ಜ್ಯೂ. ಎನ್‌ಟಿಆರ್- ನೀಲ್ 'ಡ್ರ್ಯಾಗನ್' ಕಥೆಯೇನು? 'ಕೆಜಿಎಫ್', 'ಸಲಾರ್' ಮೀರಿಸುತ್ತಾ?
ಕೊನೆಗೂ ಜ್ಯೂ. ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಜೋಡಿ ಸಿನಿಮಾ ಚಿತ್ರೀಕರಣ ಶುರುವಾಗಿದೆ. ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಒಂದಷ್ಟು ದೃಶ್ಯಗಳನ್ನು ಸೆರೆಹಿಡಿಯಲಾಗ್ತಿದೆ. ಈ ಬಗ್ಗೆ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಿದೆ. ಮೊದಲ ಶೆಡ್ಯೂಲ್‌ನಲ್ಲಿ ತಾರಕ್ ನಟಿಸುತ್ತಿಲ್ಲ. ಶೀಘ್ರದಲ್ಲೇ ಅವರು ತಂಡ ಸೇರಿಕೊಳ್ಳಲಿದ್ದಾರೆ.
1000ಕ್ಕೂ ಅಧಿಕ ಸಹಕಲಾವಿದರನ್ನು ಬಳಸಿಕೊಂಡು ಪ್ರಶಾಂತ್ ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ. ಚಿತ್ರತಂಡ ಹಂಚಿಕೊಂಡಿರುವ ಫೋಟೊ ಗಮನಿಸಿದರೆ ಯಾವುದೋ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ. ಪ್ರತಿಭಟನಾಕಾರರನ್ನು ಪೊಲೀಸರು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಪ್ರತಿಭಟನಾಕಾರರು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿರುವಂತೆ ಕಾಣುತ್ತಿದೆ. ದೊಡ್ಡದಾಗಿಯೇ ನೀಲ್ ಚಿತ್ರೀಕರಣ ನಡೆಸುತ್ತಿರುವುದು ಗೊತ್ತಾಗುತ್ತಿದೆ.

ಚಿತ್ರದ ಟೈಟಲ್ ಏನು? ನಾಯಕಿ ಯಾರು? ಕಥೆ ಏನು? ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ನೀಲ್- ತಾರಕ್ ಇಬ್ಬರು ಒಟ್ಟಿಗೆ ಸೇರಿರುವುದು ಬಹಳ ನಿರೀಕ್ಷೆ ಮೂಡಿಸಿದೆ. ಅದಕ್ಕೆ ತಕ್ಕಂತೆ ಚಿತ್ರದ ಕಥೆ ಬಗ್ಗೆ ಅಭಿಮಾನಿಗಳು ಚರ್ಚಿಸಲು ಆರಂಭಿಸಿದ್ದಾರೆ. ಚಿತ್ರತಂಡ ಹಂಚಿಕೊಳ್ಳುವ ಪೋಸ್ಟರ್‌ಗಳು, ಕೆಲವರು ಹಿಂದೆ ನೀಡಿದ್ದ ಹೇಳಿಕೆಗಳನ್ನು ಆಧರಿಸಿ ಅಭಿಮಾನಿಗಳು ಚಿತ್ರದ ಕಥೆ ಏನು? ಎಂದು ಊಹಿಸಲು ಆರಂಭಿಸಿದ್ದಾರೆ.
'ಡ್ರ್ಯಾಗನ್' ಎನ್ನುವ ಟೈಟಲ್ ಅನ್ನು ಫಿಕ್ಸ್ ಮಾಡಲು ನೀಲ್ ಪರಿಶೀಲಿಸುತ್ತಿದ್ದಾರೆ ಎನ್ನಲಾಗ್ತಿದೆ. ಕನ್ನಡ ನಟಿ ರುಕ್ಮಿಣಿ ವಸಂತ್ ಚಿತ್ರದ ನಾಯಕಿ ಎನ್ನುವ ಮಾತುಗಳು ಕೇಳಿಬರ್ತಿದೆ. ಟೈಟಲ್ 'ಡ್ರ್ಯಾಗನ್' ಆಗಿದ್ರೆ ಚಿತ್ರದ ಕಥೆಗೂ ಚೀನಾಗೂ ಏನಾದರೂ ಲಿಂಕ್ ಇರುತ್ತಾ ಎನ್ನುವ ಊಹಾಪೋಹ ಕೆಲವರದ್ದು. ಹಾಲಿವುಡ್ ರೇಂಜ್‌ನಲ್ಲಿ ನೀಲ್ ಸಿನಿಮಾ ಮಾಡುತ್ತಾರೆ. ಅದಕ್ಕೆ ತಕ್ಕ ಕಥೆ, ಟ್ರೀಟ್‌ಮೆಂಟ್, ಮೇಕಿಂಗ್ ಇರುತ್ತದೆ.
ತಾರಾಪುರ ಪರಮಾಣು ವಿದ್ಯುತ್ ಕೇಂದ್ರದ ಹಿನ್ನೆಲೆಯಲ್ಲಿ ಚಿತ್ರದ ಕಥೆ ಬರಬಹದು. ಕೆಜಿಎಫ್ ರೀತಿಯಲ್ಲೇ ಅಕ್ರಮ ಗಣಿಗಾರಿಕೆ ಸುತ್ತಾ ಈ ಚಿತ್ರದ ಕಥೆ ಇರಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ. ಬಾಂಗ್ಲಾದೇಶದಲ್ಲಿರುವ ತೆಲುಗು ಜನರ ನಾಯಕನಾಗಿ ಜ್ಯೂ. ಎನ್‌ಟಿಆರ್ ಕಾಣಿಸಿಕೊಳ್ಳುತ್ತಾರೆ. ಆಂಧ್ರದಿಂದ ಅಲ್ಲಿಗೆ ಹೋಗಿ ತನ್ನವರ ರಕ್ಷಣೆ ಮಾಡುವಂತಹ ಕಥೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಹಿಂದೆ ಸಂದರ್ಶನವೊಂದರಲ್ಲಿ ಯಶ್ ಮಾತನಾಡಿ ಪ್ರಶಾಂತ್ ನೀಲ್ ತಮ್ಮೊಟ್ಟಿಗೆ ಚರ್ಚಿಸಿದ ಕಥೆಯ ಬಗ್ಗೆ ಹೇಳಿದ್ದರು. ನೀಲ್ ಅಕ್ರಮ ಗಣಿಗಾರಿಕೆ ಬಗ್ಗೆ ಒಂದು ಕಥೆ ಹೇಳಿದ್ದರು, ಬಹಳ ಅದ್ಭುತವಾಗಿತ್ತು. ಎಲ್ಲಾ ಒಂದೇ ಚಿತ್ರದಲ್ಲಿ ಹೇಳಬೇಡಿ ಎಂದಿದ್ದೆ. ಅದರ ಸಣ್ಣ ಭಾಗ 'ಕೆಜಿಎಫ್'. ಇನ್ನುಳಿದಿದ್ದು ಮುಂದೆ ನೋಡಿ ಎಂದಿದ್ದರು. ಅದೇ ಅಕ್ರಮ ಗಣಿಗಾರಿಕೆ ಬಗ್ಗೆ ನೀಲ್ 'ಡ್ರ್ಯಾಗನ್' ಚಿತ್ರದಲ್ಲಿ ಚರ್ಚಿಸಬಹುದು ಎಂದು ಕೆಲವರು ಭಾವಿಸುತ್ತಿದ್ದಾರೆ.
ನಟೋರಿಯಸ್ ಡ್ರಗ್ ಲಾರ್ಡ್ ಖುನ್ ಸಾ ಜೀವನದಿಂದ ಪ್ರೇರಣೆಗೊಂಡು ಎನ್ಟಿಆರ್ ಪಾತ್ರ ಪೋಷಣೆ ಮಾಡಿರಬಹುದು ಎಂದು ಕೆಲವರು ಅಂದಾಜಿಸುತ್ತಿದ್ದಾರೆ. ಒಟ್ಟಾರೆ ತಾರಕ್-ನೀಲ್ ಸಿನಿಮಾ ಕಥೆ ಏನು? ಎನ್ನುವ ಬಗ್ಗೆ ಟಾಲಿವುಡ್ ಅಂಗಳದಲ್ಲಿ ಚರ್ಚೆ ಆಗುತ್ತದೆ. ಅಂದಹಾಗೆ ಜ್ಯೂ. ಎನ್‌ಟಿಆರ್ ಅಭಿಮಾನಿ ಪ್ರಶಾಂತ್ ನೀಲ್. ಸ್ವತಃ ತಾರಕ್ ಸಿನಿಮಾ ಮಾಡುವಂತೆ ಕೇಳಿದ್ದರು. ಹಾಗಾಗಿ ತನ್ನ ಇಷ್ಟದ ನಟನ ಜೊತೆ ಭಾರೀ ಮಟ್ಟದಲ್ಲೇ ನೀಲ್ ಸಿನಿಮಾ ಮಾಡುತ್ತಿದ್ದಾರೆ.
ಎನ್‌ಟಿಆರ್ ಆರ್ಟ್ಸ್ ಹಾಗೂ ಮೈತ್ರಿ ಮೂವಿಮೇಕರ್ಸ್ ಸಂಸ್ಥೆಗಳು ಜಂಟಿಯಾಗಿ ಚಿತ್ರಕ್ಕೆ ಹಣ ಹೂಡುತ್ತಿವೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಮುಂದಿನ ವರ್ಷ ಸಂಕ್ರಾಂತಿಗೆ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಕಾರಣಕ್ಕೆ ಸಿನಿಮಾ ರಿಲೀಸ್ ತಡವಾಗುವ ಸಾಧ್ಯತೆ ದಟ್ಟವಾಗಿದೆ.


Click it and Unblock the Notifications











