ರಿಷಬ್ ಬಿಟ್ರೆ ಬೇರೆ ಯಾರಿಂದಲೂ 'ಕಾಂತಾರ- 1' ಮಾಡೋಕೆ ಸಾಧ್ಯವಾಗುತ್ತಿರಲಿಲ್ಲ- ಜ್ಯೂ. ಎನ್‌ಟಿಆರ್
ಅಕ್ಟೋಬರ್ 2ರಂದು ವಿಶ್ವಾದಾದ್ಯಂತ 30 ದೇಶಗಳಲ್ಲಿ ಕನ್ನಡದ 'ಕಾಂತಾರ- 1' ಸಿನಿಮಾ ಬಿಡುಗಡೆ ಆಗುತ್ತಿದೆ. ಒಂದು ದಿನ ಮೊದಲೇ ಪ್ರೀಮಿಯರ್ ಶೋ ಆರಂಭವಾಗಲಿದೆ. ಆಂಧ್ರ, ತೆಲಂಗಾಣದಲ್ಲಿ ಭರ್ಜರಿ ಬೆಲೆಗೆ ರೈಟ್ಸ್ ಮಾರಾಟವಾಗಿದೆ. ಹೈದರಾಬಾದ್‌ನಲ್ಲಿ ನಡೆದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಜ್ಯೂ. ಎನ್‌ಟಿಆರ್ ಭಾಗವಹಿಸಿ ರಿಷಬ್ ಮತ್ತು ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ.
ತಾರಕ್ ತಾಯಿ ಹುಟ್ಟೂರು ಕುಂದಾಪುರ. ಈ ಬಗ್ಗೆ ಸಾಕಷ್ಟು ಸಂದರ್ಭಗಳಲ್ಲಿ ಅವರು ಮಾತನಾಡಿದ್ದಾರೆ. ರಿಷಬ್ ಶೆಟ್ಟಿ ಜೊತೆಗೆ ಒಳ್ಳೆ ಸ್ನೇಹ ಸಂಬಂಧವಿದೆ. ಕೆಲ ದಿನಗಳ ಹಿಂದೆ ರಿಷಬ್ ಶೆಟ್ಟಿ ಹಾಗೂ ಪ್ರಶಾಂತ್ ನೀಲ್ ಜೊತೆ ಸೇರಿ ಕರ್ನಾಟಕದ ಕರಾವಳಿಯ ದೇವಸ್ಥಾನಗಳಲ್ಲಿ ಕುಟುಂಬ ಸಮೇತ ಜ್ಯೂ. ಎನ್‌ಟಿಆರ್ ಭೇಟಿ ನೀಡಿದ್ದರು. ಇದು ನಮ್ಮ ತಾಯಿ ಕನಸು. ಅದು ನನಸಾಗಿದೆ ಎಂದಿದ್ದರು. 'ಕಾಂತಾರ- 1' ಈವೆಂಟ್‌ನಲ್ಲಿ ಅದನ್ನು ಅವರು ನೆನಪಿಸಿಕೊಂಡಿದ್ದಾರೆ.

'ಕಾಂತಾರ' ಸಿನಿಮಾ ನೋಡಿ ತಾರಕ್ ಥ್ರಿಲ್ ಆಗಿದ್ದರು. ರಿಷಬ್ ಶೆಟ್ಟಿ ಅವರಿಗೆ ಫೋನ್ ಮಾಡಿ ಕೊಂಡಾಡಿದ್ದರು. ಬಳಿಕ ಇಬ್ಬರ ನಡುವೆ ಒಡನಾಟ ಹೆಚ್ಚಾಗಿತ್ತು. ಇತ್ತೀಚೆಗೆ ಚಿತ್ರೀಕರಣದ ವೇಳೆ ಗಾಯಗೊಂಡಿದ್ದರೂ ನೋವಿನಲ್ಲೇ 'ಕಾಂತಾರ'-1 ಚಿತ್ರತಂಡಕ್ಕೆ ಸಾಥ್ ಕೊಟ್ಟಿದ್ದಾರೆ. ತೆಲುಗು ಪ್ರೇಕ್ಷಕರ ಸಿನಿಮಾ ನೋಡಿ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ರಿಷಬ್ ಪ್ರತಿಭೆಯನ್ನು ಕೊಂಡಾಡಿದ್ದಾರೆ.
"ನನಗೆ ನಾಲ್ಕು ವರ್ಷ ವಯಸ್ಸು ಅನ್ನಿಸುತ್ತದೆ. ಮೊದಲ ಬಾರಿ ನಮ್ಮ ಅಜ್ಜಿ, ಕುಂದಾಪುರ ಬಳಿ ಇದು ನಮ್ಮೂರು. ನಾವು ಚಿಕ್ಕಂದಿನಲ್ಲಿ ಒಂದಷ್ಟು ಕಥೆಗಳನ್ನು ಕೇಳಿ ಬೆಳೆದೆವು, ಎಂದು ಅಜ್ಜಿ ನಮಗೆ ಕಥೆ ಹೇಳುತ್ತಿದ್ದರು. ಆಗ ಅರ್ಥವಾಗುತ್ತಿರಲಿಲ್ಲ. ನಿಜನಾ ಸುಳ್ಳಾ ಎನ್ನುವ ಅನುಮಾನ ಇತ್ತು. ಆದರೂ ಬಹಳ ಇಷ್ಟವಾಗುತ್ತಿತ್ತು. ದೈವ ಕೋಲ, ಗುಳಿಗ ಅದನ್ನೆಲ್ಲಾ ನಾನು ಹೋಗಿ ನೋಡಬೇಕು ಎಂದು ಚಿಕ್ಕಂದಿನಿಂದ ಎನಿಸುತ್ತಿತ್ತು. ಆದರೆ ನಾನು ಕೇಳಿದ ಕಥೆಗಳನ್ನು ಒಬ್ಬ ನಿರ್ದೇಶಕ ಸಿನ್ಮಾ ಮಾಡ್ತಾನೆ ಎಂದುಕೊಂಡಿರಲಿಲ್ಲ. ಅದು ನಮ್ಮ ಸಹೋದರ ರಿಷಬ್ ಶೆಟ್ಟಿ. ನಾನು ಚಿಕ್ಕಂದಿನಲ್ಲಿ ಕೇಳಿದ ಕಥೆಯನ್ನು ತೆರೆಮೇಲೆ ನೋಡಿ ಅಚ್ಚರಿಗೊಂಡಿದ್ದೆ ಸರ್" ಎಂದು ಜ್ಯೂ. ಎನ್‌ಟಿಆರ್ ಮಾತು ಆರಂಭಿಸಿದ್ದರು.
ಕಥೆ ಗೊತ್ತಿದ್ದು ನನಗೆ ಏನು ಅನಿಸಿತೋ ಗೊತ್ತಿಲ್ಲದವರು ನೋಡಿದಾಗ ಏನಾಯಿತು ಎನ್ನುವುದು 'ಕಾಂತಾರ' ಚಿತ್ರದ ಯಶಸ್ಸು ಎಂದು ತಾರಕ್ ಹೇಳಿದ್ದಾರೆ. "ರಿಷಬ್ ಸರ್ ಬಹಳ ಅಪರೂಪದ ನಟ, ನಿರ್ದೇಶಕ. ಅವರಲ್ಲಿ ನಿರ್ದೇಶಕ ಓವರ್ ಟೇಕ್ ಮಾಡ್ತಾನಾ, ನಟ ಓವರ್‌ಟೇಕ್ ಮಾಡ್ತಾನಾ ಅನಿಸಿತ್ತು. ರಿಷಬ್ 24 ಫ್ರೇಮ್‌ಗಳಲ್ಲಿ ಇರುವ ಎಲ್ಲಾ ವಿಭಾಗಗಳಲ್ಲಿ ಸಾಮರ್ಥ್ಯ ಪ್ರದರ್ಶಿಸುತ್ತಾರೆ. ರಿಷಬ್ ಶೆಟ್ಟಿ ಸರ್ ಅಲ್ಲದೇ ಇದ್ದರೆ ಬೇರೆ ಯಾರು ಕೂಡ ಇವತ್ತು ಈ ಚಿತ್ರವನ್ನು ಈ ಮಟ್ಟಿಗೆ ತೆರೆಗೆ ತರಲು ಸಾಧ್ಯವಾಗುತ್ತಿರಲ್ಲ ಅನಿಸುತ್ತದೆ" ಎಂದಿದ್ದಾರೆ.
ನಮ್ಮ ತಾಯಿಗೆ ಉಡುಪಿ ಕೃಷ್ಣನ ಆಲಯಕ್ಕೆ ಹೋಗಬೇಕು ಎನ್ನುವ ಕೋರಿಕೆ ಇತ್ತು. ನಾನು ಕರೆದುಕೊಂಡು ಹೋದಾಗ ರಿಷಬ್ ಸರ್ ಇಲ್ಲದಿದ್ದರೆ ಆ ರೀತಿ ದರ್ಶನ ಭಾಗ್ಯ ಸಿಗುತ್ತಿರಲಿಲ್ಲ. ಎಲ್ಲಾ ಕೆಲಸ ಬಿಟ್ಟು ಅವ್ರು, ಪತ್ನಿ ಪ್ರಗತಿ ನಮ್ಮ ಜೊತೆಗೆ ಬಂದರು. ನಮ್ಮನ್ನು ಕುಟುಂಬ ಸದಸ್ಯರಂತೆ ನೋಡಿಕೊಂಡರು. ನಾನು ಧನ್ಯವಾದ ಹೇಳಿ ಅವರನ್ನು ಬೇರೆಯವರಂತೆ ನೋಡಲು ಇಷ್ಟಪಡಲ್ಲ. ನಮ್ಮ ತಾಯಿ ಆಸೆ ಈಡೇರಿಸಿದ್ದಕ್ಕೆ ಧನ್ಯವಾದ" ಎಂದು ಹೇಳಿದ್ದಾರೆ.
ನಾನು ಅಲ್ಲಿಗೆ ಹೋದಾಗ 'ಕಾಂತಾರ'-1 ಚಿತ್ರಕ್ಕಾಗಿ ರಿಷಬ್ ಎಷ್ಟು ಕಷ್ಟಪಡುತ್ತಿದ್ದಾರೋ ನೋಡುವ ಅವಕಾಶ ಸಿಕ್ಕಿತ್ತು. ನಿಜವಾಗಿ ಹೇಳ್ತೀನಿ 'ಕಾಂತಾರ'-1 ಸಿನಿಮಾ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಒಂದು ದೇವಸ್ಥಾನಕ್ಕೆ ಕರ್ಕೊಂಡ್ ಹೋಗಿದ್ದರು. ಮೊಣಕಾಲುದ್ದ ನೀರಿನಲ್ಲಿ ಅಲ್ಲಿಗೆ ಹೋಗಬೇಕು. ಅಂತಹ ಜಾಗದಲ್ಲಿ ಚಿತ್ರೀಕರಣಕ್ಕಾಗಿ ದಾರಿ ಮಾಡಿಕೊಂಡಿದ್ದರು. ಸೆಟ್ ನಿರ್ಮಿಸಿದ್ದರು. ರಿಷಬ್ ಶೆಟ್ಟಿ ಅಲ್ಲದೇ ಇದ್ದರೆ ಬೇರೆ ಯಾರು ಮಾಡಲು ಆಗುತ್ತಿರಲಿಲ್ಲ. ಈ ಸಿನಿಮಾ ನಮ್ಮೆಲ್ಲರನ್ನು ರಂಜಿಸುತ್ತದೆ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ದಾಖಲೆ ಬರೆಯಬೇಕು ಎಂದು ದೇವರಲ್ಲಿ ಬೇಡಿಕೊಳ್ತೀನಿ" ಎಂದು ಜ್ಯೂ. ಎನ್‌ಟಿಆರ್ ಹಾರೈಸಿದ್ದಾರೆ.


Click it and Unblock the Notifications











