'ಪೆದ್ದಿ' ಪಾರ್ಟಿಗೆ ಬಹಿಷ್ಕಾರ ಹಾಕಿದ ಜಾಹ್ನವಿ ಕಪೂರ್ ? 'ಅಚ್ಚಿಯಮ್ಮ' ಮೇಲೆ ರಾಮ್‌ಚರಣ್‌ಗೆ ಕೆಂಡದಂತ ಕೋಪ ?
ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಪ್ರಪಂಚದಲ್ಲಿ ಹಲವಾರು ಕಥೆಗಳಿರುತ್ತವೆ. ಒಂದು ಚಿತ್ರದ ಹಿಂದೆ ನೂರಾರು ವ್ಯಥೆಗಳಿರುತ್ತವೆ. ಯಾರೊಬ್ಬರ ಪಾಲ್ಗೊಳ್ಳುವಿಕೆಯಿಂದ ಆಗುವಂತಹದ್ದಲ್ಲ ಸಿನಿಮಾ. ನೂರಾರು ಕಾರ್ಮಿಕರ ಬೆವರಿನ ಹನಿಗಳಿಂದ, ತಂತ್ರಜ್ಞರ ರಕ್ತಗತ ಶ್ರಮದಿಂದ ಬೆಳ್ಳಿ ಪರದೆಯ ಮೇಲೆ ದೃಶ್ಯ ಕಾವ್ಯ ಸೃಷ್ಟಿಯಾಗುತ್ತದೆ.
ಆದರೆ ಇದೇ ಮನರಂಜನೆ ಜಗತ್ತಿನಲ್ಲಿ ನಾಯಕಿಯರನ್ನು ಬಿಂಬಿಸುವ ವಿಧಾನ ಮಾತ್ರ ಸಾರ್ವಕಾಲಿಕ ಚರ್ಚಿತ ವಿಷಯ. ನಾಯಕಿಯರ ಅಭಿನಯ ಸಾಮರ್ಥ್ಯಕ್ಕೆ ಬೆಲೆ ನೀಡದೇ, ಅವರಲ್ಲಿನ ಕಲೆಗೆ ಗೌರವ ಕೊಡದೇ, ಕೇವಲ ಅಂಗಾಂಗ ಪ್ರದರ್ಶನಕ್ಕಷ್ಟೇ ನಾಯಕಿಯರನ್ನು ಇಲ್ಲಿ ಹಲವರು ಸೀಮಿತ ಮಾಡುತ್ತಾರೆ.

ನಿಜ. ಇಂದಿನ ಕಮರ್ಷಿಯಲ್ ಯುಗದಲ್ಲಿ ಚಿತ್ರದ ಮೆರಗು ಹೆಚ್ಚಿಸಲು ಗ್ಲ್ಯಾಮರ್ ಬೇಕು. ಆದರೆ, ಊಟದ ಜೊತೆ ಉಪ್ಪಿನಕಾಯಿ ಇದ್ದರೆ ಚೆಂದ. ಉಪ್ಪಿನ ಕಾಯಿಯೇ ಊಟ ಆಗಬಾರದು. ಹೀಗಾದಾಗ ಪ್ರೇಕ್ಷಕರಲ್ಲಿ ಸಹಜವಾಗಿಯೇ ಅಸಮಾಧಾನದ ಬೆಂಕಿ ಹೊತ್ತಿ ಉರಿಯುತ್ತೆ.
ಯಾಕೆಂದರೆ ಬದಲಾದ ಈ ಕಾಲದಲ್ಲಿ ಪ್ರೇಕ್ಷಕರು ಕೇವಲ ದೃಶ್ಯ ವೈಭವಕ್ಕೆ ಮನ ಸೋಲುವುದಿಲ್ಲ. ಚಿತ್ರದ ಕಥೆಯಲ್ಲಿನ ಗಟ್ಟಿತನ, ಪಾತ್ರಗಳ ಘನತೆಯನ್ನೆಲ್ಲ ನೋಡುತ್ತಾರೆ. ಯಾವಾಗ ಕಮರ್ಷಿಯಲ್ ಸೂತ್ರಗಳ ಹೆಸರಿನಲ್ಲಿ ನಾಯಕಿಯರನ್ನು ಕೇವಲ ಕಣ್ಣಿಗೆ ಮುದ ನೀಡುವ ವಸ್ತುವಿನಂತೆ ತೋರಿಸಲಾಗುತ್ತೋ ಆಗ ಕಲೆ ಮತ್ತು ಕಮರ್ಷಿಯಲ್ ನಡುವೆ ಇರುವ ಸಮತೋಲನದ ಸೇತುವೆ ಅಲುಗಾಡುತ್ತೆ.
ಇದಕ್ಕೆ ಸದ್ಯ ಜ್ವಲಂತ ಉದಾಹರಣೆಯಂತೆ ಪೆದ್ದಿ ವಿವಾದ ಕಣ್ಮುಂದೆ ಇದ್ದು, ಈ ವಿವಾದ ಕಾವೇರಿದಂತಾಗಿದೆ. ಭಿನ್ನಾಭಿಪ್ರಾಯ-ವೈಮನಸ್ಸು- ಜಗಜ್ಜಾಹೀರಾದಂತಾಗಿದೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ''ಪೆದ್ದಿ'' ಚಿತ್ರದ ಸುತ್ತ ವಿವಾದದ ಹುತ್ತ ಬೆಳೆದಿದೆ. ಇಡೀ ಚಿತ್ರದಲ್ಲಿ ಕ್ಯಾಮರಾ ಜಾಹ್ನವಿ ಕಪೂರ್ ಅವರ ಮುಖಚಹರೆಯ ಮೇಲಿಲ್ಲ. ಬದಲಿಗೆ ಅವರ ಅಂಗಾಂಗಗಳ ಮೇಲೆಯೇ ಕ್ಯಾಮರಾ ಕಣ್ಣಿದೆ. ಇನ್ನು ನಾಯಕಿಯ ಒಪ್ಪಿಗೆ ಇಲ್ಲದೇ, ಮುತ್ತು ಕೊಡುವ ದೃಶ್ಯವೂ ಕೂಡ ಚಿತ್ರದಲ್ಲಿದೆ. ಚಿತ್ರವನ್ನು ನೋಡುತ್ತಿದ್ದರೆ ಜಾಹ್ನವಿ ಕಪೂರ್ ಅವರನ್ನು ಚಿತ್ರದಲ್ಲಿ ಲೈಂ*ಗಿಕ ಆಕರ್ಷಣೆಯ ಸಾಧನವಾಗಿ ತೋರಿಸಿರುವುದು ಸ್ಪಷ್ಟವಾಗಿ ಗೊತ್ತಾಗುತ್ತೆ.

ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ಇದರ ನಡುವೆ ಜಾಹ್ನವಿ ಕಪೂರ್ ಅವರದ್ದು ಎನ್ನಲಾದ ವಾಟ್ಸಾಪ್ ಸಂಭಾಷಣೆ ಕೂಡ ಲೀಕ್ ಆಗಿದೆ. ಚಿತ್ರದ ಚಿತ್ರೀಕರಣದ ಸಮಯದಲ್ಲಿಯೇ ಜಾಹ್ನವಿ ಕಪೂರ್ ನಿರ್ದೇಶಕ ಬುಚ್ಚಿ ಬಾಬು ಸನಾ ಅವರಿಂದ ಮುಜುಗರಕ್ಕೀಡಾದ ವಿಚಾರ ಕೂಡ ಬಹಿರಂಗವಾಗಿದೆ.
ತಮ್ಮ ಕಲ್ಪನೆಯ ಕುರಿತು ಹಲವರು ಚಕಾರ ಎತ್ತಿದ ಬೆನ್ನಲ್ಲೇ, ಬುಚ್ಚಿ ಬಾಬು ಸನಾ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ. ಮಹಿಳೆಯರನ್ನು ಗೌರವದಿಂದ ಬಿಂಬಿಸುವುದು ನಮ್ಮ ಆಶಯ. ಯಾರ ಭಾವನೆಗಳಿಗಾದರೂ ಧಕ್ಕೆಯಾಗಿದ್ದರೆ ಕ್ಷಮಿಸಿ. ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ವಿವಾದಾತ್ಮಕ ದೃಶ್ಯಗಳನ್ನು ಕಟ್ ಮಾಡಲು ನಿರ್ಧರಿಸಿದ್ದೇವೆ ಎಂದು ಕೂಡ ಹೇಳಿದ್ಧಾರೆ.
ಆದರೂ ಕೂಡ ವಿವಾದ ತಣ್ಣಗಾಗಿಲ್ಲ. ಚರ್ಚೆ ಕಡಿಮೆಯಾಗಿಲ್ಲ. ಹೀಗಿರುವಾಗ ಇದೀಗ ''ಪೆದ್ದಿ'' ತಂಡ ಸಂಭ್ರಮಾಚರಣೆ ಮಾಡಿದೆ. ಆದರೆ, ಈ ಸಂಭ್ರಮದಲ್ಲಿ ಜಾಹ್ನವಿ ಕಪೂರ್ ಭಾಗವಹಿಸಿಲ್ಲ. ಬದಲಿಗೆ ಅಂತರವನ್ನು ಕಾಪಾಡಿಕೊಂಡಿದ್ಧಾರೆ.
ಜಾಹ್ನವಿ ಅವರ ಈ ನಡೆ ಸದ್ಯ ಮತ್ತೊಂದು ಸುತ್ತಿನ ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ. ವಿವಾದಕ್ಕೆ ಹೆದರಿ ಜಾಹ್ನವಿ ''ಪೆದ್ದಿ''ಯ ಪಾರ್ಟಿಗೆ ಬರಲಿಲ್ವಾ..? ಅಥವಾ ಆಕ್ಷೇಪಾರ್ಹ ದೃಶ್ಯಗಳ ವಿರುದ್ಧ ಇದು ಜಾಹ್ನವಿ ಅವರ ಮೌನ ಸಮರವಾ..? ಎಂಬ ಪ್ರಶ್ನೆ ಈಗ ಹಲವರನ್ನು ಕಾಡುತ್ತಿದೆ. ''ಪೆದ್ದಿ'' ಜಾಹ್ನವಿ ಬಹಿಷ್ಕಾರ ಹಾಕಿದ್ದಾರೆ ಎಂಬ ಅಭಿಪ್ರಾಯ ಕೂಡ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಇನ್ನು, ವಿಶೇಷ ಅಂದರೆ.. ಲೀಕ್ ಆದ ಜಾಹ್ನವಿ ಕಪೂರ್ ಅವರದ್ದೆನ್ನಲಾದ ವಾಟ್ಸಾಪ್ ಚಾಟ್‌ನಲ್ಲಿ ರಾಮ್ ಚರಣ್ ಅವರನ್ನು ಜಾಹ್ನವಿ ಹೊಗಳಿದ್ದರು. ಎದೆಯ ಮೇಲೆ ಕ್ಯಾಮರಾ ಫೋಕಸ್ ಮಾಡದಂತೆ ಖುದ್ದು ರಾಮ್ ಚರಣ್, ಬುಚ್ಚಿಬಾಬುಗೆ ತಾಕೀತು ಮಾಡಿದ್ದಾರೆ ಎಂದು ಉಲ್ಲೇಖ ಮಾಡಿದ್ದರು.
ಆದಾಗ್ಯೂ, ಇಡೀ ವಿವಾದದಿಂದ ಈಗ ರಾಮ್ ಚರಣ್ ಖುದ್ದು ಜಾಹ್ನವಿ ಕಪೂರ್ ವಿರುದ್ಧ ಮುನಿಸಿಕೊಂಡಂತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಇಡೀ ತಂಡಕ್ಕೆ ರಾಮ್ ಚರಣ್ ಧನ್ಯವಾದ ಹೇಳಿದ್ದಾರೆ. ಪ್ರೇಕ್ಷಕರ ಪ್ರೀತಿಗೆ ತಲೆ ಬಾಗಿದ್ಧಾರೆ. ಆದರೆ ಬಾಯ್ತಪ್ಪಿಯೂ ಕೂಡ ಜಾಹ್ನವಿ ಕಪೂರ್ ಅವರ ಹೆಸರನ್ನು ರಾಮ್ ಚರಣ್ ಈ ಕಾರ್ಯಕ್ರಮದಲ್ಲಿ ಎಲ್ಲಿಯೂ ಹೇಳಿಲ್ಲ.
ರಾಮ್ ಚರಣ್ ಅವರ ಈ ನಡೆ ಕೂಡ ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಇಷ್ಟು ದೊಡ್ಡ ಯಶಸ್ಸಿನ ಪಾರ್ಟಿಗೆ ಜಾಹ್ನವಿ ಕಪೂರ್ ಬಾರದೇ ಇರುವುದು ರಾಮ್ ಚರಣ್‌ಗೆ ಕೋಪ ತರಿಸಿದೆಯಾ? ಅಥವಾ ಸೆಟ್‌ನ ಒಳಗಿನ ವಿಷಯಗಳು ಮತ್ತು ಲೀಕ್ ಆದ ಚಾಟ್‌ಗಳು ಇಬ್ಬರ ನಡುವಿನ ವೃತ್ತಿಪರ ಬಾಂಧವ್ಯವನ್ನು ಹಳಸುವಂತೆ ಮಾಡಿದೆಯಾ? ಎಂಬ ಚರ್ಚೆ ಕೂಡ ಈಗ ಶುರುವಾಗಿದೆ.
ಒಟ್ನಲ್ಲಿ ''ಪೆದ್ದಿ'' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಗೆದ್ದಿರಬಹುದು, ಆದರೆ ಮಹಿಳೆಯ ಘನತೆಯನ್ನು ಗಾಳಿಗೆ ತೂರಿ, ನಾಯಕಿಯ ಸ್ವಾಭಿಮಾನಕ್ಕೆ ಧಕ್ಕೆ ತಂದ ಈ ಯಶಸ್ಸು ಚಿತ್ರತಂಡಕ್ಕೆ ಸದ್ಯ ಕಹಿಯಾದ ಅನುಭವವನ್ನಂತೂ ನೀಡಿದೆ. ಉಪ್ಪಿನಕಾಯಿಯನ್ನೇ ಊಟ ಮಾಡಲು ಹೋದರೆ ಹೊಟ್ಟೆ ಕೆಡುವುದು ಗ್ಯಾರಂಟಿ ಎಂಬ ಮಾತು ಕೂಡ ಈ ಚಿತ್ರದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.


Click it and Unblock the Notifications