ಜ್ಯೂ. ಎನ್‌ಟಿಆರ್ 'ದೇವರ' ಸೆಟ್‌ನಲ್ಲಿ ರಾಜಮೌಳಿ 'ವಾರಣಾಸಿ' ಶೂಟಿಂಗ್; ಕಾರಣವೇನು?
ಮಹೇಶ್ ಬಾಬು ನಟನೆಯ 'ವಾರಣಾಸಿ' ಸಿನಿಮಾ ಚಿತ್ರೀಕರಣ ಸದ್ಯ ಹೈದರಾಬಾದ್‌ನಲ್ಲಿ ಭರದಿಂದ ಸಾಗುತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನೊಂದು ವರ್ಷ ಬಾಕಿಯಿದೆ. ಅದಕ್ಕೂ ಮುನ್ನ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರು ಮಾಡಲು ರಾಜಮೌಳಿ ಮನಸ್ಸು ಮಾಡಿದ್ದಾರೆ. ಸದ್ಯ 'ದೇವರ' ಚಿತ್ರಕ್ಕೆ ಹಾಕಿದ್ದ ಸೆಟ್‌ನಲ್ಲಿ 'ವಾರಣಾಸಿ' ಸಿನಿಮಾ ಚಿತ್ರೀಕರಣವಾಗುತ್ತಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ 'ವಾರಣಾಸಿ' ಸಿನಿಮಾ ಚಿತ್ರೀಕರಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ದೋಣೆಗಳಲ್ಲಿ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ನಡೆಯುತ್ತಿರುವಂತೆ ಕಂಡುಬಂದಿತ್ತು. ಕೊರಟಾಲ ಶಿವ ನಿರ್ದೇಶನದ 'ದೇವರ' ಎರಡು ವರ್ಷಗಳ ಹಿಂದೆ ತೆರೆಗೆ ಬಂದಿತ್ತು. ಆದರೆ ಸಿನಿಮಾ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತ್ತು. ಸೀಕ್ವೆಲ್ ಸಿನಿಮಾ ಘೋಷಣೆ ಆಗಿದ್ದರೂ ಪ್ರೇಕ್ಷಕರಲ್ಲಿ ಅಷ್ಟೇನು ಆಸಕ್ತಿ ಇಲ್ಲ.

'ದೇವರ' ಚಿತ್ರದಲ್ಲಿ ಸಮುದ್ರದ ಮೇಲೆ ದೋಣಿಗಳ ಮೇಲೆ ಮಾಡುವ ಆಕ್ಷನ್ ಸನ್ನಿವೇಶಗಳಿವೆ. ನೀರಿನ ಒಳಗೆ, ನೀರಿನ ಮೇಲೆ ಸಾಕಷ್ಟು ದೃಶ್ಯಗಳನ್ನು ಸೆರೆಹಿಡಿದಿದ್ದರು. ನೋಡಲು ನಿಜವಾದ ಸಮುದ್ರದಲ್ಲೇ ಚಿತ್ರೀಕರಣ ಮಾಡಿದಂತೆ ಭಾಸವಾಗುತ್ತದೆ. ಆದರೆ ಶಂಷಾಬಾದ್‌ನಲ್ಲಿ ದೊಡ್ಡ ನೀರಿನ ಟ್ಯಾಂಕ್ ಸೆಟ್ ಹಾಕಿ ಶೂಟ್ ಮಾಡಿದ್ದರು. ಅದಕ್ಕಾಗಿ ಭಾರೀ ಸೆಟ್ ನಿರ್ಮಾಣವಾಗಿತ್ತು. 200-100 ಅಡಿ ದೊಡ್ಡ ನೀರಿನ ಟ್ಯಾಂಕ್ ನಿರ್ಮಿಸಿ, ಅದರ ತುಂಬಾ ನೀರು ತುಂಬಿ 30 ದಿನಗಳ ಕಾಲ ಅಲ್ಲಿ ದೃಶ್ಯಗಳನ್ನು ಸೆರೆಹಿಡಿದಿದ್ದರು. ಈಗ ಅದೇ ಸೆಟ್‌ನಲ್ಲಿ 'ವಾರಣಾಸಿ' ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.
ಇರಾನ್- ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಗಲ್ಫ್ ದೇಶಗಳಿಗೆ ಚಿತ್ರೀಕರಣಕ್ಕಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಜಕ್ಕಣ್ಣ ಈ ಪ್ಲ್ಯಾನ್ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಕಲಾವಿದರು ಹಾಗೂ ತಂತ್ರಜ್ಞರ ಸುರಕ್ಷತೆ ಕೂಡ ಅಷ್ಟೇ ಮುಖ್ಯ. ನೀರಿನ ಟ್ಯಾಂಕ್ ಸೆಟ್‌ನಲ್ಲಿ ರಿಸ್ಕ್ ತೆಗೆದುಕೊಂಡು ಚಿತ್ರೀಕರಣ ಮಾಡಬಹುದು. ಆದರೆ ನಿಜವಾದ ಸಮುದ್ರದಲ್ಲಿ ಚೆಲ್ಲಾಟ ಆಡಲು ಸಾಧ್ಯವಿಲ್ಲ. ಹಾಲಿವುಡ್ ಸಿನಿಮಾಗಳಲ್ಲಿ ಕೂಡ ಇಂತದ್ದೇ ಪ್ರಯತ್ನ ಮಾಡುತ್ತಾರೆ. ಅದೇ ಉಪಾಯ ಮಾಡಿ 'ದೇವರ' ಸಿನಿಮಾ ದೃಶ್ಯಗಳನ್ನು ಸೆರೆಹಿಡಿದಿದ್ದರು. ಈಗ ಜಕ್ಕಣ್ಣ ಕೂಡ ಅದನ್ನು ಅನುಸರಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್, ಪ್ರಕಾಶ್ ರಾಜ್ ಸೇರಿ ದೊಡ್ಡ ತಾರಾಗಣ 'ವಾರಣಾಸಿ' ಚಿತ್ರದಲ್ಲಿದೆ. ಇದೊಂದು ಟೈಮ್ ಟ್ರಾವೆಲ್, ಗ್ಲೋಬ್ ಟ್ರಾಟರ್ ಸಿನಿಮಾ. ಕಥೆಯಲ್ಲಿ ಕಲಿಯುಗದಿಂದ ತ್ರೇತಾಯುಗಕ್ಕೆ ಲಿಂಕ್ ಇದೆ. ವಾರಣಾಸಿಯಿಂದ ಲಂಕೆಯ ಯುದ್ಧದವರೆಗೆ ಸಿನಿಮಾ ಕಥೆ ಸಾಗಲಿದೆ. ಚಿತ್ರದಲ್ಲಿ 'ವಾರಣಾಸಿ'ಯ ಶಿವಭಕ್ತ ರುದ್ರ ಆಗಿ ಮಹೇಶ್ ಬಾಬು ನಟಿಸಿದ್ದಾರೆ. ಶ್ರೀರಾಮನಾಗಿ ಕೂಡ ಕೆಲಹೊತ್ತು ತೆರೆಮೇಲೆ ದರ್ಶನ ಕೊಡಲಿದ್ದಾರೆ.
1300 ಕೋಟಿ ರೂ. ಬಜೆಟ್‌ನಲ್ಲಿ 'ವಾರಣಾಸಿ' ಸಿನಿಮಾ ನಿರ್ಮಾಣವಾಗುತ್ತಿದೆ. ಕೆ.ಎಲ್. ನಾರಾಯಣ ಹಾಗೂ ಕಾರ್ತಿಕೇಯ ಚಿತ್ರಕ್ಕೆ ಹಣ ಹೂಡಿದ್ದಾರೆ. ವಿಜಯೇಂದ್ರ ಪ್ರಸಾದ್ ಹಾಗೂ ಎಸ್.ಎಸ್ ಕಂಚಿ ಬರೆದ ಕಥೆಗೆ ರಾಜಮೌಳಿ ಚಿತ್ರಕಥೆ ಬರೆದುಕೊಂಡಿದ್ದಾರೆ. ದೇವಕಟ್ಟಾ ಸಂಭಾಷಣೆ, ಪಿ. ಎಸ್ ವಿನೋದ್ ಛಾಯಾಗ್ರಹಣ ಚಿತ್ರಕ್ಕಿದೆ. ಎಂ. ಎಂ ಕೀರವಾಣಿ ಸಂಗೀತ ಚಿತ್ರಕ್ಕೆ ಬಲ ತುಂಬಲಿದೆ. ಮುಂದಿನ ವರ್ಷ ಏಪ್ರಿಲ್ 7ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
ಆಗಸ್ಟ್ 9ರಂದು ಮಹೇಶ್ ಬಾಬು ಹುಟ್ಟುಹಬ್ಬದ ಸಂಭ್ರಮದಲ್ಲಿ ಶ್ರೀರಾಮನ ಲುಕ್ ರಿವೀಲ್ ಆಗುತ್ತದೆ ಎನ್ನುವ ಕುತೂಹಲ ಮೂಡಿದೆ. ಮಹೇಶ್ ಬಾಬು ಜೊತೆಗೆ ಇನ್ನು ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಆ ಬಗ್ಗೆ ಮಾಹಿತಿ ಸಿಗಲಿದೆ.


Click it and Unblock the Notifications