ಪಟ್ಟು ಬಿಡದ ಜಗನ್ ಸರ್ಕಾರ, ಚಿತ್ರರಂಗವ 'ಸೋಲಿಸಲು' ನಾನಾ ಕಸರತ್ತು
ಆಂಧ್ರ ಪ್ರದೇಶದಲ್ಲಿ ಅಕ್ಷರಶಃ ಚಿತ್ರರಂಗ v/s ಜಗನ್ ಸರ್ಕಾರ ಪೈಪೋಟಿ ನಡೆದಿದೆ. ಒಬ್ಬರ ಮೇಲೆ ಮತ್ತೊಬ್ಬರು ಬಹಿರಂಗ ಹೋರಾಟಕ್ಕೆ ಇಳಿದಿದ್ದಾರೆ.
ಎಲ್ಲವೂ ಪ್ರಾರಂಭವಾಗಿದ್ದು ಚಿತ್ರಮಂದಿರಗಳ ಟಿಕೆಟ್ ಏರಿಕೆ ವಿಷಯವಾಗಿ ಚಿರಂಜೀವಿ, ಜಗನ್ ಅನ್ನು ಭೇಟಿಯಾಗಿ ಮನವಿ ಸಲ್ಲಿಸಿದಾಗ.
ಕೊರೊನಾದಿಂದ ತತ್ತರಿಸಿದ್ದ ಚಿತ್ರರಂಗ ಚೇತರಿಕೆಗೆ ಸರ್ಕಾರವು ನೆರವು ನೀಡಬೇಕು, ಚಿತ್ರಮಂದಿರಗಳ ಟಿಕೆಟ್ ದರ ಏರಿಕೆ ಮಾಡಬೇಕು ಎಂದು ನಟ ಚಿರಂಜೀವಿ ಹಾಗೂ ಚಿತ್ರರಂಗದ ಗಣ್ಯರು ಆಂಧ್ರ ಸಿಎಂ ಜಗನ್ ಅನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಆದರೆ ಮನವಿಗೆ ವ್ಯತಿರಿಕ್ತವಾಗಿ ಸ್ಪಂದಿಸಿದ ಜಗನ್, ಚಿತ್ರರಂಗದ ವ್ಯವಹಾರದಲ್ಲಿ ಪಾರದರ್ಶಕತೆ ಕೊರತೆ ಇದೆ ಎಂದು ಆರೋಪಿಸಿ, ಚಿತ್ರಮಂದಿರಗಳ ಟಿಕೆಟ್ ಏರಿಸುವ ಚಿತ್ರರಂಗದ ಮನವಿಗೆ ವಿರುದ್ಧವಾಗಿ ಟಿಕೆಟ್ ದರಗಳನ್ನು ಇಳಿಕೆ ಮಾಡಿದರು. ಕೆಲವು ಭಾಗಗಳಲ್ಲಿಯಂತೂ ಟಿಕೆಟ್ ದರವನ್ನು ಕೇವಲ 5 ರುಪಾಯಿ ಮಾಡಿಬಿಟ್ಟರು.

ಜಗನ್ ಸರ್ಕಾರದ ನಿರ್ಧಾರದ ವಿರುದ್ಧ ಚಿತ್ರರಂಗದ ಬೆಂಬಲದೊಂದಿಗೆ ಚಿತ್ರಮಂದಿರ ಮಾಲೀಕರ ಸಂಘ ಹೈಕೋರ್ಟ್ ಮೆಟ್ಟಿಲೇರಿತು. ವಾದ ಆಲಿಸಿದ ಆಂಧ್ರ ಹೈಕೋರ್ಟ್ ಟಿಕೆಟ್ ದರ ಇಳಿಕೆ ಮಾಡಿ ಆಂಧ್ರ ಸರ್ಕಾರ ಹೊರಡಿಸಿದ್ದ ಆದೇಶ ಸಂಖ್ಯೆ 35 ಅನ್ನು ರದ್ದು ಮಾಡುವಂತೆ ಸರ್ಕಾರಕ್ಕೆ ಸೂಚನೆ ನೀಡಿತು. ಜೊತೆಗೆ ಚಿತ್ರಮಂದಿರಗಳ ಟಿಕೆಟ್ ದರ ಏರಿಕೆ ಮಾಡುವ ಹಕ್ಕು ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿತು.
ಹೈಕೋರ್ಟ್ ಆದೇಶ ಚಿತ್ರರಂಗಕ್ಕೆ ದೊರೆತ ಜಯ ಎಂದು ನಟ ಬಾಲಕೃಷ್ಣ ಸೇರಿದಂತೆ ಚಿತ್ರರಂಗದ ಹಲವರು ಸಂಭ್ರಮ ಆಚರಿಸಿದರು. ಆದರೆ ಜಗನ್ ಸರ್ಕಾರ ಇಷ್ಟಕ್ಕೆ ಸುಮ್ಮನಾಗುತ್ತಿಲ್ಲ. ಇದೀಗ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮತ್ತೊಂದು ದಾವೆ ಹೂಡಲು ಮುಂದಾಗಿದೆ.
ಪ್ರಸ್ತುತ ಹೈಕೋರ್ಟ್ ನೀಡಿರುವ ಆದೇಶವು ಏಕಪಕ್ಷೀಯವಾಗಿದೆ ಎಂದಿರುವ ಸರ್ಕಾರದ ಪರ ವಕೀಲ ಬಿ ಆದಿನಾರಾಯಣ ರಾವ್, ಹೈಕೋರ್ಟ್ ಆದೇಶವನ್ನು ಸರ್ಕಾರವು ಪ್ರಶ್ನೆ ಮಾಡಲಿದೆ ಎಂದಿದೆ. ಸಿನಿಮಾ ಟಿಕೆಟ್ ದರಗಳು ಕಡಿಮೆ ಬೆಲೆಯಲ್ಲಿ ಜನರಿಗೆ ಧಕ್ಕುವಂತಾಗಬೇಕು ಎಂದು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರಕ್ಕೆ ಚಿತ್ರಮಂದಿರಗಳ ಟಿಕೆಟ್ ದರವನ್ನು ನಿಗದಿ ಮಾಡುವ ಅಧಿಕಾರ ಇದೆ ಎಂದ ಆದಿನಾರಾಯಣ್, ಬಜೆಟ್ ಅನುಸಾರವಾಗಿ ಸರ್ಕಾರವು ಚಿತ್ರಮಂದಿರಗಳ ಟಿಕೆಟ್ ದರವನ್ನು ನಿಗದಿ ಮಾಡಬಹುದಾಗಿದೆ ಹಾಗೂ ಚಿತ್ರಮಂದಿರಗಳು ಎಷ್ಟು ಶೋ ಪ್ರದರ್ಶಿಸಬಹುದು ಎಂಬ ನಿರ್ಣಯವನ್ನು ತೆಗೆದುಕೊಳ್ಳಬಹುದಾಗಿದೆ ಎಂದಿದ್ದಾರೆ.
ಟಿಕೆಟ್ ದರವನ್ನು ಇಳಿಸಿದ್ದ ಸರ್ಕಾರವು, ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿನ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ಪ್ರೀಮಿಯಂ ಟಿಕೆಟ್ ದರ 250 ರು ದಾಟುವಂತಿಲ್ಲ. ಡಿಲಕ್ಸ್ ವಿಭಾಗದ ದರ 150 ರು. ದಾಟುವಂತಿಲ್ಲ. ಎಕಾನಮಿ ಕ್ಲಾಸ್ ಟಿಕೆಟ್ 75 ರು. ದಾಟುವಂತಿಲ್ಲ. ಎಸಿ ಚಿತ್ರಮಂದಿರಗಳಲ್ಲಿ ಪ್ರೀಮಿಯಂ ಟಿಕೆಟ್ ದರ 100 ರು ದಾಟುವಂತಿಲ್ಲ, ಡಿಲಕ್ಸ್ 60 ರು. ಹಾಗೂ ಎಕಾನಮಿ 40 ರು ದಾಟುವಂತಿಲ್ಲ. ನಾನ್ ಎಸಿ ಚಿತ್ರಮಂದಿರಗಳಲ್ಲಿ, ಪ್ರೀಮಿಯಂ ಟಿಕೆಟ್ ದರ 60, ಡಿಲಕ್ಸ್ 40, ಎಕಾನಮಿ 20 ಇರಬೇಕು ಎಂದು ಆದೇಶಿಸಿತ್ತು. ಮುನ್ಸಿಪಾಲಿಟಿ ಪ್ರಾಂತ್ಯದಲ್ಲಿ ಮಲ್ಟಿಫ್ಲೆಕ್ಸ್‌ಗಳ ಪ್ರೀಮಿಯಂ ಟಿಕೆಟ್ ದರ 150, ಡಿಲಕ್ಸ್ 100, ಎಕಾನಮಿ 60 ರುಗಳನ್ನು ದಾಟುವಂತಿಲ್ಲ. ಎಸಿ ಚಿತ್ರಮಂದಿರಗಳ ಪ್ರೀಮಿಯಂ ಟಿಕೆಟ್ ದರ 70 ರು, ಡಿಲಕ್ಸ್ 50 ರು, ಎಕಾನಮಿ 30 ರು ದಾಟುವಂತಿಲ್ಲ. ನಗರ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಲ್ಟಿಫ್ಲೆಕ್ಸ್‌ನ ಪ್ರೀಮಿಯಂ ಟಿಕೆಟ್ ದರ 120 ರು, ಡಿಲಕ್ಸ್ ಟಿಕೆಟ್ ದರ 80 ರು, ಎಕಾನಮಿ 40 ರುಪಾಯಿ ಬೆಲೆ ದಾಟುವಂತಿಲ್ಲ. ಎಸಿ ಹೊಂದಿದ ಚಿತ್ರಮಂದಿರಗಳಲ್ಲಿ ಪ್ರೀಮಿಯಂ ಟಿಕೆಟ್ ದರ 35 ರು, ಡಿಲಕ್ಸ್ 25 ರು, ಎಕಾನಮಿ 15 ರು ದಾಟುವಂತಿಲ್ಲ. ಇನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಮಲ್ಟಿಫ್ಲೆಕ್ಸ್ ಪ್ರೀಮಿಯಂ ಟಿಕೆಟ್ ಬೆಲೆ 80 ರು, ಡಿಲಕ್ಸ್ 50 ರು, ಎಕಾನಮಿ 30 ರು. ಎಸಿ ಹೊಂದಿದ ಚಿತ್ರಮಂದಿರಗಳ ಪ್ರೀಮಿಯಂ ಟಿಕೆಟ್ ದರ 20 ರು. ಡಿಲಕ್ಸ್ 15 ರು, ಎಕಾನಮಿ 10 ರು. ಇನ್ನು ಎಸಿ ಇರದ ಚಿತ್ರಮಂದಿರಗಳ ಪ್ರೀಮಿಯಂ ಟಿಕೆಟ್ ದರ 15, ಡಿಲಕ್ಸ್ 10, ಎಕಾನಮಿ ಕ್ಲಾಸ್‌ನ ಟಿಕೆಟ್ ದರ 5 ರುಪಾಯಿ ದಾಟುವಂತಿಲ್ಲ ಎಂದು ಆದೇಶ ಹೊರಡಿಸಿತ್ತು. ಆದರೆ ಈ ಆದೇಶವನ್ನು ಹೈಕೋರ್ಟ್ ಅನೂರ್ಜಿತಗೊಳಿಸಿದೆ.


Click it and Unblock the Notifications











