Janasena- TDP: ರಾಜಮಂಡ್ರಿ ಜೈಲು ಸಾಕ್ಷಿಯಾಗಿ ಜನಸೇನಾ- ಟಿಡಿಪಿ ಮೈತ್ರಿ: ಆಂಧ್ರ ಸಿಎಂ ಜಗನ್‌ಗೆ ಪವನ್ ಸವಾಲು
ಆಂಧ್ರ ರಾಜಕೀಯ ದಿನದಿಂದ ದಿನಕ್ಕೆ ಬಹಳ ಕುತೂಹಲ ಕೆರಳಿಸುತ್ತಿದೆ. ಇದೀಗ ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಟಿಡಿಪಿ ಜೊತೆ ಮೈತ್ರಿ ಘೋಷಿಸಿದೆ. ಕಳೆದ ಬಾರಿ ಸ್ವಂತ ಪಕ್ಷ ಕಟ್ಟಿ ಚುನಾವಣೆ ಎದುರಿಸಿದ್ದ ಪವನ್ ಕಲ್ಯಾಣ್ ಹೀನಾಯವಾಗಿ ಸೋಲುಂಡಿದ್ದರು. ಆದರೆ ಛಲ ಬಿಡದೇ ಪಕ್ಷ ಸಂಘಟಿಸುತ್ತಾ ಬಂದರು.
ಮುಂದಿನ ಚುನಾವಣೆಯಲ್ಲಿ ವೈಸಿಪಿ ಸರ್ಕಾರವನ್ನು ಕೆಳಗಿಸಬೇಕು ಎಂದು ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಜೊತೆ ಕೈ ಜೋಡಿಸಿದ್ದಾರೆ. ತೆಲುಗು ದೇಶಂ ಪಕ್ಷದ ನಾಯಕ ಸದ್ಯ ಸಿಐಡಿ ವಶದಲ್ಲಿದ್ದಾರೆ. 2014-2019ರ ನಡುವೆ ಕೌಶಲ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣದಲ್ಲಿ ಆಂಧ್ರ ಮಾಜಿ ಸಿಂಎ ಬಂಧನಕ್ಕೊಳಗಾಗಿದ್ದಾರೆ. ಇತ್ತೀಚೆಗೆ ಪವನ್, ಚಂದ್ರಬಾಬು ನಾಯ್ಡು ಭೇಟಿ ಮುಂದಾದಾಗ ಭಾರೀ ಹೈಡ್ರಾಮಾ ನಡೆದಿತ್ತು. ಪೊಲೀಸರು ಪವನ್ ಕಲ್ಯಾಣ್ ಅವರನ್ನು ಕೂಡ ವಶಕ್ಕೆ ಪಡೆದು ಬಿಟ್ಟಿದ್ದರು.

ಸದ್ಯ ರಾಜಮಂಡ್ರಿ ಜೈಲಿನಲ್ಲಿರುವ ಚಂದ್ರಬಾಬು ನಾಯ್ಡು ಅವರನ್ನು ಪವನ್ ಕಲ್ಯಾಣ್, ಬಾಲಕೃಷ್ಣ ಹಾಗೂ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಭೇಟಿಯಾಗಿ ಚರ್ಚಿಸಿದರು. ಬಳಿಕ ಮಾಧ್ಯಮಗಳ ಜೊತೆ ಪವನ್ ಕಲ್ಯಾಣ್ ಮಾತನಾಡಿದರು. "ಚಂದ್ರಬಾಬು ವಿರುದ್ಧ ಅಕ್ರಮ ಪ್ರಕರಣಗಳನ್ನು ದಾಖಲಿಸಿ ಅನ್ಯಾಯವಾಗಿ ಜೈಲಿಗೆ ಹಾಕಲಾಗಿದೆ. ಅವರೊಟ್ಟಿಗೆ ಒಗ್ಗಟ್ಟು ವ್ಯಕ್ತಪಡಿಸಲು ಇಲ್ಲಿಗೆ ಬಂದಿದ್ದೇನೆ. ಚಂದ್ರಬಾಬು ಅವರಿಗೆ ಜೈಲಿನಲ್ಲಿ ಹೆಚ್ಚಿನ ಭದ್ರತೆ ನೀಡಬೇಕು ಎಂದು ಪವನ್ ಆಗ್ರಹಿಸಿದರು. ಬಾಬು ಬಂಧನದ ಹಿಂದೆ ಬಿಜೆಪಿ ಕೈವಾಡವಿದೆ ಅನ್ನೋದನ್ನು ನಾನು ಒಪ್ಪಲ್ಲ. ಅವರ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ" ಎಂದರು.
ಆಂಧ್ರ ರಾಜಕೀಯದಲ್ಲಿ ಅರಾಜಕತೆ ತಲೆದೋರಿದೆ. 2024ರ ಚುನಾವಣೆಯಲ್ಲಿ ಜನಸೇನಾ ಮತ್ತು ಟಿಡಿಪಿ ಒಟ್ಟಿಗೆ ಹೋಗುತ್ತವೆ. ನಮ್ಮೊಟ್ಟಿಗೆ ಬರುವ ಪಕ್ಷಗಳ ಜೊತೆ ಒಟ್ಟಾಗಿ ಸ್ಪರ್ಧಿಸುತ್ತೇವೆ. ವೈಸಿಪಿ ಸರ್ಕಾರದ ವಿರುದ್ಧದ ಮತಗಳನ್ನು ಒಡೆಯಲು ಬಿಡುವುದಿಲ್ಲ. ಆಂಧ್ರಪ್ರದೇಶದ ಭವಿಷ್ಯ ಉತ್ತಮವಾಗಿರಲಿ ಎಂಬುದೇ ನನ್ನ ಆಶಯ. ಅದಕ್ಕೆ ತಕ್ಕಂತೆ ಜನಸೇನಾ-ಟಿಡಿಪಿ ಒಟ್ಟಾಗಿ ಕೆಲಸ ಮಾಡಲಿದೆ. ಜಗನ್‌ಗೆ ಇನ್ನು 6 ತಿಂಗಳು ಬಾಕಿ ಇದೆ.. ಅವರು ಯುದ್ಧ ಬಯಸಿದರೆ ಅದಕ್ಕು ಮುನ್ನವೇ ನಾವು ಸಿದ್ಧ ಎಂದು ಪವನ್ ಹೇಳಿದ್ದಾರೆ.
ನಾಳೆಯಿಂದ ಟಿಡಿಪಿ-ಜನಸೇನೆ ಒಟ್ಟಾಗಿ ಕೆಲಸ ಮಾಡಲಿದೆ ಎಂದಿದ್ದಾರೆ. ನಮ್ಮೊಟ್ಟಿಗೆ ಬಿಜೆಪಿ ಕೂಡ ಬರಲಿದೆ ಎಂದು ಪವನ್ ಭರವಸೆ ವ್ಯಕ್ತಪಡಿಸಿದರು. ಟಿಡಿಪಿ-ಜನಸೇನಾ ಜಂಟಿ ಚಟುವಟಿಕೆಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಈ ಮೈತ್ರಿಯ ನಿರ್ಧಾರ ಇಂದು ತೆಗೆದುಕೊಂಡಿದ್ದೇನೆ. ಲೋಕೇಶ್, ಬಾಲಕೃಷ್ಣ ಅವರ ಪಕ್ಕದಲ್ಲಿ ನಿಂತು ರಾಜಕೀಯದ ಬಗ್ಗೆ ಮಾತನಾಡುವಂತಾಗುತ್ತದೆ ಎಂದು ನಾನು ಎಂದೂ ಅಂದುಕೊಂಡಿರಲಿಲ್ಲ. ಆದರೆ ಈ ಅವಕಾಶವನ್ನು ವೈಸಿಪಿ ಮತ್ತು ಸಿಎಂ ಜಗನ್ ಒದಗಿಸಿದ್ದಾರೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ಈ ಹಿಂದೆ ಚಿರಂಜೀವಿ 'ಪ್ರಜಾರಾಜ್ಯಂ' ಪಕ್ಷ ಸ್ಥಾಪಿಸಿ ರಾಜಕೀಯರಂಗಕ್ಕೆ ಧುಮುಕ್ಕಿದ್ದರು. ಆದರೆ ಪವನ್ ಅಣ್ಣನ ಬೆಂಬಲಕ್ಕೆ ನಿಂತಿದ್ದರು. ಆದರೆ ಚಿರಂಜೀವಿಗೆ ರಾಜಕೀಯರಂಗದಲ್ಲಿ ಗೆಲುವು ಸಿಗಲಿಲ್ಲ. ಹಾಗಾಗಿ ಮತ್ತೆ ಚಿತ್ರರಂಗಕ್ಕೆ ವಾಪಸ್ ಬಂದರು. ಆ ಬಳಿಕ ಪವನ್ ಕಲ್ಯಾಣ್ ಜನಸೇನಾ ಪಕ್ಷ ಸ್ಥಾಪಿಸಿದರು. ಕಳೆದ ಬಾರಿ ಸೋತರೂ ಈ ಬಾರಿ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಅದಕ್ಕಾಗಿ ಎಲ್ಲಾ ತರಹದ ತ್ಯಾಗಕ್ಕೂ ಸಿದ್ಧರಾಗಿದ್ದಾರೆ. ಇದೀಗ ಟಿಡಿಪಿ ಜೊತೆ ಮೈತ್ರಿಗೂ ಮುಂದಾಗಿದ್ದಾರೆ.


Click it and Unblock the Notifications











