Jailer: ಜೈಲರ್ ಯಶಸ್ಸಿಗಾಗಿ ಮಧುರೈನಲ್ಲಿ ರಜನಿ ಅಭಿಮಾನಿಗಳಿಂದ ವಿಶೇಷ ಪೂಜೆ
ರಜನಿ ಹಬ್ಬ ಶುರುವಾಗಲು ಒಂದು ದಿನ ಬಾಕಿಯಿದೆ. ಆದರೆ, ಅಭಿಮಾನಿಗಳಿಗೆ ಮಾತ್ರ ಮುಂಗಡ ಬುಕ್ಕಿಂಗ್ ಶುರುವಾದಾಗಿನಿಂದ ಆರಂಭವಾಗಿರುವ ಜಾತ್ರೆ. ರಜನಿಕಾಂತ್ ಅಭಿನಯದ ಜೈಲರ್ ಚಿತ್ರ ಬಿಡುಗಡೆಗೂ ಮುನ್ನ ಅವರ ಅಭಿಮಾನಿಗಳು ಇತ್ತೀಚೆಗೆ ತಿರುಪರಕುಂದ್ರಂ ಅಮ್ಮನ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿದ್ದಾರೆ. ಬಹುನಿರೀಕ್ಷಿತ ಜೈಲರ್ ಆಗಸ್ಟ್ 10 ರಂದು ಥಿಯೇಟರ್‌ಗೆ ಬರಲಿದೆ. ಚಿತ್ರದ ಯಶಸ್ಸಿಗಾಗಿ ತಲೈವರ್ ಅಭಿಮಾನಿಗಳು ಮಧುರೈನ ಅಮ್ಮನ್ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಸಿನಿಮಾದ ಅದ್ಧೂರಿ ಯಶಸ್ಸಿಗಾಗಿ ಅಭಿಮಾನಿಗಳು ವಿಶಿಷ್ಟ ತಪಸ್ಸು ಮನ್‌ಸೋರು ಅರ್ಪಿಸಿ ದೇವಸ್ಥಾನದ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದ್ದಾರೆ. ರಜನಿಕಾಂತ್ ಅವರ ಅಭಿಮಾನಿಯೊಬ್ಬರು ಎಎನ್‌ಐಗೆ ಈ ಬಗ್ಗೆ ಮಾಹಿತಿ ನೀಡಿದ್ದು, "ನಾನು 40 ವರ್ಷಗಳಿಂದ ರಜನಿ ಅಭಿಮಾನಿ. ರಜನಿ ಅವರ ಪಡೆಯಪ್ಪನಿಂದ ಹಿಡಿದು ಇಂದಿನವರೆಗೆ ನಾನು ಅವರ ಚಿತ್ರದ ಯಶಸ್ಸಿಗಾಗಿ ವಿವಿಧ ಪ್ರಾರ್ಥನೆಗಳನ್ನು ಮಾಡುತ್ತಿದ್ದೇನೆ. ಇಂದು ನಾನು ರಜನಿ ಅವರ 169 ನೇ ಚಿತ್ರ ಜೈಲರ್ ಯಶಸ್ವಿಯಾಗಲಿ ಎಂದು ಪ್ರಾರ್ಥಿಸುತ್ತಿದ್ದೇನೆ" ಎಂದಿದ್ದಾರೆ.

"ಮಧುರೈ ಜಿಲ್ಲೆಯ ಪರವಾಗಿ ರಜನಿ ಅವರ ಜೈಲರ್ ಚಿತ್ರದ ಯಶಸ್ಸಿಗೆ ಪ್ರಾರ್ಥಿಸಿದ್ದೇವೆ. ರಜನಿ ಅವರ ಅಭಿಮಾನಿಗಳಿಗಾಗಿ ಒಳ್ಳೆಯ ಸಂದೇಶ ನೀಡುತ್ತಿದ್ದಾರೆ. ಆಡಿಯೋ ಬಿಡುಗಡೆಯಲ್ಲಿ ರಜಿನಿ ತಮ್ಮ ಅಭಿಮಾನಿಗಳಿಗೆ ಕುಡಿಯಬೇಡಿ ಎಂದು ಹೇಳಿದ್ದಾರೆ. ಹೀಗಾಗಿ ನಾವು ಕುಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇವೆ" ಎಂದು ಇನ್ನೊಬ್ಬ ಅಭಿಮಾನಿ ಹೇಳಿದ್ದಾರೆ.
ಜೈಲರ್ ನಾಳೆ ತೆರೆಗೆ
ಜೈಲರ್ ಒಂದು ಆಕ್ಷನ್ ಎಂಟರ್‌ಟೈನರ್ ಸಿನಿಮಾ. ಚಿತ್ರದಲ್ಲಿ ಜಾಕಿ ಶ್ರಾಫ್, ಪ್ರಿಯಾಂಕಾ ಮೋಹನ್, ಶಿವ ರಾಜ್‌ಕುಮಾರ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ್ ರವಿ, ವಿನಾಯಕನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ದೊಡ್ಡ ತಾರಾ ಬಳಗವನ್ನು ಹೊಂದಿದೆ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಮಲಯಾಳಂ ನಟ ಮೋಹನ್‌ಲಾಲ್ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ, ಪ್ರೊಡಕ್ಷನ್ ಹೌಸ್ ಸನ್ ಪಿಕ್ಚರ್ಸ್ ಜೈಲರ್ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಿತ್ತು.

ದೇಶಾದ್ಯಂತ ಜೈಲರ್ ಚಿತ್ರ ದಾಖಲೆಯ ಬುಕಿಂಗ್ ಕಾಣುವುದರ ಜೊತೆಗೆ ಬೇಡಿಕೆಗೆ ತಕ್ಕ ಹಾಗೆ ಹೆಚ್ಚೆಚ್ಚು ಶೋಗಳನ್ನೂ ಸಹ ಪಡೆದುಕೊಳ್ಳುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಸಹ ಜೈಲರ್ ಚಿತ್ರದ ಮುಂಗಡ ಬುಕಿಂಗ್ ಕಳೆದ ಐದು ದಿನಗಳ ಹಿಂದೆಯೇ ಆರಂಭಗೊಂಡಿದ್ದು, ಮೊದಲ ದಿನದ ಶೋಗಳಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಈ ಮೂಲಕ ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರ ನಿರ್ಮಿಸಿದ್ದ ದಾಖಲೆಯನ್ನು ಮುರಿದು ಹಾಕಿದೆ.


Click it and Unblock the Notifications











