ಅಲ್ಲು ಅರ್ಜುನ್ ಏನ್ ದೊಡ್ಡ ಪುಡಾಂಗಾ? ಅವ್ನಿಗೆ ಯಾವ್ ಸೀಮೆ ಫ್ಯಾನ್ಸ್ ಇದ್ದಾರೆ?; ಜನಸೇನಾ ಶಾಸಕ
ಮೂರು ವರ್ಷಗಳ ಹಿಂದೆ ಜೋಗಿ ಪ್ರೇಮ್ ಬಗ್ಗೆ ಮಾತನಾಡುತ್ತಾ ನಟ ದರ್ಶನ್ ಪುಡಾಂಗ್ ಎನ್ನುವ ಪದ ಬಳಸಿದ್ದರು. ಇದ್ದಕ್ಕಿದಂತೆ ಆ ಪದ ವೈರಲ್ ಆಗಿತ್ತು. ಆ ಪದದ ಅರ್ಥ ಏನು? ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದರು. ಇದೀಗ ಇದೇ ಪದ ಬಳಸಿ ತೆಲುಗು ನಟ ಅರ್ಜುನ್ ಬಗ್ಗೆ ಜನಸೇನಾ ಶಾಸಕರೊಬ್ಬರು ವ್ಯಂಗ್ಯವಾಡಿದ್ದಾರೆ.
ಟಾಲಿವುಡ್‌ನಲ್ಲಿ ಮೆಗಾ ಫ್ಯಾನ್ಸ್ ವರ್ಸಸ್ ಅಲ್ಲು ಫ್ಯಾನ್ಸ್ ತಿಕ್ಕಾಟ ಗೊತ್ತೇಯಿದೆ. ಚಿರಂಜೀವಿ ಫ್ಯಾಮಿಲಿ ಹಾಗೂ ಅಲ್ಲು ಅರವಿಂದ್ ಫ್ಯಾಮಿಲಿ ನಡುವೆ ಎಲ್ಲವೂ ಸರಿಯಿಲ್ಲ ಎಂದು ಪದೇ ಪದೆ ಹೇಳಲಾಗುತ್ತಿದೆ. ಆದರೆ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಎಲ್ಲರೂ ಹೇಳಿಕೊಂಡೇ ಬರುತ್ತಿದ್ದಾರೆ. ಆದರೆ ಕೆಲವೊಮ್ಮೆ ಅದು ಬಹಿರಂಗವಾಗಿ ಚರ್ಚೆ ಹುಟ್ಟು ಹಾಕುತ್ತಿದೆ.

ಆಂಧ್ರ ಚುನಾವಣೆ ವೇಳೆ ಅಲ್ಲು ಅರ್ಜುನ್ ವೈಸಿಪಿ ಅಭ್ಯರ್ಥಿಯ ಪರ ಪ್ರಚಾರಕ್ಕೆ ಹೋಗಿದ್ದರು. ಜನಸೇನಾ ಪಕ್ಷದಿಂದ ಪವನ್ ಕಲ್ಯಾಣ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಮಾವನಿಗೆ ಬೆಂಬಲ ನೀಡುವುದು ಬಿಟ್ಟು ಎದುರಾಳಿ ಪಕ್ಷದ ಅಭ್ಯರ್ಥಿ ಪರ ಬನ್ನಿ ಪ್ರಚಾರ ಮಾಡಿದ್ದು ಸಹಜವಾಗಿಯೇ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಪರೋಕ್ಷವಾಗಿ ಪವನ್ ಸಹೋದರ ನಾಗಬಾಬು ಸಹ ಬೇಸರ ಹೊರ ಹಾಕಿದ್ದರು.
ಇತ್ತೀಚೆಗೆ ವೇದಿಕೆಯೊಂದರಲ್ಲಿ ಮಾತನಾಡಿದ್ದ ನಟ ಅಲ್ಲು ಅರ್ಜುನ್ ನನಗೆ ಇಷ್ಟವಿದ್ದರೆ ಮಾತ್ರ ಯಾವುದೇ ಜಾಗಕ್ಕೆ ಹೋಗುತ್ತೇನೆ. ಯಾವುದೇ ವೇದಿಕೆ ಏರುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದರು. ಪರೋಕ್ಷವಾಗಿ ಹಿಂದೆ ವೈಸಿಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗಿದ್ದನ್ನು ಅವರು ಸಮರ್ಥಿಸಿಕೊಂಡಿದ್ದರು. ಪವನ್ ಕಲ್ಯಾಣ್‌ಗೆ ಬೆಂಬಲ ಸೂಚಿಸಲು ಇಷ್ಟವಿಲ್ಲ ಎಂದು ಪರೋಕ್ಷವಾಗಿ ಹೇಳಿದಂತಿತ್ತು.
ಅಲ್ಲು ಅರ್ಜುನ್ ಹೇಳಿಕೆ ಬಗ್ಗೆ ಇತ್ತೀಚೆಗೆ ಜನಸೇನಾ ಶಾಸಕ ಬೋಲಿಶೆಟ್ಟಿಗೆ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಉತ್ತರಿಸಿದ ಅವರು ಅಲ್ಲು ಅರ್ಜುನ್ ಬಗ್ಗೆ ವ್ಯಂಗ್ಯವಾಡಿದ್ದಾರೆ. "ಅಲ್ಲು ಅರ್ಜುನ್‌ಗೆ ಫ್ಯಾನ್ಸ್ ಇದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಇರುವುದು ಮೆಗಾ ಫ್ಯಾನ್ಸ್ ಮಾತ್ರ. ಅವರ ಫ್ಯಾಮಿಲಿಯಿಂದ ಬಂದವರು ಬ್ರ್ಯಾಂಚ್ ರೀತಿ ಶಾಮಿಯಾನ, ಟೆಂಟ್ ಕಂಪೆನಿ ರೀತಿ ಆರಂಭಿಸಿದರೆ ನನಗೆ ಗೊತ್ತಿಲ್ಲ. ಇರುವುದೆಲ್ಲಾ ಮೆಗಾ ಫ್ಯಾನ್ಸ್ ಅಷ್ಟೇ" ಎಂದು ಶಾಸಕ ಬೋಲಿಶೆಟ್ಟಿ ಹೇಳಿದ್ದಾರೆ.

"ಇಲ್ಲಿ ಇರುವುದು ಚಿರಂಜೀವಿ ಫ್ಯಾಮಿಲಿ ಮಾತ್ರ. ಅಲ್ಲು ಅರ್ಜುನ್ ತನಗೂ ಫ್ಯಾನ್ಸ್ ಇದ್ದಾರೆ ಎಂದು ಊಹಿಸಿಕೊಂಡರೆ ನಾನೇನು ಮಾಡೋಕೆ ಆಗೊಲ್ಲ. ಅವರ ಸ್ಥಾನ ಮರೆತು ಮಾತನಾಡುತ್ತಿದ್ದಾರೆ. ಎಚ್ಚರದಿಂದ ಮಾತನಾಡಬೇಕು. ಪವನ್ ಕಲ್ಯಾಣ್, ರಾಮ್‌ಚರಣ್ ಎಲ್ಲರಲ್ಲೂ ಚಿರಂಜೀವಿ ಫ್ಯಾನ್ಸ್ ತಮ್ಮ ನೆಚ್ಚಿನ ನಟ ಚಿರಂಜೀವಿಯನ್ನೇ ನೋಡಿಕೊಳ್ಳುತ್ತಿದ್ದಾರೆ. ಅದೆಲ್ಲಾ ಬಿಟ್ಟು ನಾನೇ ದೊಡ್ಡ ಪುಡಾಂಗ್, ನನ್ನಗಿಷ್ಟ ಇದ್ದರೆ ಬರ್ತೀನಿ ಅಂದ್ರೆ ಬರಬೇಡ ಹೋಗು" ಎಂದು ತಿರುಗೇಟು ನೀಡಿದ್ದಾರೆ.
ಜನಸೇನಾ ಶಾಸಕ ಬೋಲಿಶೆಟ್ಟಿ ಹೇಳಿಕೆಗೆ ಅಲ್ಲು ಅರ್ಜುನ್ ಫ್ಯಾನ್ಸ್ ಕೆಂಡಾಮಂಡಲವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಮಾಡುತ್ತಿದ್ದಾರೆ. ಇನ್ನು ತಮ್ಮ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಬೋಲಿಶೆಟ್ಟಿ ನಾನು ಒಬ್ಬ ಚಿರಂಜೀವಿ ಅಭಿಮಾನಿಯಾಗಿ ಆ ಮಾತು ಹೇಳಿದ್ದೇನೆ. ಅದು ನನ್ನ ವೈಯಕ್ತಿಕ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಈ ಬಗ್ಗೆ ಅಲ್ಲು ಅರ್ಜುನ್ ಪ್ರತಿಕ್ರಿಯಿಸುತ್ತಾರಾ ಕಾದು ನೋಡಬೇಕಿದೆ.
ಜೋಗಿ ಪ್ರೇಮ್ ನಿರ್ದೇಶನದ 'ಕರಿಯ' ಸಿನಿಮಾ ರೀ-ರಿಲೀಸ್‌ಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಪ್ರೇಮ್ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದೆ ದರ್ಶನ್ ಪುಡಾಂಗ್ ಎಂದು ಹೇಳಿದ ಮಾತು ವೈರಲ್ ಆಗುತ್ತಿದೆ. ಇನ್ನು ಪುಡಾಂಗ್ ಎಂದರೆ ಏನ್ ದೊಡ್ಡ ವ್ಯಕ್ತಿನಾ? ಭಾರೀ ಚಾಲಾಕಿನಾ? ದೊಡ್ಡ ಪಂಟರಾ? ಎನ್ನುವ ಅರ್ಥ ಇದೆ.


Click it and Unblock the Notifications











