೂಕುಡು', 'ಈಗ', 'ಜಬರ್ದಸ್ತ್', 'ಅತ್ತಾರಿಂಟಿಕಿ ದಾರೇದಿ', 'ರಾಮಯ್ಯ ವಸ್ತಾವಯ್ಯ', 'ಮನಂ', 'ಮಹಾನಟಿ' ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಾಯಕಿ ಆಗಿ ಅಭಿನಯಿಸಿದ್ದಾರೆ.
ಯಶಸ್ವಿ ನಾಯಕಿ ಅಂತ ಗುರುತಿಸಿಕೊಂಡಿರುವ ನಟಿ ಸಮಂತಾ ಅಭಿನಯದ 'ಜಾನು' ಚಿತ್ರ ಇಂದು ತೆರೆಗೆ ಬಂದಿದೆ. ತಮಿಳಿನ ಹಿಟ್ ಸಿನಿಮಾ '96' ರೀಮೇಕ್ ಆಗಿರುವ 'ಜಾನು' ಚಿತ್ರದ ಬಗ್ಗೆಯೂ ಅಪಾರ ನಿರೀಕ್ಷೆ ಇದೆ.
ಹೀಗಿರುವಾಗಲೇ, ದಿಢೀರ್ ಅಂತ ಚಿತ್ರರಂಗ ಬಿಡುವ ಮಾತುಗಳು ಸಮಂತಾ ಬಾಯಿಂದ ಬಂದಿದೆ. ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ ಗಂಡ, ಮನೆ, ಮಕ್ಕಳ ಬಗ್ಗೆ ಗಮನ ಹರಿಸಲು ಸಮಂತಾ ಮನಸ್ಸು ಮಾಡಿರುವ ಹಾಗಿದೆ. ಮುಂದೆ ಓದಿರಿ...

ಫ್ಯಾಮಿಲಿ ಬಗ್ಗೆ ಯೋಚಿಸಬೇಕು
''ನಾನು ಇನ್ನೊಂದು ಎರಡು-ಮೂರು ವರ್ಷ ನಟಿಸಬಹುದು ಅಷ್ಟೇ. ನನಗೆ ಮದುವೆ ಆಗಿದೆ. ಫ್ಯಾಮಿಲಿ ಬಗ್ಗೆ ನಾನು ಯೋಚಿಸಬೇಕಾಗಿದೆ'' ಎಂದು ಸಂದರ್ಶನವೊಂದರಲ್ಲಿ ನಟಿ ಸಮಂತಾ ಹೇಳಿದ್ದಾರೆ. ಅಲ್ಲಿಗೆ, ಎರಡ್ಮೂರು ವರ್ಷಗಳಲ್ಲಿ.. ಒಪ್ಪಿಕೊಂಡಿರುವ ಚಿತ್ರಗಳನ್ನೆಲ್ಲ ಮುಗಿಸಿಕೊಟ್ಟು.. ಬಣ್ಣದ ಪ್ರಪಂಚಕ್ಕೆ ನಟಿ ಸಮಂತಾ ಗುಡ್ ಬೈ ಹೇಳುವ ಹಾಗಿದೆ.

ನಾಯಕಿಯರ ವೃತ್ತಿ ಜೀವನ ಚಿಕ್ಕದು
''ನಾಯಕಿಯರ ವೃತ್ತಿ ಜೀವನ ತುಂಬಾ ಚಿಕ್ಕದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ, ಇನ್ನೊಂದು ಎರಡ್ಮೂರು ವರ್ಷ ನಾನು ಕೆಲಸ ಮಾಡಬಹುದು ಅಷ್ಟೇ'' ಅಂತ ನಟಿ ಸಮಂತಾ ಹೇಳಿದ್ದಾರೆ. ಸಮಂತಾ ರವರ ಈ ಮಾತುಗಳು ಅವರ ಅಪ್ಪಟ ಅಭಿಮಾನಿಗಳಿಗೆ ಆಘಾತ ತರದೆ ಇರದು.

ತಾಯಿ ಆಗುವಾಗ ಬ್ರೇಕ್ ಪಡೆಯುವೆ.!
''ನನಗೆ ಮಗು ಬೇಕು ಅಂತ ನಿರ್ಧಾರ ಮಾಡಿದಾಗ, ತಾಯಿ ಆಗಲು ನಾನು ಮನಸ್ಸು ಮಾಡಿದಾಗ.. ನಟನೆ ಸೇರಿದಂತೆ ಎಲ್ಲದರಿಂದಲೂ ಬ್ರೇಕ್ ತೆಗೆದುಕೊಳ್ಳುವೆ. ಆ ಸಮಯದಲ್ಲಿ ಮಗುವೇ ನನ್ನ ಜಗತ್ತಾಗಿರುತ್ತದೆ'' ಎಂದು ಈ ಹಿಂದೆ ನಟಿ ಸಮಂತಾ ಹೇಳಿದ್ದರು. ಹೀಗಾಗಿ, ಎರಡ್ಮೂರು ವರ್ಷಗಳಲ್ಲಿ ತಾಯಿ ಆಗಿ ಚಿತ್ರರಂಗದಿಂದ ಸಮಂತಾ ದೂರ ಸರಿಯುತ್ತಾರೆ ಎಂಬ ಮಾತುಗಳು ತೆಲುಗು ಸಿನಿ ಅಂಗಳದಲ್ಲಿ ಕೇಳಿಬರುತ್ತಿದೆ.

ಪ್ರೀತಿಸಿ ಮದುವೆ ಆದ ಸಮಂತಾ
ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗ ಚೈತನ್ಯ ರನ್ನ ಪ್ರೀತಿಸಿ ಮದುವೆ ಆಗಿದ್ದಾರೆ ನಟಿ ಸಮಂತಾ. 2017 ರಲ್ಲಿ ಗೋವಾದಲ್ಲಿ ಹಿಂದು ಮತ್ತು ಕ್ರೈಸ್ತ ಸಂಪ್ರದಾಯದಂತೆ ಸಮಂತಾ-ನಾಗ ಚೈತನ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಆದ್ಮೇಲೂ ಚಿತ್ರರಂಗದಲ್ಲಿ ನಟಿ ಸಮಂತಾ ಬಿಜಿಯಾಗಿದ್ದಾರೆ. ಇದೀಗ ದಿಢೀರ್ ಅಂತ ನಟನೆಯಿಂದ ದೂರ ಸರಿಯುವ ಬಗ್ಗೆ ಸಮಂತಾ ಮಾತನ್ನಾಡಿದ್ದಾರೆ.

ಸಮಂತಾ ಮುಂದಿನ ಚಿತ್ರ ಯಾವುದು.?
ಸದ್ಯ ಹಿಂದಿಯ ವೆಬ್ ಸೀರೀಸ್ ವೊಂದರಲ್ಲಿ ನಟಿ ಸಮಂತಾ ಅಭಿನಯಿಸುತ್ತಿದ್ದಾರೆ. ತಮ್ಮ ಮುಂದಿನ ಚಿತ್ರದ ಬಗ್ಗೆ ಸಮಂತಾ ಇನ್ನೂ ಘೋಷಣೆ ಮಾಡಿಲ್ಲ. ಆದ್ರೆ, ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ಗೆ ನಟಿ ಸಮಂತಾ ಪದಾರ್ಪಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.


Click it and Unblock the Notifications











