ಅಲ್ಲು ಅರ್ಜುನ್ ಹೋಗಿ ಚಿರು-ಪವನ್ ಪಾದ ತೊಳೀಬೇಕು, 'ಪುಷ್ಪ-2' ಹೇಗೆ ರಿಲೀಸ್ ಆಗುತ್ತೆ ನೋಡ್ತೀನಿ
ಮೆಗಾ ಫ್ಯಾನ್ಸ್ ಹಾಗೂ ಅಲ್ಲು ಫ್ಯಾನ್ಸ್ ನಡುವೆ ತಿಕ್ಕಾಟ ಮುಂದುವರೆದಿದೆ. ಇತ್ತೀಚೆಗೆ ಅಲ್ಲು ಅರ್ಜುನ್ ಹೇಳಿಕೆ ಬಗ್ಗೆ ಜನಸೇನಾ ಶಾಸಕ ಗರಂ ಆಗಿದ್ದರು. ಪವನ್ ಪರ ವಹಿಸಿ ಅಲ್ಲು ಅರ್ಜುನ್ ಬಗ್ಗೆ ವ್ಯಂಗ್ಯ ಮಾಡಿ ಕಾಮೆಂಟ್ ಮಾಡಿದ್ದರು. ಆತ ಏನು ದೊಡ್ಡ ಪುಡುಂಗಾ ಎಂದು ಟೀಕಿಸಿದ್ದರು.
ಅಲ್ಲು ಅರ್ಜುನ್ ಇತ್ತೀಚಿನ ದಿನಗಳಲ್ಲಿ ಮೆಗಾ ಫ್ಯಾಮಿಲಿಯಿಂದ ಹೆಚ್ಚು ಹೆಚ್ಚು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಆಂಧ್ರ ಚುನಾವಣೆ ವೇಳೆ ಪವನ್ ಬದಲು ವೈಸಿಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗಿದ್ದು ಮೆಗಾ ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿತ್ತು. ಈ ಬಗ್ಗೆ ಭಾರೀ ಟ್ರೋಲ್ ಎದುರಿಸಿದರು. ನಾಗಬಾಬು ಕೂಡ ಟೀಕಿಸಿ ಟ್ವೀಟ್ ಮಾಡಿದ ಬಳಿಕ ಡಿಲೀಟ್ ಮಾಡಿದ್ದರು.

ಚಿರಂಜೀವಿ ಪ್ರಭಾವಳಿಯಲ್ಲೇ ಅಲ್ಲು ಅರ್ಜುನ್ ಕೂಡ ಬೆಳೆದು ಬಂದವರು. ಆದರೆ ಬಳಿಕ ತಮ್ಮದೇ ವಿಭಿನ್ನ ಮ್ಯಾನರಿಸಂ, ಸ್ಟೈಲ್‌ನಿಂದ ಅಭಿಮಾನಿಗಳ ಮನಗೆದ್ದರು. ತಮ್ಮದೇ ಪರಿಶ್ರಮದಿಂದ ದೊಡ್ಡ ಅಭಿಮಾನಿಗಳ ಬಳಗ ಸೃಷ್ಟಿಸಿಕೊಂಡವರು. ಬೆಳೆದುಬಿಟ್ಟಿದ್ದೇನೆ ಎನ್ನುವ ಅಹಂನಿಂದ ಅಲ್ಲು ಅರ್ಜುನ್ ಈಗ ಈ ರೀತಿ ಮಾಡುತ್ತಿದ್ದಾರೆ ಎನ್ನುವುದು ಮೆಗಾ ಫ್ಯಾಮಿಲಿ ಫ್ಯಾನ್ಸ್ ಆರೋಪ.
ವಾರದ ಹಿಂದೆ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿ ಅಲ್ಲು ಅರ್ಜುನ್ ಬಂದಿದ್ದರು. ಈ ವೇಳೆ ಮಾತನಾಡುತ್ತಾ ನನಗೆ ಇಷ್ಟವಿದ್ದರೆ ಮಾತ್ರ ಯಾವುದೇ ಜಾಗಕ್ಕೆ ಹೋಗುತ್ತೇನೆ ಎಂದಿದ್ದರು. ಪರೋಕ್ಷವಾಗಿ ಪವನ್ ಕಲ್ಯಾಣ್ ಪರ ಯಾಕೆ ಪ್ರಚಾರ ಮಾಡಲಿಲ್ಲ ಎಂದು ಬನ್ನಿ ಹೀಗೆ ಹೇಳಿದ್ದಾರೆ ಎಂದು ಚರ್ಚೆ ಆಯಿತು. ಇಷ್ಟಪಟ್ಟು ವೈಸಿಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗಿದ್ದರು. ಅಂದರೆ ಪವನ್ ಕಲ್ಯಾನ್ ಪರ ನಿಲ್ಲುವುದು ಇಷ್ಟವಿಲ್ಲದೇ? ಎಂದು ಕೆಲವರು ಕೇಳಿದ್ದರು.

ಸದ್ಯ ಅಲ್ಲು ಅರ್ಜುನ್ ವಿರುದ್ಧ ಜನಸೇನಾ ಮುಖಂಡ ಚಲಮಲಶೆಟ್ಟಿ ರಮೇಶ್ ಬಾಬು ಆಕ್ರೋಶ ಹೊರ ಹಾಕಿದ್ದಾರೆ. ಸ್ಟೈಲಿಶ್ ಸ್ಟಾರ್ ಹೋಗಿ ಚಿರು- ಪವನ್ ಕಾಲು ಹಿಡಿಯದಿದ್ದರೆ ಆತನ 'ಪುಷ್ಪ-2' ಸಿನಿಮಾ ಬಿಡುಗಡೆ ಅವಕಾಶ ಕೊಡಲ್ಲ ಎಂದು ಎಚ್ಚರಿಸಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿದ ಚಲಮಲಶೆಟ್ಟಿ ರಮೇಶ್ ಬಾಬು, "ಅಲ್ಲು ಅರ್ಜುನ್ ನಿನ್ನನ್ನು ನೀರು ಹೀರೊ ಅಂದುಕೊಂಡಿದ್ದೀಯಾ, ನೀನು ಕಾಮೆಡಿಯನ್" ಎಂದು ವ್ಯಂಗ್ಯವಾಡಿದ್ದಾರೆ.
"ಚಿರಂಜೀವಿ, ಪವನ್ ಕಲ್ಯಾಣ್ ಹಾಗೂ ನಾಗಬಾಬು ಅವರ ಹಿಂದೆ ನೀನು ಚಿತ್ರರಂಗಕ್ಕೆ ಬಂದೆ. ಅವರನ್ನು ಟೀಕಿಸುವ ಸ್ಥಾನದಲ್ಲಿ ನೀನು ಇಲ್ಲ. ಬ್ಲಡ್ ಬ್ಯಾಂಕ್ ಸೇರಿ ಚಿರು ಸಾಕಷ್ಟು ಸಮಾಜಸೇವೆ ಮಾಡಿದ್ದಾರೆ. ನೀನು ನೆರಳು ಕೊಟ್ಟ ಮರವನ್ನೇ ಟೀಕಿಸುತ್ತಿದ್ದೀಯಾ. ನೀನು- ನಿಮ್ಮ ಅಪ್ಪ ಯಾರಿಗೂ ಒಂದು ಪೈಸೆ ಸಹಾಯ ಮಾಡಲ್ಲ. ನಿಮ್ಮ ಸ್ಥಾನ ಎಂಥದ್ದು. ನೀನು ಏನು ಅನ್ನುವುದು ತಿಳ್ಕೋ" ಎಂದು ರಮೇಶ್ ಹೇಳಿದ್ದಾರೆ.
ನೀನು ಹೋಗಿ ಚಿರಂಜೀವಿ, ಪವನ್ ಕಲ್ಯಾಣ್ ಹಾಗೂ ನಾಗಬಾಬು ಅವರ ಪಾದ ತೊಳೆದು ಆ ನೀರನ್ನು ತಲೆ ಮೇಲೆ ಹಾಕಿಕೊಳ್ಳದ ಹೊರತು ನೀನು ಮಾಡಿದ ತಪ್ಪು ಸರಿಯಾಗಲ್ಲ. 'ಪುಷ್ಪ'-2 ನಮ್ಮ ಕ್ಷೇತ್ರದಲ್ಲಿ ಹೇಗೆ ಪ್ರದರ್ಶನ ಕಾಣುತ್ತದೇ ನೋಡ್ತೀನಿ ಎಂದು ಸವಾಲು ಹಾಕಿದ್ದಾರೆ. ಒಟ್ಟಾರೆ ಅಲ್ಲು ಅರ್ಜುನ್ ವರ್ಸಸ್ ಜನಸೇನಾ ತಿಕ್ಕಾಟ ಮುಂದುವರೆದಿದೆ.
ಅಲ್ಲು ಅರ್ಜುನ್ ನಟನೆಯ 'ಪುಷ್ಪ-2' ಸಿನಿಮಾ ಡಿಸೆಂಬರ್ 6ಕ್ಕೆ ತೆರೆಗೆ ಬರಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೊದಲ ಭಾಗ ಹಿಟ್ ಆಗಿದೆ. ಹಾಗಾಗಿ ಸಹಜವಾಗಿಯೇ ಸೀಕ್ವೆಲ್ ನಿರೀಕ್ಷೆ ಮೂಡಿಸಿದೆ. ಆದರೆ ಪದೇ ಪದೆ ಸಿನಿಮಾ ರಿಲೀಸ್ ಡೇಟ್ ಬದಲಾಗುತ್ತಲೇ ಇದೆ.


Click it and Unblock the Notifications











