ತೆಲುಗು ಖ್ಯಾತ ನಿರೂಪಕಿ ಸುಮಾ-ಅನುಸೂಯ ಮನೆ ಮೇಲೆ ಐಟಿ ದಾಳಿ
ಟಾಲಿವುಡ್ ಇಂಡಸ್ಟ್ರಿಯ ಟಾಪ್ ನಿರೂಪಕಿಯರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಮಾಹಿತಿ ಹೊರಬಿದ್ದಿದೆ. ತೆಲುಗು ಟಿವಿ ಹಾಗೂ ಸಿನಿ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿ ಸುಮಾ ಮತ್ತು ಅನುಸೂಯ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಇಂದು ಬೆಳಿಗ್ಗೆ ಸುಮಾ ಮತ್ತು ಅನುಸೂಯ ಅವರ ಮನೆಗೆ ಬಂದ ಐಟಿ ಇಲಾಖೆಯ ಅಧಿಕಾರಿಗಳು, ಆದಾಯ, ಉದ್ಯಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರಂತೆ.
ಆಪ್ತರು ಹೇಳಿರುವ ಪ್ರಕಾರ, ಈ ಇಬ್ಬರು ನಿರೂಪಕಿಯರು ಸರಿಯಾಗಿ ಜಿ.ಎಸ್.ಟಿ ಸಂದಾಯ ಮಾಡಿಲ್ಲ ಎಂಬ ಅನುಮಾನದ ಈ ಮೇಲೆ ದಾಳಿ ಮಾಡಲಾಗಿದೆಯಂತೆ.

ಸುಮಾ ಮತ್ತು ಅನುಸೂಯ ಮಾತ್ರವಲ್ಲ, ತೆಲುಗು ನಟಿ ಲಾವಣ್ಯ ತ್ರಿಪಾಠಿ ಅವರ ಮನೆ ಮೇಲೆ ದಾಳಿ ನಡೆಸಿದ್ದಾರಂತೆ. ಈ ಮೂವರಿಗೆ ಸಂಬಂಧಿಸಿದ ಸಂಸ್ಥೆ, ಕಂಪನಿಗಳ ವಿವರ ಪಡೆದಿದ್ದು, ಎಲ್ಲವೂ ಸರಿಯಾಗಿದ್ಯಾ ಎಂದು ಪರಿಶೀಲಿಸಿದ್ದಾರಂತೆ.
ಕೇವಲ, ನಿರೂಪಕಿ ಮತ್ತು ನಟಿಯ ಮನೆ ಮೇಲೆ ಮಾತ್ರವಲ್ಲ, ಕೆಲವು ಸಾಫ್ಟ್ ವೇರ್ ಕಂಪನಿಗಳ ಮೇಲೂ ಜಿ.ಎಸ್.ಟಿ ಅಧಿಕಾರಿಗಳು ರೇಡ್ ಮಾಡಿದ್ದಾರೆ ಎನ್ನಲಾಗಿದೆ.
ಇತ್ತೀಚಿಗಷ್ಟೆ ತೆಲುಗು ಇಂಡಸ್ಟ್ರಿಯ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಗಳಾದ ಸುರೇಶ್ ಬಾಬು ನಿರ್ಮಾಣ ಸಂಸ್ಥೆ, ರಾಮಾನಾಯುಡು ಸ್ಟುಡಿಯೋ, ತೆಲುಗು ನಟ ನಾನಿ, ವೆಂಕಟೇಶ್, ನಾಗಚೈತನ್ಯ ಅವರ ಮನೆ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.


Click it and Unblock the Notifications











