ವಾರ್ 2 ಸೋಲು, ಜ್ಯೂ,ಎನ್‌ಟಿಆರ್ ಪಾಲಿಗೆ ಬಂದಾಯ್ತಾ ಬಾಲಿವುಡ್ ಬಾಗಿಲು ? ಮತ್ತೆ ಹಿಂದಿಯಲ್ಲಿ ನಟಿಸಲ್ವಾ ತಾರಕ್ ?
ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಹುಚ್ಚು ಹತ್ತಿಸಿಕೊಂಡು ಓಡಾಡುತ್ತಿರುವವರು ಎಲ್ಲಾ ಭಾಷೆಯಲ್ಲಿ ಕೂಡ ಇದ್ದಾರೆ. ಆದರೆ ಅದು ಸುಲಭ ಅಲ್ಲ. ಕಥೆಯಿಂದ ಹಿಡಿದು ಎಲ್ಲದರ ಮೇಲೆ ಕೂಡ ಇಲ್ಲಿ ಗಮನ ಕೊಡಬೇಕು. ತಮ್ಮ ಬದುಕಿನ ಬಹು ಅಮೂಲ್ಯವಾದ ಮೂರರಿಂದ- ಐದು ವರ್ಷಗಳನ್ನು ಚಿತ್ರಕ್ಕೆ ಮೀಸಲಿಡಬೇಕು. ಚೂರು ಯಾಮಾರಿದರೂ ಕೂಡ ನ್ಯಾಷನಲ್ ಸ್ಟಾರ್ ಆಗುವ ಮಾತು ಬಿಡಿ...
ಪ್ರಾದೇಶಿಕ ಭಾಷೆಯಲ್ಲಿರುವ ತಮ್ಮ ಸ್ಟಾರ್ ವ್ಯಾಲ್ಯೂನ ಕೂಡ ಕಳೆದುಕೊಳ್ಳುವ ಭಯ ಇರುತ್ತೆ. ಸೋತರೆ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮತ್ತೆ ಮರಳಿ ಮನೆ ಸೇರಬೇಕಾಗುತ್ತೆ. ಸದ್ಯ ಜ್ಯೂ.ಎನ್.ಟಿ.ಆರ್ ವಿಚಾರದಲ್ಲಿ ಇದೇ ಆಗಿದೆ ಎನ್ನುವುದು ಕೇಳಿ ಬರುತ್ತಿರುವ ಲೇಟೆಸ್ಟ್ ನ್ಯೂಸು.

ಹೌದು, ಆರ್.ಆರ್.ಆರ್ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಪುಳಕಿತಗೊಂಡಿದ್ದ ತಾರಕ್‌ಗೆ ಅದ್ಯಾರು ತಲೆ ಕೆಡಿಸಿದರೋ ಗೊತ್ತಿಲ್ಲ. ಅಲ್ಲಿಯವರೆಗೆ ಬಾಲಿವುಡ್ ಕಡೆ ತಲೆ ಕೂಡ ಹಾಕಿ ಮಲಗದ ಜ್ಯೂ.ಎನ್‌ಟಿಆರ್ ಏಕಾಏಕಿ ಹಿಂದಿಯಲ್ಲಿ ನೆಲೆಯೂರುವ ಕನಸು ಕಾಣಲು ಶುರು ಮಾಡಿದರು. ಹೃತಿಕ್ ರೋಷನ್ ಅಭಿನಯದ ''ವಾರ್ 2'' ಚಿತ್ರವನ್ನು ಕೂಡ ಒಪ್ಪಿಕೊಂಡರು.
ಇನ್ನೂ ''123 ತೆಲುಗು'' ವರದಿಯ ಪ್ರಕಾರ ''ವಾರ್ 2'' ನಂತರ ಯಶ್ ರಾಜ್ ಸಂಸ್ಥೆ ಜ್ಯೂ.ಎನ್.ಟಿ.ಆರ್‌ಗೆ ಚಿತ್ರವನ್ನು ನಿರ್ಮಾಣ ಮಾಡಬೇಕಿತ್ತು. ಆದರೆ.. ಈಗ ನೋಡಿದರೆ ''ಪ್ರಥಮ ಚುಂಬನಂ ದಂತ ಭಗ್ನಂ'' ಎಂಬಂತೆ ''ವಾರ್ 2'' ಮಕಾಡೆ ಮಲಗಿದೆ. ಈ ಹಿನ್ನೆಲೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದ ''ಯಶ್ ರಾಜ್ ಸಂಸ್ಥೆ'' ಈಗ ಹೆಜ್ಜೆ ಹಿಂದೆ ಇಟ್ಟಿದೆ ಎಂದು ಸದ್ಯ ವರದಿಯಾಗಿದೆ.
ಮತ್ತೊಂದು ಕಡೆ.. ಇದೇ ವರದಿಯಲ್ಲಿ ಖುದ್ದು ಜ್ಯೂ.ಎನ್.ಟಿ.ಆರ್ ತಮ್ಮ ಹಿಂದಿ ಕನಸಿಗೆ ಬ್ರೇಕ್ ಹಾಕಿದ್ದು ತೆಲುಗು ಚಿತ್ರರಂಗದ ಮೇಲೆ ಗಮನ ಹರಿಸಲು ಬಯಸಿದ್ದಾರೆ ಎಂದು ಹೇಳಲಾಗಿದೆ. ಸದ್ಯ ತಮ್ಮ ಗಮನವನ್ನೆಲ್ಲಾ ''ದೇವರ 2'' ಮತ್ತು ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಚಿತ್ರದತ್ತ ಜ್ಯೂ.ಎನ್.ಟಿ.ಆರ್ ಕೊಡಲು ಮುಂದಾಗಿದ್ದು ಈ ಎರಡು ಚಿತ್ರಗಳಲ್ಲಿ ಸಂಪೂರ್ಣವಾಗಿ ಜ್ಯೂ.ಎನ್.ಟಿ.ಆರ್ ತಮ್ಮನ್ನು ತೋಡಗಿಸಿಕೊಳ್ಳಲಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಇನ್ನೂ ಈ ವರದಿಯಿಂದ ಮುಂದೆ ಇನ್ನೆಂದೂ ಜ್ಯೂ.ಎನ್.ಟಿ.ಆರ್ ಹಿಂದಿ ಚಿತ್ರದಲ್ಲಿ ಆಕ್ಟ್ ಮಾಡುವುದೇ ಇಲ್ವಾ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇದರ ಕುರಿತು ಸದ್ಯ ಏನೂ ಹೇಳಲು ಸಾಧ್ಯ ಇಲ್ಲವಾದರೂ ಹಿಂದಿ ಚಿತ್ರದ ಕುರಿತು ಜ್ಯೂ.ಎನ್.ಟಿ.ಆರ್ 2026ರ ನಂತರವಷ್ಟೇ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ''ದೇವರ 2'' ಮತ್ತು ಪ್ರಶಾಂತ್ ನೀಲ್ ಜೊತೆಗಿನ ಚಿತ್ರಗಳ ಭವಿಷ್ಯದ ಮೇಲೆ ಬಾಲಿವುಡ್‌ನ ಭವಿಷ್ಯ ನಿಂತಿದೆ ಎಂದು ಕೂಡ ''123 ತೆಲುಗು'' ವರದಿಯಲ್ಲಿ ನಮೂದಿಸಲಾಗಿದೆ.
ಇನ್ನುಳಿದಂತೆ ಸದ್ಯ ಜ್ಯೂ.ಎನ್.ಟಿ.ಆರ್ ಮತ್ತೆ ಪ್ರಶಾಂತ್ ನೀಲ್ ಅವರ ಬಳಿ ಮರಳಿದ್ದು ಚಿತ್ರಕ್ಕೆ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಒಂದು ಮನೆಯ ಸೆಟ್ ನ್ನು ಕೂಡ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನುವ ಸುದ್ದಿ ಇದ್ದು ಚಿತ್ರತಂಡ ಈ ವಿಚಾರವನ್ನು ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲ. ಜೂನ್ 2026ರಲ್ಲಿ ಈ ಚಿತ್ರ ತೆರೆಗೆ ಬರಲಿದೆ.
ಒಟ್ನಲ್ಲಿ ಸದ್ಯ ಜೂ.ಎನ್.ಟಿ.ಆರ್ ಮತ್ತೆ ಬಾಲಿವುಡ್‌ಗೆ ಹೋಗುವುದಿಲ್ಲ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದ್ದು ಈ ಸುದ್ದಿ ಕೇಳಿ ಕೆಲ ಅಭಿಮಾನಿಗಳು ಮತ್ತು ತೆಲುಗು ಚಿತ್ರರಂಗದವರು ಖುಷಿಯಾಗಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ನ್ಯಾಷನಲ್ ಸ್ಟಾರ್ ರೇಸ್‌ದಿಂದ ತಾರಕ್ ಹೊರ ಬಿದ್ದಿದ್ದಕ್ಕೆ ಬೇಸರಗೊಂಡಿದ್ಧಾರೆ.


Click it and Unblock the Notifications











