ಮನಸ್ಸಿನಿಂದ ಮಾತಾಡ್ಬೇಕು, ಕನ್ನಡದಲ್ಲೇ ಮಾತಾಡ್ತೀನಿ, ತಾರಕ್ ಸರ್ ಟ್ರಾನ್ಸ್‌ಲೇಟ್ ಮಾಡ್ತಾರೆ- ರಿಷಬ್
ಬಹುನಿರೀಕ್ಷಿತ 'ಕಾಂತಾರ- 1' ಸಿನಿಮಾ ಬಿಡುಗಡೆಗೆ ಇನ್ನೆರಡು ದಿನ ಬಾಕಿಯಿದೆ. ಸದ್ಯ ಚಿತ್ರತಂಡ ಹೈದರಾಬಾದ್‌ನಲ್ಲಿ ಪ್ರೀ ರಿಲೀಸ್ ಈವೆಂಟ್ ಮಾಡಿ ಸಿನಿಮಾ ಪ್ರಚಾರ ಮಾಡುತ್ತಿದೆ. ತೆಲುಗು ನಟ ಜ್ಯೂ. ಎನ್‌ಟಿಆರ್ ಮುಖ್ಯ ಅತಿಥಿಯಾಗಿ ಆಗಮಿಸಿ ತಂಡಕ್ಕೆ ಶುಭ ಕೋರಿದ್ದಾರೆ. ನಾಯಕಿ ರುಕ್ಮಿಣಿ ವಸಂತ್, ರಿಷಬ್ ಪತ್ನಿ ಪ್ರಗತಿ ಕೂಡ ಈ ವೇಳೆ ಹಾಜರಿದ್ದರು.
ಹೈದರಾಬಾದ್ ಜೆಆರ್‌ಸಿ ಕನ್ವೆಂಷನ್ ಹಾಲ್‌ನಲ್ಲಿ 'ಕಾಂತಾರ- 1' ತೆಲುಗು ಪ್ರೀ ರಿಲೀಸ್ ಈವೆಂಟ್ ನಡೀತು. ಇತ್ತೀಚೆಗೆ ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ನಟ ತೆಲುಗು ನಟ ಜ್ಯೂ. ಎನ್‌ಟಿಆರ್ ನೋವಿನ ನಡುವೆಯೂ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ರಿಷಬ್ ಶೆಟ್ಟಿ ಕನ್ನಡದಲ್ಲೇ ಮಾತನಾಡಿದರು. ಏನಾದರೂ ಗೊತ್ತಾಗದಿದ್ದರೆ ತಾರಕ್ ಸರ್ ಟ್ರಾನ್ಸ್‌ಲೇಟ್ ಮಾಡ್ತಾರೆ ಎಂದರು.

"ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದ ಎನ್ನುತ್ತಲೇ ರಿಷಬ್ ಮಾತು ಆರಂಭಿಸಿದರು. ಮನಸ್ಸಿಂದ ಮಾತಾಡಬೇಕು ಹಾಗಾಗಿ ಕನ್ನಡದಲ್ಲೇ ಮಾತಾಡ್ತೀನಿ. ಏನಾದರೂ ಗೊತ್ತಾಗದಿದ್ದರೆ ತಾರಕ್ ಸರ್ ಅನುವಾದಿಸಿ ಹೇಳ್ತಾರೆ. ತಾರಕ್ ಅವರನ್ನು ಏನೆಂದು ಕರೆಯಬೇಕು? ಫ್ರೆಂಡ್ ಎನ್ನಬೇಕಾ ಸಹೋದರ ಎನ್ನಬೇಕಾ ಗೊತ್ತಿಲ್ಲ. ಇವ್ರು ನಮ್ಮ ಊರಿನವರು, ನನ್ನ ಸಹೋದರ ಎನ್ನುವ ಭಾವನೆಯಿದೆ. ಹೈದರಾಬಾದ್‌ಗೆ ಬರ್ತೀವಿ ಎಂದಾಗ ನಾನು ನಿಮ್ಮ ಜೊತೆ ನಿಲ್ತೀನಿ ಅಂದ್ರು. ಅದಕ್ಕೆ ಧನ್ಯವಾದ" ಎಂದು ರಿಷಬ್ ಹೇಳಿದ್ದಾರೆ. ಕೂಡಲೇ "ಏನ್ ಸಾರ್ ನೀವು" ಎಂದು ತಾರಕ್ ಪ್ರತಿಕ್ರಿಯಿಸಿದ್ದಾರೆ.
ಕೆಲ ದಿನಗಳ ಹಿಂದೆ ಜ್ಯೂ. ಎನ್‌ಟಿಆರ್ ಕುಟುಂಬ ಸಮೇತ ಕರಾವಳಿಯ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಈ ಬಗ್ಗೆ ಇಬ್ಬರೂ ನೆನಪು ಮಾಡಿಕೊಂಡರು. "ತಾರಕ್ ಕುಂದಾಪುರದ ಮಗ, ಅಲ್ಲಿಗೆ ಬಂದಾಗ ಪ್ರಗತಿ, ನಾವು ಎಲ್ಲರೂ ಅವರಿಗೆ ಟ್ರೀಟ್ ಕೊಡಬೇಕು ಎಂದುಕೊಂಡೆವು. ಆದರೆ ಅಲ್ಲಿಗೆ ಬಂದು ನಮಗೆ ನಾಟಿ ಕೋಳಿ ಊಟ ಹಾಕಿಸಿದ್ರು. ನಮ್ಮ ಪಕ್ಕದ ರಾಜ್ಯ ಆಗಿದ್ದರೂ ಎಲ್ಲರೂ ಅಣ್ಣ-ತಮ್ಮಂದಿರ ರೀತಿ ಇದ್ದೀವಿ. ನಾವಿಬ್ಬರೂ ಹೇಗೋ ಕರ್ನಾಟಕ- ಆಂಧ್ರ ಹಾಗೆ. ನಾನಿವತ್ತು ಮಾತನಾಡಲು ಬಂದಿಲ್ಲ, ತಾರಕ್ ಸರ್ ಮಾತು ಕೇಳಲು ಬಂದೇ" ಎಂದಿದ್ದಾರೆ.
ಆಂಧ್ರ, ತೆಲಂಗಾಣದಲ್ಲಿ ದೊಡ್ಡಮಟ್ಟದಲ್ಲಿ 'ಕಾಂತಾರ- 1' ಸಿನಿಮಾ ಬಿಡುಗಡೆಯಾಗಿದೆ. ತೆಲಂಗಾಣದಲ್ಲಿ ಸಿನಿಮಾ ಟಿಕೆಟ್ ದರ ಹೆಚ್ಚಿಸಲು ಸರ್ಕಾರದಿಂದ ಅನುಮತಿ ಕೂಡ ಸಿಗುವ ಸಾಧ್ಯತೆಯಿದೆ. ಹಾಗಾಗಿ ದೊಡ್ಡಮಟ್ಟದಲ್ಲಿ ಸಿನಿಮಾ ತೆಲುಗು ರಾಜ್ಯಗಳಲ್ಲಿ ಕಲೆಕ್ಷನ್ ಮಾಡುವ ನಿರೀಕ್ಷೆ ಶುರುವಾಗಿದೆ. ಇತ್ತೀಚೆಗೆ ತಮಿಳು ಸಂದರ್ಶನಗಳಲ್ಲಿ ರಿಷಬ್‌ಗೆ ಆ ಭಾಷೆಯ ಮೇಲಿನ ನೋಡಿ ಕೆಲವರು ಶಾಕ್ ಆಗಿದ್ದರು. ಆದರೆ ರಿಷಬ್ ಶೆಟ್ಟಿ ಹೈದರಾಬಾದ್‌ಗೆ ಬಂದು ಯಾಕೆ ಕನ್ನಡದಲ್ಲಿ ಮಾತನಾಡಿದರು? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
ರಿಷಬ್ ಶೆಟ್ಟಿ ಅವರಿಗೆ ಕನ್ನಡ, ತಮಿಳು, ಹಿಂದಿ ಭಾಷೆ ಸ್ಪಷ್ಟವಾಗಿ ಮಾತನಾಡಲು ಬರುತ್ತದೆ. ಮಲಯಾಳಂ ಕೂಡ ತಕ್ಕ ಮಟ್ಟಿಗೆ ಮಾತನಾಡುತ್ತಾರೆ. ಆದರೆ ತೆಲುಗು ಅಷ್ಟಾಗಿ ಮಾತನಾಡಲು ಬರಲ್ಲ, ಜೊತೆಗೆ ನನಗೆ ಇಂಗ್ಲೀಷ್ ಕೂಡ ಕಷ್ಟ ಎಂದು ಹಿಂದೆ ಕೇಳಿಕೊಂಡಿದ್ದರು. ಹಾಗಾಗಿ ಹೈದರಾಬಾದ್ ಈವೆಂಟ್‌ನಲ್ಲಿ ಕನ್ನಡದಲ್ಲೇ ಮಾತನಾಡಿದ್ದಾರೆ. 3 ವರ್ಷಗಳ ಹಿಂದೆ 'ಕಾಂತಾರ' ಪ್ರಚಾರದ ವೇಳೆಯೂ ತೆಲುಗು ಸಂದರ್ಶನಗಳಲ್ಲಿ ಕನ್ನಡ ಇಂಗ್ಲೀಷ್ ಮಿಶ್ರಣ ಮಾಡಿ ಅವರು ಮಾತನಾಡಿದ್ದರು. ತೆಲುಗು ಭಾಷೆ ಅರ್ಥವಾದರೂ ಸ್ಪಷ್ಟವಾಗಿ ಮಾತನಾಡಲು ಬರಲ್ಲ.


Click it and Unblock the Notifications











