Jr.NTR ಅಥವಾ ಅಲ್ಲು ಅರ್ಜುನ್ ಪುತ್ರ; ಸಮಂತಾ ಮಗನ ಪಾತ್ರಕ್ಕೆ ಸ್ಟಾರ್ ಮಕ್ಕಳ ಪೈಪೋಟಿ
'ದಿ ಫ್ಯಾಮಿಲಿ ಮ್ಯಾನ್ 2' ಸಕ್ಸಸ್ ನಲ್ಲಿರುವ ನಟಿ ಸಮಂತಾ ಅಕ್ಕಿನೇನಿ ಸದ್ಯ ತನ್ನ ಕನಸಿನ ಶಕುಂತಲಂ ಸಿನಿಮಾಗೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಮುಹೂರ್ತ ನೆರವೇರಿದ್ದು, ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ.
ಪಾತ್ರಕ್ಕಾಗಿ ಕೆಲವು ತಿಂಗಳಿಂದ ಭರ್ಜರಿ ತಯಾರಿ ನಡೆಯುತ್ತಿರುವ ಸಮಂತಾ ಸದ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿದ್ದಾರೆ. ದುಷ್ಯಂತ-ಶಕುಂತಲಾ ಅಮರ ಪ್ರೇಮ ಕಥೆ ಆಧಾರಿತ ಚಿತ್ರ ಇದಾಗಿದ್ದು, ಶಕುಂತಲಾ ಪಾತ್ರದಲ್ಲಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ. ದುಷ್ಯಂತ ಆಗಿ ಮಲಯಾಳಂ ಖ್ಯಾತ ನಟ ದೇವ್ ಮೋಹನ್ ನಟಿಸುತ್ತಿದ್ದಾರೆ.
ಭಾರಿ ಕುತೂಹಲ ಮೂಡಿಸಿರುವ ಚಿತ್ರದ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಶಕುಂತಲಾ ಪುತ್ರ ಭರತ್ ಪಾತ್ರವನ್ನು ಯಾರು ನಿಭಾಯಿಸುತ್ತಾರೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದ್ದು, ಸಮಂತಾ ಪುತ್ರನ ಪಾತ್ರಕ್ಕೆ ಟಾಲಿವುಡ್ ಸ್ಟಾರ್ ನಟರ ಮಕ್ಕಳ ಹೆಸರು ಕೇಳಿಬರುತ್ತಿದೆ.

ಜೂ.ಎನ್ ಟಿ ಆರ್ ಮತ್ತು ಅಲ್ಲು ಅರ್ಜುನ್ ಮಕ್ಕಳಲ್ಲಿ ಒಬ್ಬರು ಸಮಂತಾ ಪುತ್ರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಜೂ ಎನ್ ಟಿ ಆರ್ ಪುತ್ರ ಅಭಯ್ ರಾಮ್ ಅಥವಾ ಅಲ್ಲು ಅರ್ಜುನ್ ಪುತ್ರ ಅಯಾನ್ ಇಬ್ಬರಲ್ಲಿ ಒಬ್ಬರು ಭರತ್ ಪಾತ್ರದಲ್ಲಿ ನಟಿಸಲಿದ್ದಾರಂತೆ. ಮೊದಲು ಜೂ ಎನ್ ಟಿ ಆರ್ ಅವರನ್ನು ಸಂಪರ್ಕ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಒಂದು ಗ್ರೀನ್ ಸಿಗ್ನಲ್ ಸಿಕ್ಕರೆ ಸಮಂತಾ ಮಗವಾಗಿ ಅಭಯ್ ರಾಮ್ ಕಾಣಿಸಿಕೊಳ್ಳಲಿದ್ದಾರೆ.
ಅಲ್ಲು ಅರ್ಜುನ್ ಪುತ್ರನನ್ನು ಭರತ್ ಆಗಿ ಮಾಡಬೇಕು ಎನ್ನುವುದು ಅಲ್ಲು ಅರ್ಜುನ್ ಆಸೆಯಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಹಾಗಾಗಿ ಸಮಂತಾ ಪುತ್ರನಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ.
ಗುಣಶೇಖರ್ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿದ್ದು, ಶಕುಂತಲಾ ಆಗಿ ಸಮಂತಾ ಹೇಗೆ ಕಾಣಿಸಲಿದ್ದಾರೆ ಎನ್ನುವುದು ಕಾದು ನೋಡಬೇಕು.


Click it and Unblock the Notifications











