ಮಹಿಳೆಯಿಂದ ಮೋಸ: ಆಕೆಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಜ್ಯೂ. ಎನ್‌ಟಿಆರ್
ಟಾಲಿವುಡ್ ನಟ ಜ್ಯೂ. ಎನ್‌ಟಿಆರ್ ಇದೀಗ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಹೃತಿಕ್ ರೋಷನ್ ಜೊತೆ 'ವಾರ್-2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಒಂದು ಶೆಡ್ಯೂಲ್ ಮುಗಿಸಿ ಬಂದಿದ್ದಾರೆ. ಇತ್ತೀಚೆಗೆ ಲೋಕಸಭೆ ಚುನಾವಣೆಗೆ ಹೈದರಾಬಾದ್‌ನಲ್ಲಿ ಪತ್ನಿ ಸಮೇತ ಬಂದು ಮತ ಚಲಾಯಿಸಿದ್ದರು.
ತೆಲುಗಿನಲ್ಲಿ 'ದೇವರ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬರ್ತಿದೆ. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಮೊದಲ ಭಾಗ ಅಕ್ಟೋಬರ್ 10ಕ್ಕೆ ತೆರೆಗೆ ಬರಲಿದೆ. ಇನ್ನು ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮೇ 20ಕ್ಕೆ ತಾರಕ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು ಮುಂದಿನ ಸಿನಿಮಾಗಳ ಬಗ್ಗೆ ಮತ್ತಷ್ಟು ಅಪ್‌ಡೇಟ್ ಸಿಗಲಿದೆ.

'RRR' ಸಿನಿಮಾ ಮೂಲಕ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಜ್ಯೂ. ಎನ್‌ಟಿಆರ್ ಸದ್ದು ಮಾಡಿದ್ದರು. ಇನ್ನು ಚಿತ್ರದಿಂದ ಚಿತ್ರಕ್ಕೆ ತಾರಕ್ ಸಂಭಾವನೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆದಾಯವನ್ನು ಬೇರೆ ಬೇರೆ ವ್ಯವಹಾರಗಳಲ್ಲಿ ತೊಡಗಿಸಿದ್ದಾರೆ. ಮನೆ, ಫ್ಲಾಟ್ ಖರೀದಿಸಿ ಭದ್ರಪಡಿಸುತ್ತಿದ್ದಾರೆ. ಇತ್ತೀಚೆಗೆ ಹೈದರಾಬಾದ್ ಸಮೀಪ 6 ಎಕರೆ ಜಾಗ ಖರೀದಿಸಿದ್ದು ಸುದ್ದಿಯಾಗಿತ್ತು.
ಬಾಲನಟನಾಗಿ ಚಿತ್ರರಂಗಕ್ಕೆ ಬಂದ ತಾರಕ್ ಬಳಿಕ 'ನಿನ್ನು ಚೂಡಾಲಿನಿ' ಚಿತ್ರದ ಮೂಲಕ ಹೀರೊ ಆದರು. ಆ ಸಿನಿಮಾ ಗೆಲ್ಲಲಿಲ್ಲ. ರಾಜಮೌಳಿ ನಿರ್ದೇಶನದ 'ಸ್ಟೂಡೆಂಟ್ ನಂ.1' ಹಿಟ್ ಆಗಿತ್ತು. ಅಲ್ಲಿಂದ ಮುಂದೆ ತಿರುಗಿ ನೋಡಲಿಲ್ಲ. 2002ರಲ್ಲಿ 'ಆದಿ' ಎನ್ನುವ ಮತ್ತೊಂದು ಹಿಟ್ ಸಿನಿಮಾ ಮಾಡಿದ್ದರು. ಅಲ್ಲಿಂದ ಸಂಭಾವನೆ ಹೆಚ್ಚಾಯಿತು. ಅದಕ್ಕೆ ತಕ್ಕಂತೆ ಆಸ್ತಿ ಖರೀದಿಸಲು ಆರಂಭಿಸಿದರು. 2003 ರಲ್ಲಿ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಒಂದು ಸೈಟ್ ಖರೀದಿಸಿದರು. ಈ ಸೈಟ್ ವಿಚಾರವಾಗಿ ಈಗ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರುವಂತಾಗಿದೆ.

20 ವರ್ಷಗಳ ಹಿಂದೆ ತಾರಕ್ ಖರೀದಿಸಿದ್ದ ಆ ಮನೆ ವಿಚಾರ ವಿವಾದಕ್ಕೆ ಕಾರಣವಾಗಿದೆ. ಸಂಕು ಗೀತಾ ಎಂಬ ಮಹಿಳೆಯಿಂದ 680 ಚದರ ಗಜ ಭೂಮಿ ಖರೀದಿಸಿದ್ದರು. ಆದರೆ ಈಗ ಆ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಲವು ಬ್ಯಾಂಕ್‌ಗಳು ಮುಂದಾಗಿವೆ. ಆ ಮಹಿಳೆ ನಕಲಿ ದಾಖಲೆ ನೀಡಿ ಭೂಮಿಯನ್ನು ಎನ್‌ಟಿಆರ್‌ಗೆ ಮಾರಾಟ ಮಾಡಿದ್ದಾಳೆ ಎನ್ನಲಾಗ್ತಿದೆ.
1996ರಲ್ಲಿ ಒಂದೇ ಒಂದು ಬ್ಯಾಂಕ್‌ನಿಂದ ಸಾಲ ಪಡೆದು ಈ ಸ್ಥಳವನ್ನು ಖರೀದಿಸಿರುವುದಾಗಿ ತಾರಕ್‌ಗೆ ತಿಳಿಸಿದ್ದಾಳೆ. ಆದರೆ ಈ ಜಾಗವನ್ನು ಶ್ಯೂರಿಟಿಯಾಗಿ ಇಟ್ಟು ಬ್ಯಾಂಕ್ ಆಫ್ ಬರೋಡಾ, ಓರಿಯಂಟಲ್ ಬ್ಯಾಂಕ್, ಎಸ್‌ಬಿಐ ಹೀಗೆ ಹಲವು ಬ್ಯಾಂಕ್ ಗಳಲ್ಲಿ ಸಾಲ ಪಡೆದಿದ್ದಾಳೆ ಎಂದು ಹೇಳಲಾಗುತ್ತಿದೆ. ಸಾಲ ಇತ್ಯರ್ಥವಾಗದ ಕಾರಣ ಈ ಎಲ್ಲ ಬ್ಯಾಂಕ್‌ಗಳು ಸಾಲ ವಸೂಲಾತಿ ನ್ಯಾಯಮಂಡಳಿ ಮೊರೆ ಹೋಗಿದ್ದವು. ಇದರೊಂದಿಗೆ ನ್ಯಾಯಾಧಿಕರಣವು ಬ್ಯಾಂಕ್‌ಗಳಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶ ನೀಡಿತ್ತು. ಹಲವು ವರ್ಷಗಳಿಂದ ಈ ವಿವಾದ ಬಹೆ ಹರಿದಿರಲಿಲ್ಲ. ಇದೀಗ ನಟ ಜ್ಯೂ. ಎನ್‌ಟಿಆರ್‌ಗೆ ಸಂಕಷ್ಟ ತಂದಿದೆ.
ಬ್ಯಾಂಕ್‌ನವರು ತೊಂದರೆ ಕೊಡುತ್ತಿದ್ದಂತೆ ಸಂಕು ಗೀತಾ ವಿರುದ್ಧ ನಟ ತಾರಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಷ್ಟೇ ಅಲ್ಲ, ತಾವು 20 ವರ್ಷಗಳ ಹಿಂದೆ ಕೊಂಡುಕೊಂಡಿರುವ ಜಮೀನನ್ನು ಬ್ಯಾಂಕ್‌ಗಳು ಸ್ವಾಧೀನಪಡಿಸಿಕೊಳ್ಳದಂತೆ ತಡೆಯಲು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಅರ್ಜಿ ಹಾಕಿದ್ದರು. ನ್ಯಾಯಮೂರ್ತಿ ಜೆ ಶ್ರೀನಿವಾಸ ರಾವ್ ಮತ್ತು ನ್ಯಾಯಮೂರ್ತಿ ಸುಜೋಯ್ ಪಾಲ್ ಪೀಠವು ಜ್ಯೂ. ಎನ್‌ಟಿಆರ್ ಅರ್ಜಿಯ ವಿಚಾರಣೆ ನಡೆಸಿದೆ. ಜೂನ್ 6ಕ್ಕೆ ವಿಚಾರಣೆ ಮುಂದೂಡಲಾಗಿದೆ.
20 ವರ್ಷಗಳ ಹಿಂದೆ 37 ಲಕ್ಷ ರೂ.ಗೆ ಮನೆ ಕೊಂಡುಕೊಳ್ಳಲಾಗಿತ್ತು. ಜಾಗದಲ್ಲಿ ಈಗ ಮನೆ ಕೂಡ ಇದ್ದು ಸದ್ಯ ಅದರ ಬೆಲೆ 24 ಕೋಟಿ. ಎನ್ನಲಾಗ್ತಿದೆ.


Click it and Unblock the Notifications











