RRR ತಂಡದಿಂದ ಕೊರೊನಾ ಜಾಗೃತಿ: ಕನ್ನಡದಲ್ಲಿ ಮಾತನಾಡಿದ ಜೂ.ಎನ್‌ಟಿಆರ್
ತೆಲುಗಿನ ಬಹುನಿರೀಕ್ಷಿತ ಸಿನಿಮಾ ಆರ್‌ಆರ್‌ಆರ್ ಚಿತ್ರೀಕರಣ ಕೊರೊನಾ ಕಾರಣಕ್ಕೆ ಸ್ಥಗಿತಗೊಂಡಿದೆ. ಹಾಗೆಂದು ಸಿನಿಮಾ ತಂಡದವರು ಸುಮ್ಮನೆ ಕೂತಿಲ್ಲ. ಕೊರೊನಾ ಜಾಗೃತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
Recommended Video
ಆರ್‌ಆರ್‌ಆರ್ ಸಿನಿಮಾದ ಮುಖ್ಯ ಪಾತ್ರಧಾರಿಗಳಾದ ಜೂ.ಎನ್‌ಟಿಆರ್, ರಾಮ್ ಚರಣ್ ತೇಜ, ಆಲಿಯಾ ಭಟ್, ಅಜಯ್ ದೇವಗನ್ ಹಾಗೂ ನಿರ್ದೇಶಕ ರಾಜಮೌಳಿ ಅವರುಗಳು ತಮ್ಮ-ತಮ್ಮ ಮನೆಯಲ್ಲಿಯೇ ಕೂತು ಕೊರೊನಾ ವಿರುದ್ಧ ಜಾಗೃತಿ ವಿಡಿಯೋ ಒಂದನ್ನು ಮಾಡಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಒಬ್ಬೊಬ್ಬರು ಒಂದೊಂದು ಭಾಷೆಯಲ್ಲಿ ಜಾಗೃತಿ ಸಂದೇಶವನ್ನು ನೀಡಿದ್ದಾರೆ. ರಾಜಮೌಳಿ ಮಲಯಾಳಂನಲ್ಲಿ ಮಾತನಾಡಿದ್ದರೆ, ಆಲಿಯಾ ಭಟ್ ತೆಲುಗಿನಲ್ಲಿ, ರಾಮ್ ಚರಣ್ ತೇಜ ತಮಿಳಿನಲ್ಲಿ, ಅಜಯ್ ದೇವಗನ್ ಹಿಂದಿಯಲ್ಲಿ ಮಾತನಾಡಿದ್ದಾರೆ. ಜೂ.ಎನ್‌ಟಿಆರ್ ಕನ್ನಡದಲ್ಲಿ ಜಾಗೃತಿ ಸಂದೇಶ ನೀಡಿದ್ದಾರೆ.

ಕನ್ನಡದಲ್ಲಿ ಮಾತನಾಡಿದ ನಟ ಜೂ.ಎನ್‌ಟಿಆರ್
ಕನ್ನಡದಲ್ಲಿ ಸಂದೇಶ ನೀಡಿರುವ ಜೂ.ಎನ್‌ಟಿಆರ್, 'ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಾಸ್ಕುಗಳು, ಸ್ಯಾನಿಟೈಸರ್‌ಗಳು ದೊಡ್ಡ ಅಸ್ತ್ರಗಳಾಗಿವೆ. ಮಾಸ್ಕ್ ಅನ್ನು ಸದಾ ಧರಿಸಿ, ಕೈಗಳನ್ನು ಸದಾ ಸ್ವಚ್ಛಗೊಳಿಸಿ ಮತ್ತು ನೀವು ಹೊರಗೆ ಓಡಾಡುವಾಗ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ' ಎಂದಿದ್ದಾರೆ.

'ಕುಟುಂಬಕ್ಕಾಗಿ, ಸ್ನೇಹಿತರಿಗಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳೋಣ'
'ಮಾಸ್ಕ್ ಧರಿಸೋಣ, ವ್ಯಾಕ್ಸಿನ್ ಪಡೆಯೋಣ' ಎನ್ನುವ ಬದಲಿಗೆ 'ಮಾಸ್ಕ್ ಧರಿಸುವುದಾಗಿ, ವ್ಯಾಕ್ಸಿನ್ ಪಡೆಯುವುದಾಗಿ' ಎಂದಿರುವ ಜೂ.ಎನ್‌ಟಿಆರ್ ಕೊನೆಯಲ್ಲಿ ನಮ್ಮ ಕುಟುಂಬದವರು, ಸ್ನೇಹಿತರಿಗಾಗಿ ಈ ಕಾರ್ಯ ಮಾಡೋಣ ಎಂದಿದ್ದಾರೆ.

ಈ ಹಿಂದೆಯೂ ಕನ್ನಡ ಮಾತನಾಡಿದ್ದರು ಜೂ.ಎನ್‌ಟಿಆರ್
ಜೂ.ಎನ್‌ಟಿಆರ್‌ಗೆ ಕನ್ನಡ ಚಿರಪರಿಚತವೇ ಈ ಹಿಂದೆ ತೆಲುಗು ಬಿಗ್‌ಬಾಸ್ ಶೋನಲ್ಲಿ ಅವರು ಕನ್ನಡದಲ್ಲಿ ಮಾತನಾಡಿದ್ದ ವಿಡಿಯೋ ಸಖತ್ ವೈರಲ್ ಆಗಿತ್ತು. ಜೂ.ಎನ್‌ಟಿಆರ್ ಅವರ ತಾಯಿ ಮಡಿಕೇರಿಯವರು. ಹಾಗಾಗಿ ಅವರಿಗೆ ಕನ್ನಡ ತುಸು ಬರುತ್ತದೆ.

ಪುನೀತ್ ಸಿನಿಮಾಕ್ಕಾಗಿ ಕನ್ನಡ ಹಾಡು ಹಾಡಿದ್ದರು
ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಗೆಳೆಯರನ್ನೂ ಹೊಂದಿರುವ ಜೂ.ಎನ್‌ಟಿಆರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಚಕ್ರವ್ಯೂಹ' ಸಿನಿಮಾಕ್ಕಾಗಿ 'ಗೆಳೆಯ ಗೆಳೆಯ' ಎಂಬ ಹಾಡನ್ನು ಸಹ ಹಾಡಿದ್ದಾರೆ. ಪ್ರಸ್ತುತ ಜೂ.ಎನ್‌ಟಿಆರ್ ನಟಿಸುತ್ತಿರುವ ಆರ್‌ಆರ್‌ಆರ್ ಸಿನಿಮಾ ಕನ್ನಡದಲ್ಲಿಯೂ ಬಿಡುಗಡೆ ಆಗಲಿದೆ. ಕೊರೊನಾ ಎರಡನೇ ಅಲೆ ಕಾರಣಕ್ಕೆ ಚಿತ್ರೀಕರಣ ಸ್ಥಗಿತಗೊಂಡಿದ್ದು ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ.


Click it and Unblock the Notifications











